ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ಗೆ ವಿಲನ್ ಆಗಿಬಿಟ್ರಾ ರಶ್ಮಿಕಾ ಮಂದಣ್ಣ?
ಒಂದ್ಕಡೆ ರಶ್ಮಿಕಾ ಮಂದಣ್ಣ ಮದುವೆ ಎನ್ನುವ ಚರ್ಚೆ ಜೋರಾಗಿದೆ. ಮತ್ತೊಂದು ಕಡೆ ಸಿನಿಮಾ ಚಿತ್ರೀಕರಣದಲ್ಲಿ ಕೊಡಗಿನ ಬೆಡಗಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸಿನಿಮಾ 'ಕಾಕ್‌ಟೇಲ್'-2 ಚಿತ್ರೀಕರಣ ಮುಗಿಸಿದ್ದರು. 'ಮೈಸಾ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸ್ತಿದ್ದಾರೆ. ಮತ್ತೊಂದು ಕಡೆ ಅಲ್ಲು ಅರ್ಜುನ್ ಎದುರು ಮತ್ತೆ ನಟಿಸುತ್ತಿದ್ದಾರೆ.
'ಪುಷ್ಪ' ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಲ್ಲು ಅರ್ಜುನ್ ಕ್ರೇಜ್ ಶುರುವಾಗಿದೆ. ಎರಡು ಭಾಗಗಳಾಗಿ ಬಂದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ನಡುವೆ ಯಾವುದೇ ಚಿತ್ರವನ್ನು ಬನ್ನಿ ಒಪ್ಪಿಕೊಂಡಿರಲಿಲ್ಲ. 'ಪುಷ್ಪ'-2 ಬಳಿಕ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ಸ್ಟಾರ್ ನಟ, ನಟಿಯರು ನಟಿಸುತ್ತಿದ್ದಾರೆ.

'ಪುಷ್ಪ' ಸರಣಿ ಬಳಿಕ ಅಲ್ಲು ಅರ್ಜುನ್ ಜೊತೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಾರೆ ಎನ್ನುವ ಗುಸುಗುಸು ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಸದ್ಯ ಮುಂಬೈನಲ್ಲಿ ನಡೆಯುತ್ತಿರುವ ಸಿನಿಮಾ ಚಿತ್ರೀಕರಣದಲ್ಲಿ ರಶ್ಮಿಕಾ ಭಾಗಿ ಆಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಂದಹಾಗೆ ಚಿತ್ರದಲ್ಲಿ ರಶ್ಮಿಕಾ ನೆಗೆಟಿವ್ ಶೇಡ್ ರೋಲ್‌ನಲ್ಲಿ ಬಣ್ಣ ಹಚ್ಚಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ನಡೀತಿದೆ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಇನ್ನು ಟೈಟಲ್ ಫಿಕ್ಸ್ ಆಗಿದೆ. ಇದು ಅಲ್ಲು ನಟನೆ 22ನೇ ಸಿನಿಮಾ, ಅದೇ ರೀತಿ ಅಟ್ಲಿ ನಿರ್ದೇಶನದ 6ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ 'AA22xA6' ಎಂದು ಕರೆಯಲಾಗ್ತಿದೆ. 800 ಕೋಟಿ ರೂ. ಬಜೆಟ್‌ನಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಹಾಲಿವುಡ್ ಸಂಸ್ಥೆಗಳು ಈ ಚಿತ್ರಕ್ಕಾಗಿ ಕೈಜೋಡಿಸಿರುವುದು ವಿಶೇಷ.

ಮಂಗಳವಾರ(ಫೆಬ್ರವರಿ) ರಶ್ಮಿಕಾ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 26ರಂದು ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದುವೆ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಕೂಡ ಖಚಿತ ಮಾಹಿತಿ ಇಲ್ಲ. ಉದಯ್‌ಪುರ್ ಪ್ಯಾಲೇಸ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯುತ್ತದೆ ಎಂದು ಹೇಳಲಾಗ್ತಿದೆ. ಮದುವೆಗೆ 20 ದಿನ ಬಾಕಿ ಇರುವಾಗ ಕೂಡ ರಶ್ಮಿಕಾ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವ ಚರ್ಚೆ ನಡೀತಿದೆ.
AA22xA6 ಚಿತ್ರದಲ್ಲಿ ಮೃಣಾಲ್ ಠಾಕೂರ್, ರಮ್ಯಾಕೃಷ್ಣ, ಜಾನ್ವಿ ಕಪೂರ್, ಯೋಗಿ ಬಾಬು ಸೇರಿ ದೊಡ್ಡ ತಾರಾಗಣವಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. 'ಜವಾನ್' ಸಿನಿಮಾ ಮೂಲಕ ಬಾಲಿವುಡ್ ಅಂಗಳದಲ್ಲಿ ಕೂಡ ಅಟ್ಲಿ ಸದ್ದು ಮಾಡಿದ್ದರು. ಹಾಗಾಗಿ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.
ಅಂದಹಾಗೆ 'AA22xA6' ಚಿತ್ರಕ್ಕೆ ಜಿ. ಕೆ ವಿಷ್ಣು ಛಾಯಾಗ್ರಹಣ, ಸಾಯಿ ಅಭಯಂಕರ್ ಸಂಗೀತ ಸಂಯೋಜನೆ ಇರಲಿದೆ. ಈಗಾಗಲೇ ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ದಾಖಲೆ ಮೊತ್ತಕ್ಕೆ ಡೀಲ್ ಕುದುರಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. 'ರಣಬಾಲಿ' ಎಂಬ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಒಟ್ಟಾರೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.


Click it and Unblock the Notifications











