ಭಾರತೀಯ ಚಿತ್ರರಂಗದಲ್ಲೇ ಸಾಯಿ ಪಲ್ಲವಿ ಹೊಸ ದಾಖಲೆ; 'ರಾಮಾಯಣ' ಚಿತ್ರಕ್ಕೆ ಆಕೆ ಸಂಭಾವನೆ ಎಷ್ಟು?
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಮತ್ತೊಂದು ಕಡೆ ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ರಣ್‌ಬೀರ್- ಸಾಯಿ ಪಲ್ಲವಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಶಾಕಿಂಗ್ ಎನ್ನುವಂತೆ ರಾಕಿಂಗ್ ಸ್ಟಾರ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು ಎನ್ನುವ ಸುದ್ದಿ ಬಹಿರಂಗವಾಗಿದೆ. ಬಾಲಿವುಡ್ ನಿರ್ಮಾಪಕ ನಮಿತ್ ಮಲ್ಹೋತ್ರ ಜೊತೆ ಕೈ ಜೋಡಿಸಿರುವ ಯಶ್ ಭಾರೀ ಸಾಹಸಕ್ಕೆ ಮುಂದಾಗಿದ್ಧಾರೆ. ಬಹುಕೋಟಿ ವೆಚ್ಚದಲ್ಲಿ 'ರಾಮಾಯಣ' ಕಾವ್ಯ ದೃಶ್ಯರೂಪಕ್ಕಿಳಿಯಲಿದೆ.

ಅಧಿಕೃತವಾಗಿ ನಿತೇಶ್ ತಿವಾರಿ ರಾಮಾಯಣ ಸಿನಿಮಾ ಘೋಷಣೆ ಆಗಿಲ್ಲ. ಆದರೆ ಶ್ರೀರಾಮನ ಬಾಲ್ಯದ ದಿನಗಳ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ರಾಮನವಮಿ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ. ಯಶ್ ಈಗಾಗಲೇ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದೇ ಬ್ಯಾನರ್‌ನಲ್ಲಿ 'ರಾಮಾಯಣ' ಚಿತ್ರಕ್ಕೂ ಬಂಡವಾಳ ಹೂಡುವ ನಿರೀಕ್ಷೆಯಿದೆ.
ಹಾಲಿವುಡ್ ಸ್ಟುಡಿಯೋ ಜೊತೆಗೆ ಕೈ ಜೋಡಿಸಿ ದೊಡ್ಡಮಟ್ಟದಲ್ಲಿ 'ರಾಮಾಯಣ' ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. 3 ಭಾಗಗಳಾಗಿ ಚಿತ್ರವನ್ನು ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಇಂದಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಿನಿಮಾ ಕಟ್ಟಿಕೊಡಲಾಗುತ್ತಿದೆ. ರಣ್‌ಬೀರ್ ಕಪೂರ್ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಕೂಡ ಭಾರೀ ಸಂಭಾವನೆಯನ್ನೇ ಕೇಳಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಸಾಮಾನ್ಯವಾಗಿ ಸಾಯಿ ಪಲ್ಲವಿ ಚಿತ್ರವೊಂದಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. ಆದರೆ 3 ಭಾಗಗಳಾಗಿ ಬರುತ್ತಿರುವ 'ರಾಮಾಯಣ' ಚಿತ್ರಕ್ಕೆ ಒಟ್ಟು 20 ಕೋಟಿ ರೂ. ಚಾರ್ಜ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಗಲ್ಲಿಗಳಲ್ಲಿ ಗುಲ್ಲಾಗಿದೆ. ಈ ಮೂಲಕ ಬಾಲಿವುಡ್ ನಟಿಯರನ್ನು ಸಾಯಿ ಪಲ್ಲವಿ ಹಿಂದಿಕ್ಕಲಿದ್ದಾರೆ.
ಕೆಲ ದಿನಗಳ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿ ನಟಿ ಸಾಯಿ ಪಲ್ಲವಿ ಚರ್ಚೆ ಹುಟ್ಟು ಹಾಕಿದ್ದರು. ಬಳಿಕ ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. ಸದ್ಯ 3 ಸಿನಿಮಾಗಳು ಆಕೆಯ ಕೈಯಲ್ಲಿದೆ. 'ಅಮರಾನ್' ಎನ್ನುವ ತಮಿಳು ಸಿನಿಮಾ, 'ತಂಡೆಲ್' ಎನ್ನುವ ತೆಲುಗು ಸಿನಿಮಾ ಜೊತೆಗೆ ಇನ್ನು ಹೆಸರಿಡದ ಬಾಲಿವುಡ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ರಾಮಾಯಣ ಕಾವ್ಯ ಆಧರಿಸಿ ಈಗಾಗಲೇ ಸಾಕಷ್ಟು ಸಿನಿಮಾ, ನಾಟಕಗಳು ಬಂದಿವೆ. ಕಳೆದ ವರ್ಷವಷ್ಟೆ ಪ್ರಭಾಸ್ ಹೀರೊ ಆಗಿ 'ಆದಿಪುರುಷ್' ಸಿನಿಮಾ ಬಂದಿತ್ತು. ಓಂ ರಾವುತ್ ನಿರ್ದೇಶನದ ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೂನ್ ಮಿಂಚಿದ್ದರು. ಆದರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿತ್ತು. ಭಾರೀ ಟೀಕೆಗೂ ಗುರಿಯಾಗಿತ್ತು.
'ದಂಗಲ್', 'ಚಿಚೋರೆ', 'ಬಾವಲ್' ರೀತಿಯ ವಿಭಿನ್ ಸಿನಿಮಾಗಳನ್ನು ಕಟ್ಟಿಕೊಟ್ಟ ನಿತೇಶ್ ತಿವಾರಿ ಈ ಬಾರಿ 'ರಾಮಾಯಣ' ಕಾವ್ಯವನ್ನು ಹೇಗೆ ಕಟ್ಟಿಕೊಡುತ್ತಾರೆ ಎನ್ನುವ ನಿರೀಕ್ಷೆಯಿದೆ. ಹಲವು ದಿನಗಳಿಂದ ಈ ಚಿತ್ರಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿತ್ತು. ಅಂತಿಮವಾಗಿ ಕಳೆದ ವಾರ ಚಿತ್ರೀಕರಣ ಆರಂಭವಾಗಿದೆ. ಇನ್ನು ಈಗಾಗಲೇ ರಣ್‌ಬೀರ್, ಸಾಯಿ ಪಲ್ಲವಿ, ಯಶ್ ಲುಕ್ ಟೆಸ್ಟ್ ನಡೆದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಹನುಮಂತನಾಗಿ ಸನ್ನಿ ಡಿಯೋಲ್, ವಿಭಿಷಣ ಆಗಿ ವಿಜಯ್ ಸೇತುಪತಿ, ಕೈಕೇಯಿ ಆಗಿ ಲಾರಾ ದತ್ತಾ, ಲಕ್ಷ್ಮಣನಾಗಿ ನವೀಲ್ ಪೊಲಿಶೆಟ್ಟಿ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಾರೆ ಎನ್ನಲಾಗುತ್ತಿದೆ. ಬಜೆಟ್ ಲೆಕ್ಕ ಹಾಕದೇ ಸಿನಿಮಾ ಕೇಳಿದ್ದನ್ನೆಲ್ಲಾ ಕೊಟ್ಟು ಅದ್ಭುತ ದೃಶ್ಯಕಾವ್ಯ ತೆರೆಗೆ ತರುವ ಪ್ರಯತ್ನ ನಡೀತಿದೆ. ಯಶ್ ಚಿತ್ರದಲ್ಲಿ ರಾವಣನಾಗಿ ನಟಿಸುತ್ತಾರಾ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.


Click it and Unblock the Notifications











