»   » ಇರುವುದೊಬ್ಬಳೇ ಸಾಕ್ಷಿ ಸ್ವತಃ ಅಮ್ಮನ ಸಾಕ್ಷಿ

ಇರುವುದೊಬ್ಬಳೇ ಸಾಕ್ಷಿ ಸ್ವತಃ ಅಮ್ಮನ ಸಾಕ್ಷಿ

Posted By:
Subscribe to Filmibeat Kannada

*ವಿಘ್ನೕಶ್ವರ ಕುಂದಾಪುರ

ಏನಿದೆಲ್ಲಾ ತಮಾಷೆ. ಇಂಥಾ ತರ್ಕ ರಹಿತ ತಮಾಷೆಯ ಬಗ್ಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ . ನನಗಂತೂ ಷಾಕ್‌ ಆಗಿದೆ. ಡಬ್ಬಲ್‌ಗೇಮ್‌ ಆರೋಪದ ಸುಳಿಯಲ್ಲಿರುವ ಸಾಕ್ಷಿ ಶಿವಾನಂದ್‌ (ಶೀಬಾ) ಆತಂಕದಲ್ಲಿದ್ದಾರೆ. ಇಡೀ ಪ್ರಕರಣವನ್ನು ಬುಡರಹಿತವಾದದ್ದು , ದೊಡ್ಡ ತಮಾಷೆ ಎದು ತಳ್ಳಿಹಾಕಿದ್ದಾರೆ.

ಸಾಕ್ಷಿ ಅವರು ಪ್ರಸ್ತುತ ವಿವಾದಕ್ಕೆ ಕಾರಣರಾದ ನಾಯಕ ಯೋಗೇಶ್ವರ್‌ ತಲಾಷಿನಲ್ಲಿದ್ದಾರೆ. ಇಷ್ಟಕ್ಕೂ ಈ ರೀತಿಯ ಹೇಳಿಕೆಯನ್ನು ಅವರು ಯಾಕೆ ನೀಡಿದರು ಅನ್ನುವುದೂ ಅವರಿಗೆ ಅರ್ಥವಾಗುತ್ತಿಲ್ಲ . ಕೇಳೋಣವೆಂದರೆ ಯೋಗೇಶ್ವರ್‌ ಸೆಟ್‌ನಲ್ಲಿಲ್ಲ . ಆದರೆ, ಸಾಕ್ಷಿಯ ಅಮ್ಮ ಪರ್ವೀನ್‌ ಅವರಿಗೆ ಮಾತ್ರ, ಇದೆಲ್ಲಾ ತಮ್ಮ ಸಿನಿಮಾ ಸೈನಿಕಕ್ಕೆ ಪ್ರಚಾರ ಗಿಟ್ಟಿಸಲು ಯೋಗೇಶ್ವರ್‌ ಹೂಡಿದ ಗಿಮಿಕ್‌ ಅನ್ನುವುದರ ಬಗ್ಗೆ ಯಾವುದೇ ಅನುಮಾನ ಉಳಿದಿಲ್ಲ .

ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹಾಗೂ ಅವರಮ್ಮ ಪರ್ವೀನ್‌ ಪತ್ರಿಕೆಯಾಂದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಸಾಕ್ಷಿ ಹೇಳುವಂತೆ - ಯೋಗೇಶ್ವರ್‌ ತಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ, ಯೋಚನಾರಹಿತರಾಗಿ ಪತ್ರಿಕೆಗಳಿಗೆ ಹೇಳಿಕೆಯನ್ನೂ ನೀಡಿದ್ದಾರೆ. ವಿಷಯ ಇಷ್ಟು, ಚಿತ್ರೀಕರಣದ ಸಮಯದಲ್ಲಿ ಇಷ್ಟೊಂದು ಬಿಜಿ ಷೆಡ್ಯೂಲನ್ನು ನೀವು ಹೇಗೆ ನಿಭಾಯಿಸುತ್ತೀರಿ ಎಂದು ಯೋಗೇಶ್ವರ್‌ ಕೇಳಿದರು . ನನ್ನಂತೆಯೇ ಇರುವ ಸೋದರಿಯಿದ್ದಾಳೆ. ನಾವಿಬ್ಬರೂ ಅವಳಿ ಜವಳಿ ಎಂದು ಉತ್ತರಿಸಿದ್ದೇ ಇಷ್ಟೆಲ್ಲಕ್ಕೂ ಕಾರಣವಾಯಿತು ನೋಡಿ.

ಕಾಗಕ್ಕನ ಕಥೆಯದು, ಪ್ರಚಾರ ತಂತ್ರ

ಪರ್ವೀನ್‌ ಸದ್ಯಕ್ಕೆ ಮುಂಬಯಿಯಲ್ಲಿದ್ದಾರೆ. ಆಕೆ ನಿವೃತ್ತ ಶಾಲಾ ಶಿಕ್ಷಕಿ. ಯೋಗೇಶ್ವರ್‌ ಕಟ್ಟಿರುವ ಅವಳಿ ಜವಳಿ ಕಥೆಯನ್ನು ಸಾರಾ ಸಗಟಾಗಿ ನಿರಾಕರಿಸುವ ಅವರು, ಸಾಕ್ಷಿಗಿಂತ ಶಿಕಾ 20 ತಿಂಗಳು ದೊಡ್ಡವಳು. ಆಕೆ ಈಗಷ್ಟೇ 6 ತಿಂಗಳ ಈ- ಕಾಮರ್ಸ್‌ ಕೋರ್ಸ್‌ ಮುಗಿಸಿದ್ದಾಳೆ. ಮೊನ್ನೆ ತಾನೆ ಮುಂಬಯಿಯ ಡಾಟ್‌ ಕಾಂ ಒಂದಕ್ಕೆ ಟ್ರೆೃನಿ ಪ್ರೋಗ್ರಾಮರ್‌ ಆಗಿ ಸೇರಿದ್ದಾಳೆ. ವಾಸ್ತವ ಹೀಗಿರುವಾಗ ಅವಳು ಸಾಕ್ಷಿಗೆ ಬದಲಿಯಾಗಲು ಹೇಗೆ ಸಾಧ್ಯ ಅನ್ನುತ್ತ , ಯೋಗೇಶ್ವರ್‌ ಅವಳಿ ಜವಳಿ ಕಥೆಯನ್ನು ಕಾಗಕ್ಕನ ಕಥೆಯೆಂದು ತಳ್ಳಿಹಾಕುತ್ತಾರೆ.

ಇದೇನು ರಾಣಿ ಮಹಾರಾಣಿ ಕಥೆ ಅಲ್ಲ . ಸಾಕ್ಷಿ ಹಾಗೂ ಶಿಕಾಗೆ ಸಾಕಷ್ಟು ವ್ಯತ್ಯಾಸಗಳಿವೆ. ಸಾಕ್ಷಿ ತುಂಬಾ ಬೆಳ್ಳಗಿದ್ದಾಳೆ. ಅವಳ ಎತ್ತ್ತರ 5.7 ಅಡಿ. ಶಿಕಾ ಎತ್ತರ 5 ಅಡಿ ನಾಲ್ಕೂವರೆ ಇಂಚು ಮಾತ್ರ. ಅವಳಿಗೆ ಸಾಕ್ಷಿಯಷ್ಟು ಬಣ್ಣವೂ ಇಲ್ಲ . ಇನ್ನು ಸಾಕ್ಷಿ ಕಡು ಕಪ್ಪು ಕಣ್ಣಿನ ಚೆಲುವೆಯಾದರೆ, ಶಿಕಾ ಕಂದು ಕಣ್ಣಿನವಳು. ಇಬ್ಬರು ಪುತ್ರಿಯರ ಅಮ್ಮ ಮಕ್ಕಳ ವ್ಯತ್ಯಾಸಗಳನ್ನು ಪಟ್ಟಿ ಮಾಡುತ್ತಾರೆ.

ಸೋದರಿಯರ ನಡುವಿನ ವಯಸ್ಸಿನ ವ್ಯತ್ಯಾಸ ತುಂಬಾ ಕಡಿಮೆಯಾದ್ದರಿಂದ ಹಾಗೂ ಇಬ್ಬರೂ ಒಂದೇ ಬಗೆಯ ಬಟ್ಟೆಗಳನ್ನು ತೊಡುವುದರಿಂದ ಅನೇಕರು ಅವಳಿ ಜವಳಿ ಎಂದು ತಪ್ಪಾಗಿ ತಿಳಿಯುತ್ತಾರೆ ಅನ್ನುವುದು ಅಮ್ಮನ ಮುಂದುವರಿದ ಮಾತು.

ಆತ ನಮಗೆ ನಿರಾಶೆ ಉಂಟು ಮಾಡಿದ : ಮೊದಲಿಗೆ ಯೋಗೇಶ್ವರ್‌ ಅವರನ್ನು ಹೈದರಾಬಾದ್‌ನಲ್ಲಿ ಭೇಟಿಯಾದಾಗ ಆತನನ್ನು ಜೆಂಟಲ್‌ಮನ್‌ ಅಂದುಕೊಂಡಿದ್ದೆವು. ಆತ, ತನ್ನ ಸಿನಿಮಾದ ಪ್ರಚಾರಕ್ಕಾಗಿ ಇಂಥಾ ವಿವಾದವನ್ನು ಸೃಷ್ಟಿಸುವ ಮಟ್ಟಿಗೆ ಇಳಿಯುತ್ತಾನೆಂದು ನಾವು ಭಾವಿಸಿರಲಿಲ್ಲ . ಯೋಗೇಶ್ವರ್‌ ನಮಗೆ ನಿರಾಶೆ ಮಾಡಿದ್ದಾರೆ.

ಇಷ್ಟು ಮಾತ್ರವೇ ಅಲ್ಲ . ಯೋಗೇಶ್ವರ್‌ ಕಾಲ್‌ಷೀಟ್‌ ಪಡೆಯುವಾಗ ಹೇಳಿದ್ದೇ ಒಂದು. ಸಾಕ್ಷಿಯೇ ಹಿರೋಯಿನ್‌ ಅಂದಿದ್ದರು. ಆದರಿಲ್ಲಿ ಮೂವರು ಹೀರೋಯಿನ್‌ಗಳಿದ್ದಾರೆ. ಈ ಮೋಸದ ಬೇಜಾರಿನಿಂದಲೇ ಸಾಕ್ಷಿ, ಸೆಟ್‌ನಲ್ಲಿ ಯೋಗೇಶ್ವರ್‌ನೊಂದಿಗೆ ಅಸಮಾಧಾನದಿಂದ ನಡೆದುಕೊಂಡಳು. ಆದರೆ, ಆತ ಸಾಕ್ಷಿ ತನ್ನನ್ನು ಗುರ್ತಿಸಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನುತ್ತಾರೆ ಬೇಜಾರಿನ ದನಿಯಲ್ಲಿ ಪರ್ವಿನ್‌.

ನಿಜವಾದರದು ಜಗತ್ತಿನ ಎಂಟನೇ ಅದ್ಭುತ

ಸಾಕ್ಷಿಯ ಕನ್ನಡದ ಮೊದಲ ಸಿನಿಮಾ ಗಲಾಟೆ ಅಳಿಯಂದ್ರು ನಿರ್ಮಾಪಕ ಕುಮಾರಸ್ವಾಮಿ, ಸಾಕ್ಷಿಯಿಂದ ತಾವು ಯಾವತ್ತೂ ತೊಂದರೆ ಅನುಭವಿಸಿಲ್ಲ ಎಂದಿದ್ದಾರೆ. ಮಾರಿಷಸ್‌ನಲ್ಲಿ ಚಿತ್ರೀಕರಣ ಮುಗಿಸಿಕೊಂಡು ವಾಪಸ್ಸು ಬಂದಾಗ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಾಕ್ಷಿ ಅಮ್ಮ ಹಾಗೂ ಸೋದರಿಯನ್ನು ನೋಡಿದ್ದೆ . ಸೋದರಿಯರ ನಡುವೆ ಸಾಕಷ್ಟು ವ್ಯತ್ಯಾಸವಿದೆ ಅನ್ನುತ್ತಾರೆ ಕುಮಾರಸ್ವಾಮಿ. ಆದರೆ, ಸಾಕ್ಷಿ ನಟಿಸಿರುವ ಪೂರ್ತಿಗೊಳ್ಳದ ಜೋಡಿಸಿಂಹಗಳು ಸಿನಿಮಾದ ಸಹಾಯಕ ನಿರ್ದೇಶಕ ವೈದ್ಯನಾಥನ್‌ ಸೆಟ್‌ನಲ್ಲಿ ಸಾಕ್ಷಿಯ ನಡವಳಿಕೆಗಳಲ್ಲಿ ವ್ಯತ್ಯಾಸವಿತ್ತು . ಒಂದು ದಿನ ಅತ್ಯಂತ ಸ್ನೇಹಪೂರ್ವಕವಾಗಿ ವರ್ತಿಸಿದರೆ ಮತ್ತೊಂದು ದಿನ ಆಕೆ, ಅಪರಿಚಿತಳಂತೆ ವರ್ತಿಸುತ್ತಿದ್ದಳು ಅನ್ನುತ್ತಾರೆ.

ಕನ್ನಡ ಫಿಲಂ ಚೇಂಬರ್‌ನ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರು ಅವರಂತೂ, ಇದೆಲ್ಲಾ ಸಾಧ್ಯವಿಲ್ಲ ಬಿಡಿ ಅನ್ನುತ್ತಾರೆ. ಇದೇನಾದರೂ ನಿಜವಾಗಿದ್ದಲ್ಲಿ ಅದು ಜಗತ್ತಿನ ಎಂಟನೆ ಅದ್ಭುತ ಅನ್ನುವುದು ಅವರ ಖಚಿತ ಅಭಿಪ್ರಾಯ. ನೀವೇನಂತೀರಿ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada