»   » ರಾಕ್‌ಲೈನ್‌ಗೆ ಪ್ರೇಮಭಂಗ : ‘ಸಿಂಗಾರವ್ವ’ ನಾಗಾಭರಣ ವಶ

ರಾಕ್‌ಲೈನ್‌ಗೆ ಪ್ರೇಮಭಂಗ : ‘ಸಿಂಗಾರವ್ವ’ ನಾಗಾಭರಣ ವಶ

Subscribe to Filmibeat Kannada

ಅತ್ತ ನಾಗರಹಾವು ಚಿತ್ರತಂಡ ನ್ಯೂಜಿಲೆಂಡಿಗೆ ಪ್ರಯಾಣ ಬೆಳೆಸುತ್ತಿರುವಂತೆಯೇ ಇತ್ತ ‘ಇದು ಮೋಸ’ ಎಂದು ರಾಕ್‌ಲೈನ್‌ ವೆಂಕಟೇಶ್‌ ಭುಸುಗುಡುತ್ತಿದ್ದಾರೆ. ‘ಇದು ಮೋಸವಷ್ಟೇ ಅಲ್ಲ , ಬಟ್ಟಲಲ್ಲಿ ಬಡಿಸಿದ ಅನ್ನಕ್ಕೆ ಉಚ್ಚೆ ಹುಯ್ದ ನಡವಳಿಕೆ’ ಎನ್ನುತ್ತಾರೆ ರವೀ ಅರ್ಥಾತ್‌ ಕೆಎಸ್‌ಎಲ್‌ ಸ್ವಾಮಿ.

ವಿಷಯ ಇಷ್ಟು :
ತಮ್ಮ ‘ಸಿಂಗಾರೆವ್ವ ಮತ್ತು ಅರಮನೆ’ ಕೃತಿಯ ಹಕ್ಕನ್ನು ರಾಕ್‌ಲೈನ್‌ಗೆ ಕೊಡಲು ಒಪ್ಪಿಕೊಂಡಿದ್ದ ಹಿರಿಯ ಕವಿ ಚಂದ್ರಶೇಖರ ಕಂಬಾರ ಈಗ ವರಸೆ ಬದಲಿಸಿದ್ದಾರೆ; ರಾಕ್‌ಲೈನ್‌ ಭಾವದಲ್ಲಿ ಹೇಳುವುದಾದರೆ ಪೊರೆ ಕಳಚಿದ್ದಾರೆ. ಸಿಂಗಾರವ್ವನ ಹಕ್ಕುಗಳನ್ನು ನಾಗಾಭರಣ ಪಾಲು ಮಾಡುವ ಮೂಲಕ ರಾಕ್‌ಲೈನ್‌ಗೆ ಕಂಬಾರ ಪ್ರೇಮಭಂಗ ಮಾಡಿದ್ದಾರೆ.

ಕಲಾತ್ಮಕ ಚಿತ್ರವೊಂದನ್ನು ನಿರ್ಮಿಸಬೇಕೆನ್ನುವ ಕನಸಿನಲ್ಲಿ ಓಲಾಡುತ್ತಿದ್ದ ರಾಕ್‌ಲೈನ್‌ಗೆ ಕಂಬಾರರ ಈ ನಡವಳಿಕೆ ಆಶ್ಚರ್ಯ ಮಾತ್ರವಲ್ಲ , ದಿಗ್ಭ್ರಮೆಯನ್ನೂ ಮೂಡಿಸಿದೆ. ಸಿಂಗಾರೆವ್ವನ ನಿರ್ದೇಶನದ ಹೊಣೆಯನ್ನು ರವೀ ಅವರಿಗೆ ರಾಕ್‌ಲೈನ್‌ ಒಪ್ಪಿಸಿದ್ದರು. ಕಂಬಾರರನ್ನು ರವೀ ಅವರು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು -

‘ಎರಡು ವರ್ಷಗಳ ಕೆಳಗೆ ಸಿಂಗಾರೆವ್ವನ ಹಕ್ಕುಗಳನ್ನು ಬೇರೆಯವರಿಗೆ ಕೊಟ್ಟಿದ್ದುಂಟು. ಈಗ ಒಪ್ಪಂದದ ಅವಧಿ ಮುಗಿದಿರುವುದರಿಂದ ರಾಕ್‌ಲೈನ್‌ಗೆ ಕೊಡಲಡ್ಡಿಯಿಲ್ಲ . ಅವರನ್ನು ಕರೆತನ್ನಿ , ಮಾತನಾಡೋಣ.’

ರಾಕ್‌ಲೈನ್‌ ಊರಲ್ಲಿ ಇಲ್ಲದ ಕಾರಣ, ತಾವೇ ಅಡ್ವಾನ್ಸ್‌ ಕೊಡುವುದಾಗಿ ರವೀ ಹೇಳಿದ್ದರಂತೆ. ಆದರೆ, ಪರವಾಗಿಲ್ಲ , ರಾಕ್‌ಲೈನ್‌ ಬಂದಮೇಲೆಯೇ ಮಾತಾಡೋಣ ಎಂದು ಕಂಬಾರರು ಸುಮ್ಮನಾದರಂತೆ. ಆಮೇಲೆ ಒಪ್ಪಂದದ ದಿನ ಫೋನ್‌ ಮಾಡಿದಾಗ, ಆ ಹ್ತೊತಿಗೆ ಕಂಬಾರರು ಸಿಂಗಾರೆವ್ವನ ಹಕ್ಕುಗಳನ್ನು ನಾಗಾಭರಣರಿಗೆ ಹಸ್ತಾಂತರಿಸಿದ್ದಾಗಿತ್ತು. ರಾಕ್‌ಲೈನ್‌ ಸಿಟ್ಟಿಗೇಳಲು ಇನ್ನೇನು ಬೇಕು?

ಇತ್ತ, ನಾನು ಎರಡು ತಿಂಗಳ ಹಿಂದೆಯೇ ಸಿಂಗಾರೆವ್ವನ ಹಕ್ಕುಗಳನ್ನು ಪಡೆದಿದ್ದೆ. ಒಂದೂವರೆ ವರ್ಷದ ಹಿಂದೆಯೇ ಚಿತ್ರಕಥೆ ರೂಪಿಸಿದ್ದೆ ಎಂದು ನಾಗಾಭರಣ ಹೇಳಿಕೊಳ್ಳುತ್ತಿದ್ದಾರಂತೆ. ಕೃತಿಯ ಹಕ್ಕು ಸಿಗದೆ ಯಾರಾದರೂ ಚಿತ್ರಕಥೆ ರಚಿಸುತ್ತಾರಾ ಅನ್ನುವುದು ರವೀ ಅವರ ಕೊಂಕು. ಒಟ್ಟಿನಲ್ಲಿ ಸಿಂಗಾರವ್ವನ ಸ್ಯಾಂಡಲ್‌ವುಡ್‌ ಪ್ರವೇಶ ಮತ್ತೆ ಮುಂದೆ ಹೋಗಿದೆ. ಏಕೆಂದರೆ, ನಾಗಾಭರಣ ಅವರು ಹಕ್ಕು ಪಡೆದಿರುವ ಕೃತಿಗಳ ಸಂಖ್ಯೆ ದೊಡ್ಡದಿದೆ.

Post your views on Kambara

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada