»   » ಹುಚ್ಚು ಪ್ರೇಮಿ ಸಲ್ಮಾನ್‌ ಖಾನ್‌ ಆಟಾಟೋಪಕ್ಕೆ ಭೂಗತ ಲೋಕದ ಬಣ್ಣ

ಹುಚ್ಚು ಪ್ರೇಮಿ ಸಲ್ಮಾನ್‌ ಖಾನ್‌ ಆಟಾಟೋಪಕ್ಕೆ ಭೂಗತ ಲೋಕದ ಬಣ್ಣ

Posted By:
Subscribe to Filmibeat Kannada

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಈಗ ಚಿತ್ರಾಭಿಮಾನಿಗಳ ಪಾಲಿನ ಖಳನಾಯಕ. ಕಾರಣ, ಆತ ಮಂಗಳೂರು ಸುಂದರಿ ಐಶ್ವರ್ಯ ರೈ ಪೀಡಕ. ಸಾಲದ್ದಕ್ಕೆ ಪೊಲೀಸರಿಗೆ ಬಂದಿರುವ ಗುಮಾನಿ- ಭೂಗತ ಜಗತ್ತಿನ ಪಾತಕಿಗಳ ಸೇವಕ!

ಸಲ್ಮಾನ್‌ ಖಾನ್‌ಗೂ ಭೂಗತ ಲೋಕಕ್ಕೂ ನಂಟಿದೆ ಎಂಬ ಬಗೆಗೆ ಸಿಕ್ಕಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ಗುರುವಾರ ನಟನ ವಿಚಾರಣೆ ನಡೆಯಿತು.

ಮುಂಬಯಿ ಅಪರಾಧ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಅಂಬಾದಾಸ್‌ ಪೋಟೆ, ಸಲ್ಮಾನ್‌ ಜೊತೆ ಬಾಂದ್ರಾದಲ್ಲಿ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದರು. ಇದು ಅಧಿಕೃತ ವಿಚಾರಣೆಯಲ್ಲ . ಐಶ್ವರ್ಯ ರೈ ಅವರಿಗೆ ತೊಂದರೆ ಕೊಡಬೇಡಿ ಎಂದು ಎಚ್ಚರಿಕೆ ಕೊಡುವ ಮಾತುಕತೆ ಅಷ್ಟೆ ಎಂಬುದು ಅಂಬಾದಾಸ್‌ ಸ್ಪಷ್ಟನೆ. ಆದರೆ ಹೊರಗುಳಿದಿದ್ದ ಪೊಲೀಸರು ಹೇಳುವಂತೆ, ಸಲ್ಮಾನ್‌ ಖಾನ್‌ ಜೊತೆ ಭೂಗತ ಪಾತಕಿಗಳ ಒಡನಾಟವಿದೆ ಎಂಬ ಅನುಮಾನ ಇದ್ದ ಕಾರಣ ಈ ವಿಚಾರಣೆ.

ಅಂದಹಾಗೆ, ತಮ್ಮ ಮಗಳಿಗೆ ಸಲ್ಮಾನ್‌ ಖಾನ್‌ ಉಪಟಳ ಕೊಡುತ್ತಿದ್ದಾರೆಂದು ಐಶ್ವರ್ಯ ರೈ ತಂದೆ ಕೃಷ್ಣರಾಜ ರೈ ಡಿಸೆಂಬರ್‌ 27ರಂದು ಬಾಂದ್ರಾ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾರೆ. ಕುಡಿದು ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದ ಸಲ್ಮಾನ್‌ ಖಾನ್‌, ನಂತರ ಐಶ್ವರ್ಯ ಕಾರಿಗೆ ತನ್ನ ಕಾರಿನಿಂದ ಗುದ್ದಿ, ಗಾಜುಗಳನ್ನು ಕಬ್ಬಿಣದ ಸಲಾಕೆಯಿಂದ ಒಡೆದು ಹಾಕಿದ್ದರು. ಇದೇ ರೀತಿ ಮುಂದುವರಿದರೆ ತಮ್ಮ ಮಗಳ ಜೀವನವೇ ಕಷ್ಟ ಎಂಬುದು ಕೃಷ್ಣರಾಜ ರೈ ಆರೋಪ.

ಸಲ್ಮಾನ್‌ ಖಾನ್‌ ಅಥವಾ ಐಶ್ವರ್ಯ ರೈ ಇದರ ಬಗೆಗೆ ಮಾತಿಗೆ ಸಿದ್ಧರಿಲ್ಲ. ಅವರ ಸೆಲ್‌ಫೋನ್‌ಗಳೂ ಸದ್ದಿಲ್ಲದೇ ಮಲಗಿಬಿಟ್ಟಿವೆ. ಇಂಥಾ ವ್ಯಾಜ್ಯಗಳ ನಡುವೆ ಸಲ್ಮಾನ್‌ ಹಾಗೂ ಐಶ್ವರ್ಯ ಇಬ್ಬರ ಸಿನಿಮಾ ಜೀವನ ಮಸುಕಾಗಿರುವುದೂ ನಿಜ. ಅವಕಾಶಗಳು ಮೊದಲಿನಂತೆ ಇಬ್ಬರ ಬಳಿಗೆ ಹುಡುಕಿಕೊಂಡು ಬರುತ್ತಿಲ್ಲ.

ಸಲ್ಮಾನ್‌ ಅಪ್ಪ ಸಾಹಿತಿ ಸಲೀಂ ಖಾನ್‌ ಹೀಗಂತಾರೆ...
ನನ್ನ ಮಗನ ಖಾಸಗಿ ಜೀವನದ ಬಗೆಗೆ ನಾನು ಕಾಮೆಂಟ್‌ ಮಾಡುವುದು ಸರಿಯಲ್ಲ . ಪ್ರೇಮಕ್ಕೆ ಕಣ್ಣಿಲ್ಲ ಅಂತಾರೆ. ಹಾಗೇ ಅದು ಮನಸ್ಸನ್ನೂ ಕುರುಡಾಗಿಸುತ್ತದೆ. ಪ್ರೇಮದ ಹುಚ್ಚಿನಲ್ಲಿ ಸಲ್ಮಾನ್‌ ಮಾನಸಿಕ ಸಂತುಲನೆ ಕಳಕೊಂಡು ಹೀಗೆ ಮಾಡಿರಬಹುದು. ಇಬ್ಬರು ಹುಚ್ಚು ಪ್ರೀತಿಯಲ್ಲಿ ಮುಳುಗಿದಾಗ, ಸದಾ ಸಹಜವಾಗೇ ವರ್ತಿಸುತ್ತಾರೆ ಅನ್ನುವುದು ಸುಳ್ಳು !

ಒಡೆಯುವುದು, ಮುರಿಯುವುದು, ಕುಡಿದು ಜಗಳ ಆಡುವುದು ಸಲ್ಮಾನ್‌ಗೆ ಹೊಸದೇನಲ್ಲ. 1990ರ ದಶಕದ ಪ್ರಾರಂಭದಲ್ಲಿ ಸಂಗೀತ ಬಿಜಲಾನಿ ಕಾಲು ಮುರಿದಿದ್ದರೆಂದು ಸುದ್ದಿಯಾಗಿತ್ತು. ಆ ನಂತರ ಸೋಮಿ ಅಲಿ ಎಂಬ ನಟಿ ಕಂ ಮಾಡೆಲ್‌ಮೇಲೆ ಖಾಲಿ ಕೋಕ್‌ ಬಾಟಲಿಯನ್ನು ಎಸೆದಿದ್ದರು. ತಾಲ್‌ ಚಿತ್ರದ ಶೂಟಿಂಗ್‌ ವೇಳೆ ಐಶ್ವರ್ಯ ರೈ ಜೊತೆಗೆ ಮಾತಾಡಲು ಬಯಸಿದ ಸಲ್ಮಾನ್‌, ಆ ಚಿತ್ರದ ನಿರ್ದೇಶಕ ಸುಭಾಷ್‌ ಘಾಯ್‌ ಜೊತೆ ಜಗಳಕ್ಕೆ ಇಳಿದಿದ್ದರು. ಈ ಎಲ್ಲಾ ಅವಘಡಗಳಾದಾಗ ಸಲ್ಮಾನ್‌ ಖಾನ್‌ ಕುಡಿದಿದ್ದರು.

ಐಶ್ವರ್ಯ ಉತ್ತರ : ಕಳೆದ ಮೂರು ವರ್ಷದಿಂದ ಐಶ್ವರ್ಯ ಹಿಂದೆ ಬಿದ್ದಿರುವ ಸಲ್ಮಾನ್‌ಗೆ ಆಕೆ ಸೊಪ್ಪು ಹಾಕಿಲ್ಲ. ಹತಾಶೆ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ಎಂಬುದಕ್ಕೆ ಸಲ್ಮಾನ್‌ ಜ್ವಲಂತ ನಿದರ್ಶನ. ಇದಕ್ಕೆ ಐಶ್ವರ್ಯ ಈ ಹಿಂದೆಯೇ ಉತ್ತರ ಕೊಟ್ಟಿದ್ದಾರೆ- ‘ನನ್ನ ವಸ್ತುಗಳನ್ನು ಹಾಳು ಮಾಡಬಹುದು ಅಷ್ಟೆ. ಯಾವನೇ ಆಗಲಿ ನನ್ನ ಮೈಯ ಒಂದು ಕೂದಲನ್ನೂ ಅಲುಗಾಡಿಸಲಾಗದು. ನಾನು ಎಲ್ಲರಂತಲ್ಲ. ಸ್ವತಂತ್ರ ಹೆಣ್ಣು. ಜೊತೆಗೆ ನನ್ನನ್ನು ನಾನು ಕಾಪಾಡಿಕೊಳ್ಳುವಷ್ಟು ಜಾಣೆ !’

What do you think about Salmans behaviour?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada