»   » ಪ್ರಶಸ್ತಿ: ಎಂ.ಎಸ್‌. ಸತ್ಯು ಮೇಲೆಘಟಾನುಘಟಿಗಳ ಗದಾಪ್ರಹಾರ

ಪ್ರಶಸ್ತಿ: ಎಂ.ಎಸ್‌. ಸತ್ಯು ಮೇಲೆಘಟಾನುಘಟಿಗಳ ಗದಾಪ್ರಹಾರ

Subscribe to Filmibeat Kannada

* ಸತ್ಯನಾರಾಯಣ

ಈ ಬಾರಿಯ ರಾಜ್ಯ ಚಲನಚಿತ್ರ ಪ್ರಶಸ್ತಿ ಸೃಷ್ಟಿಸಿದ ವಿವಾದಗಳು ಮುಗಿಯದ ಕತೆಯಾಗುತ್ತಿದೆ. ಪ್ರಶಸ್ತಿ ವಂಚಿತರೆಲ್ಲರೂ ಒಬ್ಬರ ಹಿಂದೊಬ್ಬರಂತೆ ಸಲಹಾ ಸಮಿತಿ ಅಧ್ಯಕ್ಷ ಎಂ.ಎಸ್‌. ಸತ್ಯು ಮೇಲೆ ಮುಗಿಬೀಳುತ್ತಿದ್ದಾರೆ. ಸತ್ಯು ಕೂಡಾ ಸುಮ್ಮನೆ ಕುಳಿತಿಲ್ಲ. ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ತಮ್ಮ ಪ್ರತಿದಾಳಿ ನಡೆಸ್ತಾನೇ ಇದ್ದಾರೆ.

‘ಚಂದನದ ಚಿಗುರು’ಚಿತ್ರವನ್ನು ಮಕ್ಕಳ ಚಿತ್ರವೇ ಅಲ್ಲ ಎಂದು ಸತ್ಯು ಅಪ್ಪಣೆ ಕೊಡಿಸಿದ್ದಕ್ಕೆ ಪ್ರತಿಯಾಗಿ ಚಿತ್ರದ ನಿರ್ದೇಶಕ ಅಬ್ದುಲ್‌ ರೆಹಮಾನ್‌ ಪಾಶಾ ‘ಮಕ್ಕಳ ಚಿತ್ರ ಹೇಗಿರಬೇಕು ಅಂತ ದಯವಿಟ್ಟು ಹೇಳಿ’ ಎಂದು ಸರಕಾರಕ್ಕೆ ಮನವಿ ಸಲ್ಲಿಸಿದರು. ‘ಡ್ಯಾನ್ಸ್‌ ಮಾಡದೇ ಇರೋ ಕಾರಣಕ್ಕೆ ಪ್ರಶಸ್ತಿ ಸಿಗಲಿಲ್ಲ ’ ಎಂಬ ಅಪವಾದ ಹೊತ್ತ ತಾರಾ ಗೋಳಾಡಿದ್ದು ಪತ್ರಿಕೆಯಲ್ಲಿ ವರದಿಯಾಯಿತು. ಇದೀಗ ಮತದಾನ ದ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರು ಸತ್ಯು ಅವರನ್ನೊಬ್ಬ ‘ಸರ್ವಾಧಿಕಾರಿ’ ಎಂದು ಕರೆದಿದ್ದಾರೆ.

ಮತದಾನ ಚಿತ್ರ ‘ಪೊಲಿಟಿಕಲಿ ಇನ್‌ಕರೆಕ್ಟ್‌ ’ ಸಿನಿಮಾ ಎಂದು ಇತ್ತೀಚೆಗೆ ಸತ್ಯು ಟೀವಿ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಸೀತಾರಾಂ ಪ್ರಕಾರ ‘ಪೊಲಿಟಿಕಲಿ ಇನ್‌ಕರೆಕ್ಟ್‌’ ಎಂಬ ಪದವನ್ನು ಮೊದಲು ಬಳಸಿದ್ದು ಹಿಟ್ಲರ್‌. 1938ರಲ್ಲಿ ಯಹೂದಿಗಳನ್ನು ದಮನ ಮಾಡುವ ಸಂದರ್ಭದಲ್ಲಿ ಆತ ಇಂಥಾ ಸಮರ್ತನೆ ನೀಡಿದ್ದ. ಅನಂತರ 75ರಲ್ಲಿ ಇಂದಿರಾಗಾಂಧಿ ಇದೇ ಪದವನ್ನು ಬಳಸಿದ್ದರಂತೆ. ಈಗ ಸತ್ಯು ಬಾಯಿಂದಾನೂ ಇದೇ ಪದ ಪುಂಜ ಬಂದಿರುವುದರಿಂದ ಅವರನ್ನು ಫ್ಯಾಸಿಸ್ಟು ಎಂದು ಕರೋಯೋದಕ್ಕೆ ಆಡ್ಡಿಯಿಲ್ಲ ಅನ್ನುತ್ತದೆ ಸೀತಾರಾಂ ಲಾಜಿಕ್ಕು.

ಮತದಾನ ಚಿತ್ರದಲ್ಲಿ ವ್ಯಕ್ತವಾದ ರಾಜಕೀಯ ನಿಲುವುಗಳು ತಮ್ಮದೇ ಆಗಿದ್ದರೆ ಸತ್ಯು ಅವರ ವಾದವನ್ನು ಸ್ವೀಕರಿಸಬಹುದಾಗಿತ್ತು. ಆದರೆ ಆ ಚಿತ್ರಕ್ಕೆ ಆಧಾರ ಭೈರಪ್ಪನವರ ಕಾದಂಬರಿ. ಹಾಗಾಗಿ ಅಲ್ಲಿರುವ ನಿಲುವುಗಳೂ ಅವರದ್ದೇ. 50ರ ದಶಕದ ಕಥೆಯನ್ನು 75ನೇ ದಶಕಕ್ಕೆ ಹೊಂದಿಕೊಳ್ಳುವಂತೆ ಬದಲಾಯಿಸಿದ್ದಷ್ಟೇ ತಮ್ಮ ಸಾಧನೆ. ಈ ಹಿನ್ನೆಲೆಯಲ್ಲಿ ಪೊಲೀಟಿಕಲಿ ಇನ್‌ ಕರೆಕ್ಟ್‌ ಎಂದು ಸತ್ಯು ಹೇಳಿರುವುದೇ ಇನ್‌ಕರೆಕ್ಟ್‌ ಅನ್ನುತ್ತಾರೆ ಸೀತಾರಾಮ್‌.

ಅಷ್ಟಕ್ಕೂ ಸತ್ಯುವನ್ನು ಮೆಚ್ಚಿಸುವುದಕ್ಕೆ ನಾನು ಈ ಚಿತ್ರ ಮಾಡಿಲ್ಲ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಚಿತ್ರವೊಂದನ್ನು ಸಾರಾಸಗಟಾಗಿ ತಿರಸ್ಕರಿಸುವುದಕ್ಕೆ ಸತ್ಯು ಅವರಿಗೆ ಯಾವ ಹಕ್ಕೂ ಇಲ್ಲ. ಜೊತೆಗೆ ಪತ್ರಿಕೆಗಳಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ ಚಿತ್ರಕ್ಕೆ ಪ್ರಶಸ್ತಿ ನೀಡದೇ ಇರುವ ಮೂಲಕ ಸತ್ಯು ಆ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಇದು ಅವರ ಅಸೂಯೆಗೂ ಸಾಕ್ಷಿಯಾಗುತ್ತದೆ. ರಾಜಕೀಯ ಚಿತ್ರವನ್ನು ಗುತ್ತಿಗೆ ತೆಗೆದುಕೊಂಡವರಂತೆ ಅವರು ವರ್ತಿಸುತ್ತಿದ್ದಾರೆ.

ಆದರೆ ‘ಗಳಿಗೆ’, ‘ಕೊಟ್ಟ’ದಂಥ ಚಿತ್ರಗಳಲ್ಲಿ ಅವರ ಮಟ್ಟ ಏನು ಅನ್ನೋದು ಸಾಬೀತಾಗಿದೆ. ಪ್ರಶಸ್ತಿ ಪಟ್ಟಿ ನೋಡಿದಾಗ ಅದು ಮತ್ತೊಮ್ಮೆ ಸಾಬೀತಾಗಿದೆ. ಮೊದಲ ಮೂರು ಚಿತ್ರಗಳ ಹೆಸರುಗಳೇ ಸಾಕು. ಯಾರೂ ನೋಡದ ಮುಸ್ಸಂಜೆಗೆ ನಾಲ್ಕು ಪ್ರಶಸ್ತಿ ಸಿಕ್ಕಿರುವುದನ್ನು ಕಂಡಾಗ ಈ ಬಾರಿಯ ಸತ್ಯು ಪ್ರಾಮಾಣಿಕತೆಯ ಬಗ್ಗೆಯೇ ಸಂದೇಹ ಬರುತ್ತದೆ. ಹೀಗೇ ಸೀತಾರಾಂ ಸತ್ಯು ಮೇಲೆ ನಾನ್‌ಸ್ಟಾಪ್‌ ಹಲ್ಲೆ ನಡೆಸಿದ್ದಾರೆ. ಅಂದಹಾಗೆ ಸತ್ಯು ಅವರ ಟೀಕೆಯನ್ನು ಚಾಲೆಂಜ್‌ ಆಗಿ ಸ್ವೀಕರಿಸಿರುವ ಸೀತಾರಾಂ ಮುಂದಿನ ಜುಲೈನಲ್ಲಿ ಹೊಸ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದಾರೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada