'RRR' ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ
ಭಾರತೀಯ ಸಿನಿಮಾರಂಗದ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿರುವ ಆರ್ ಆರ್ ಆರ್ ಸಿನಿಮಾ ಮೇಕಿಂಗ್ ವಿಡಿಯೋ ಮೂಲಕ ಗಮನ ಸೆಳೆಯುತ್ತಿದೆ. ಸದ್ಯ ಚಿತ್ರತಂಡ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದೆ.
ಈ ನಡುವೆ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಆರ್ ಆರ್ ಆರ್ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಹೌದು, ಆರ್ ಆರ್ ಆರ್ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 200 ಕೋಟಿಗೆ ಸೇಲ್ ಆಗಿದೆಯಂತೆ. ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸಿನಿಮಾ ತಂಡ ಎಲ್ಲೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ 200 ಕೋಟಿಗೆ ಮಾರಾಟವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಬಳಿಕವೇ ಸಿನಿಮಾ ಡಿಜಿಟಲ್ ನಲ್ಲಿ ಪ್ರಸಾರವಾಗಲಿದೆ. ಆರ್ ಆರ್ ಆರ್ ಸಿನಿಮಾವನ್ನು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ತಡವಾದರೂ ಸಿನಿಮಾ ಚಿತ್ರಮಂದಿರಗಳಲ್ಲೇ ಪ್ರದರ್ಶನಗೊಳ್ಳಲಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಮುಂದಿನ ವರ್ಷ ಪ್ರಾರಂಭದಲ್ಲಿ ರಿಲೀಸ್ ಆಗಬೇಕಿತ್ತು. ಆದರೀಗ ಸಿನಿಮಾ ಜನವರಿಯಲ್ಲಿ ತೆರೆಗೆ ಬರುವುದು ಅನುಮಾನವಾಗಿದೆ.

ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಅಲಿಯಾ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲಿಯಾ ನವೆಂಬರ್ ತಿಂಗಳಿಂದ ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನೂ ನಟ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











