ಪ್ರಶಾಂತ್ ನೀಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಐಟಂ ಡ್ಯಾನ್ಸ್..?
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ್ದಿಗಳು ಸದ್ದು ಮಾಡುತ್ತಾವೆ. ಆ ಪೈಕಿ ಸದ್ಯ ಪ್ರಶಾಂತ್ ನೀಲ್ ಚಿತ್ರಕ್ಕೆ ಸಂಬಂಧಿಸಿದಂತೆ ರಶ್ಮಿಕಾ ಮಂದಣ್ಣ ಅವರ ಸುದ್ದಿಯೊಂದು ಸದ್ಯ ಚಿತ್ರ ನಗರಿಯಲ್ಲಿ ಕೇಳಿ ಬರುತ್ತಿದೆ. ಕುತೂಹಲವನ್ನು ಕೂಡ ಕೆರಳಿಸಿದೆ.
ಹೌದು, ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.

ಇಂಥಾ ರಶ್ಮಿಕಾ ಮಂದಣ್ಣ ಸದ್ಯ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನುವ ನ್ಯೂಸ್‌ವೊಂದು ಸದ್ಯ ಹಲ್‌ಚಲ್ ಎಬ್ಬಿಸಿದೆ. ಫಿಲ್ಮ್ ಫೇರ್ ವರದಿಯಂತೆ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಲು ರಶ್ಮಿಕಾ ಮಂದಣ್ಣಗೆ ಆಫರ್ ನೀಡಲಾಗಿದೆ.
ಇನ್ನು ರಶ್ಮಿಕಾ ಮಂದಣ್ಣ ಇಲ್ಲಿಯವರೆಗೆ ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕಿಲ್ಲ. ಹೀಗಾಗಿ ಹಾಡಲ್ಲಿ ರಶ್ಮಿಕಾ ಕಾಣಿಸಿಕೊಂಡರೆ ಹಾಡು ತಾಜಾತನದಿಂದ ಕೂಡಿರುತ್ತೆ. ನಿರೀಕ್ಷೆಗಳು ಕೂಡ ಹೆಚ್ಚಾಗುತ್ತವೆ, ಹಾಡು ಹೆಚ್ಚೆಚ್ಚು ಜನಕ್ಕೆ ತಲುಪುತ್ತೆ ಎನ್ನುವುದು ಪ್ರಶಾಂತ್ ನೀಲ್ ಅವರ ಆಲೋಚನೆ. ಈ ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಚಿತ್ರತಂಡ ಸಂಪರ್ಕ ಮಾಡಿದೆ ಎಂದು ಫಿಲ್ಮ್ ಫೇರ್ ವರದಿಯಲ್ಲಿ ಉಲ್ಲೇಖಿಸಿದೆ. ಹಾಗೊಂದು ವೇಳೆ ಈ ಸುದ್ದಿ ನಿಜಾ ಆದಲ್ಲಿ ಇದೇ ಮೊದಲ ಬಾರಿ ರಶ್ಮಿಕಾ ಮಂದಣ್ಣ ಐಟಂ ಸಾಂಗ್‌ವೊಂದರಲ್ಲಿ ಕಾಣಿಸಿಕೊಂಡಂತೆ ಆಗಲಿದೆ.
ಅಂದ್ಹಾಗೇ ಈ ಚಿತ್ರದಲ್ಲಿ ಜ್ಯೂ.ಎನ್.ಟಿ.ಆರ್ ಎದುರು ರುಕ್ಮಿಣಿ ವಸಂತ್ ನಾಯಕಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆದರೆ ಇಲ್ಲಿಯವರೆಗೆ ಈ ಸುದ್ದಿಯನ್ನು ರುಕ್ಮಿಣಿ ವಸಂತ್ ಅವರಾಗಲಿ ಅಥವಾ ಪ್ರಶಾಂತ್ ನೀಲ್ ಅವರಾಗಲಿ ಖಚಿತ ಪಡಿಸಿಲ್ಲ.
ಇನ್ನು, ವಿಶೇಷ ಅಂದರೆ ಕಳೆದ ಕೆಲ ದಿನದ ಹಿಂದೆ ರುಕ್ಮಿಣಿ ವಸಂತ್ ಅವರ ಹೆಸರು ಚಾಲ್ತಿಗೆ ಬರುವ ಮೊದಲು ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂಬ ಪುಕಾರು ಹಬ್ಬಿತ್ತು. ತಮ್ಮ ಪಾತ್ರವನ್ನ ಗ್ಲ್ಯಾಮರಸ್ ಆಗಿ ಹೆಣೆಯುವ ಬದಲು ನನ್ನನ್ನು ಪುಷ್ಪಾದಂತೆಯೇ ಸಹಜವಾಗಿ ಇರಲಿ, ಅಭಿನಯಕ್ಕೆ ಒತ್ತು ನೀಡುವಂತೆ ಇರಲಿ ಎಂದು ರಶ್ಮಿಕಾ ನೀಲ್ ಬಳಿ ಮನವಿಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಕೂಡ ಹರಿದಾಡಿತ್ತು. 7 ಕೋಟಿ ಸಂಭಾವನೆಯನ್ನು ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಮಾಡಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ.. ಹೀಗೆ ಕೇಳಿ ಬಂದ ಸುದ್ದಿ ಆ ನಂತರ ಸುಳ್ಳಾಯ್ತು.
ಈಗ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇನ್ನುಳಿದಂತೆ ಸದ್ಯ ಈ ಚಿತ್ರಕ್ಕೆ ಡ್ರ್ಯಾಗನ್ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗಿದೆ. ಆದರೆ ಚಿತ್ರದ ಹೆಸರನ್ನು ಕೂಡ ಪ್ರಶಾಂತ್ ನೀಲ್ ಇನ್ನು ಅಧಿಕೃತವಾಗಿ ಘೋಷಿಸಿಲ್ಲ. ಚಿತ್ರದ ಚಿತ್ರೀಕರಣ ಸದ್ಯ ಭರದಿಂದ ನಡೆಯುತ್ತಿದ್ದು ಕುಮಟಾ ಸೇರಿ ಅನೇಕ ಕಡೆ ಈ ಚಿತ್ರದ ದೃಶ್ಯಗಳನ್ನು ಪ್ರಶಾಂತ್ ನೀಲ್ ಸೆರೆ ಹಿಡಿದಿದ್ದಾರೆ.


Click it and Unblock the Notifications











