»   » ‘ಶಾಪಕ್ಕೆ ಅವಾರ್ಡ್‌ ಮಿಸ್‌ ಆದ್ರೂಜನರ ರಿವಾರ್ಡ್‌ ಬಂದೇ ಬರತ್ತೆ..’

‘ಶಾಪಕ್ಕೆ ಅವಾರ್ಡ್‌ ಮಿಸ್‌ ಆದ್ರೂಜನರ ರಿವಾರ್ಡ್‌ ಬಂದೇ ಬರತ್ತೆ..’

Subscribe to Filmibeat Kannada

ಮೊದಲ ಸುತ್ತಿನಲ್ಲಿ ಸೋತಿದ್ದ ಮತದಾನಕ್ಕೆ ರಾಷ್ಟ್ರಪ್ರಶಸ್ತಿ ಬಂತು. ಎರಡನೇ ಸುತ್ತು ತಲುಪಿದ್ದ ಶಾಪಕ್ಕೆ ಪ್ರಶಸ್ತಿ ಕೈತಪ್ಪಿತು. ಈ ಬಗ್ಗೆ ನಟ ಬಿ.ಸಿ. ಪಾಟೀಲ್‌ಗೆ ತೀವ್ರ ನೋವಿದೆ. ಆಕ್ರೋಶವೂ ಇದೆ. ಈ ವಿಷಯವನ್ನು ಅವರು ಬಹಿರಂಗ ಪಡಿಸಿದ್ದಾರೆ ಕೂಡ.

ತಮ್ಮ ಚಿತ್ರ ಶಾಪಕ್ಕೆ ಅವಾರ್ಡ್‌ ಮಿಸ್‌ ಆದ್ರೇನು, ಜನರ ರಿವಾರ್ಡ್‌ ಸಿಕ್ಕೇ ಸಿಗತ್ತೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಮ್ಮ ಹೊಸ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಟೀಲ್‌ ಮನಬಿಚ್ಚಿ ಮಾತಾಡಿದರು, ಶಾಪ ಮೇ 4 ರಿಂದ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದರು.

ಶಾಪಕ್ಕೆ ಈ ಬಾರಿಯ ರಾಷ್ಟ್ರ ಪ್ರಶಸ್ತಿ ಬಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರಕಟಣೆಯ ಹಿಂದಿನ ದಿನ ಕೂಡ ಆಯ್ಕೆ ಸಮಿತಿ ಮುಂದೆ ಇದ್ದದ್ದು ಮುನ್ನುಡಿ ಮತ್ತು ಶಾಪ ಮಾತ್ರ. ಕೊನೆಯ ಸುತ್ತಿಗೆ ಶಾಪ ಬಂದಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮೊದಲ ಸುತ್ತಿನಲ್ಲೇ ಬಿದ್ದು ಹೋಗಿದ್ದ ಮತದಾನ ಮತ್ತೆ ಪ್ರತ್ಯಕ್ಷ ಆಯ್ತು. ಪ್ರಶಸ್ತಿಯನ್ನೂ ಪಡೆಯಿತು ಎಂದರು ಪಾಟೀಲ್‌.

ಈ ಚಿತ್ರಕ್ಕೆ ಪ್ರಶಸ್ತಿ ಬರಲು ಒಂದೋ ರಾಜಕೀಯ ಪ್ರಭಾವ ಇರಬೇಕು, ಇಲ್ಲವೇ ಅದರ ಹೆಸರಿನಲ್ಲೇ ತೂಕ ಇರಬೇಕು. ಇಂಥ ವ್ಯವಸ್ಥೆಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಹೇಗೆ ಸಿಗತ್ತೆ ಹೇಳಿ ಎಂದು ಪ್ರಶ್ನಿಸಿದರು. ಮುಂದಿನ ವರ್ಷದಿಂದ ಪ್ರಶಸ್ತಿ ಅರ್ಜಿಯಲ್ಲಿ ಹೊಸದೊಂದು ಕಾಲಂ ಇಟ್ಟು, ಅದರಲ್ಲಿ ಅರ್ಜಿದಾರರ ಪಕ್ಷ ಯಾವುದು? ಅವರಿಗೆ ಯಾವ ಯಾವ ರಾಜಕಾರಣಿಗಳ ಬೆಂಬಲ ಇದೆ ಎಂದು ನಮೂದಿಸಿ ಎಂದರೆ ಚೆನ್ನ ಎಂದು ಲೇವಡಿ ಮಾಡಿದರು.

ರಾಷ್ಟ್ರಪ್ರಶಸ್ತಿಗೆ ಚಿತ್ರ ಕಳುಹಿಸುವಾಗ ಅದರ ಜತೆಯಲ್ಲೇ ಪ್ರಭಾವಿ ರಾಜಕಾರಣಿಗಳ ಪ್ರಭಾವಬೀರುವ ಪತ್ರವನ್ನೂ ಲಗತ್ತಿಸಿ ಎಂದರೆ ನಿರ್ಮಾಪಕರೂ ಉಳೀತಾರೆ. ಇದು ವಿಷಯ .. ಇಲ್ಲಿ ಮೈಟ್‌ ಈಸ್‌ ರೈಟ್‌. ಇದಕ್ಕೆ ವ್ಯವಸ್ಥೆಯನ್ನು ದೂಷಿಸದೆ ಬೇರೆ ದಾರಿ ಇಲ್ಲ ಎಂದರು.

ಇದೇನು ಕದ್ದು ಮುಚ್ಚಿ ಮಾಡಿರುವ ಕೆಲಸ ಅಲ್ಲ. ಪ್ರಶಸ್ತಿ ಸಮಿತಿ ಆಯ್ಕೆ ಬಗ್ಗೆ ಸರ್ವತ್ರ ಟೀಕೆ ಬಂದಿದೆ. ಪ್ರಶಸ್ತಿ ಪಡೆದವರು ಅದನ್ನು ವಾಪಸ್‌ ಕೊಟ್ಟಿದ್ದಾರೆ. ಆಯ್ಕೆ ಸಮಿತಿ ಕೆಲವು ಸದಸ್ಯರು ಬೇಸತ್ತು ರಾಜೀನಾಮೆ ಕೊಟ್ಟಿದ್ದಾರೆ. ಈ ರಾಜಕೀಯ ಪ್ರಭಾವದ ಗದ್ದಲದಲ್ಲಿ ಸಾಕಷ್ಟು ಬಡ್ಡಿಯ ಭಾರ ಹೊತ್ತ ನನಗೆ ಇನ್ನೊಂದು (ಪ್ರಶಸ್ತಿಯ) 10 ಸಾವಿರ ಲಾಸ್‌ ಆಯ್ತು ಅಷ್ಟೇ ಎಂದು ಹೇಳಿ ನಕ್ಕರು.

ಇಂತಹ ಯಾವುದೇ ಇನ್‌ಫ್ಲೂಯೆನ್ಸ್‌ ಇಲ್ದೆ ತಮ್ಮ ನಿಷ್ಕರ್ಷ ಚಿತ್ರಕ್ಕೆ ಪ್ರಶಸ್ತಿ ಬಂದ ಬಗ್ಗೆ ಆಶ್ಚರ್ಯ ಆಗ್ತಾ ಇದೆ ಎಂದು ಹೇಳಿದ ಪಾಟೀಲ್‌. ನೋಡಿ 1995ರಲ್ಲಿ ಮೂರು ರಾಜ್ಯ ಪ್ರಶಸ್ತಿ ಪಡೆದ ನಿಷ್ಕರ್ಷ ಚಿತ್ರವನ್ನು ದೂರದರ್ಶನ ಇನ್ನೂ ತನ್ನ ರಾಷ್ಟ್ರೀಯ ಜಾಲದಲ್ಲಿ ಪ್ರದರ್ಶಿಸಿಲ್ಲ. 95ರಲ್ಲೇ ಚಿತ್ರವನ್ನು ದೂರದರ್ಶನಕ್ಕೆ ಕಳಿಸಿದ್ದೆವು. ವಿಚಾರಿಸಿದರೆ, ಚಿತ್ರವೇ ಬಂದಿಲ್ಲ ಎಂತಾರೆ. ಈಗ ಮತ್ತೊಮ್ಮೆ ಕಳಿಸ್ತಾ ಇದ್ದೀವಿ. ಇಲ್ಲೂ ಇನ್‌ಫ್ಲೂಯೆನ್ಸ್‌ ಬೇಕು ಅಂತ ಕಾಣತ್ತೆ. ಒಟ್ಟಿನಲ್ಲಿ ನನಗೂ ಪ್ರಶಸ್ತಿಗೂ ಆಗಿಬರಲ್ಲ ಬಿಡಿ ಎಂದು ಮತ್ತೊಮ್ಮೆ ನಕ್ಕ ಪಾಟೀಲರು ಕೊನೆಯದಾಗಿ ಹೇಳಿದ್ದು.. ಮೈಟ್‌ ಈಸ್‌ ರೈಟ್‌.

ವಾರ್ತಾಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada