ಕನ್ನಡದ 'KFG 2' ಜೊತೆ ತಮಿಳಿನ 'ಬೀಸ್ಟ್' ಕ್ಲ್ಯಾಶ್: ಗೆಲ್ಲೋರು ಯಾರು?
ಕನ್ನಡದಲ್ಲಿ ಸದ್ಯ 'ಜೇಮ್ಸ್' ಅಬ್ಬರ ಶುರುವಾಗಿದೆ. 'ಜೇಮ್ಸ್' ಚಿತ್ರದ ಬಳಿಕ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರದ ಹಾವಳಿ ಆರಂಭ ಆಗಲಿದೆ. ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2'. ಕನ್ನಡದ ಈ ಚಿತ್ರ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಹಾಗಾಗಿ ಈ ಚಿತ್ರಕ್ಕೆ ಇಡೀ ವಿಶ್ವವೇ ಕಾಯುತ್ತಿದೆ ಅಂದರೆ ತಪ್ಪಾಗಲಾರದು.
ಏಪ್ರಿಲ್‌ನಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಹವಾ ಯಾವ ಮಟ್ಟಿಗೆ ಇದೆ ಎಂದರೆ ಇದರ ಜೊತೆಗೆ ಬರಲು ಮತ್ಯಾವ ಚಿತ್ರವೂ ತಯಾರಿಲ್ಲ. 'ಕೆಜಿಎಫ್ 2' ಜೊತೆಗೆ ಬಾಕ್ಸಾಫೀಸ್ ಕಾಳಗ ಮಾಡಲು ಯಾರು ಧೈರ್ಯ ಮಾಡಿಲ್ಲ. ಹಾಗಾಗಿ ಒಂದಷ್ಟು ಸಣ್ಣ, ಪುಟ್ಟ ಸಿನಿಮಾಗಳು ಈ ಚಿತ್ರದ ಆಸು, ಪಾಸಿನಲ್ಲಿ ರಿಲೀಸ್ ಆಗುತ್ತವೆ ಎನ್ನಲಾಗಿತ್ತು.
ಆದರೆ ಈಗ 'ಕೆಜಿಎಫ್ 2' ಚಿತ್ರಕ್ಕೆ ಟಾಂಗ್ ಕೊಡಲು ತಮಿಳಿನ ದೊಡ್ಡ ಚಿತ್ರವೇ ಬರುತ್ತಿದೆ. ತಮಿಳು ಸ್ಟಾರ್ ನಟ ವಿಜಯ್ ಅವರ ಸಿನಿಮಾ 'ಕೆಜಿಎಫ್ 2' ಜೊತೆಗೆ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಅದು ಬಹುತೇಕ ಪಕ್ಕ ಎನ್ನುವ ಸುದ್ದಿಗಳು ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಓದಿ...

ಏಪ್ರಿಲ್ 14 'ಕೆಜಿಎಫ್ 2', ಏಪ್ರಿಲ್ 13 'ಬೀಸ್ಟ್'!
ಸದ್ಯ ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ತಮಿಳಿನ ನಿರೀಕ್ಷಿತ ಸಿನಿಮಾ 'ಬೀಸ್ಟ್' ಏಪ್ರಿಲ್‌ನಲ್ಲಿ ರಿಲೀಸ್ ಆಗಲಿದೆಯಂತೆ. ಏಪ್ರಿಲ್‌ನಲ್ಲಿ ಯಾವುದೋ ದಿನಾಂಕಕ್ಕೆ 'ಬೀಸ್ಟ್' ರಿಲೀಸ್ ಆಗುತ್ತಿಲ್ಲ. ಬದಲಿಗೆ ಈ ಚಿತ್ರ 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮೊದಲು, ಏಪ್ರಿಲ್ 13ಕ್ಕೆ ರಿಲೀಸ್ ಆಗುತ್ತಿದೆ. ಹಾಗಾಗಿ ಈ ಎರಡು ಚಿತ್ರಗಳ ರಿಲೀಸ್ ನಡುವೆ ಅಷ್ಟೇನು ಅಂತರ ಇಲ್ಲ. ಆದರೂ ಕೂಡ ಹೀಗೆ ಎರಡು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಖಚಿತ.

'ಕೆಜಿಎಫ್ 2' v/s 'ಬೀಸ್ಟ್', ಬಾಕ್ಸಾಫೀಸ್ ಕಾಳಗ!
'ಕೆಜಿಎಫ್ 2' ಮತ್ತು 'ಬೀಸ್ಟ್' ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದು ಎಂದರೆ ಸುಮ್ಮನೇ ಅಲ್ಲ. ಈ ಎರಡೂ ಚಿತ್ರಗಳಿಗೆ ತನ್ನದೆ ಆದ ತೂಕ ಇದೆ. ವಿಜಯ್ ಅಭಿನಯದ 'ಬೀಸ್ಟ್' ಕೂಡ ಸಾಕಷ್ಟು ನಿರೀಕ್ಷೆ ಹೊಂದಿರುವ ಸಿನಿಮಾ. ಈ ಚಿತ್ರಕ್ಕೆ ನೆಲ್ಸನ್ ನಿರ್ದೇಶನವಿದೆ. ಹಲವು ದಿನಗಳ ಬಳಿಕ ವಿಜಯ್ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇನ್ನು 'ಕೆಜಿಎಫ್ 2' ಬಗ್ಗೆ ಮಾತಾಡೋದೆ ಬೇಡ ಅಷ್ಟರ ಮಟ್ಟಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಮನೆ ಮಾಡಿದೆ. ಹಾಗಾಗಿ 'ಬೀಸ್ಟ್', 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮುಂಚೆ ರಿಲೀಸ್ ಆದರೂ ಬಾಕ್ಸಾಫೀಸ್‌ನಲ್ಲಿ ಈ ಎರಡೂ ಚಿತ್ರಗಳೂ ಹೊಡೆತ ತಿನ್ನ ಬೇಕಾಗಬಹುದು.

'ಕೆಜಿಎಫ್ 2' ಜೊತೆ ರಿಲೀಸ್ 'ಬೀಸ್ಟ್' ನಿರ್ಮಾಪಕರ ನಿರ್ಧಾರ!
'ಬೀಸ್ಟ್' ಸಿನಿಮಾವನ್ನು ಏಪ್ರಿಲ್‌ನಲ್ಲಿ ರಿಲೀಸ್ ಮಾಡಬೇಕು ಎನ್ನುವುದು ಮಾತ್ರವೇ ಚಿತ್ರತಂಡದ ಯೋಜನೆ ಆಗಿದೆಯಂತೆ. ಆದರೆ ಸಿನಿಮಾವನ್ನು ಏಪ್ರಿಲ್ 13ಕ್ಕೆ ರಿಲೀಸ್ ಮಾಡಲೇ ಬೇಕು ಎನ್ನುವುದು ನಿರ್ಮಾಣ ಸಂಸ್ಥೆಯ ನಿರ್ಧಾರ ಎಂದು ತಿಳಿದು ಬಂದಿದೆ. ಬೀಸ್ಟ್ ಚಿತ್ರವನ್ನು ನಿರ್ಮಾಣ ಮಾಡಿರುವ 'ಸನ್ ಪಿಕ್ಚರ್ಸ್' ಬೀಸ್ಟ್ ಸಿನಿಮಾ ರಿಲೀಸ್ ಮಾಡಲು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಕೆಜಿಎಫ್ ಮುಂದೆ ಸೋಲುಂಡಿದ್ದ ಶಾರುಖ್ ಖಾನ್!
ಇನ್ನು 'ಕೆಜಿಎಫ್' ಪವರ್ ಎಂತಹದ್ದು ಎನ್ನುವುದು ಈ ಮೊದಲೇ ಗೊತ್ತಾಗಿದೆ. ಕಳೆದ ಬಾರಿ ಕೆಜಿಎಫ್ ಭಾಗ ಒಂದು ರಿಲೀಸ್ ಆಗುವ ಸಮಯದಲ್ಲಿ, ಈ ಚಿತ್ರಕ್ಕೆ ಎದುರಾಗಿದ್ದು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. 2018 ಡಿಸೆಂಬರ್ 21 ಕೆಜಿಎಫ್ 1 ಮತ್ತು ಬಾಲಿವುಡ್‌ನ 'ಝೀರೋ' ಚಿತ್ರಗಳು ಒಟ್ಟಿಗೆ ತೆರೆಗೆ ಬಂದವು. ಆದರೆ ಕನ್ನಡದ ಕೆಜಿಎಫ್ ಚಿತ್ರದ ಮುಂದೆ ಬಾಲಿವುಡ್ ಚಿತ್ರ ಝೀರೋ ಅಕ್ಷರಶಃ ಝೀರೋ ಆಗಿತ್ತು. ಹಾಗಾಗಿ ಈಗಲೂ ಕೆಜಿಎಫ್ 2 ಚಿತ್ರದ ಎದುರು ಬರುವ ಚಿತ್ರಗಳು ಕೊಂಚ ಆಲೋಚಿಸುವ ಪರಿಸ್ಥಿತಿ ಇದೆ.


Click it and Unblock the Notifications











