»   » ಶಿಕಾ + ಶೀಬಾ = ಸಾಕ್ಷಿ ಶಿವಾನಂದ್‌

ಶಿಕಾ + ಶೀಬಾ = ಸಾಕ್ಷಿ ಶಿವಾನಂದ್‌

Subscribe to Filmibeat Kannada

*ವಿಘ್ನೕಶ್ವರ ಕುಂದಾಪುರ

ಇದು ಸಿನಿಮಾ ಕಥೆಯಲ್ಲ . ಸಿನಿಮಾ ಕಲಾವಿದೆಯ ಕಥೆ. ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ನಟಿಸಿದ ಕಲಾವಿದೆ ದ್ವಯರ ಕಥೆ. ಈವರೆಗೂ ನೋಡುಗರನ್ನು ಬೇಸ್ತು ಬೀಳಿಸಿದ್ದ ಈ ನಿಜ ಜೀವನದ ಕಲಾವಿದೆಯರನ್ನು ಪತ್ತೆ ಹಚ್ಚಿದ ಕ್ರೆಡಿಟ್‌ ಸಿನಿಮಾದ ಸೈನಿಕ, ನಿಜ ಜೀವನದ ಶಾಸಕ ಸಿ.ಪಿ. ಯೋಗೇಶ್ವರ್‌ ಅವರಿಗೆ.

ಅಸಲು ವಿಷಯ ಇಷ್ಟೆ . ಅವಳಿ ಸೋದರಿಯರು ಒಂದೇ ಹೆಸರಿನಲ್ಲಿ ನಟಿಸುತ್ತ ಪ್ರೇಕ್ಷಕರೊಂದಿಗೆ ಸಿನಿಮಾದವರನ್ನು ಬೇಸ್ತು ಬೀಳಿಸಿದ ಚಿತ್ರಕಥೆಯಂತಾ ಸಂಗತಿ ಬಯಲಿಗೆ ಬಿದ್ದಿದೆ. ನೀವು ಶಿವರಾಜ್‌ ನಾಯಕತ್ವದ ಗಲಾಟೆ ಅಳಿಯಂದ್ರು ಸಿನಿಮಾ ನೋಡಿರಬಹುದು. ಕಥೆ ನೆನಪಿಲ್ಲದೆ ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ . ಸಿನಿಮಾದ ಉಳಿದ ನಟ ನಟಿಯರೂ ನೆನಪಿನಿಂದ ಮಾಸಿರಬಹುದು. ಆದರೆ, ಕುಂದಾಪುರದ ಮೀನಿನಂತೆ ಕಣ್ಣುಗಳನ್ನು ಕುಣಿಸುತ್ತಾ ಕುಣಿದ ನಾಯಕಿಯನ್ನು ಮರೆತಿರಲಾರಿರಿ. ಅದೇ ನಾಯಕಿ ಈಗ ವಿವಾದದ ಕೇಂದ್ರದಲ್ಲಿದ್ದಾಳೆ.

ಗಲಾಟೆ ಅಳಿಯಂದ್ರು ಟೈಟಲ್‌ ಕಾರ್ಡ್‌ ಇಟ್ಟುಕೊಂಡು ಹೇಳುವುದಾದರೆ ಆಕೆಯ ಹೆಸರು ಸಾಕ್ಷಿ ಶಿವಾನಂದ್‌. ಆದರೆ, ಸೈನಿಕ ಪತ್ತೆ ಹಚ್ಚಿರುವ ವರ್ತಮಾನದ ಹಿನ್ನೆಲೆಯಲ್ಲಿ ಆಕೆ ನಿಜವಾದ ಸಾಕ್ಷಿಯಾ ಅಥವಾ ಆಕೆಯ ಸೋದರಿ ಶಿಕಾಳೊ ಹೇಳುವುದು ಕಷ್ಟ . ಇಬ್ಬರೂ ಸೋದರಿಯರು ರೂಪದಲ್ಲಿ ಪಡಿಯಚ್ಚು . ಈ ಅನುಕೂಲವನ್ನೇ ಬಳಸಿಕೊಂಡು ಅವರು, ಏಕರೂಪರಾಗಿ ಸಿನಿಮಾ ಜಗತ್ತಿಗೆ ಕಾಣಿಸಿಕೊಂಡಿದ್ದಾರೆ.

ಕಥೆಯ ಪೂರ್ಣರೂಪವೆಂದರೆ .....

ಸಾಕ್ಷಿ ಶಿವಾನಂದ್‌ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು. ಅವಳಿ ಜವಳಿ. ಹಿರಿಯಾಕೆ ಶಿಕಾ, ಉಳಿದವಳು ಶೀಬಾ. ನಾವೆಲ್ಲಾ ಕಂಡವರಂತೆ ನಂಬಿಕೊಂಡಿರುವ ಸಾಕ್ಷಿ ಶಿವಾನಂದ್‌ ಈ ‘ಶೀಬಾ’ಳೆ ಅನ್ನುವುದು ಈಗ ಗೊತ್ತಾಗಿರುವ ಸಂಗತಿ. ಅಕ್ಕ ತಂಗಿಯರಿಬ್ಬರೂ ಏಕರೂಪರು. ಈ ವಿಷಯ ಬಹಳಷ್ಟು ಜನಕ್ಕೆ ಗೊತ್ತಿಲ್ಲ . ಇದನ್ನೇ ಅನುಕೂಲಕ್ಕಾಗಿ ಬಳಸಿ ಕೊಂಡಿರುವ ಸೋದರಿಯರು ಹಲವಾರು ನಿರ್ಮಾಪಕರಿಗೆ ಮೋಸ ಮಾಡಿದ್ದಾರೆ. ಅದು ಮಹಾಮೋಸ ಅನ್ನುತ್ತಾರೆ ಯೋಗೇಶ್ವರ್‌.

ಸಿನಿಮಾ ರಂಗದಲ್ಲಿ 10 ವರ್ಷಗಳಿಂದ ಚತುರ್ಭಾಷೆಗಳಲ್ಲಿ ಚಾಲ್ತಿಯಲ್ಲಿರುವ ಸಾಕ್ಷಿ ಶಿವಾನಂದ್‌ (ಶೀಬಾ) ಈವರೆಗೆ 27 ಸಿನಿಮಾಗಳಿಗಾಗಿ ಬಣ್ಣ ಹಚ್ಚಿದ್ದಾಳೆ. ಆ ಸಿನಿಮಾಗಳಲ್ಲಿ ಶಿಖಾಳ ಪಾಲೆಷ್ಟು , ಶೀಬಾಳ ಪಾಲೆಷ್ಟು ಅನ್ನುವುದೀಗ ಪ್ರಶ್ನೆ . ಈ ಸೋದರಿಯರು ಕನಿಷ್ಠ ಮೂರು ಚಿತ್ರಗಳಲ್ಲಾದರೂ ಅರ್ಧರ್ಧ ಪಾತ್ರ ಹಂಚಿಕೊಂಡಿದ್ದಾರಂತೆ.

ಕಣ್ಣಾಮುಚ್ಚಾಲೆ ಆಟ ಮುಗಿದು ಹಕ್ಕಿ ಸಿಕ್ಕಿ ಬಿದ್ದದ್ದು ಹೀಗೆ -

ಮೂವರು ಹೀರೋಯಿನ್‌ಗಳ ಸಿನಿಮಾ ‘ ಸೈನಿಕ ’ನ ಒಂದು ಪಾತ್ರಕ್ಕೆ ಯೋಗೇಶ್ವರ್‌ ಮೆಚ್ಚಿದ್ದು ಸಾಕ್ಷಿ ಶಿವಾನಂದ್‌ರನ್ನು . ಹೈದರಾಬಾದ್‌ಗೆ ಹೋಗಿ ಅಡ್ವಾನ್ಸ್‌ ಕೊಟ್ಟದ್ದೂ ಆಯಿತು (ಆಕೆ ಸಿನಿಮಾ ಒಂದಕ್ಕೆ 10 ಲಕ್ಷ ಚಾರ್ಜ್‌ ಮಾಡುತ್ತಾಳೆ). ಅಲ್ಲಿ ಅಡ್ವಾನ್ಸ್‌ ಕೊಟ್ಟದ್ದು ಶಿಕಾಗೆ ಅನ್ನುವುದು ಈಗಷ್ಟೇ ಯೋಗೇಶ್ವರ್‌ಗೆ ಗೊತ್ತಾಗಿದೆ. ಹೈದರಾಬಾದ್‌ನಲ್ಲಿ ಅಡ್ವಾನ್ಸ್‌ ಪಡೆದದ್ದು ಶಿಕಾಳಾದರೆ, ಮೊನ್ನೆ ಕುಂದಾಪುರದಲ್ಲಿ ಶೂಟಿಂಗ್‌ಗೆ ಬಂದದ್ದು ಶೀಬಾ. ಅಡ್ವಾನ್ಸ್‌ ಪಡೆಯುವಾಗ ಸ್ನೇಹಭಾವದಿಂದ ವರ್ತಿಸಿದ್ದ ಹುಡುಗಿ ಕುಂದಾಪುರದಲ್ಲಿ ಗುರುತೇ ಗೊತ್ತಿಲ್ಲದವಳಂತೆ ವರ್ತಿಸಿದ್ದು ಅವರಿಗೆ ಆಶ್ಚರ್ಯ ತಂದರೂ, ಅದೆಲ್ಲಾ ಮುಂಬಯಿ ಹುಡುಗಿಯರ ನಖರಾ ಎಂದು ಅನುಭವಿಸಿದ್ದಾರೆ.

ಚಿತ್ರೀಕರಣ ಶುರುವಾಗುತ್ತಿದ್ದಂತೆ ಕಣ್ಣಾಮುಚ್ಚಾಲೆ ಆಟ ಕೊನೆಯಾಗುತ್ತಾ ಬಂತು. ಕೆಲವು ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ ಶೀಬಾ ಎರಡುದಿನ ಮುಂಬಯಿಗೆ ಹೋಗಿ ಬರುತ್ತೇನೆಂದು ಹೊರಟಳು. ಆದರೆ, ವಾಪಸ್ಸು ಬಂದದ್ದು ಶಿಕಾ ಹಾಗೂ ನಟಿದ್ವಯರ ಜನನಿ. ಈ ಹೊತ್ತಿನಲ್ಲಿ ಅಮ್ಮನ ಮೊಬೈಲ್‌ಗೆ ಶೀಬಾಳಿಂದ ಫೋನ್‌ ಬಂದಾಗಲೇ ಮೋಸದ ವಾಸನೆ ಯೋಗೇಶ್ವರ್‌ಗೆ ಬಡಿಯಿತು. ಅವರು ಅದೇ ನಂಬರ್‌ಗೆ ಫೋನ್‌ ಮಾಡಿದಾಗ, ಸಿಕ್ಕಿದ್ದು ಶೀಬಾ (ಸಾಕ್ಷಿ ). ಕೊನೆಗೂ, ಕುಂದಾಪುರದಲ್ಲಿದ್ದ ಶಿಕಾ ತಮ್ಮ ಕಣ್ಣಾಮುಚ್ಚಾಲೆಯಾಟದ ವಿವರಗಳನ್ನು ಹೊರಗಿಟ್ಟರು.

ಸೈನಿಕದ ಚಿತ್ರೀಕರಣ ಸದ್ಯಕ್ಕೆ ಕುಂದಾಪುರದಲ್ಲೇ ಮುಂದುವರಿದಿದೆ. ಶೀಬಾ ಬಿಟ್ಟುಹೋದ ಪಾತ್ರವನ್ನು ಶಿಕಾಳೆ ಮುಂದುವರಿಸುತ್ತಿದ್ದಾಳೆ. ಅಲ್ಲಿಗೆ ಸೈನಿಕದ ನಾಯಕಿಯರ ಸಂಖ್ಯೆ ನಾಲ್ಕಕ್ಕೇರಿದಂತಾಯಿತು. ಒಬ್ಬ ನಾಯಕಿ ಕಾಲ್‌ಷೀಟಲ್ಲಿ ಇಬ್ಬರನ್ನು ಪಡೆದ ಭಾಗ್ಯ ಯೋಗೇಶ್ವರ್‌ಗೆ. ಅಲ್ಲಿಗೆ ಸಾಕ್ಷಿ ಕಾಲ್‌ಷೀಟ್‌ ಪಡೆದರೆ ಅಕ್ಕ ಶಿಕಾ ಉಚಿತ ಎಂದಾಯಿತು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada