ಪ್ರಿಯ ಶಿಷ್ಯೆಗೆ ದೊಡ್ಡ ಪಟ್ಟ? ನಿತ್ಯಾನಂದನ ಕೈಲಾಸ ದೇಶದ ಪ್ರಧಾನಿಯಾಗಿ ರಂಜಿತಾ ಆಯ್ಕೆ?
ಅತ್ಯಾಚಾರ ಆರೋಪದಿಂದ ದೇಶದಿಂದ ಪಲಾಯನ ಮಾಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ದೇಶವನ್ನು ನಿರ್ಮಾಣಮಾಡಿಕೊಂಡಿರುವ ವಿಚಾರ ಗೊತ್ತೇಯಿದೆ. ಇದೀಗ ಈ ದೇಶಕ್ಕೆ ನಟಿ ರಂಜಿತಾಳನ್ನು ಪ್ರಧಾನಿ ಆಗಿ ಘೋಷಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜೊತೆ ವಾಸಿಸುತ್ತಿದ್ದಾನೆ.
ನಿತ್ಯಾನಂದ ತನ್ನ ದೇಶಕ್ಕೆ ಯುನೈಟೆಟ್ ಸ್ಟೇಟ್ಸ್ ಆಫ್ ಕೈಲಾಸ (ಕೈಲಾಸ ದೇಶ) ಎಂದು ನಾಮಕರಣ ಮಾಡಿಕೊಂಡಿದ್ದನು. ಅಲ್ಲಿ ಪ್ರತ್ಯೇಕ ಕರೆನ್ಸಿ, ಪ್ರತ್ಯೇಕ ಆಡಳಿತವನ್ನು ಸ್ಥಾಪಿಸಿಕೊಂಡಿರುವುದಾಗಿ ವರದಿ ಆಗಿತ್ತು. ಇದೀಗ ಕೈಲಾಸ ದೇಶ ಮತ್ತೆ ಸುದ್ದಿಯಲ್ಲಿದೆ. ಆ ದೇಶಕ್ಕೆ ತನ್ನ ಪ್ರಿಯ ಶಿಷ್ಯೆ ಮಾಜಿ ನಟಿ ರಂಜಿತಾಳನ್ನು ಪ್ರಧಾನಿಯಾಗಿ ಘೋಷಿಸಿಸುರುವಾಗಿ ತಮಿಳು ಪತ್ರಿಕೆಗಳಲ್ಲಿ ವರದಿಯಾಗಿದೆ. ನಿತ್ಯಾನಂದ ವೆಬ್‌ಸೈಟ್‌ನಲ್ಲಿ ಇದನ್ನು ಹೇಳಿದ್ದಾರೆ ಎನ್ನಲಾಗ್ತಿದೆ. ಆದರೆ ಇ ಬಗ್ಗೆ ಇನ್ನು ಖಚಿತ ಮಾಹಿತಿ ಲಭ್ಯವಾಗಿಲ್ಲ.

ನಿತ್ಯಾನಂದ ವೆಬ್‌ಸೈಟ್‌ನಲ್ಲಿ ರಂಜಿತಾ ಫೋಟೊ ಕೆಳಗೆ 'ನಿತ್ಯಾನಂದಮಯಿ' ಎಂಬ ಹೆಸರಿದೆ. ಅದರ ಕೆಳಭಾಗದಲ್ಲಿ ಹಿಂದುಗಳಿಗಾಗಿ ಸ್ವಾಮಿ ನಿರ್ಮಿಸಿದ ಕೈಲಾಸ ದೇಶದ ಪ್ರಧಾನಿಯಾಗಿ ಘೋಷಿಸಿರುವುದಾಗಿ ಹೇಳಲಾಗ್ತಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಹಿನ್ನೆಲೆಯಲ್ಲಿ ನಟಿ ರಂಜಿತಾ ಕೂಡ ಕೈಲಾಸ ದೇಶದ ಪ್ರಧಾನಿಯಾಗಿ ವಿಶ್ವಸಂಸ್ಥೆಯ ಸಭೆಗೆ ಹಾಜರಾದರೂ ಅಚ್ಚರಿ ಇಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
2019ರಲ್ಲಿ ದೇಶದಿಂದ ಪರಾರಿ
13 ವರ್ಷಗಳ ಹಿಂದೆ ಬಿಡದಿ ಬಳಿಯ ಧ್ಯಾನ ಪೀಠದಲ್ಲಿ ನಿತ್ಯಾನಂದ- ರಂಜಿತಾ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣ ಇತ್ಯರ್ಥವಾಗದ ಹಂತದಲ್ಲೇ ಆರತಿ ರಾವ್ ಎಂಬುವವರು ನಿತ್ಯಾನಂದ ತಮ್ಮ ಮೇಲೆ ಲೈಂಗಿತ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು. ನಿತ್ಯಾನಂದ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 2019ರಲ್ಲಿ ದೇಶ ಬಿಟ್ಟಿದ್ದ ನಿತ್ಯಾನಂದ, 'ಕೈಲಾಸ' ದೇಶ ನಿರ್ಮಿಸಿಕೊಂಡು, ಸಕಲ ವೈಭೋಗಗಳೊಂದಿಗೆ ಬದುಕುತ್ತಿದ್ದಾರೆಂದು ಹೇಳಲಾಗಿದೆ.
ಎಲ್ಲಿದೆ 'ಕೈಲಾಸ' ದೇಶ?
ಲ್ಯಾಟಿನ್ ಅಮೆರಿಕ ದೇಶವಾದ ಈಕ್ವೆಡಾರ್‌ನಲ್ಲಿ ನಿತ್ಯಾನಂದ ಖಾಸಗಿ ದ್ವೀಪ ಪ್ರದೇಶವನ್ನು ಖರೀದಿಸಿ ಇದು ನನ್ನ ದೇಶ ಎಂದು ಘೋಷಿಸಿಕೊಂಡಿದ್ದಾನೆ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ನಗರಗಳಿಂದ ಈ ದ್ವೀಪ ಸಮೀಪದಲ್ಲಿದೆ. ಅಂದರೆ ಅಮೆರಿಕ ದೇಶದ ಕೆಳಭಾಗದಲ್ಲಿ ನಿತ್ಯಾನಂದನ ದೇಶ ಇದೆ. ಈ ದೇಶಕ್ಕೆ 'ಕೈಲಾಸ' ಎಂದು ಹೆಸರಿಟ್ಟಿದ್ದಾನೆ. ತನ್ನ ದೇಶಕ್ಕೆ ಪ್ರತ್ಯೇಕ ಧ್ವಜ, ಲಾಂಛನ, ಪ್ರತ್ಯೇಕ ಪಾಸ್‌ಪೋರ್ಟ್ ಕೂಡ ತಯಾರಿಸಿಕೊಂಡಿದ್ದಾನೆ. ಇದನ್ನು ಹಿಂದೂ ರಾಷ್ಟ್ರವೆಂದು ಆತ ಬಣ್ಣಿಸಿದ್ದಾನೆ. ಅಲ್ಲಿ ನಿತ್ಯಾನಂದ ಹೇಳಿದ್ದೇ ಶಾಸನ. ರಂಜಿತಾ ಹಾಗೂ ಆಕೆಯ ಸಹೋದರಿ ಸೇರಿದಂತೆ ಸಾಕಷ್ಟು ಜನ ಭಕ್ತರು ಆ ದೇಶದಲ್ಲಿದ್ದಾರೆ.
ರಂಜಿತಾ ಯಾರು?
ತಮಿಳು ನಟಿ ರಂಜಿತಾ ಕೆಲ ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಹಿರಿಯ ನಟ ಅಶೋಕ್ ಕುಮಾರ್ ಅವರ ಮಗಳು ಈಕೆ. 1992ರಲ್ಲಿ 'ನಾಡೋಡಿ ತೆಂಡ್ರಲ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 'ಪುರುಷೋತ್ತಮ', 'ಶೃಂಗಾರ ರಾಜ', 'ಅಗ್ನಿ ಐಪಿಎಸ್' ಹಾಗೂ 'ಅಜ್ಜು' ಎನ್ನುವ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕೆಯ ಸಿನಿಮಾಗಳನ್ನು ನೋಡಿ ಆಕರ್ಷಣೆಗೆ ಒಳಗಾಗಿ ಆಕೆಯನ್ನು ನಿತ್ಯಾನಂದ ಪಡೆದುಕೊಂಡನು ಎನ್ನುವ ವಾದ ಕೂಡ ಇದೆ.
ನಿತ್ಯಾನಂದನ ತೆಕ್ಕೆಗೆ ಸಹೋದರಿಯರು
ಇತ್ತೀಚೆಗೆ ರಂಜಿತಾ ತಂದೆ ನಟ ಅಶೋಕ್ ಕುಮಾರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. "ಅಮೆರಿಕಾದಲ್ಲಿದ್ದ ಸಹೋದರಿಯನ್ನು ನೋಡಲು ರಂಜಿತಾ ಹೋಗುತ್ತಿದ್ದಳು. ಅದಾಗಲೇ ನನ್ನ ಮಗಳು ನಿರ್ಮಲಾ ಅಮೆರಿಕಾದಲ್ಲಿ ನಿತ್ಯಾನಂದನ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಳು. ಆಕೆಯ ಜೊತೆ ರಂಜಿತಾ ಕೂಡ ಹೋಗಲು ಆರಂಭಿಸಿದ್ದಳು. ಇದೇ ರೀತಿ ನಿತ್ಯಾನಂದನ ಆಶ್ರಮಕ್ಕೆ ಹೋಗುತ್ತಿದ್ದಾಗಲೇ ರಂಜಿತಾ ಕೂಡ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಳು. ಈ ಡಿವೋರ್ಸ್‌ಗೆ ನಿತ್ಯಾನಂದ ಕೂಡ ಒಂದು ಅರ್ಥದಲ್ಲಿ ಕಾರಣ ಎಂದು ಹೇಳಬಹುದು. ನನ್ನ ದೊಡ್ಡ ಮಗಳು ನಿರ್ಮಲಾ ಸಹ ಗಂಡನಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿಕೊಂಡಿದ್ದಳು. ನಂತರ ಇಬ್ಬರು ಅಲ್ಲೇ ಇದ್ದಾರೆ" ಎಂದು ಹೇಳಿದ್ದರು.


Click it and Unblock the Notifications











