ದುನಿಯಾ ವಿಜಿ-ಕಿಟ್ಟಿಯ ಮನಸ್ತಾಪಕ್ಕೆ 40 ಲಕ್ಷದ ವ್ಯವಹಾರ ಕಾರಣವಂತೆ.!
20 ವರ್ಷದ ಸ್ನೇಹ ಈಗ ಸೇಡಿನ ಕಿಚ್ಚಾಗಿ ಸುಡುತ್ತಿದೆ. ಒಂದು ಕಾಲದಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ಗೆಳೆಯರು ಈಗ ಪರಸ್ಪರ ಬೀದಿಗಿಳಿದು ಕಚ್ಚಾಡುವಂತಾಗಿದೆ.
ಒಬ್ಬರ ಕಷ್ಟದಲ್ಲಿ ಒಬ್ಬರಾಗಿದ್ದ ಸ್ನೇಹಿತರ ಮಧ್ಯೆ ಈ ಬಿರುಕು ಎಲ್ಲಿಂದ ಆರಂಭವಾಯಿತು. ಶತ್ರುಗಳಂತೆ ದೂರುವಾಗಲು ಕಾರಣವೇನು ಎಂಬುದು ಎಲ್ಲಿಯೂ ಬಹಿರಂಗವಾಗಿಲ್ಲ. ಇದನ್ನ ದುನಿಯಾ ವಿಜಯ್ ಮತ್ತು ಪಾನಿಪುರಿ ಕಿಟ್ಟಿ ಕೂಡ ಹೇಳಿಕೊಂಡಿಲ್ಲ. ಆದ್ರೀಗ, ಎಲ್ಲರಿಗೂ ಸರ್ಪ್ರೈಸ್ ಎಂಬಂತೆ ವಿಷ್ಯವೊಂದು ಚರ್ಚೆಯಾಗುತ್ತಿದೆ.
ಸದಾ ಜೊತೆಯಲ್ಲಿದ್ದ ಸ್ನೇಹಿತರಲ್ಲಿ ಬಿರುಕು ಮೂಡಿಸಿದ್ದು 40 ಲಕ್ಷ ರೂಪಾಯಿ ವ್ಯವಹಾರ ಎನ್ನಲಾಗುತ್ತಿದೆ. ಈ ವ್ಯವಹಾರ ನಡೆದಿದ್ದು ಒಂದು ಸಿನಿಮಾ ವಿಚಾರದಲ್ಲಿ ಎಂಬುದು ಈಗ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಅಷ್ಟಕ್ಕೂ ಏನದು 40 ಲಕ್ಷದ ವ್ಯವಹಾರ ಎಂಬುದನ್ನ ಮುಂದೆ ಓದಿ.....

ದುಡ್ಡು ಕೊಟ್ಟಿದ್ರಾ ಕಿಟ್ಟಿ.?
ದುನಿಯಾ ವಿಜಯ್ ಅಭಿನಯಿಸಿದ್ದ 'ಮಾಸ್ತಿಗುಡಿ' ಚಿತ್ರದ ವೇಳೆ ಪಾನಿಪುರಿ ಕಿಟ್ಟಿ ಸುಮಾರು 40 ಲಕ್ಷ ರೂಪಾಯಿ ದುಡ್ಡನ್ನ ಚಿತ್ರಕ್ಕಾಗಿ ಪೈನಾನ್ಸ್ ನೀಡಿದ್ದರಂತೆ. ಯಾರ ಬಳಿ ಕೊಟ್ಟಿದ್ದರು, ಯಾರ ಕೈಗೆ ನೀಡಿದ್ದರು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ, ಅನಿಲ್ ಮತ್ತು ಉದಯ್ ಮೂಲಕ ಸಿನಿಮಾಗೆ ಬಂಡವಾಳ ಹಾಕಿದ್ದರು ಎನ್ನಲಾಗಿದೆ.

ಅನಿಲ್-ಉದಯ್ ಸಾವಿನ ಬಳಿಕ ಬಿರುಕು
ಆದ್ರೆ, ದುರದೃಷ್ಟವಶಾತ್ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಅನಿಲ್ ಮತ್ತು ಉದಯ್ ಇಬ್ಬರು ಸಾವನ್ನಪ್ಪಿದ್ದರು. ಅಲ್ಲಿಗೆ ಕಿಟ್ಟಿ ನೀಡಿದ್ದ ಹಣದ ಬಗ್ಗೆ ಗೊಂದಲ ಶುರುವಾಯಿತು. ಹಾಗಾಗಿ, ಸಿನಿಮಾ ಹಾಕಿದ್ದ ಹಣವನ್ನ ನಿರ್ಮಾಪಕ ಹಾಗೂ ವಿಜಿ ಬಳಿ ಕಿಟ್ಟಿ ಅವರು ಕೇಳಿದ್ದರಂತೆ. ಆದ್ರೆ, ನಮ್ಮ ಬಳಿ ನೀನು ಯಾವುದೇ ಹಣ ನೀಡಿಲ್ಲ ಎಂದು ನಿರಾಕರಿಸಿದ್ದರು ಎನ್ನಲಾಗಿದೆ. ಸೋ ಇಲ್ಲಿಂದ ಕಿಟ್ಟಿ ಮತ್ತು ವಿಜಿ ನಡುವೆ ಮನಸ್ತಾಪ ಉಂಟಾಯಿತಾ ಎಂಬ ಅನುಮಾನ ಈಗ ಕಾಡುತ್ತಿದೆ.

'ಮಾಸ್ತಿಗುಡಿ'ಗೆ ಬಂಡವಾಳ ಹಾಕಿದ್ದ ಅನಿಲ್
'ಮಾಸ್ತಿಗುಡಿ' ಚಿತ್ರವನ್ನ ದುನಿಯಾ ವಿಜಯ್ ಸ್ನೇಹಿತ ಸುಂದರ್ ಪಿ ಗೌಡ ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ದಿವಂಗತ ಖಳನಟ ಅನಿಲ್ ಕೂಡ ಬಂಡವಾಳ ಹಾಕಿದ್ದರು. ಆದ್ರೆ, ಕಿಟ್ಟಿ ಅವರು ಹಣ ನೀಡಿದ್ದರಾ ಎಂಬುದರ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಅನಿಲ್ ಮತ್ತು ಉದಯ್ ನಿಧನರಾಗಿದ್ದು ಕಿಟ್ಟಿಗೆ ಕಷ್ಟವಾಯಿತಾ ಎಂಬುದು ಗೊತ್ತಿಲ್ಲ.

ಕಿಟ್ಟಿ ಹೇಳಿದ್ದೇನು.?
ಇನ್ನು ದುನಿಯಾ ವಿಜಯ್ ಅವರಿಗೇಕೆ ನಿಮ್ಮ ಮೇಲೆ ಕೋಪ ಎಂದು ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಕಿಟ್ಟಿ, ಮಾಸ್ತಿಗುಡಿ ವೇಳೆ ಅನಿಲ್ ಮತ್ತು ಉದಯ್ ತೀರಿಕೊಂಡರು. ಇದು ಸಹಜವಾಗಿ ನನಗೆ ಬೇಸರ ತರಿಸಿತು. ಅಲ್ಲಿಂದ ನಾನು ಸ್ವಲ್ಪ ಒಬ್ಬಂಟಿಯಾಗಿ ಉಳಿಯಲು ಪ್ರಯತ್ನಪಟ್ಟೆ. ವಿಜಿ ಅವರ ಜೊತೆ ಯಾವುದೇ ಜಗಳ ಅಥವಾ ಮನಸ್ತಾಪವಿರಲಿಲ್ಲ. ಅವರನ್ನ ಭೇಟಿ ಮಾಡುವುದು ಸಹಜವಾಗಿ ಕಮ್ಮಿಯಾಯಿತು ಅಷ್ಟೇ ಎಂದಿದ್ದರು. ಈ ಬಗ್ಗೆ ವಿಜಿ ಕೂಡ ಪ್ರತಿಕ್ರಿಯಿಸಿದ್ದು, ನಮ್ಮಿಬ್ಬರ ಮಧ್ಯೆ ಯಾವುದೇ ಮನಸ್ತಾಪವಿಲ್ಲ ಎಂದಿದ್ದರು.

ತನಿಖೆಯಿಂದ ಸತ್ಯ ಹೊರಬರಬೇಕಿದೆ
ಜಿಮ್ ಟ್ರೈನರ್ ಮಾರುತಿ ಗೌಡ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಆರೋಪಿಯಾಗಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ನಿಜಕ್ಕೂ ಕಿಟ್ಟಿ ಮಾಸ್ತಿಗುಡಿ ಚಿತ್ರದ ಸಂದರ್ಭದಲ್ಲಿ ಹಣ ನೀಡಿದ್ದರಾ.? ಅದಕ್ಕೆ ದಾಖಲೆ ಇದೆಯಾ.? ಈ ದ್ವೇಷವೇ ಇಬ್ಬರ ಜಗಳಕ್ಕೆ ಕಾರಣವಾಯಿತಾ.? ಬೇರೆ ಏನಾದರೂ ಇದೆಯಾ ಎಂಬುದನ್ನ ಪೊಲೀಸರ ತನಿಖೆಯಿಂದ ಅಷ್ಟೇ ಸತ್ಯ ಹೊರಬೇಕಿದೆ.


Click it and Unblock the Notifications











