ರಶ್ಮಿಕಾ ತೊಟ್ಟಿರುವ ಈ ಬಟ್ಟೆಯ ಬೆಲೆ ಸಾವಿರಗಳಲ್ಲ, ಲಕ್ಷಗಳು!
ಸಿನಿಮಾ ರಂಗದಲ್ಲಿ ನಾಯಕ ನಟರಿಗೆ ದೊರೆವಷ್ಟು ಸಂಭಾವನೆ ನಟಿಯರಿಗೆ ದೊರೆಯುವುದಿಲ್ಲ. ಆದರೆ ತಮ್ಮ ಉಡುಗೆ, ಮೇಕಪ್ ಇನ್ನಿತರೆಗಳ ಮೇಲೆ ಹೆಚ್ಚು ಖರ್ಚು ಮಾಡುವವರು ನಟಿಯರೇ.
ಪ್ಯಾಪರಾಟ್ಜಿಗಳ ಜಮಾನಾದಲ್ಲಿ ನಟಿಯರು ಎಲ್ಲಿ ಹೋದರು, ಸ್ಟೈಲಿಶ್ ಆಗಿ ಕಾಣಬೇಕೆಂಬ ಕಾರಣಕ್ಕೆ ದುಬಾರಿ ಉಡುಗೆಗಳು, ಬ್ಯಾಗ್‌ಗಳು, ಸನ್‌ಗ್ಲಾಸ್‌ಗಳನ್ನು ತೊಟ್ಟುಕೊಂಡೆ ಅಡ್ಡಾಡುತ್ತಾರೆ. ಎಷ್ಟೋ ನಟಿಯರು ಡಿಸೈನರ್ ಬಟ್ಟೆ ತೊಡದೆ ಹೊರಗೇ ಬರುವುದಿಲ್ಲ.
ಇತ್ತೀಚೆಗಷ್ಟೆ ಬಾಲಿವುಡ್‌ಗೆ ಹಾರಿ ಅಲ್ಲಿನ ಪದ್ಧತಿಗೆ ಹೊಂದಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಸಹ ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಬಾಲಿವುಡ್‌ನ ನಟಿಯರಂತೆ ಈಗ ರಶ್ಮಿಕಾರದ್ದೂ ಏರ್‌ಪೋರ್ಟ್ ಲುಕ್, ಜಿಮ್ ಲುಕ್ ಇನ್ನಿತರೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದಕ್ಕಾಗಿ ಭಾರಿ ಮೊತ್ತದ ಹಣವನ್ನೂ ಈ ನಟಿ ಖರ್ಚು ಮಾಡುತ್ತಿದ್ದಾರೆ. ತೀರಾ ಸಾಧಾರಣ ಸೆಲ್ವಾರ್ ಕಮೀಜ್ ತೊಟ್ಟು ಮೊದಲ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ, ಈಗ ವಿಮಾನ ಏರಲು ಹೊರಬಂದರೂ ಸಹ ಲಕ್ಷಾಂತರ ಮೌಲ್ಯದ ಬಟ್ಟೆ ತೊಟ್ಟೇ ಬರುತ್ತಾರೆ.

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಏರ್‌ಪೋರ್ಟ್‌ನಲ್ಲಿ ಮಾಧ್ಯಮದವರ ಕ್ಯಾಮೆರಾಕ್ಕೆ ಬಿದ್ದಿದ್ದರು. ಕ್ಯಾಶ್ಯುವಲ್ ಎನಿಸುವಂತ ಉಡುಗೆಯನ್ನೇ ನಟಿ ರಶ್ಮಿಕಾ ಮಂದಣ್ಣ ತೊಟ್ಟಿದ್ದರಾದರೂ ಆ ಉಡುಗೆಗಳ ಬೆಲೆ ಬಹು ದುಬಾರಿ!
ಪಿಂಕ್‌ವಿಲ್ಲಾ ವರದಿ ಮಾಡಿರುವಂತೆ, ರಶ್ಮಿಕಾ ಅಂದು ತೊಟ್ಟಿದ್ದ ಮೇಲುಡುಗೆ, ಜೀನ್ಸ್ ಹಾಗೂ ಬೂಟಿನ ಬೆಲೆ ಭಾರತದ ರುಪಾಯಿ ಲೆಕ್ಕದಲ್ಲಿ ಬರೋಬ್ಬರಿ 2 ಲಕ್ಷವಂತೆ! ಹೌದು, ರಶ್ಮಿಕಾ ಅಂದು ತುಸು ಡಿಸೈನ್ ಹೊಂದಿರುವ ಟಿ-ಶರ್ಟ್ ಮಾದರಿಯ ಮೇಲುಡುಗೆ, ಡೆನಿಮ್ ಸಂಸ್ಥೆಯ ಅಲ್ಲಲ್ಲಿ ಹರಿದಂತಿದ್ದ ನೀಲಿ ಜೀನ್ಸ್ ಹಾಗೂ ಜೀನ್ಸ್‌ಗೆ ಒಪ್ಪುವ ಕಪ್ಪು ಬಣ್ಣದ ಬೂಟುಗಳನ್ನು ತೊಟ್ಟಿದ್ದರು. ಜೊತೆಗೆ ಒಂದು ಕಪ್ಪು ಬಣ್ಣದ ದೊಡ್ಡ ಬ್ಯಾಗ್ ಒಂದನ್ನು ಸಹ ಬಗಲಿಗೆ ಏರಿಸಿಕೊಂಡಿದ್ದರು.
ವಿಶೇಷತೆಯೆಂದರೆ ರಶ್ಮಿಕಾರ ಆ ಏರ್‌ಪೋರ್ಟ್ ಲುಕ್, ಅವರ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ'ಯನ್ನು ನೆನಪಿಸುತ್ತಿತ್ತು, ಏಕೆಂದರೆ ರಶ್ಮಿಕಾ ಅಂದು ಅದೇ ಮಾದರಿಯ ಕನ್ನಡಕ ಸಹ ಧರಿಸಿದ್ದರು. ಹೆಚ್ಚಿಗೆ ಮೇಕಪ್ ಇಲ್ಲದೆ ಬಹಳ ಸರಳವಾಗಿ ಆದರೆ ಸುಂದರವಾಗಿ ರಶ್ಮಿಕಾ ಕಾಣುತ್ತಿದ್ದರು. ಆದರೆ ರಶ್ಮಿಕಾರ ಆ ಸರಳ ಉಡುಗೆಗೂ ಇಷ್ಟೋಂದು ಬೆಲೆಯೇ ಎಂದು ಅಭಿಮಾನಿಗಳು ಈಗ ಹೌಹಾರಿದ್ದಾರೆ.
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಟನೆಯ ಎರಡು ಹಿಂದಿ ಸಿನಿಮಾಗಳು ಈಗಾಗಲೇ ತೆರೆಗೆ ಬಂದಿದ್ದು, ಪ್ರಸ್ತುತ ಬಾಲಿವುಡ್‌ನ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾಕಿ ಶ್ರಾಫ್ ಜೊತೆ ಸಿನಿಮಾಕ್ಕೂ ಮಾತುಕತೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಇನ್ನುಳಿದಂತೆ ತೆಲುಗಿನ 'ಪುಷ್ಪ 2', ತಮಿಳಿನ ಒಂದು ಸಿನಿಮಾ ರಶ್ಮಿಕಾ ಕೈಯಲ್ಲಿದೆ. ವಿಜಯ್ ದೇವರಕೊಂಡ ಜೊತೆಗೆ 'ಗೀತಾ ಗೋವಿಂದಂ 2' ನಲ್ಲಿಯೂ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











