ಜೋಕರ್ ಆಗಲು ನಟ ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ರಾ?
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಚಿತ್ರೀಕರಣ ಮುಗಿಸಿ ಲಂಡನ್ ವಿಮಾನ ಏರಿದ್ದಾರೆ. ಅಲ್ಲಿ ದೊಡ್ಡ ದೊಡ್ಡ ಚಿತ್ರ ವಿತರಣೆ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಯಶ್ ಲುಕ್ ಬಗ್ಗೆ ಅಭಿಮಾನಿಗಳು ಕುತೂಹಲ ಹೆಚ್ಚಿದೆ.
ಇತ್ತೀಚೆಗೆ ಯಶ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದಾರೆ. ಅದು ಸಹಜವಾಗಿಯೇ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. 'ಟಾಕ್ಸಿಕ್' ಚಿತ್ರದ ಪಾತ್ರಕ್ಕಾಗಿ ಯಶ್ ತಮ್ಮ ಲುಕ್ ಬದಲಿಸಿಕೊಂಡಿದ್ದಾರಾ? ಯಾಕೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಓಡಾಡುತ್ತಿದ್ದಾರೆ ಎಂದು ಅಚ್ಚರಿಗೊಂಡಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಥವಾ ಎರಡು ಶೇಡ್‌ಗಳಿರೋ ಪಾತ್ರದಲ್ಲಿ ಯಶ್ ನಟಿಸುತ್ತಿದ್ದು ಅದಕ್ಕಾಗಿ ಲುಕ್ ಬದಲಿಸಿದ್ದಾರೆ ಎಂದು ಕೆಲವರು ಊಹಿಸುತ್ತಿದ್ದಾರೆ.

ಸದ್ಯ ಲಂಡನ್‌ಗೆ ಹೊರಟಾಗಲೂ ವಿಮಾನ ನಿಲ್ದಾಣದಲ್ಲಿ ಮುಖ ಕಾಣದಂತೆ ಯಶ್ ಬಟ್ಟೆ ಸುತ್ತಿಕೊಂಡಿರುವುದನ್ನು ವೀಡಿಯೋದಲ್ಲಿ ನೋಡಬಹುದು. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಬರೀ ಗ್ಯಾಂಗ್‌ಸ್ಟರ್ ಮಾತ್ರವಲ್ಲ ಜೋಕರ್ ಅವತಾರದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಈ ಹಿಂದೆ ಬಂದಿದ್ದ ಕೆಲ ಥೀಮ್ ಪೋಸ್ಟರ್‌ಗಳನ್ನು ನೋಡಿ ಈ ರೀತಿ ಲೆಕ್ಕಾಚಾರಕ್ಕೆ ಬರುತ್ತಿದ್ದಾರೆ. ಜೋಕರ್ ಲುಕ್‌ಗಾಗಿ ಯಶ್ ತಮ್ಮ ಗಡ್ಡ ಹಾಗೂ ಮೀಸೆಗೆ ಕತ್ತರಿ ಹಾಕಿರಬಹುದು ಎಂದು ಊಹಿಸುತ್ತಿದ್ದಾರೆ.
ಇತ್ತೀಚೆಗೆ ವರಲಕ್ಷ್ಮಿ ಹಬ್ಬವನ್ನು ಮಡದಿ ಮಕ್ಕಳ ಜೊತೆ ಯಶ್ ಆಚರಿಸಿದ್ದರು. ಈ ವೇಳೆ ರಾಧಿಕಾ ಪಂಡಿತ್ ಹಂಚಿಕೊಂಡಿದ್ದ ಫೋಟೊಗಳಲ್ಲಿ ಕೂಡ ಯಶ್ ಲುಕ್ ರಿವೀಲ್ ಆಗದಂತೆ ಎಚ್ಚರ ವಹಿಸಿದಂತೆ ಕಂಡುಬಂದಿತ್ತು. ದೇವರಿಗೆ ದಂಡ ನಮಸ್ಕಾರ ಹಾಕುತ್ತಿರುವ ಯಶ್ ಬೆನ್ನಿನ ಮೇಲೆ ಮಗಳು ಐರಾ ಹಾಗೂ ಮಗ ಯಥರ್ವ್ ಹತ್ತಿ ಕುಳಿತ ಫೋಟೊವನ್ನು ವೈರಲ್ ಆಗಿತ್ತು. ಇದನ್ನು ನೋಡಿ ಯಾಕೆ ಯಶ್ ಮುಖ ತೋರಿಸುತ್ತಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ರಕ್ಷಾ ಬಂಧನ್ ಹಬ್ಬಕ್ಕೆ ಸಹೋದರಿ ಜೊತೆ ಕಾಣಿಸಿಕೊಂಡಿದ್ದ ಫೋಟೊದಲ್ಲಿ ತಲೆಗೆ ಮಾತ್ರ ಕ್ಯಾಪ್ ಹಾಕಿಕೊಂಡಿದ್ದರು. ಒಟ್ಟಾರೆ ಯಶ್ ತಮ್ಮ ಹೇರ್‌ಸ್ಟೈಲ್ ಅಥವಾ ಗಡ್ಡದ ಸ್ಟೈಲ್ ಮುಚ್ಚಿಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದಾರೆ. ಶೀಘ್ರದಲ್ಲೇ ಈ ಗೊಂದಲಕ್ಕೆ ಉತ್ತರ ಸಿಗಲಿದೆ.
ಯಶ್ ಹೀಗೆ ತಮ್ಮ ಲುಕ್ ರಿವೀಲ್ ಆಗದಂತೆ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಓಡಾಡುತ್ತಿರುವುದು ಬಾಲಿವುಡ್ ಮಂದಿಗೂ ಅಚ್ಚರಿ ಮೂಡಿಸಿದೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಿಗಾಗಿ ಬಿಟೌನ್ ಮಂದಿ ಕೂಡ ಕಾಯುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಿಸಲಿದ್ದಾರೆ. ಚಿತ್ರದ ಮೊದಲ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಮೇಲೆ ಬರಲಿದೆ. ಪಾರ್ಟ್-1ನಲ್ಲಿ ಕೆಲವೇ ನಿಮಿಷಗಳು ಮಾತ್ರ ಯಶ್ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ 'ರಾಮಾಯಣ' ಚಿತ್ರದಲ್ಲಿ ತಮ್ಮ ಭಾಗದ ಚಿತ್ರೀಕರಣವನ್ನು ಯಶ್ ಮುಗಿಸಿದ್ದಾರೆ. ಸಹ ನಿರ್ಮಾಪಕರಾಗಿಯೂ ಕೈ ಜೋಡಿಸಿದ್ದಾರೆ. ಮತ್ತೊಂದು ಕಡೆ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವುದರ ಜೊತೆಗೆ ಬಂಡವಾಳ ಸಹ ಹೂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮುಂಬೈ ಶೆಡ್ಯೂಲ್ ಬಹುತೇಕ ಮುಕ್ತಾಯವಾಗಿದ್ದು ಬೆಂಗಳೂರಿನಲ್ಲಿ ಕೊನೆ ಶೆಡ್ಯೂಲ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
'ಟಾಕ್ಸಿಕ್' ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರದಲ್ಲಿ ಯಶ್ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಿದ್ದಾರೆ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಇನ್ನು ಯಶ್ ತಮ್ಮ ಗಡ್ಡಕ್ಕೆ ಸಂಪೂರ್ಣವಾಗಿ ಕತ್ತರಿ ಹಾಕಿ ಏಳೆಂಟು ವರ್ಷಗಳೇ ಕಳೆದಿದೆ. 'ಕೆಜಿಎಫ್- 1' ಸಿನಿಮಾ ಬಳಿಕ 'ಮೈ ನೇಮ್ ಕಿರಾತಕ' ಚಿತ್ರದಲ್ಲಿ ನಟಿಸಲು ಯಶ್ ಲುಕ್ ಬದಲಿಸಿದ್ದರು. ಆ ಬಳಿಕ ಆ ಸಿನಿಮಾ ಕೈಬಿಟ್ಟರು. ಬಳಿಕ ಉದ್ದನೆಯ ಗಡ್ಡ, ಕೂದಲಿನ ಲುಕ್ ಅನ್ನು ಮುಂದುವರೆಸಿದರು.
'ಕೆಜಿಎಫ್- 2' ಚಿತ್ರದಲ್ಲೂ ಯಶ್ ಉದ್ದನೆಯ ಗಡ್ಡ, ರಗಡ್ ಲುಕ್ ಹೈಲೆಟ್ ಆಗಿತ್ತು. ಬಳಿಕ ಒಂದಷ್ಟು ಜಾಹೀರಾತುಗಳಲ್ಲಿ ಅದೇ ರೀತಿ ಮಿಂಚಿದ್ದರು. 'ಟಾಕ್ಸಿಕ್' ಚಿತ್ರಕ್ಕಾಗಿ ಹೇರ್‌ಸ್ಟೈಲ್ ಕೊಂಚ ಬದಲಿಸಿದ್ದರು. ಇನ್ನುಳಿದಂತೆ ಅವರ ಲುಕ್ ಬದಲಾಗಲಿಲ್ಲ.


Click it and Unblock the Notifications











