ಕನ್ನಡದ ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಲಿದ್ದಾರೆ 'ಅಧೀರ' ಸಂಜಯ್ ದತ್!
ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ 'ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಲಿದ್ದಾರೆ. ಸಂಜಯ್ ದತ್ ಅವರ ಪೋಸ್ಟರ್ ಅಷ್ಟೆ ಇನ್ನು ಬಿಡುಗಡೆ ಆಗಿದ್ದು, ಈಗಾಗಲೇ ಅಧೀರನ ಕ್ರೇಜ್ ಮುಗಿಲು ಮುಟ್ಟಿದೆ.
ಈ ನಡುವೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಟ ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾದಲ್ಲಿ ಸಂಜಯ್ ದತ್ ಅವರನ್ನು ಖಳನಾಯಕನನ್ನಾಗಿ ಕಾಸ್ಟ್ ಮಾಡಲು ಚಿಂತನೆ ನಡೆದಿದೆ.

ಧ್ರುವ ಸರ್ಜಾ ಪ್ರಸ್ತುತ 'ಮಾರ್ಟಿನ್' ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಬಳಿಕ ಪ್ರೇಮ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಆ ಸಿನಿಮಾಕ್ಕೆ ಸಂಜಯ್ ದತ್ ಅನ್ನು ವಿಲನ್ ಆಗಿ ಕರೆ ತರುವ ಇರಾದೆ ಚಿತ್ರತಂಡಕ್ಕೆ ಇದೆ.
ಸಿನಿಮಾಗಳನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುವುದು ಪ್ರೇಮ್ ಸ್ಟೈಲ್, ಬಾಲಿವುಡ್ ನಟಿಯರು, ಬಾಲಿವುಡ್ ಖಳ ನಟರು ಪ್ರೇಮ್ ಸಿನಿಮಾಗಳಲ್ಲಿ ಸಾಮಾನ್ಯ. ಹಾಗಾಗಿ ಧ್ರುವ ಸರ್ಜಾ ಸಿನಿಮಾಕ್ಕೂ ಸಂಜಯ್ ದತ್ ಅವರನ್ನು ಕರೆತರುವ ಐಡಿಯಾ ಅವರೇ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅಜಯ್ ದೇವಗನ್ ಅವರನ್ನು ವಿಲನ್ ಆಗಿ ಕರೆತರಲು ಚಿಂತನೆ ಮಾಡಲಾಗಿತ್ತು. ಅಜಯ್ ದೇವಗನ್ ಜೊತೆಗೆ ಮಾತುಕತೆ ಸಹ ಮಾಡಿದ್ದರು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅಜಯ್ ದೇವಗನ್ ಸಿನಿಮಾದಿಂದ ಹೊರಗೆ ಉಳಿದರು. ಹಾಗಾಗಿ ಈಗ ಸಂಜಯ್ ದತ್ ಅವರನ್ನು ಕರೆತರಲು ಯೋಜನೆ ಹಾಕಲಾಗಿದ್ದು, ಮಾತುಕತೆ ಚಾಲ್ತಿಯಲ್ಲಿದೆ.
ಈ ಸಿನಿಮಾಕ್ಕೆ ನಾಯಕಿ ಸಹ ಬಾಲಿವುಡ್‌ನಿಂದಲೇ ಬರಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದು, ಹಾಗಾಗಿಯೇ ಬೇರೆ-ಬೇರೆ ಭಾಷೆಗಳ ಕಲಾವಿದರನ್ನು ಸಿನಿಮಾಕ್ಕೆ ಬಳಸಿಕೊಳ್ಳಲು ಪ್ರೇಮ್ ಯೋಜನೆ ರೂಪಿಸಿದ್ದಾರೆ.
ಧ್ರುವ ಸರ್ಜಾ ಪ್ರಸ್ತುತ 'ಮಾರ್ಟಿನ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಯೋಧನ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದು, ಸಿನಿಮಾಕ್ಕಾಗಿ ಇನ್ನಷ್ಟು ದೊಡ್ಡದಾಗಿ ಬಾಡಿಬಿಲ್ಡ್ ಮಾಡುತ್ತಿದ್ದಾರೆ ಧ್ರುವ ಸರ್ಜಾ.
'ಮಾರ್ಟಿನ್' ಸಿನಿಮಾದ ಬಳಿಕ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಧ್ರುವ ನಟಿಸಲಿದ್ದಾರೆ. ಈ ಸಿನಿಮಾವನ್ನು ಕೆವಿಎಲ್ ಪ್ರೋಡಕ್ಷನ್ ಹೌಸ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಯೋಜನೆ ತಯಾರಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ.
ನಿರ್ದೇಶಕ ಪ್ರೇಮ್ ಈಗಷ್ಟೆ 'ಏಕ್ ಲವ್ ಯಾ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಪ್ರೇಮ್‌ರ ಬಾಮೈದ ಈ ಸಿನಿಮಾದ ನಾಯಕ ಆಗಿದ್ದು, ಇದೊಂದು ಕಾಲೇಜ್ ಪ್ರೇಮಕತೆಯಾಗಿದೆ. ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿವೆ. ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಸಿನಿಮಾಕ್ಕೆ ರಕ್ಷಿತಾ ಪ್ರೇಮ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಬಿಡುಗಡೆ ಬಳಿಕ ಧ್ರುವ ಸರ್ಜಾ ಜೊತೆಗಿನ ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ. ಜನವರಿ ತಿಂಗಳಲ್ಲಿ ಪ್ರೇಮ್-ಧ್ರುವ ಕಾಂಬಿನೇಶನ್ ಸಿನಿಮಾ ಪ್ರಾರಂಭವಾಗುವ ನಿರೀಕ್ಷೆ ಇದೆ.


Click it and Unblock the Notifications











