ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಿರೂಪಕಿ?
ದಕ್ಷಿಣ ಭಾರತದ ಖ್ಯಾತ ಮತ್ತು ದುಬಾರಿ ನಿರೂಪಕಿ ಅಂತಾನೆ ಖ್ಯಾತಿಗಳಿಸಿರುವ ಸುಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸುಮಾರು 20 ವರ್ಷಗಳಿಂದ ಗುರುತಿಸಿಕೊಂಡಿರುವ ಸುಮಾ ಬೇಡಿಕೆಯ ನಿರೂಪಕಿ. ಸುಮಾ ಇಲ್ಲದೆ ತೆಲುಗಿನ ಯಾವುದೇ ಸಿನಿಮಾದ ಆಡಿಯೋ, ಟ್ರೈಲರ್ ಹಾಗೂ ಸಿನಿಮಾಗೆ ಸಂಬಂದಿಸಿದ ಈವೆಂಟ್ ಗಳು ನಡೆಯುವುದಿಲ್ಲವೇನೋ ಎನ್ನುವಷ್ಟುಮಟ್ಟಿಗೆ ಬೇಡಿಕೆ ಹೊಂದಿದ್ದಾರೆ.
Recommended Video
ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸುಮಾ ಬೆಳ್ಳಿ ಪರದೆ ಮೇಲೆ ಯಶಸ್ಸು ಕಾಣಲಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ಸುಮಾಗೆ ಹೇಳುವಷ್ಟು ಹೆಸರು ತಂದುಕೊಟ್ಟಿಲ್ಲ. ಆದರೂ ಒಂದಿಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೆ ಸುಮಾ ಬಣ್ಣಹಚ್ಚಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಲ್ಲು ಅರ್ಜುನ್ ಪುಷ್ಟ ಸಿನಿಮಾದಲ್ಲಿ ಸುಮಾ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ...

ಅಲ್ಲು ಅರ್ಜುನ್ ಸಹೋದರಿಯಾಗಿ ಸುಮಾ ಅಭಿನಯ?
ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷೆಯ ಪುಷ್ಪ ಸಿನಿಮಾದಲ್ಲಿ ಸುಮಾ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಚಿತ್ರದಲ್ಲಿ ಸುಮಾ, ಅಲ್ಲು ಅರ್ಜುನ್ ಸಹೋದರಿಯ ಪಾತ್ರ ಮಾಡಲಿದ್ದಾರಂತೆ. ಸದ್ಯ ಯಾವುದೇ ಈವೆಂಟ್ ಗಳು ಇಲ್ಲದ ಕಾರಣ ಸುಮಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸುಮಾ ನಟಿಸುವುದು ಅನುಮಾನ
ಕಳೆದ ಎರಡ್ಮೂರು ದಿನಗಳಿಂದ ಸುದ್ದಿ ವೈರಲ್ ಆಗಿದ್ದು ಈ ಬಗ್ಗೆ ಸುಮಾ ಆಗಲಿ ಅಥವಾ ಚಿತ್ರತಂಡವಾಗಲಿ ಯಾವುದೆ ಮಾಹಿತಿ ಬಹಿರಂಗಪಡಿಸಿಲ್ಲ. ಚಿತ್ರದಲ್ಲಿ ಸುಮಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಸಂತಸ ನೀಡಿತ್ತು. ಆದರೆ ಮೂಲಗಳ ಪ್ರಕಾರ ಚಿತ್ರದಲ್ಲಿ ಸುಮಾ ಅಭಿನಯಿಸುತ್ತಿಲ್ಲ. ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರಕ್ಕೆ ಕಲಾವಿದರ ಆಯ್ಕೆ ಪೂರ್ಣಗೊಂಡಿದ್ದು ಮತ್ಯಾವುದೆ ಕಲಾವಿದರು ಎಂಟ್ರಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.

ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ
ತೆಲುಗು ಇಂಡಸ್ಟ್ರಿಯಲ್ಲಿ ನಂಬರ್ 1 ನಿರೂಪಕಿ ಆಗಿರುವ ಸುಮಾ ಅವರು ಒಂದು ಕಾರ್ಯಕ್ರಮವನ್ನು ಹೋಸ್ಟ್ ಮಾಡಲು (ಆಡಿಯೋ, ಟ್ರೈಲರ್ ರಿಲೀಸ್) ಸುಮಾರು 2 ರಿಂದ 2.5 ಲಕ್ಷದವರೆಗೂ ಚಾರ್ಜ್ ಮಾಡ್ತಾರಂತೆ. ಹೊಸಬರ ಸಿನಿಮಾ ಈಕೆ ಮಾಡುವುದು ಬಹಳ ಅಪರೂಪ. ಸ್ಟಾರ್ ನಟರ ಚಿತ್ರಗಳಿಗೆ ಸುಮಾ ಫಿಕ್ಸ್. ದೊಡ್ಡ ಇವೆಂಟ್ ಗೆ ಇನ್ನು ದೊಡ್ಡ ಮೊತ್ತದ ಚಾರ್ಜ್ ಮಾಡುತ್ತಾರೆ.

ಸುಮಾ ಕಿರುತೆರೆ ಜರ್ನಿ
1991ರಲ್ಲಿ ಮಲಯಾಳಂ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಸುಮಾ, 1996ರಲ್ಲಿ ಟಿವಿ ಸೀರಿಯಲ್ ಪ್ರಪಂಚಕ್ಕೆ ಕಾಲಿಟ್ಟರು. ಸ್ವಯಂವರಂ, ಅನ್ವೇಷಿತ, ಗೀತಾಂಜಲಿ, ರಾವೋಯಿ ಚಂದಮಾಮಾ ಪ್ರಮುಖ ಸೀರಿಯಲ್ಸ್. ಟಿವಿ9, ಈಟಿವಿ, ಮಾಟಿವಿ, ಜೀ ಟಿವಿಗಳಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿ ಹೊಸ ಕ್ರೇಜ್ ಹುಟ್ಟುಹಾಕಿದರು. ಈ ಟಿವಿಯ ಸ್ಟಾರ್ ಮಹಿಳಾ ಕಾರ್ಯಕ್ರಮದ ನಿರೂಪಕಿಯಾಗಿ ಹೊಸ ದಾಖಲೆ ಬರೆದಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಕಾಲ ಪ್ರಸಾರವಾದ ಮಹಿಳೆಯರ ಗೇಮ್ ಶೋ ಇದಾಗಿದೆ.

ಸಿನಿಮಾಗಳಲ್ಲಿಯೂ ಅಭಿನಯ
ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡಿಸಿಕೊಡುವ ಸುಮಾ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಮಲಯಾಳಂ ಮೂಲಕ ನಟಿ ಖ್ಯಾತಿಗಳಿಸಿದ್ದು ತೆಲುಗಿನಲ್ಲಿ. ಮಲಯಾಳಂ ಚಿತ್ರರಂಗದಿಂದ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿರುವ ಸುಮಾ ನ್ಯೂಸ್ ಪೇಪರ್ ಬಾಯ್, ಇಷ್ಟಡನಂ, ಪವಿತ್ರ ಪ್ರೇಮ, ವರ್ಷಂ, ಧೀ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಪುಷ್ಪ ಸಿನಿಮಾದಲ್ಲೂ ಸುಮಾ ಹೆಸರು ಕೇಳಿ ಬರುತ್ತಿದೆ.


Click it and Unblock the Notifications











