»   » ರುಚಿತಾಗೆ ಸೈಕಿಕ್‌ ರೋಲ್‌ ಇಷ್ಟವಂತೆ!

ರುಚಿತಾಗೆ ಸೈಕಿಕ್‌ ರೋಲ್‌ ಇಷ್ಟವಂತೆ!

Posted By:
Subscribe to Filmibeat Kannada

ಒಂದು ಹಳೇ ಜೋಕಿದೆ. ಒಬ್ಬ ಚಿತ್ರನಟರ ಬಳಿ ಬಂದ ನಿರ್ಮಾಪಕರು ತಮ್ಮ ಚಿತ್ರದಲ್ಲಿ ನಟಿಸುವಂತೆ ಕೋರಿದರಂತೆ. ಸಾರ್‌ ಈ ಪಾತ್ರಕ್ಕೆ ನೀವು ಹೇಳಿ ಮಾಡಿಸಿದಂತಿದ್ದೀರಿ ಎಂದು ಅಟ್ಟ ಹತ್ತಿಸಿದರು. ಇದರಲ್ಲಿ ನಿಮ್ಮ ನೈಜ ಪ್ರತಿಭೆಯ ಪ್ರಕಾಶಕ್ಕೆ ಅವಕಾಶ ಇದೆ. ಖಂಡಿತ ಒಪ್ಪಿಕೊಳ್ಳಲೇ ಬೇಕು ಎಂದರು.

ಹೌದೆ? ಏನು ಪಾತ್ರ ಎಂದು ಕೇಳಿದರು. ನಾಯಕ ನಟ. ಈ ಚಿತ್ರದಲ್ಲಿ ನಿಮ್ಮದು ಹುಚ್ಚನ ಪಾತ್ರ ಸಾರ್‌.

ಏನು ! ಹುಚ್ಚನ ಪಾತ್ರವೇ? ನಾನು ಆ ಪಾತ್ರದಲ್ಲಿ ಅಷ್ಟು ಚೆನ್ನಾಗಿ ಆಕ್ಟ್‌ ಮಾಡ್ತೀನಾ ಎಂದು ನಾಯಕ ಪ್ರಶ್ನಿಸಿದ. ನಿರ್ಮಾಪಕರು ಅಷ್ಟೇ ಕೂಲಾಗಿ ಉತ್ತರ ಕೊಟ್ರು, ಹೌದು.. ಸಾರ್‌ ಈ ಪಾತ್ರದಲ್ಲಿ ನೀವು ಅಭಿನಯಸೋದೇ ಬೇಡ. ದಿನ ಹೇಗಾಡ್ತೀರೋ ಹಾಗೇ ಆಡಿದ್ರೆ ಸಾಕು.

ಅಂದ ಹಾಗೆ ಈಗ ಇದೇಕೆ ಜ್ಞಾಪಕ ಬಂತು ಗೊತ್ತೆ. ಕನ್ನಡದಲ್ಲಿ ‘ಹುಚ್ಚ ’ ಎಂಬ ಚಿತ್ರ ತಯಾರಾಕ್ತಿದೆ. ಈ ಮಧ್ಯೆ ‘ಉಪೇಂದ್ರ’ ಚಿತ್ರದಲ್ಲಿ ಅಭಿನಯಿಸಿದ್ದ ಚಿತ್ರನಟಿ ದಾಮಿನಿ ಇಷ್ಟರಲ್ಲೇ ಬಿಡುಗಡೆ ಆಗಲಿರುವ ತೆಲುಗಿನ ‘ರಾ’ ಎಂಬ ಹೆಸರಿನ ಚಿತ್ರದಲ್ಲಿ ಹುಚ್ಚಿಯಾಗಿ ನಟಿಸಿದ್ದಾರೆ.

ಈ ಮಧ್ಯೆ ಕನ್ನಡ ನವ ನಟಿ ರಂಗೋಲಿ ಖ್ಯಾತಿಯ ರುಚಿತಾ ಪ್ರಸಾದ್‌ಗೆ ಹುಚ್ಚಿಯ ಪಾತ್ರ ಬಹಳ ಇಷ್ಟವಂತೆ. ಮೊನ್ನೆ ರುಚಿತಾ ತಮ್ಮ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಃ ಅವರೇ ತಿಳಿಸಿದರು. ಆ ಪತ್ರಿಕಾಗೋಷ್ಠಿಯೂ ಹೆಚ್ಚೂ ಕಮ್ಮಿ ಹುಚ್ಚು ಹುಚ್ಚಾಗೇ ಇತ್ತು. ಯಾವುದೇ ತಾರೆ ಪತ್ರಿಕಾಗೋಷ್ಠಿ ಕರೆಯಲು ಯಾವುದೇ ಕಾರಣ ಬೇಕಾಗಿಲ್ಲ ಅನ್ನೋದು ಪತ್ರಕರ್ತರಿಗೆ ತಿಳಿದದ್ದೇ ಮೊನ್ನೆ.

ಹೇಗೆ ಅಂತೀರಾ? ಅಂದು ರುಚಿತಾ ಪ್ರಸಾದ್‌ರ ಹುಟ್ಟು ಹಬ್ಬವೂ ಅಲ್ಲ, ಅವರ ಯಾವುದೇ ಚಿತ್ರ 100 ದಿನವೋ, 25 ವಾರವೋ ಓಡಿರಲೂ ಇಲ್ಲ. ಹೋಗಲಿ ಹೊಸ ನಾಲ್ಕಾರು ಚಿತ್ರಗಳಿಗೆ ನಾಯಕಿಯಾಗುವ ಅವಕಾಶವೂ ಸಿಕ್ಕಿರಲಿಲ್ಲ. ಯಾವ ಸಂಭ್ರಮವೂ ಇಲ್ಲದೆ, ವಿನಾಕಾರಣ ಒಂದು ಗೆಟ್‌ ಟುಗೆದರ್‌.

ಮತ್ತೆ ರುಚಿತ ಅದೇ ಹಳೆಯ ಕತೆ ಹೇಳಿದರು. ನನಗೆ ರಂಗೋಲಿ ಚಿತ್ರದಲ್ಲಿ ಸಿಕ್ಕ ಪಾತ್ರ ಚೆನ್ನಾಗಿತ್ತು. ನನಗೆ ಬಾಲಿವುಡ್‌ ನಟಿಯಾಗೋ ಆಸೆ. ಈ ಮಧ್ಯೆ ಪರೀಕ್ಷೆ ಹತ್ತಿರ ಬರ್ತಿದೆ. ನನಗೆ ಐಎಎಸ್‌ ಮಾಡೋ ಆಸೇನೂ ಇದೆ. ಮನೆಯವರು ಸ್ನೇಹಿತರು ಸಿನಿಮಾ ಬೇಡ, ಓದು ಅಂತಾರೆ.. ಇತ್ಯಾದಿ ಇತ್ಯಾದಿ ಹೇಳಿದರು. ಇದೇ ಮಾತನ್ನು ರುಚಿತಾ ಪತ್ರಕರ್ತರೆದುರು ಕನಿಷ್ಠ 20 ಬಾರಿಯಾದರೂ ಹೇಳಿದ್ದಾರೆ.

ಈಗ ನಾನ್‌ಸೆನ್ಸಿಕಲ್‌ ಕಾಮಿಡಿ ಅಂತ ರುಚಿತಾಳೇ ಹೇಳಿದ ಕುರಿಗಳು ಸಾರ್‌ ಕುರಿಗಳು ಚಿತ್ರದಲ್ಲಿ ಆಕೆ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂನಲ್ಲೂ ನಟಿಸಿಯಾಗಿದೆ. ಮಲೆಯಾಳಂ ಚಿತ್ರದಲ್ಲಿ ಸಾಹಸ ಪ್ರಧಾನ ಪಾತ್ರದಲ್ಲಿ ನಟಿಸಿರುವ ರುಚಿತಾಗೆ ಸೈಕಿಕ್‌ ರೋಲ್‌ ಅಂದ್ರೆ ಬಹಳ ಇಷ್ಟ ಅಂತೆ. ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿರುವ ರುಚಿತಾ ಕನ್ನಡ ಅಷ್ಟಕ್ಕಷ್ಟೇ. ಆಕೆ ಬಿಷಪ್‌ ಕಾಟನ್‌ ವಿದ್ಯಾರ್ಥಿನಿ.

ಚೆನ್ನಪ್ಪ ಚೆನ್ನೇಗೌಡ, ಭಗವಾನ್‌ ದಾದಾ, ಹೂಂ ಅಂತಿಯಾ ಊಹುಂ ಅಂತೀಯಾ, ಪ್ರೀತಿಯಲ್ಲಿ ಇರೋ ಸುಖ, ತಾಜಮಹಲ್‌, ಸುಂದರ ನೀನು ಸುಂದರ ನಾನು, ಬಹಳ ಚೆನ್ನಾಗಿದೆ, ಗಣೇಶ ಬಂದ ಮುಂತಾದ ಚಿತ್ರಗಳಲ್ಲೂ ರುಚಿತ ನಟಿಸಿಯಾಗಿದೆ. ಇದರಲ್ಲಿ ಕೆಲವು ಚಿತ್ರಗಳು ಇನ್ನೂ ತೆರೆಕಂಡಿಲ್ಲ. ಮುಂದಿನ ವಾರ ತೆರೆಗೆ ಬರಲಿರುವ ಕುರಿಗಳು ಸಾರ್‌ ಕುರಿಗಳು ಚಿತ್ರದಲ್ಲಿ ಜೀವಂತ ಹಾವಿನ ಜತೆ ನಟಿಸಿದ್ದೇ ತಮ್ಮ ಸಾಧನೆ ಎಂದರು. ಹಿಂದೊಮ್ಮೆ ಚಿತ್ರೀಕರಣ ಸಂದರ್ಭದಲ್ಲಿ ಹಾವು ಮುಟ್ಟಿ ಹೆದರಿ ಬೆಚ್ಚಿಬಿದ್ದು, ಮೂರು ದಿನ ಹಾಸಿಗೆ ಬಿಟ್ಟು ಎದ್ದಿರಲಿಲ್ಲ ಎಂದರು.

ಈಗ ರುಚಿತಾಗೆ ಹೆಸರು ಮಾಡುವಾಸೆ. ಬಾಲಿವುಡ್‌ನತ್ತ ಕಣ್ಣು, ಹೆಸರಾಂತ ನಟ, ನಿರ್ದೇಶಕ, ಬ್ಯಾನರ್‌ ಇದ್ದರೆ ಮಾತ್ರ ಒಳ್ಳೆ ಹೆಸರು ಬರತ್ತೆ ಅಂತಾರೆ ರುಚಿತಾ.

ಜೈಜಗದೀಶ್‌ಗೆ ರುಚಿತಾ ಅಂದ್ರೇ ಭಯ : ಆದರೆ, ರುಚಿತಾ ಹೆಸರು ಕೇಳಿದರೇ, ಗಡಗಢ ನಡುಗುತ್ತಾರೆ ನಿರ್ಮಾಪಕ - ನಟ ಜೈಜಗದೀಶ್‌. ರುಚಿತಾಗೆ ವೃತ್ತಿ ಪರತೆಯೇ ಇಲ್ಲ ಎನ್ನುವ ಜೈ ಆಕಿಯಿಂದ ಕುರಿಗಳು ಸಾರ್‌ ಕುರಿಗಳು ಚಿತ್ರದ ಚಿತ್ರೀಕರಣ ಮೂರು ದಿನ ವೇಸ್ಟ್‌ ಆಯ್ತು ಅಂತಾರೆ. ಚಿತ್ರ ಒಪ್ಪಿಕೊಂಡು ಕೈ ಕೊಡೋದ್ರಲ್ಲಿ ಆಕೆ ನಂ.1 ಅಂತಾರೆ ರಾಜೇಂದ್ರ ಸಿಂಗ್‌ ಬಾಬು.

ರುಚಿತಾಳ ತಂದೆ ಸದಾ ದುಡ್ಡು ದುಡ್ಡು ಅಂತ ಸಾಯ್ತಾರೆ. ಮನೆಗೆ ಎ.ಸಿ. ಕಾರು ಕಳಿಸಿದ್ರೆ, ಹಣ ಕೊಟ್ರೆ ಮಾತ್ರ ಮಗಳನ್ನು ಕಾರು ಹತ್ತಿಸ್ತಾರೆ. ಆಕೆಗೆ ಕನ್ನಡಾನೂ ಬರಲ್ಲ. ಅಭಿನಯಾನೂ ತಿಳಿದಿಲ್ಲ. ಮುಂಚಿತವಾಗಿ ಹಣ ಕೊಟ್ಟಿದ್ದರೂ ಶೂಟಿಂಗ್‌ಗೆ ಆಕೆ ಕೈಕೊಡ್ತಾರೆ ಅನ್ನೋದು ಜೈಜಗದೀಶರ ಗುರುತರ ಆರೋಪ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada