twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಕ್ಷೇತ್ರದ ‘ಮುಸ್ಸಂಜೆ’ಯಲ್ಲಿರುವ ಎಂ.ಎಸ್‌. ಸತ್ಯು ‘ಕುರಿ’ಗಳನ್ನು ಕಾದ ಕಥೆ

    By Staff
    |

    *ಸತ್ಯನಾರಾಯಣ

    ಜನ ನೋಡದೆ ಇರುವ ಚಿತ್ರಗಳಿಗೆ ಪ್ರಶಸ್ತಿ ಸಿಗುತ್ತೆ ಅನ್ನೋ ಮಾತು, ಈ ಸಾಲಿನ ರಾಜ್ಯ ಪ್ರಶಸ್ತಿಯಲ್ಲಿ ಮೊದಲ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿರುವ ‘ಮುಸ್ಸಂಜೆ’ ಚಿತ್ರದ ಮಟ್ಟಿಗೆ ಅಕ್ಷರಶಃ ನಿಜವಾಗಿದೆ. ಮುಸ್ಸಂಜೆ ಚಿತ್ರ ಇನ್ನೂ ಬಿಡುಗಡೆಯೇ ಆಗಿಲ್ಲ . ಈ ಚಿತ್ರಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳ ಉಡುಗೊರೆ !

    ಚಲನಚಿತ್ರ ಆಯ್ಕೆ ಸಮಿತಿ ಕಾರ್ಯಾರಂಭ ಮಾಡುವುದಕ್ಕೆ ಒಂದು ವಾರ ಮುಂಚೆ ಮುಸ್ಸಂಜೆ ನಿರ್ಮಾಪಕ ರಾಮದಾಸ ನಾಯ್ಡು ಅವರು ತಮ್ಮ ಚಿತ್ರದ ವಿಶೇಷ ಪ್ರದರ್ಶನವನ್ನು ಕೆಲವು ಗಣ್ಯರಿಗಾಗಿ ಏರ್ಪಡಿಸಿದ್ದರು. ಆನಂತರ ಚಿತ್ರದ ಬಗ್ಗೆ ಒಂದು ಸಂವಾದ. ಇವೆಲ್ಲವೂ ಆಯ್ಕೆ ಸಮಿತಿಯ ಗಮನ ಸೆಳೆಯುವುದಕ್ಕೆ ನಡೆಸಿದ ತಂತ್ರ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ . ಹಾಗಿದ್ದೂ ಸಂವಾದದಲ್ಲಿ ಪಾಲ್ಗೊಂಡವರೆಲ್ಲರೂ ಚಿತ್ರದಲ್ಲಿ ಹಲವಾರು ಓರೆಕೋರೆಗಳಿರುವುದನ್ನು ಬೆಟ್ಟು ಮಾಡಿ ತೋರಿಸಿದರು. ಆದರೇನಂತೆ ನಾಯ್ಡು ಉದ್ದೇಶ ಈಡೇರಿದೆ. ಪ್ರಶಸ್ತಿ ಪ್ರಕಟವಾದ ತಕ್ಷಣ ತಮ್ಮ ಚಿತ್ರವನ್ನು ದೇಶದ ಸಕಲ ಭಾಷೆಗಳಿಗೂ ಡಬ್‌ ಮಾಡುವುದಾಗಿ ನಾಯ್ಡು ಘೋಷಿಸಿದ್ದಾರೆ. ಅದು ಆಗುತ್ತೋ ಬಿಡುತ್ತೋ ಗೊತ್ತಿಲ್ಲ , ಆದರೆ ಅದರ ಅಗತ್ಯವಂತೂ ಇಲ್ಲ . ಯಾಕೆಂದರೆ ವೃದ್ಧರ ಬದುಕಿನ ಹಲವು ಮಗ್ಗುಲುಗಳನ್ನು ಮುಸ್ಸಂಜೆಗಿಂತ ನಯವಾಗಿ, ಹಿತವಾಗಿ ತಡಕಿದ ಚಿತ್ರಗಳು ಬೇರೆ ಭಾಷೆಯಲ್ಲಿ ಈಗಾಗಲೇ ಬಂದುಹೋಗಿವೆ. ಉದಾಹರಣೆಗೆ ಕರಣಂ ಮಲೆಯಾಳಿ ಚಿತ್ರ, ಹಿಂದಿಯಲ್ಲಿ ಸಾರಾಂಶ್‌.

    ಕುರಿಗಳನ್ನು ಕಾದ ಕುರುಬರು !

    ಆಯ್ಕೆ ಸಮಿತಿ ನೀಡಿದ ಇನ್ನೊಂದು ಅಚ್ಚರಿಯೆಂದರೆ ಕುರಿಗಳು ಸಾರ್‌ ಕುರಿಗಳು ಚಿತ್ರಕ್ಕೆ ಮೂರನೇ ಶ್ರೇಷ್ಠ ಚಿತ್ರ ಪ್ರಶಸ್ತಿ ಘೋಷಿಸಿದ್ದು . ಬಿಡುಗಡೆ ಸಂದರ್ಭದಲ್ಲಿ ಸೆನ್ಸಾರ್‌ ಜೊತೆ ಸಾಕಷ್ಟು ಗುದ್ದಾಡಿದ್ದ ಈ ಚಿತ್ರ ಸಾಕಷ್ಟು ಜನಪ್ರಿಯವೂ ಆಗಿದೆ. ಚಿತ್ರವೊಂದು ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಪ್ರಶಸ್ತಿ ಸಿಕ್ಕಿದ್ದು ಇದೇ ಮೊದಲು. ಆದರೆ ಬೇರೆಯವರ ವಿಚಾರ ಬಿಟ್ಟುಬಿಡಿ, ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಮತ್ತು ನಿರ್ಮಾಪಕ ಜೈಜಗದೀಶ್‌ ಅವರಿಗೇ ಈ ಪ್ರಶಸ್ತಿ ಗಾಬರಿಯಾಗುವಷ್ಟು ಅಚ್ಚರಿಯನ್ನು ತಂದಿದೆ. ಉಮಾಶ್ರೀಗೆ ಏನಾದರೊಂದು ಪ್ರಶಸ್ತಿ ಸಿಗಲಿ ಅನ್ನೋ ಉದ್ದೇಶದಿಂದ ನಮ್ಮ ಚಿತ್ರವನ್ನು ಸ್ಪರ್ಧೆಗೆ ಕಳಿಸಿದ್ದೆ , ಅಷ್ಟೇ ಹೊರತಾಗಿ ಚಿತ್ರಕ್ಕೆ ಪ್ರಶಸ್ತಿ ಬರುತ್ತೆ ಅನ್ನುವ ಕನಸನ್ನೂ ಕಂಡಿರಲಿಲ್ಲ ಎಂದಿದ್ದಾರೆ ಜೈ ಜಗದೀಶ್‌. ಬಾಬು ಅವರಂತೂ ಎಲ್ಲಾ ಪ್ರಶಸ್ತಿಗಳ ಜೊತೆಗೆ ಇದೂ ಒಂದು ಇರಲಿ ಎಂದು ಗೇಲಿ ಮಾಡಿದ್ದಾರೆ. ಕುರಿಗಳು ಸಾರ್‌ ಕುರಿಗಳು ಚಿತ್ರದಂತೆ ಸಿಲ್ಲಿ ಕಾಮಿಡಿ ಮಾಡಿದ ಮೇಲೆ ಅವರೀಗ ಸದಾ ಗೇಲಿಯ ಮೂಡಲ್ಲೇ ಇರುವುದು ನ್ಯಾಯಸಮ್ಮತ ಕೂಡ.

    ಕುರಿಗಳಿಗೆ ಸನ್ಮಾನ, ಸೆನ್ಸಾರಿಗೆ ಅವಮಾನ

    ಇಲ್ಲಿ ಇನ್ನೊಂದು ವಿಪರ್ಯಾಸ ಗಮನಿಸಿ. ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಸತ್ಯು ಅವರು ಈ ಬಾರಿ ಕಣದಲ್ಲಿದ್ದ ಚಿತ್ರಗಳ ಗುಣಮಟ್ಟದ ಬಗೆ ಯರ್ರಾಬಿರ್ರಿಯಾಗಿ ಟೀಕಿಸುತ್ತಾ - ಮಹಿಳೆಯರನ್ನು ಅವಮಾನ ಮಾಡುವ ಚಿತ್ರಗಳೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದವು. ಸೆನ್ಸಾರ್‌ ಮಂಡಳಿ ಇನ್ನಷ್ಟು ಕಠೋರ ನಿಯಮಗಳನ್ನು ಪಾಲಿಸಬೇಕು ಎಂದು ಅಪ್ಪಣೆ ಕೊಡಿಸಿದ್ದಾರೆ. ಮೂರನೇ ಪ್ರಶಸ್ತಿ ಪಡೆದ ಕುರಿಗಳು ಸಾರ್‌ ಕುರಿಗಳು ಚಿತ್ರದಲ್ಲಿ ಹೆಣ್ಣೊಬ್ಬಳನ್ನು ಡಕೋಟಾ ಗಾಡಿ ಎಂದು ಕರೆಯುವ ಸಂಭಾಷಣೆಯಿದೆ. ಅದು ಸಾಕಷ್ಟು ವಿವಾದವನ್ನೂ ಸೃಷ್ಟಿಸಿತ್ತು . ಸೆನ್ಸಾರ್‌ ಇನ್ನಷ್ಟು ಉದಾರ ನೀತಿ ಅನುಸರಿಸಬೇಕು ಎಂದು ನಿರ್ದೇಶಕ ಬಾಬು ಆಗ ಗುಡುಗಿದ್ದರು. ಆದರೆ ಸತ್ಯು ಅವರು ಸೆನ್ಸಾರ್‌ ಇನ್ನಷ್ಟು ಬಿಗಿಯಾಗಬೇಕು ಅನ್ನುತ್ತಾ ಕುರಿಗಳಿಗೆ ಸನ್ಮಾನ ಮಾಡಿದ್ದಾರೆ.

    ಕನ್ನಡದ ಗಂಧ ಗೊತ್ತಿಲ್ಲದ ಸಂಗೀತ ನಿರ್ದೇಶಕನಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ನೀಡಿದ್ದು ಆಯ್ಕೆ ಸಮಿತಿಯ ಇನ್ನೊಂದು ಸಾಧನೆ. ಅವರ ಹೆಸರು ಎನ್‌. ಗೋವರ್ಧನ್‌. ವೃತ್ತಿ, ಸಿನಿಮಾಗಳಿಗೆ ಫೈನಾನ್ಸ್‌ ಮಾಡೋದು. ಆದರೆ ಅತ್ಯುತ್ತಮ ಫೈನಾನ್ಶಿಯರ್‌ ಪ್ರಶಸ್ತಿ ಅನ್ನುವ ವಿಭಾಗವೇ ಇಲ್ಲ . ಹಾಗಾಗಿ ಗೋವರ್ಧನ್‌ಗೆ ಈ ಪ್ರಶಸ್ತಿ ಕೊಡಲಾಗಿದೆ. ಮಹಾಲಕ್ಷ್ಮಿ ಚಿತ್ರದಲ್ಲಿ ಅವರ ರಾಗ ಸಂಯೋಜನೆ ಮತ್ತು ಹಿನ್ನಲೆ ಸಂಗೀತ ಉತ್ತಮವಾಗಿದೆ ಅನ್ನುತ್ತಿದೆ ಆಯ್ಕೆ ಸಮಿತಿ. ಆದರೆ ಆ ಚಿತ್ರದ ಹಾಡುಗಳು ಜನಪ್ರಿಯವಾಗಿಲ್ಲ . ಹಿನ್ನಲೆ ಸಂಗೀತದ ಅಗತ್ಯವೇ ಇಲ್ಲದ ಕಥಾವಸ್ತು ಆ ಚಿತ್ರದ್ದು . ಆದರೆ ಗೋವರ್ಧನ್‌ ಹೆಸರನ್ನು ಶಿಫಾರಸ್ಸು ಮಾಡದವರು ಹಿರಿಯ ಸಂಗೀತ ನಿರ್ದೇಶಕ ವಿಜಯಭಾಸ್ಕರ್‌.

    ನಮ್ಮ ಬೆನ್ನನ್ನು ನಾವೇ ಚಪ್ಪರಿಸಿಕೊಳ್ಳುವುದೆಂದರೆ ಇದೇನಾ ?

    ಕಮಿಟಿಯಲ್ಲಿದ್ದುಕೊಂಡೇ ವಿಜಯಭಾ,್ಕರ್‌ ರಾಜ್‌ಕುಮಾರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೊದಲನೆಯದಾಗಿ ಸಮಿತಿಯ ಸದಸ್ಯರು ತಮಗೆ ತಾವೇ ಪ್ರಶಸ್ತಿ ಕೊಟ್ಟುಕೊಳ್ಳೋದು ನಿಯಮಕ್ಕೆ ವಿರುದ್ಧ . ಎರಡನೆಯದಾಗಿ ರಾಜ್‌ ಪ್ರಶಸ್ತಿ ಮೀಸಲಾಗಿರುವುದು ಚಿತ್ರರಂಗದಲ್ಲಿ ಸರ್ವತೋಮುಖ ಸಾಧನೆ ಮಾಡಿದ ಮಹನೀಯರಿಗೆ. ವಿಜಯಭಾಸ್ಕರ್‌ ಸಂಗೀತ ನೀಡುವುದರ ಹೊರತಾಗಿ ಬೇರೇನೂ ಸಾಧನೆ ಮಾಡಿಲ್ಲ .

    ಪ್ರಶಸ್ತಿ ನಿಯಮಾವಳಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಒಂದೇ ರೕತಿಯಿದೆ. ಹಾಗಿದ್ದೂ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ ಮತದಾನಕ್ಕೆ ರಾಜ್ಯಮಟ್ಟದಲ್ಲಿ ಅವಮಾನವಾಗುತ್ತದೆ. ಯಾರೂ ನೋಡದ, ನೋಡಿದವರು ಮೆಚ್ಚದ ಮುಸ್ಸಂಜೆ ಚಿತ್ರಕ್ಕೆ ಮೊದಲ ಬಹುಮಾನ ಸಿಗುತ್ತದೆ. ಕುರಿಗಳು ಸಾರ್‌ ಕುರಿಗಳು ಚಿತ್ರ ಅಪದ್ಧವಾಗಿದೆ ಎಂದು ಪ್ರಜ್ಞಾವಂತರೆಲ್ಲ ಕಿರುಚಾಡುತ್ತಿದ್ದರೂ ಅದಕ್ಕೇ ಮೂರನೇ ಪ್ರಶಸ್ತಿ ಸಂದಾಯವಾಗುತ್ತದೆ.

    ಸತ್ಯು ಎಂಬ ಮಾಜಿ ನಿರ್ದೇಶಕ ಇಷ್ಟರ ಮಟ್ಟಿಗೆ ಡಿಕ್ಟೇಟರ್‌ ಆಗಬಾರದಿತ್ತು

    ಸತ್ಯು ಅವರ ಸೀನಿಯಾರಿಟಿಯನ್ನು ಕಂಡು ಬೆದರಿಯೇ ಉಳಿದ ಸದಸ್ಯರು ಸಹಿ ಹಾಕಿರಬೇಕು. ಅವರಾದರೂ ಎಂಥವರು? ಮಾಪಾಕ್ಷಿ ಎಂಬ ನಿರುದ್ಯೋಗಿ ಛಾಯಾಗ್ರಾಹಕ ಕನಿಷ್ಠವೆಂದರೂ ಆರು ಬಾರಿ ಆಯ್ಕೆ ಸಮಿತಿ ಸದಸ್ಯರಾಗಿದ್ದಾರೆ. ರಾಜಕೀಯ ವರದಿ ಮಾಡುವ ಪತ್ರಕರ್ತರೊಬ್ಬರ ಪತ್ನಿ ಕೂಡ ವಿನಾಕಾರಣ ಸದಸ್ಯೆಯಾಗುತ್ತಾರೆ.

    ಉಮಾಶ್ರೀಯವರಂತೂ ಮುಂಗಡ ಜಾಮೀನು ತೆಗೆದುಕೊಂಡೇ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಅನ್ನೋದು ಈಗ ರುಜುವಾತಾಗಿದೆ. ಅವರಿಗೆ ಶ್ರೇಷ್ಠ ಪೋಷಕನಟಿ ಪ್ರಶಸ್ತಿ ಸಂದಾಯವಾಗಿದೆ. ಚಿತ್ರದ ಹೆಸರು ಯಥಾ ಪ್ರಕಾರ ಕುರಿಗಳು ಸಾರ್‌ ಕುರಿಗಳು.

    ಮುನ್ನುಡಿ ಆರು ಪ್ರಶಸ್ತಿಯನ್ನು ಗೆದ್ದುಕೊಂಡು ದಾಖಲೆ ಸ್ಥಾಪಿಸಿದೆ. ಶಾಪ ಚಿತ್ರದ ನಿರ್ಮಾಪಕರು ಈ ಚಿತ್ರದಿಂದಾಗಿ 40 ಲಕ್ಷ ಕಳಕೊಂಡಿದ್ದರೂ ನಾಲ್ಕು ಪ್ರಶಸ್ತಿ ಸಿಕ್ಕಿದ ಖುಷಿಯಲ್ಲಿದ್ದಾರೆ. ಓ ಮಲ್ಲಿಗೆ ಹಾಡಿಗಾಗಿ ಅಂದು ಶ್ರೇಷ್ಠ ಗಾಯಕ ಪ್ರಶಸ್ತಿ ಪಡೆದಿದ ರಮೇಶ್‌ಚಂದ್ರ ಆಮೇಲೆ ಅವಕಾಶ ಸಿಗದೇ ಮೂಲೆ ಗುಂಪಾಗಿದ್ದರೂ ಅಪರೂಪಕ್ಕೆ ಹಾಡಿದ ‘ಅರಬಿಯ ಕಡಲಲಿ ಬಂದವನು’ ಹಾಡಿಗೆ ಮತ್ತೆ ಪ್ರಶಸ್ತಿ ಭಾಜನರಾಗಿದ್ದಾರೆ.

    ಎಂ.ಎಸ್‌. ಸತ್ಯು ಅವರಂಥ ಸ್ವಯಂ ಘೋಷಿತ ಬುದ್ಧಿವಂತರು ಆಯ್ಕೆ ಸಮಿತಿಯ ಮುಖ್ಯಸ್ಥರಾದರೆ ಏನಾಗುತ್ತದೆ ಅನ್ನೋದಕ್ಕೆ ಈ ಬಾರಿಯ ಪ್ರಶಸ್ತಿ ಪಟ್ಟಿಯೇ ಸಾಕ್ಷಿ.

    ವಾರ್ತಾ ಸಂಚಯ
    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X