For Quick Alerts
  ALLOW NOTIFICATIONS  
  For Daily Alerts

  ಶಂಕರನಾಗ್‌ ಹೃದಯ ಮಿಡಿಯುತ್ತಿದೆ

  By Staff
  |

  *ಸತ್ಯನಾರಾಯಣ

  ಹಾಗಂತ ಅವರ ಸ್ನೇಹಿತರು ಹೇಳುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಶಂಕರನಾಗ್‌ ಕಟ್ಟಿ ಬೆಳೆಸಿದ ಸಂಕೇತ್‌ ರೆಕಾರ್ಡಿಂಗ್‌ ಸ್ಟುಡಿಯೋಗೆ, ಫಿಲಂ ಚೇಂಬರ್‌ನಿಂದ ಎತ್ತಂಗಡಿಯಾದರೂ ಇನ್ನೊಂದು ಕಡೆ ನೆಲೆ ಬೆಲೆ ಸಿಕ್ಕಿದೆ. ವಸಂತ ಕಲರ್‌ ಲ್ಯಾಬ್‌ನ ಮಾಲಿಕ ಹಾಗೂ ಹಿರಿಯ ಚಿತ್ರ ಕರ್ಮಿ ಬಿ.ಎಸ್‌. ರಂಗಾ ತಮ್ಮ ಲ್ಯಾಬ್‌ ಒಳಗೇ ಸಂಕೇತ್‌ನನ್ನು ಬರಮಾಡಿಕೊಂಡಿದ್ದಾರೆ. ಇದೇ ಜನವರಿ 14 ಸಂಕ್ರಾಂತಿಗೆ ನವ ಸಂಕೇತ್‌ ಕಣ್ಣು ತೆರೆಯಲಿದೆ. ಮೂರು ತಿಂಗಳ ಹಿಂದೆ ಬೀದಿಗೆ ಬಿದ್ದಿದ್ದ ಸಂಕೇತ್‌ನನ್ನು ಹೊಸ ಮನೆ ಸೇರುವಂತೆ ಮಾಡಿದ ಕ್ರೆಡಿಟ್‌ ಜಗದೀಶ್‌ ಮಲ್ನಾಡ್‌ಗೆ ಸೇರಬೇಕು. ಕಳೆದ ಮೂರು ತಿಂಗಳಿಂದ ಅವರು ನೋಡದ ಮನುಷ್ಯರಿಲ್ಲ. ಜಾಗವೂ ಇಲ್ಲ. ಸಂಕೇತ್‌ ಉಪಕರಣಗಳನ್ನು ಖರೀದಿಸಲು ತಮ್ಮ ಮನೆಯನ್ನೇ ಅಡವಿಟ್ಟಿದ್ದರು. ಫಿಲಂ ಚೇಂಬರ್‌ ಅಟ್ಟವೇರಿ ಇಳಿದಷ್ಟೇ ರಭಸದಿಂದ ವಿಧಾನಸೌಧದ ಮೆಟ್ಟಿಲನ್ನೂ ಏರಿದರು. ವಾರ್ತಾ ಸಚಿವರಿಂದ ಶಿಫಾರಸು ಮಾಡಿಸಿದರು. ಕನ್ನಡ ನಿರ್ಮಾಪಕರೆಲ್ಲರ ಸಹಿ ಸಂಗ್ರಹಿಸಿದರು. ಇಷ್ಟೆಲ್ಲಾ ಒದ್ದಾಡಿದರೂ ಫಿಲಂ ಚೇಂಬರ್‌ ಪದಾಧಿಕಾರಿಗಳ ಮನ ಕರಗಲಿಲ್ಲ. ಅವರು ಹೇಳಿದ್ದು ಒಂದೇ ಮಾತು.

  ಸಂಕೇತ್‌ಗೆ ನಾವು ಜಾಗ ಕೊಟ್ಟಿದ್ದು 15 ವರ್ಷದ ಲೀಸ್‌ಗೆ. 99ಕ್ಕೇ ಅದು ಮುಗಿದು ಹೋಗಿದೆ. ನೀವಾಗಿಯೇ ಜಾಗ ಖಾಲಿ ಮಾಡಿದರೆ ಸರಿ. ಇಲ್ಲದೇ ಇದ್ದಲ್ಲಿ ಅಲ್ಲಿರುವ ಉಪಕರಣಗಳಿಗೇನಾದರೂ ಆದರೆ ನಾವು ಹೊಣೆಯಲ್ಲ. ಫಿಲಂ ಚೇಂಬರ್‌ಗೆ ಸಂಕೇತ್‌ನಿಂದ ಏನೂ ತೊಂದರೆ ಇರಲಿಲ್ಲ. ಬದಲಾಗಿ ತಿಂಗಳಿಗೆ 12 ಸಾವಿರ ಬಾಡಿಗೆ ಬರ್ತಾ ಇತ್ತು. ಅದನ್ನು 18 ಸಾವಿರಕ್ಕೆ ಏರಿಸುವ ಭರವಸೆಯನ್ನೂ ಮಲ್ನಾಡ್‌ ಕೊಟ್ಟಿದ್ದರು. ಆದರೆ ಚೇಂಬರ್‌ ಅಧ್ಯಕ್ಷ ಚಂದ್ರು ಸಾಧ್ಯವಿಲ್ಲ ಅಂದ್ರು.

  ಈ ನಿಲುವಿಗೆ ಫಿಲಂ ಚೇಂಬರ್‌ ನೀಡಿದ ಕಾರಣವಿಷ್ಟೆ. ಸಂಕೇತ್‌ ಇರುವ ಜಾಗದಲ್ಲೊಂದು ಪ್ರೊಜೆಕ್ಷನ್‌ ಥಿಯೇಟರ್‌ ಕಟ್ಟುತ್ತೇವೆ. ತಾರ್ಕಿಕವಾಗಿ ಇದು ಅಂಥ ಲಾಭದಾಯಕ ಯೋಜನೆಯಲ್ಲ. ಈಗಾಗಲೇ ಬೆಂಗಳೂರಿನಲ್ಲಿರುವ ನಾಲ್ಕೈದು ಪ್ರೊಜೆಕ್ಷನ್‌ ಥಿಯೇಟರ್‌ಗಳೇ ಖಾಲಿ ಹೊಡೆಯುತ್ತಾ ಇವೆ. ಹೋಗಲಿ, ಚೇಂಬರ್‌ ತನ್ನ ಮಾತನ್ನು ಉಳಿಸಿಕೊಂಡಿದೆಯೇ ಅದೂ ಇಲ್ಲ. ಸಂಕೇತ್‌ ಹೊರ ಬಿದ್ದ ನಂತರ ಆ ಜಾಗ ಹಾಗೇ ಇದೆ. ರಾಜ್‌ಕುಮಾರ್‌ ಕಾಡಿನಿಂದ ವಾಪಾಸು ಬರಲಿ ಎಂದು ಎರಡು ಹೋಮ ಮಾಡಿದ್ದು ಬಿಟ್ಟರೆ ಅಲ್ಲಿಗೆ ಯಾರೂ ಕಾಲಿಟ್ಟಿಲ್ಲ. ವಿಪರ್ಯಾಸವೆಂದರೆ ಕನ್ನಡದ ಯಾವುದೇ ಸ್ಟುಡಿಯೋ ಆಗಲೀ ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ಉಳಿಸಬೇಕಾದ ಜವಾಬ್ದಾರಿ ಹೊತ್ತ ಫಿಲಂ ಚೇಂಬರೇ ತನ್ನ ಮಹಡಿಯಲ್ಲಿದ್ದ ಸ್ಟುಡಿಯೋದ ಕತ್ತು ಹಿಸುಕಿದ್ದು . ಒಂದು ಮೂಲದ ಪ್ರಕಾರ ಚೇಂಬರ್‌ನ ಈ ನಿರ್ಧಾರದ ಹಿಂದೆ ಇತರೇ ಶಕ್ತಿಗಳು ಕೆಲಸ ಮಾಡಿವೆ. ಫಿಲಂ ಚೇಂಬರ್‌ ಇರೋದು ಶಿವಾನಂದ ಸ್ಟೋರ್ಸ್‌ನ ಸಮೀಪ. ಅಲ್ಲಿಂದ ನೂರು ಅಡಿಯಲ್ಲಿ ಆಕಾಶ್‌ ಸ್ಟುಡಿಯೋ ಇದೆ. ಇಲ್ಲಿ ಕೂಡ ರೆಕಾರ್ಡಿಂಗ್‌ ನಡೆಯುತ್ತದೆ. ಆದರೆ ಚೇಂಬರ್‌ ನೆತ್ತಿಯ ಮೇಲೆ ಸಂಕೇತ್‌ ಇರುವ ತನಕ ಆಕಾಶ್‌ಗೆ ಬಿಸಿನೆಸ್‌ ಆಗೋ ಸಾಧ್ಯತೆಯಿರಲಿಲ್ಲ.

  ಅಂದ ಹಾಗೆ ಆಕಾಶ್‌ ಸ್ಟುಡಿಯೋ ಮಧು ಬಂಗಾರಪ್ಪ ಅವರದು. ಅವರು ಬಂಗಾರಪ್ಪನ ಪುತ್ರ. ಬಂಗಾರಪ್ಪ ಈ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ವರನಟನ ಸಂಬಂಧಿ. ಸಂಕೇತ್‌ ಅವಸಾನಕ್ಕೆ ಎಲ್ಲರೂ ಒಗ್ಗಟ್ಟಾಗಿ ದುಡಿಯೋದಕ್ಕೆ ಇದಕ್ಕಿಂತ ದೊಡ್ಡ ಕಾರಣ ಬೇಕಿಲ್ಲ.

  ಇವೆಲ್ಲ ಸತ್ಯಗಳು ಮಲ್ನಾಡ್‌ಗೆ ಕಳೆದ ಮೂರು ತಿಂಗಳಲ್ಲಿ ಕಂತುಗಳ ರೂಪದಲ್ಲಿ ಅರಿವಾಗುತ್ತಾ ಹೋಗಿದೆ. ಆದರೆ ಅವರು ತಮ್ಮ ಹೋರಾಟ ಬಿಡಲಿಲ್ಲ. ಸಂಕೇತ್‌ನ್ನು ಉಳಿಸುವುದಷ್ಟೇ ಅವರ ಗುರಿಯಾಗಿತ್ತು. ಇದು ಶಂಕರ್‌ ಅವರಿಂದ ಮಲ್ನಾಡ್‌ ಕಲಿತಿದ್ದ ಪಾಠವೂ ಆಗಿತ್ತು . ಈ ಹಂತದಲ್ಲಿ ಕೆಲವು ಲಕ್ಷಗಳು ಅವರ ಕೈ ಬಿಟ್ಟಿತ್ತು. ಆದರೇನಂತೆ ಎರಡು ಸ್ಟುಡಿಯೋ ಕಟ್ಟುವುದಕ್ಕೆ ಸಾಕಾಗುವಷ್ಟು ಉಪಕರಣಗಳು ಕೈ ಸೇರಿದ್ದವು. ಅದನ್ನು ಮತ್ತೆ ಸ್ಥಾಪಿಸುವುದಕ್ಕೆ ಜಾಗ ಹುಡುಕುವ ಸಂದರ್ಭದಲ್ಲೇ ವಸಂತ ಲ್ಯಾಬ್‌ನ ಒಡೆಯನ ಪರಿಚಯವಾಯಿತು. 40 ವರ್ಷದ ಹಿಂದೆಯೇ ಮದ್ರಾಸಿನಲ್ಲಿ ವಿಕ್ರಂ ಸ್ಟುಡಿಯೋ ಕಟ್ಟಿ ಕೈ ಸುಟ್ಟುಕೊಂಡಿದ್ದ ರಂಗಾ ಅವರಿಗೆ ಶಂಕರ್‌ನಾಗ್‌ ಸಾಹಸದ ಪರಿಚಯವಿತ್ತು. ಹಾಗಾಗಿ ಸಂಕೇತ್‌ಗೆ ತಮ್ಮ ಲ್ಯಾಬ್‌ನಲ್ಲೇ ಜಾಗ ಕೊಡಲು ಅವರು ಸಿದ್ದರಾರು.

  ಇಲ್ಲಿಗೆ ತನ್ನ ಕೆಲಸ ಮುಗಿಯಿತು ಎಂದು ಘೋಷಿಸುತ್ತಾರೆ ಜಗದೀಶ್‌ ಮಲ್ನಾಡ್‌. ಸಂಕೇತ್‌ನ್ನು ಉಳಿಸಿದ್ದಾಗಿದೆ. ಅದನ್ನು ಬೆಳೆಸುವ ಜವಾಬ್ದಾರಿ ವಸಂತ್‌ ಲ್ಯಾಬ್‌ನದ್ದು . ಅಲ್ಲಿ ತಾನು ಹಸ್ತ ಕ್ಷೇಪ ಮಾಡುವುದು ಚೆನ್ನಾಗಿರುವುದಿಲ್ಲ ಎಂದು ಮಲ್ನಾಡ್‌ಗೆ ಅನಿಸಿದೆ. ಅಷ್ಟಕ್ಕೂ ಅವರಿಗೆ ಸಂಕೇತ್‌ಗೆ ತಾನೇ ಮಾಲೀಕನಾಗಬೇಕೆಂಬ ಆಸೆಯೇನೂ ಇರಲಿಲ್ಲ. ಶಂಕರನಾಗ್‌ ಹೃದಯ ಮತ್ತೆ ಮಿಡಿಯಬೇಕು ಎನ್ನೋದಷ್ಟೆ ಅವರಾಸೆಯಾಗಿತ್ತು. ಇಡೀ ಚಿತ್ರೋದ್ಯಮದ ವಿರೋಧ ಕಟ್ಟಿಕೊಂಡು ಮಲ್ನಾಡ್‌ ಯುದ್ಧ ಗೆದ್ದಿದ್ದಾರೆ. ಹೊಸ ಸ್ಟುಡಿಯೋಗೆ ಇನ್ನೂ ನಾಮಕರಣವಾಗಿಲ್ಲ. ಆದರೆ ರಂಗಾ ಮತ್ತು ಶಂಕರ್‌- ಇವರಿಬ್ಬರ ಸಾಧನೆಯನ್ನು ಬಲ್ಲವರಿಗೆ ಇದು ‘ರಂಗ ಶಂಕರ’

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X