ಜೈಲಾ, ಬೇಲಾ ಸಲ್ಲು ಮೇಲೆ 2000 ಕೋಟಿ ಬೆಟ್ಟಿಂಗ್!
ಬಾಲಿವುಡ್ ನಟ ಸಲ್ಮಾನ್ ಖಾನ್ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಬುಧವಾರ (ಮೇ.6) ಹೊರ ಬೀಳುತ್ತಿದೆ. ಸಲ್ಲುಗೆ ಜೈಲಾ ಇಲ್ಲಾ ಬೇಲಾ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಕೇವಲ ಸಲ್ಲುಗೆ ಅಷ್ಟೇ ಅಲ್ಲ ಅವರ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರಿಗೂ ನಿದ್ದೆ ಇಲ್ಲದಂತಾಗಿದೆ.
ಸಲ್ಲು ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಇನ್ನೊಂದು ಮಹತ್ತರ ಸಂಗತಿ ಬೆಳಕಿಗೆ ಬಂದಿದೆ. ಸಲ್ಲುಗೆ ಜಾಮೀನು ಸಿಗುತ್ತಾ ಅಥವಾ ಜೈಲೇ ಗತಿಯಾಗಲಿದೆಯಾ ಎಂಬ ಬಗ್ಗೆ ಬೆಟ್ಟಿಂಗ್ ದಂಧೆ ಜೋರಾಗಿದೆ ಎನ್ನುತ್ತವೆ ಮೂಲಗಳು.
ಸಲ್ಲು ಮೇಲೆ ಬಾಜಿ ಕಟ್ಟಿರುವ ಮೊತ್ತ ಕೇಳಿದರೆ ಬೆಚ್ಚಿಬೀಳುವಂತಿದೆ. ಮೂಲಗಳ ಪ್ರಕಾರ ಸರಿಸುಮಾರು ರು.2,000 ಕೋಟಿ ಸಲ್ಲು ಮೇಲೆ ಬೆಟ್ಟಿಂಗ್ ಕಟ್ಟಲಾಗಿದೆ. ಬಹುಶಃ ಯಾವುದೇ ಕ್ರಿಕೆಟ್ ಬೆಟ್ಟಿಂಗ್ ಸಹ ಈ ಮಟ್ಟದಲ್ಲಿ ನಡೆದಿರಲಿಕ್ಕಿಲ್ಲ.

ಏಕಾಏಕಿ ಸಲ್ಲು ಮೇಲೆ ಬಿತ್ತು ಬುಕ್ಕಿಗಳ ಕಣ್ಣು
ಈ ಮೊತ್ತವನ್ನು ನೋಡಿದರೆ ಯಾವುದೇ ಕ್ರಿಕೆಟ್ ಅಥವಾ ಚುನಾವಣಾ ಬೆಟ್ಟಿಂಗ್ ಇದಕ್ಕೆ ಸರಿಸಮ ಬರಲ್ಲ ಎನ್ನುವಂತಿದೆ. ಇಷ್ಟು ದಿನ ಕಾನೂನು ಬಾಹಿರವಾಗಿ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬುಕ್ಕಿಗಳು ಈಗ ಏಕಾಏಕಿ ಸಲ್ಮಾನ್ ಖಾನ್ ತೀರ್ಪಿನ ಮೇಲೆ ತಮ್ಮ ಗಮನ ನೆಟ್ಟಿದ್ದಾರೆ.

ಸಲ್ಲು ಜನಪ್ರಿಯತೆ ಬಂಡವಾಳ ಮಾಡಿಕೊಳ್ಳಲು ತಯಾರಿ
ಸಲ್ಲು ತೀರ್ಪಿನ ಮೇಲಿನ ಬಾಜಿ ಮೊತ್ತ ನೋಡಿದರೆ ಅವರ ಜನಪ್ರಿಯತೆ ಎಷ್ಟಿರಬಹುದು ಎಂಬುದು ಗೊತ್ತಾಗುತ್ತದೆ. ಒಟ್ಟಾರೆ ಸಲ್ಲು ಜನಪ್ರಿಯತೆಯನ್ನು ಬಳಸಿಕೊಂಡು ಬಂಡವಾಳ ಮಾಡುವ ಅಥವಾ ಕಳೆದುಕೊಳ್ಳುವ ಆಟ ತೆರೆಮರೆಯಲ್ಲಿ ನಡೆಯುತ್ತಿದೆ.

ಸದ್ಯಕ್ಕೆ ಸಲ್ಲು ಮೇಲೆ ರು.200 ಕೋಟಿ ಬಂಡವಾಳ
ಸದ್ಯಕ್ಕೆ ಸಲ್ಲು ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದು ರು.150 ಕೋಟಿ ಬಂಡವಾಳ ಹೂಡಲಾಗಿದೆ. ಇನ್ನು ರು.50 ಕೋಟಿ ಜಾಹೀರಾತು ಹಾಗೂ ವಾಣಿಜ್ಯ ವಹಿವಾಟಿಗೆ ಸಂಬಂಧಪಟ್ಟಿದೆ.

ಜೈಲಿಗೆ ಹೋದರೆ 1000 ಕೋಟಿ ನಷ್ಟ
ಒಂದು ವೇಳೆ ತೀರ್ಪಿನಲ್ಲಿ ಸಲ್ಲುಗೆ ಜೈಲು ಶಿಕ್ಷೆಯಾದರೆ (ಕನಿಷ್ಠ ಮೂರು ವರ್ಷ ಜೈಲು) ಇದರಿಂದ ರು.1000 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಮೂರು ವರ್ಷಗಳಲ್ಲಿ ಸಲ್ಲು ಚಿತ್ರಗಳ ಆದಾಯ, ಹೂಡಿರುವ ಬಂಡವಾಳ ಎಲ್ಲವೂ ಸೇರಿ ಈ ನಷ್ಟವನ್ನು ಅಂದಾಜಿಸಿದ್ದಾರೆ ತಜ್ಞರು.

ಬೆಟ್ಟಿಂಗ್ ನಲ್ಲಿ ಕೋಟಿಗಟ್ಟಲೆ ಹಣ ಹರಿಯಲಿದೆ
ಸಣ್ಣಪುಟ್ಟ ನಗರಗಳಿಂದ ಹಿಡಿದು ಮೆಟ್ರೋ ಸಿಟಿಗಳ ತನಕ ಬೆಟ್ಟಿಂಗ್ ಕಬಂಧ ಬಾಹುಗಳು ಚಾಚಿದ್ದು ಸಲ್ಲು ತೀರ್ಪಿನ ಮೇಲೆ ರು.2000 ಕೋಟಿ ಬೆಟ್ಟಿಂಗ್ ಹಣ ಹೂಡಲಾಗಿದೆ ಎಂದು ಅಂದಾಜಿಸಲಾಗಿದೆ.

ಒಂದೊಂದು ಸಿಟಿಗೆ ಒಂದೊಂದು ರೇಟು
ಬುಕ್ಕಿಗಳೇ ಹೇಳುವಂತೆ ಕೆಲವು ಕಡೆ ಒಂದು ವೇಳೆ ಸಲ್ಲು ದೋಷಿಯಾದರೆ ರು.10, ನಿರ್ದೋಷಿಯಾದರೆ ರು.2. ಮಹಾನಗರಗಳಲ್ಲಾದರೆ ಕ್ರಮವಾಗಿ ರು.60 ಹಾಗೂ ರು.40 ಎಂದು ನಿರ್ಧರಿಸಲಾಗಿದೆ.

ಇಷ್ಟಕ್ಕೂ ಏನಿದು ಕೇಸು ಎಂದರೆ?
ಹದಿಮೂರು ವರ್ಷಗಳ ಹಿಂದೆ (September 28, 2002) ಮುಂಬೈನ ಬಾಂದ್ರಾದಲ್ಲಿ ನಡೆದ ಘಟನೆಯಿದು. ಅಂದು ರಾತ್ರಿ ಹನ್ನೊಂದು ಗಂಟೆಗೆ ಸುಮಾರಿಗೆ ಸಲ್ಮಾನ್ ತನ್ನ ಎಂಟು ಜನ ಗೆಳೆಯರೊಂದಿಗೆ ಬಾರಿಗೆ ಬಂದಿದ್ದರು. ಸಲ್ಮಾನ್ ಬಾರಿಗೆ ಬಂದಾಗ ಜನರಿಂದ ತುಂಬಿತ್ತು. ಸ್ವಲ್ಪ ಹೊತ್ತು ಕಾದ ನಂತರ ಸಲ್ಮಾನ್ ಮತ್ತು ಅವರ ಗೆಳೆಯರು ಮದ್ಯ ಸೇವಿಸಿ, ಊಟ ಮಾಡಿ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಬಾರಿನಿಂದ ತೆರಳಿದ್ದರು.

ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದ ಕಾರು
ಸೆಪ್ಟಂಬರ್ 28, 2002ರಲ್ಲಿ ಸಲ್ಮಾನ್ ಫುಟ್ ಪಾತಿನ ಮೇಲೆ ಕಾರು ಚಲಾಯಿಸಿ, ಬೇಕರಿಯೊಂದಕ್ಕೆ ಢಿಕ್ಕಿ ಹೊಡೆದಿದ್ದರು. ಆ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ ಇತರ ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.


Click it and Unblock the Notifications











