ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ? ಯಾವ ಸಿನಿಮಾ ಅಂದ್ರೆ?
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹವಾ ಮುಂದುವರೆದಿದೆ. ಮದುವೆ ಬಳಿಕ ರಶ್ಮಿಕಾ ಕ್ರೇಜ್ ಕಮ್ಮಿ ಆಗಬಹುದು ಕೆಲವರ ಅಭಿಪ್ರಾಯ. ಆದರೆ ಬಾಲಿವುಡ್ ನಟಿಯರು ಈ ಮಾತನ್ನು ಸುಳ್ಳಾಗಿಸುತ್ತಾ ಬರ್ತಿದ್ದಾರೆ. ನಯನತಾರಾ ಸೇರಿದಂತೆ ದಕ್ಷಿಣದ ನಟಿಯರು ಮದುವೆಗೂ ಸಿನಿಮಾಗೂ ಸಂಬಂಧವೇ ಇಲ್ಲ ಎನ್ನುವಂತೆ ಕಮಾಲ್ ಮಾಡುತ್ತಿದ್ದಾರೆ.
'ಛಾವ', 'ಪುಷ್ಪ'-2 ಬಳಿಕ ಇತ್ತೀವೆಗೆ 'ದಿ ಗರ್ಲ್‌ಫ್ರೆಂಡ್' ಚಿತ್ರದಲ್ಲಿ ನಟಿಸಿ ರಶ್ಮಿಕಾ ಗಮನ ಸೆಳೆದಿದ್ದರು. ಮತ್ತಷ್ಟು ಸಿನಿಮಾಗಳು ಆಕೆಯ ಕೈಯಲ್ಲಿದೆ. ವಿಜಯ್ ದೇವರಕೊಂಡ ಜೊತೆ 3ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ 'ಕಾಕ್‌ಟೇಲ್'-2 ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. 'ಮೈಸಾ' ಎಂಬ ಒಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ತೆರೆಗೆ ಬರಲಿದೆ.

ವಿಭಿನ್ನ ಪಾತ್ರಗಳಲ್ಲಿ ರಶ್ಮಿಕಾ ನಟಿಸುತ್ತಾ ಬರ್ತಿದ್ದಾರೆ. 'ಪುಷ್ಪ' ಚಿತ್ರದಲ್ಲಿ ಹಳ್ಳಿ ಹುಡುಗಿ ಶ್ರೀವಲ್ಲಿ ಆಗಿ ಮಿಂಚಿದ್ದರು. ಐತಿಹಾಸಿಕ ಕಥಾಹಂದರದ 'ಛಾವ' ಚಿತ್ರದಲ್ಲಿ ರಾಣಿ ಯೆಸುಬಾಯಿ ಬೊನ್ಸಲೆ ಆಗಿ ಬಣ್ಣ ಹಚ್ಚಿದ್ದರು. ಇದೀಗ ಮತ್ತೊಂದು ಸವಾಲಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.
'ಕಾಕ್‌ಟೇಲ್'-2 ಚಿತ್ರದಲ್ಲಿ ಸಲಿಂಗ ಕಾಮಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಬಾಲಿವುಡ್ ಮಾಧ್ಯಮಗಳಲ್ಲಿ ಕೂಡ ಈ ವಿಚಾರ ಗುಲ್ಲಾಗಿದೆ. ಕೃತಿ ಸನೂನ್ ಹಾಗೂ ರಶ್ಮಿಕಾ ಸಲಿಂಗ ಕಾಮಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ವಿಚಾರ ಭಾರೀ ಸದ್ದು ಮಾಡ್ತಿದೆ. ಶಾಹಿದ್ ಕಪೂರ್ ಚಿತ್ರದ ನಾಯಕನಾಗಿ ಬಣ್ಣಹಚ್ಚಿದ್ದಾರೆ.

ಹೊಮಿ ಅಡಜಾನಿಯಾ ನಿರ್ದೇಶನದಲ್ಲಿ 14 ವರ್ಷಗಳ ಹಿಂದೆ 'ಕಾಕ್‌ಟೇಲ್' ಎಂಬ ಸಿನಿಮಾ ಬಂದು ಗೆದ್ದಿತ್ತು. ಸೈಫ್ ಅಲಿಖಾನ್, ದೀಪಿಕಾ ಪಡುಕೋಣೆ, ಬೊಮಾನ್ ಇರಾನಿ ಚಿತ್ರದಲ್ಲಿ ನಟಿಸಿದ್ದರು. ಅದೇ ಟೈಟಲ್‌ನಲ್ಲಿ ಈ ಬಾರಿ ಬೇರೆ ಕಥೆ ಹೇಳಲಾಗ್ತಿದೆ. ಮಡೋಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಹೊಮಿ ಅಡಜಾನಿಯಾ ಈ ಚಿತ್ರವನ್ನು ಕೂಡ ಕಟ್ಟಿಕೊಟ್ಟಿದ್ದಾರೆ.
ಸಲಿಂಗ ಕಾಮಿ ಜೋಡಿ ನಡುವೆ ಬರುವ ಯುವಕ, ಬಳಿಕ ಶುರುವಾಗುವ ಲವ್ ಟ್ರಯಾಂಗಲ್ ಸ್ಟೋರಿ ಚಿತ್ರದಲ್ಲಿದೆ ಎನ್ನುವ ಚರ್ಚೆ ನಡೀತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದೆ. ಜನವರಿ 31ರಂದು ಚಿತ್ರೀಕರ ಮುಗಿಸಿ ತಂಡ ಕೇಕ್ ಕತ್ತರಿಸಿ ಸಂಭ್ರಮಸಿತ್ತು. ಜೂನ್ 11ಕ್ಕೆ 'ಕಾಕ್‌ಟೇಲ್'-2 ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ.
'ಗುಡ್‌ಬೈ' ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್ ಪ್ರವೇಶಿಸಿದ್ದರು. ಬಳಿಕ 'ಮಿಷನ್ ಮಜ್ನು' ಹಾಗೂ 'ಅನಿಮಲ್' ಸಿನಿಮಾಗಳಲ್ಲಿ ನಟಿಸಿ ಸದ್ದು ಮಾಡಿದ್ದರು. ರಣ್‌ಬೀರ್ ಕಪೂರ್ ಜೋಡಿಯಾಗಿ ನಟಿಸಿದ್ದ 'ಅನಿಮಲ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಛಾವ' ಸಿನಿಮಾ ಬರೆದ ದಾಖಲೆಗಳು ಗೊತ್ತೇಯಿದೆ. ಆದರೆ ಸಲ್ಮಾನ್ ಖಾನ್ ಜೊತೆ ನಟಿಸಿದ್ದ 'ಸಿಕಂದರ್' ಸಿನಿಮಾ ಸೋತಿತ್ತು. 'ಥಮ್ಮಾ' ಸಿನಿಮಾ ಕೂಡ ಗಮನ ಸೆಳೆದಿತ್ತು.
ಇದೀಗ 'ಕಾಕ್‌ಟೇಲ್'-2 ಚಿತ್ರದ ಮೂಲಕ ಮತ್ತೆ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುವ ಪ್ರಯತ್ನದಲ್ಲಿದ್ದಾರೆ. ಮದುವೆ ಬಳಿಕ ಕೂಡ ರಶ್ಮಿಕಾ ಸಿನಿಮಾಗಳಲ್ಲಿ ನಟಿಸುವುದು ಮುಂದುವರೆಸಲಿದ್ದಾರೆ. ಮತ್ತಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆ ಹೆಚ್ಚಾಗಿದೆ.
ಫೆಬ್ರವರ 26ರಂದು ಉದಯ್‌ಪುರ್‌ದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ನಡೆಯಲಿದೆ. ಆದರೆ ಈ ಬಗ್ಗೆ ಇಬ್ಬರೂ ಈವರೆಗೆ ಮಾತನಾಡಿಲ್ಲ. ತಾರಾ ಜೋಡಿಯ ಮದುವೆಗೆ ಕೆಲವೇ ಆಪ್ತರು ಸಾಕ್ಷಿ ಆಗಲಿದ್ದಾರೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ.


Click it and Unblock the Notifications











