ಪ್ರಶಾಂತ್ ನೀಲ್-ಯಂಗ್ ಟೈಗರ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ..?
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.
ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್.. ಟಾಲಿವುಡ್‌ನಿಂದ ಕಾಲಿವುಡ್.. ಕಾಲಿವುಡ್‌ನಿಂದ ಮರಳಿ ಟಾಲಿವುಡ್‌ಗೆ ಬಂದು ಆ ನಂತರ ಸೀದಾ ಬಾಲಿವುಡ್ ಗೆ ಹೋದ ರಶ್ಮಿಕಾ ಒಂದಾದ ಮೇಲೊಂದು ಅವಕಾಶ ಪಡೆಯುತ್ತಿದ್ದಾರೆ. ಸೂಪರ್ ಸ್ಟಾರ್‌ಗಳ ಜೊತೆ ತೆರೆಯನ್ನ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಮೊನ್ನೆಯಷ್ಟೇ ಸಲ್ಮಾನ್ ಖಾನ್ ಎದುರು ನಾಯಕಿಯಾಗಿ ಆಯ್ಕೆಯಾದ ರಶ್ಮಿಕಾ ಈಗ ಜ್ಯೂ.ಎನ್.ಟಿ.ಆರ್ ಜೊತೆ ತೆರೆ ಹಂಚಿಕೊಳ್ಳುವ ಸುವರ್ಣ ಅವಕಾಶ ಪಡೆದಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಪಕ್ಕದ ಹೈದ್ರಾಬಾದ್ ನಲ್ಲಿ ಗುಲ್ಲಾಗಿದೆ.

ಹೌದು, ನಿಮಗೆ ನೆನಪಿರಬೇಕು .. ಜ್ಯೂ.ಎನ್.ಟಿ.ಆರ್ ಜೊತೆ ಸಿನಿಮಾ ಮಾಡುವುದಾಗಿ ಪ್ರಶಾಂತ್ ನೀಲ್ ಹಿಂದೆ ಘೋಷಿಸಿದ್ದರು. ಆ ಹಳೆಯ ಘೋಷಣೆಗೆ ಈಗ ಮರುಜೀವ ಸಿಕ್ಕಿದೆ. ಸಲಾರ್ ಸದ್ಯಕ್ಕೆ ಸೈಡ್‌ನಲ್ಲಿ ಇರಲಿ ಜ್ಯೂ.ಎನ್.ಟಿ.ಆರ್ ಗೆ ಆಕ್ಷನ್ ಕಟ್ ಹೇಳುವ ನಿರ್ಧಾರಕ್ಕೆ ಪ್ರಶಾಂತ್ ನೀಲ್ ಕೊನೆಗೂ ಬಂದಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಇಷ್ಟೇ ಅಲ್ಲ.. ಆಂಧ್ರಪ್ರದೇಶದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಜ್ಯೂ.ಎನ್.ಟಿ.ಆರ್ ಅಭಿನಯದ ಈ 31ನೇ ಚಿತ್ರಕ್ಕೆ ಡ್ರ್ಯಾಗನ್ ಎಂಬ ಹೆಸರನ್ನಿಡಲಾಗಿದೆ. ಈ ಆಗಸ್ಟ್ ನಿಂದ ಚಿತ್ರದ ಚಿತ್ರೀಕರಣ ಆರಂಭವೂ ಆಗಲಿದೆ. ಇದೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅನ್ನುವುದು ಸದ್ಯಕ್ಕೆ ಹರಡಿಕೊಂಡಿರುವ ಲೇಟೆಸ್ಟ್ ನ್ಯೂಸು.
ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ಈ ಸುದ್ದಿಯಲ್ಲಿರುವ ಸತ್ಯಾಂಶ ಎಷ್ಟು ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ, ರಶ್ಮಿಕಾ ಮಂದಣ್ಣ ಅವರ ಹೆಸರನ್ನ ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಬಳಗ ಈ ಸಮಾಚಾರವನ್ನ ಕೇಳಿ ಹುಚ್ಚೆದ್ದಿದೆ. ಬೆಳ್ಳಿ ಪರದೆಯ ಮೇಲೆ ಜ್ಯೂ.ಎನ್.ಟಿ.ಆರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮೋಡಿ ಮಾಡುವುದು ಪಕ್ಕಾ ಅನ್ನುವ ಭವಿಷ್ಯವನ್ನೂ ಹೇಳುತ್ತಿದೆ.
ಇನ್ನೂ.. ಈ ಚಿತ್ರದ ಸಾರಥಿ ಪ್ರಶಾಂತ್ ನೀಲ್. ಸದ್ಯಕ್ಕೆ ಪ್ರಶಾಂತ್ ನೀಲ್ ಜೊತೆ ಮಾಡಬೇಕು ಅನ್ನುವ ಕನಸನ್ನ ಅನೇಕರು ಕಾಣ್ತಿದ್ದಾರೆ. ಹೀಗಿರುವಾಗ ರಶ್ಮಿಕಾ ಮಂದಣ್ಣ ಅವರೆಲ್ಲರನ್ನ ಹಿಂದಿಕ್ಕಿ ಚಿತ್ರಕ್ಕೆ ನಿಜವಾಗಿಯೂ ಆಯ್ಕೆಯಾದರಾ ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ. ರಶ್ಮಿಕಾ ಮಂದಣ್ಣಗೆ ಇದು ಬಯಸದೇ ಬಂದ ಭಾಗ್ಯ ಅನ್ನುವ ಅಭಿಪ್ರಾಯ ಕೂಡ ಸದ್ಯಕ್ಕೆ ವ್ಯಕ್ತವಾಗುತ್ತಿದೆ.

ಒಟ್ನಲ್ಲಿ ರಶ್ಮಿಕಾ ಮಂದಣ್ಣ ಜ್ಯೂ.ಎನ್.ಟಿ.ಆರ್ ಮತ್ತು ಪ್ರಶಾಂತ್ ನೀಲ್ ಅವರ ಮಹತ್ವಕಾಂಕ್ಷೆಯ ಯೋಜನೆಯ ಭಾಗವಾಗಿದ್ದಾರೆ ಅನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಹಬ್ಬಿರುವ ಈ ಸುದ್ದಿ ನಿಜಾನಾ.. ? ಲೆಟ್ಸ್ ಸೀ...


Click it and Unblock the Notifications











