»   » ಚಿತ್ರವಷ್ಟೇ ಅಲ್ಲ, ಸೀತಾರಾಮ್‌ ಯೋಚನಾಲಹರಿಯೂ ‘ಪೊಲಿಟಿಕಲಿ ಇನ್‌ಕರೆಕ್ಟ್‌’

ಚಿತ್ರವಷ್ಟೇ ಅಲ್ಲ, ಸೀತಾರಾಮ್‌ ಯೋಚನಾಲಹರಿಯೂ ‘ಪೊಲಿಟಿಕಲಿ ಇನ್‌ಕರೆಕ್ಟ್‌’

Posted By:
Subscribe to Filmibeat Kannada

*ಬಿ.ಎಸ್‌. ಲಿಂಗದೇವರು (ನಿರ್ಮಾಪಕ, ನಿರ್ದೇಶಕ)

ತಮ್ಮ ಚಿತ್ರಕ್ಕೆ ಪ್ರಶಸ್ತಿ ಬರಲಿಲ್ಲ ಎಂಬ ಕಾರಣಕ್ಕೆ ಸತ್ಯು ಒಬ್ಬ ಫ್ಯಾಸಿಸ್ಟ್‌ ಎಂದಿರುವ ಟಿ.ಎನ್‌. ಸೀತಾರಾಮ್‌ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ ಭರದಲ್ಲಿ ಅವರು ನೋಡದೇ ಇರುವ ‘ಮುಸ್ಸಂಜೆ’ ಬಗ್ಗೆ ಅವರಿವರ ಅಭಿಪ್ರಾಯಗಳನ್ನು ಕೇಳಿಕೊಂಡು ತಪ್ಪಾಗಿ ಮಾತನಾಡಿದ್ದಾರೆ. ಅವರ ಗ್ರಹಿಕೆಯ ಕ್ರಮದಲ್ಲಿರುವ ತಪ್ಪುಗಳು ಇವು.

  1. ಮತದಾನವನ್ನು 1975ರ ರಾಜಕೀಯ ಸಂದರ್ಭದಕ್ಕೆ ಹೊಂದಿಸಿಕೊಂಡಿದ್ದೇನೆ ಎಂದಿದ್ದಾರೆ ಸೀತಾರಾಮ್‌. ಆದರೆ ಅಲ್ಲಿ ಕಾಂಟೆಸ್ಸಾ ಕಾರು, ಕಾರಿಗೆ ಹಚ್ಚಿದ ಎಮಿಷನ್‌ ಟೆಸ್ಟೆಡ್‌ ಸರ್ಟಿಫಿಕೇಟು, ಡಬಲ್‌ ಡೋರ್‌ ರೆಫ್ರಿಜರೇಟರ್‌ ಮುಂತಾದವುಗಳು ಬರುತ್ತವೆ. ಹೀಗಾಗಿ ಒಂದು ಚಿತ್ರಕ್ಕೆ ಮೂಲಭೂತವಾಗಿ ಬೇಕಾದ ‘ಆ ಕಾಲದ ವಾತಾವರಣ ಮತ್ತು ಪರಿಸರ’ ಅಲ್ಲಿಲ್ಲ.
  2. ಸೀತಾರಾಮ್‌ ಅವರು ನಾನು ಪ್ರಶಸ್ತಿಗಾಗಿ ಸಿನಿಮಾ ಮಾಡೋಲ್ಲ ಅಂತ ಹೇಳಿಕೊಂಡು ಬಂದಿದ್ದಾರೆ. ತಾನು ಪ್ರಶಸ್ತಿ ನಿರೀಕ್ಷೆ ಇಟ್ಟುಕೊಂಡಿದ್ದೆ ಅಂತ ಅವರೇ ಹೇಳಿಕೊಂಡಿದ್ದಾರೆ. ಈಗ ಪ್ರಶಸ್ತಿ ಬಂದಿಲ್ಲ ಎಂದ ಮಾತ್ರಕ್ಕೆ ಸತ್ಯು ಅವರನ್ನು ಫ್ಯಾಸಿಸ್ಟ್‌ ಎಂದು ಕರೆಯೋದು ಸರಿಯೇ ? ಮತದಾನಕ್ಕೆ ಪ್ರಶಸ್ತಿ ಬಂದಿದ್ದರೆ ಸತ್ಯು ಒಳ್ಳೆಯವರಾಗುತ್ತಿದ್ದರೇ ? ಅಥವಾ public memory is short ಎಂದು ಸೀತಾರಾಮ್‌ ಭಾವಿಸಿದ್ದಾರೆಯೇ ?
  3. ಜನಪ್ರಿಯತೆಯೆ ಮಾನದಂಡವಾಗಿದ್ದರೆ ಯಜಮಾನ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯಾಗಬೇಕಿತ್ತು.
  4. ರಾಷ್ಟ್ರ ಪ್ರಶಸ್ತಿ ಗಳಿಸಿದ್ದು ರಾಜ್ಯ ಪ್ರಶಸ್ತಿ ಪಡೆಯೋದಕ್ಕೆ ಮಾನದಂಡವಾಗಬೇಕಿತ್ತು ಎನ್ನುವ ಮಾತನ್ನೂ ಸೀತಾರಾಮ್‌ ಹೇಳಿದ್ದಾರೆ. ಆದರೆ ರಾಜ್ಯ ಪ್ರಶಸ್ತಿಯೇ ರಾಷ್ಟ್ರಪ್ರಶಸ್ತಿಗಿಂತ ಮುಖ್ಯವಾದದ್ದು ಮತ್ತು ಸಮರ್ಪಕವಾದದ್ದು. ಯಾಕೆಂದರೆ ರಾಷ್ಟ್ರ ಪ್ರಶಸ್ತಿಯಲ್ಲಿ ಒಂದು ಭಾಷೆಯನ್ನು ಪ್ರತಿನಿಧಿಸುವುದಕ್ಕೆ ಒಬ್ಬ ಪ್ರತಿನಿಧಿ ಮಾತ್ರ ಇರುತ್ತಾರೆ. ಅವರ ವೈಯಕ್ತಿಕ ಅಭಿಪ್ರಾಯದ ಮೇರೆಗೆ ಪ್ರಶಸ್ತಿ ನಿರ್ಧಾರವಾಗುತ್ತದೆ. ಆದರೆ ರಾಜ್ಯ ಪ್ರಶಸ್ತಿಯಲ್ಲಿರುವವರೆಲ್ಲ ಕನ್ನಡಿಗರು ಮತ್ತು ಕನ್ನಡ ಚಿತ್ರಗಳ ಬಗ್ಗೆ ಸಮಗ್ರ ತಿಳುವಳಿಕೆ ಇರುವವರು. ಅಂಥ ಸಮಿತಿಯ ಆಯ್ಕೆ , ರಾಷ್ಟ್ರ ಪ್ರಶಸ್ತಿಗಿಂತ ದೊಡ್ಡದು.
  5. ಸತ್ಯು ಅವರಿಗೆ ಅಸೂಯೆ ಎಂಬ ಮಾತನ್ನೂ ಸೀತಾರಾಮ್‌ ಆಡಿದ್ದಾರೆ. ಆದರೆ ಕಮಿಟಿಯಲ್ಲಿದ್ದದ್ದು ಕೇವಲ ಸತ್ಯು ಒಬ್ಬರೇ ಅಲ್ಲ. ಅವರ ಜೊತೆಗೇ ಚಿತ್ರರಂಗದ ಇನ್ನಿತರ ಗಣ್ಯರೂ ಇದ್ದರು. ಅದು ಅವರೆಲ್ಲರ ಆಯ್ಕೆ ಅನ್ನೋದನ್ನು ಮರೆಯುವಂತಿಲ್ಲ.
  6. ಮಾಯಾಮೃಗಕ್ಕೆ ಸರಕಾರ ಪ್ರಶಸ್ತಿ ಕೊಟ್ಟಾಗ ಅಲ್ಲಿ ಸಮಿತಿಯೇ ಅಸ್ವಿತ್ವದಲ್ಲಿರಲಿಲ್ಲ. ಆಗ ಬೇರೆ ನಿರ್ದೇಶಕರಿಗೆ ಬೇಸರವಾಗಿರಬಹುದು ಎಂಬ ಕಲ್ಪನೆಯೂ ಸೀತಾರಾಮ್‌ ಅವರಿಗಿರಲಿಲ್ಲ. ಸಮಿತಿಯಿಲ್ಲದೆ ಪ್ರಶಸ್ತಿ ಕೊಟ್ಟಿದ್ದನ್ನು ಅವರು ಪ್ರತಿಭಟಿಸಲೂ ಇಲ್ಲ. ಟೀಕಿಸಲೂ ಇಲ್ಲ. ಅವರು ಪ್ರಶಸ್ತಿಯನ್ನು ಮರಳಿಸಿದ್ದೂ ಬೇರೆ ಕಾರಣಕ್ಕೆ ಹೊರತು ಸಮಿತಿಯಿರಲಿಲ್ಲ ಎಂಬ ಕಾರಣಕ್ಕಲ್ಲ.
ಪ್ರಶಸ್ತಿ ತಮ್ಮೊಬ್ಬರ ಸೊತ್ತಲ್ಲ. ಬೇರೆಯವರಿಗೂ ಅದನ್ನು ಪಡೆಯುವ ಹಕ್ಕಿದೆ ಎಂದು ಭಾವಿಸುವುದು ಡೆಮಾಕ್ರಸಿ. ಅದು ಬಿಟ್ಟು ತಮಗೊಬ್ಬರಿಗೆ ಪ್ರಶಸ್ತಿ ಸಿಗಬೇಕು ಎಂದು ಅಧಿಕಾರಯುತವಾಗಿ ನಿರ್ದೇಶಿಸುವುದು ಫ್ಯಾಸಿಸ್ಟ್‌ ಲಕ್ಷಣ. ಹೀಗಾಗಿ ಸೀತಾರಾಮ್‌ ಚಿತ್ರವಷ್ಟೇ ಅಲ್ಲ, ಅವರ ಯೋಚನಾಲಹರಿಯೂ ‘ಪೊಲಿಟಿಕಲಿ ಇನ್‌ಕರೆಕ್ಟ್‌’.

ವಾರ್ತಾ ಸಂಚಯ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada