ಅಲ್ಲು ಅರ್ಜುನ್ 'ಪುಷ್ಪ'- 3 ಚಿತ್ರದಲ್ಲಿ ಬಾಲಿವುಡ್ ಭಾಯಿಜಾನ್; ಇದೇನ್ ಟ್ವಿಸ್ಟ್ ಗುರೂ?
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸರಣಿ ಸೂಪರ್ ಹಿಟ್ ಆಗಿದೆ. ಪಾರ್ಟ್-3 ಮಾಡುವುದಾಗಿಯೂ ಚಿತ್ರತಂಡ ಘೋಷಿಸಿದೆ. ಸದ್ದಿಲ್ಲದೇ ಸಿನಿಮಾ ಸ್ಕ್ರಿಪ್ಟ್ ಕೆಲಸಗಳನ್ನು ಆರಂಭಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
'ಪುಷ್ಪ'-2 ಬಳಿಕ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆಯಾಗಿದೆ. ಅತ್ತ ರಾಮ್‌ಚರಣ್ ಜೊತೆ ಸಿನಿಮಾ ಮಾಡುವುದಾಗಿ ಸುಕುಮಾರ್ ಘೋಷಿಸಿದ್ದಾರೆ. ಈ 3 ಸಿನಿಮಾಗಳು ಮುಗಿದ ಬಳಿಕ ಪುಷ್ಪರಾಜ್ ಕಥೆಯನ್ನು ಮುಂದುವರೆಸುತ್ತಾರೆ ಎನ್ನಲಾಗ್ತಿದೆ.

'ಪುಷ್ಪ' ಚಿತ್ರಕ್ಕೆ ಹೋಲಿಸಿದರೆ ಸೀಕ್ವೆಲ್ ನಿರಾಸೆ ಮೂಡಿಸಿತ್ತು. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೂ ಸಿನಿಮಾ 1700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಕಾಟಾಚಾರಕ್ಕೆ ಪಾರ್ಟ್- 3 ಮಾಡುವುದಾಗಿ ಹೇಳಿದ್ದಾರೆ. ಕಥೆ ಮುಗಿದು ಹೋಗಿದೆ. ಇನ್ನು ಎಳೆಯುವುದರಲ್ಲಿ ಅರ್ಥವಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆದರೂ ಸುಕುಮಾರ್ 'ಪುಷ್ಪ-3 ದಿ ರಾಂಪೇಜ್' ಚಿತ್ರ ಮಾಡಲು ಉತ್ಸುಕರಾಗಿದ್ದಾತೆ. ಈ ಬಾರಿ ಬಾಲಿವುಡ್ ನಟನನ್ನು ಚಿತ್ರದಲ್ಲಿ ಪರಿಚಯಿಸೋ ಪ್ರಯತ್ನ ನಡೀತಿದೆ ಎನ್ನುವ ಊಹಾಪೋಹ ಶುರುವಾಗಿದೆ.
'ಪುಷ್ಪ' ಸರಣಿ ದೇಶ ವಿದೇಶಗಳಲ್ಲಿ ಸದ್ದು ಮಾಡಿತ್ತು. ಹಿಂದಿ ಬೆಲ್ಟ್‌ನಲ್ಲಿ ಕೂಡ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಚಿತ್ರದ ಡೈಲಾಗ್ಸ್ ಉತ್ತರ ಭಾರತದಲ್ಲಿ ಸಂಚಲನ ಸೃಷ್ಟಿಸಿತ್ತು. ಹಾಗಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು 3ನೇ ಭಾಗದಲ್ಲಿ ತೋರಿಸುವ ಪ್ರಯತ್ನ ನಡೀತಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. 'ಪುಷ್ಪ-3 ದಿ ರಾಂಪೇಜ್' ಚಿತ್ರದಲ್ಲಿ ಸಲ್ಲು ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ. ಬಳಿಕ 4ನೇ ಭಾಗದಲ್ಲಿ ಆ ಪಾತ್ರವನ್ನು ದೊಡ್ಡದಾಗಿ ತೋರಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಸುಕುಮಾರ್ ವೆಬ್ ಸೀರಿಸ್ ಮಾಡಲು ಬರೆದುಕೊಂಡಿದ್ದ ಕಥೆಯನ್ನು 'ಪುಷ್ಪ' ಸರಣಿ ಸಿನಿಮಾ ಮಾಡಿದ್ದರು. ಹಾಗಾಗಿ ಈ ಕಥೆಯನ್ನು ಮುಂದುವರೆಸಲು ಅವಕಾಶ ಇದೆ. ಮತ್ತಷ್ಟು ಪವರ್‌ಫುಲ್ ಪಾತ್ರಗಳನ್ನು ಸೇರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಕೆಲಸ ನಡೀತಿದೆ ಎಂದು ಗುಲ್ಲಾಗಿದೆ. ಸುಲ್ತಾನ್ ಎಂಬ ಉದ್ಯಮಿ, ಮಾಸ್ಟರ್ ಮೈಂಡ್ ಪಾತ್ರದಲ್ಲಿ ಸಲ್ಲು ನಟಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
ಸತತ ಸೋಲುಗಳಿಂದ ಸಲ್ಮಾನ್ ಖಾನ್ ಕಂಗೆಟ್ಟಿದ್ದಾರೆ. ಬಾಕ್ಸಾಫೀಸ್ ಸುಲ್ತಾನ್ ಆರ್ಭಟ ಈಗ ನಡೀತಿಲ್ಲ. ಒಂದೊಳ್ಳೆ ಬ್ರೇಕ್‌ಗಾಗಿ ಸಲ್ಲುಮಿಯಾ ಎದುರು ನೋಡುತ್ತಿದ್ದಾರೆ. ಇನ್ನು ದಕ್ಷಿಣದ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಈಗಾಗಲೇ ನಟಿಸಿದ್ದಾರೆ. ಚಿರಂಜೀವಿ ನಟನೆಯ 'ಗಾಡ್‌ಫಾದರ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಕಾರುಬಾರು ನಡೀತಿದೆ. ಬಾಲಿವುಡ್ ಕಲಾವಿದರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಹಾಗಾಗಿ 'ಪುಷ್ಪ' ಸರಣಿಯಲ್ಲಿ ಸಲ್ಲು ನಟಿಸಿದರೂ ಅಚ್ಚರಿಪಡಬೇಕಿಲ್ಲ ಎನ್ನಲಾಗ್ತಿದೆ.
ಮದುವೆ ಮನೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿ 'ಪುಷ್ಪ'-2 ಚಿತ್ರಕ್ಕೆ ಅಂತ್ಯ ಹಾಡಲಾಗಿತ್ತು. ಅಲ್ಲಿಂದ ಮುಂದೆ ಏನು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಸರಣಿ ಕೈಬಿಟ್ಟು ಬೇರೆ ಸಿನಿಮಾ ಮಾಡುವುದು ಉತ್ತಮ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 'ಪುಷ್ಪ- 3' ಚಿತ್ರ ನಿರ್ಮಾಣಕ್ಕೆ ಉತ್ಸುಕವಾಗಿದೆ.
ರಾಮ್‌ಚರಣ್ ನಟನೆಯ ಸಿನಿಮಾ ಸ್ಕ್ರಿಪ್ ಕೆಲಸಗಳಲ್ಲಿ ಸುಕುಮಾರ್ ಅಂಡ್ ಟೀಂ ಬ್ಯುಸಿಯಾಗಿದೆ. ಬಿಡುವಿನ ವೇಳೆಯಲ್ಲಿ 'ಪುಷ್ಪ'- 3 ಸಿನಿಮಾ ಬಗ್ಗೆ ಕೂಡ ಚರ್ಚಿಸುತ್ತಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗ್ತಿದೆ. ಶೀಘ್ರದಲ್ಲೇ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ.


Click it and Unblock the Notifications











