»   » ಡಬ್ಬಿಂಗ್‌ ತಪ್ಪೇನಿಲ್ಲ ಅಂದರು ಶಿವಣ್ಣ

ಡಬ್ಬಿಂಗ್‌ ತಪ್ಪೇನಿಲ್ಲ ಅಂದರು ಶಿವಣ್ಣ

Posted By:
Subscribe to Filmibeat Kannada

*ವಾತಾಪಿ

ಡಬ್ಬಿಂಗ್‌ ಮಾಡುವುದರಲ್ಲಿ ತಪ್ಪೇನಿದೆ ? ನನ್ನ ಸಿನಿಮಾಗಳೇ ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್‌ ಆಗಿವೆ. ಅಂಥಾದ್ದರಲ್ಲಿ ಕನ್ನಡದಲ್ಲೂ ಡಬ್ಬಿಂಗ್‌ ತಪ್ಪಿಲ್ಲ ಅನ್ನಿಸುತ್ತದೆ.

ಪ್ರಶ್ನೆ ಕೇಳಿದ ಪತ್ರಕರ್ತರು ಶಿವರಾಜ್‌ ಉತ್ತರದಿಂದ ಅರೆಗಳಿಗೆ ಬೆಚ್ಚಿ ಬಿದ್ದರು. ಕನ್ನಡ ಸಿನಿಮಾದ ಅವಿಭಾಜ್ಯ ಅಂಗ ಅನ್ನಿಸಿರುವ ರಾಜ್‌ಕುಮಾರ್‌ ಮೊದಲಿನಿಂದಲೂ ಡಬ್ಬಿಂಗ್‌ ಸಂಸ್ಕೃತಿಯನ್ನು ವಿರೋಧಿಸುತ್ತಾ ಬಂದಿರುವಾಗ, ಶಿವರಾಜ್‌ ಡಬ್ಬಿಂಗ್‌ ತಪ್ಪಿಲ್ಲ ಅಂದದ್ದು ಪತ್ರಕರ್ತರಿಗೆ ಅಚ್ಚರಿ ತಂದಿತ್ತು .

ಡಬ್ಬಿಂಗ್‌ನಿಂದಾಗಿ ಕನ್ನಡ ಕಲಾವಿದರ ಅನ್ನಕ್ಕೆ ಕಲ್ಲು ಬೀಳುತ್ತದೆ. ಕನ್ನಡ ಸಂಸ್ಕೃತಿಗೂ ಡಬ್ಬಿಂಗ್‌ ಒಳ್ಳೆಯದಲ್ಲ ಅನ್ನುವ ವಾದದೊಂದಿಗೆ ಕನ್ನಡ ಚಳವಳಿಕಾರ ಮ. ರಾಮಮೂರ್ತಿ ಹಾಗೂ ರಾಜ್‌ ನಡೆಸಿದ ಡಬ್ಬಿಂಗ್‌ ವಿರೋಧಿ ಚಳವಳಿಗೆ ಇತಿಹಾಸವೇ ಇದೆ. ದೂರದರ್ಶನದಲ್ಲಿ ಪ್ರಸಾರವಾದ ಹಿಂದಿ ರಾಮಾಯಣ ಸೀರಿಯಲ್‌, ಕನ್ನಡದಲ್ಲಿ ಡಬ್‌ ಆಗುತ್ತದೆ ಎನ್ನುವ ಸಂದರ್ಭದಲ್ಲಿ ರಾಜ್‌ ನಡೆಸಿದ ಹೋರಾಟ ದೊಡ್ಡ ದಾಗಿಯೇ ಸುದ್ದಿಯಾಗಿತ್ತು . ಈ ಹಿನ್ನೆಲೆಯಲ್ಲಿ ಡಬ್ಬಿಂಗ್‌ ಬಗ್ಗೆ ಒಲವಿರುವ ಕನ್ನಡ ನಿರ್ಮಾಪಕರು ಕೂಡ ರಾಜ್‌ ಕಾರಣದಿಂದಾಗಿಯೇ ತಮ್ಮ ಒಲವನ್ನು ಹತ್ತಿಕ್ಕಿಕೊಂಡಿದ್ದರು. ಇಂಥಾದ್ದರಲ್ಲಿ ರಾಜ್‌ ಪುತ್ರನೇ ಡಬ್ಬಿಂಗ್‌ ಪರ ವಕೀಲಿಕೆ ವಹಿಸುವುದೆಂದರೆ ? ಅರಗಿಸಿಕೊಳ್ಳುವುದು ಯಾರಿಗಾದರೂ ಕಷ್ಟವೇ.

ಶಿವರಾಜ್‌, ಡಬ್ಬಿಂಗ್‌ ಪರ ಮಂಡಿಸಿರುವ ವಾದ ಸ್ಯಾಂಡಲ್‌ವುಡ್‌ನಲ್ಲಿ ಡಬ್ಬಿಂಗ್‌ ಪರ ವಾದಕ್ಕೆ ಜೀವ ಮೂಡಿಸುವ ನಿರೀಕ್ಷೆಯಿದೆ. ಶಿವರಾಜ್‌ರ ನಿಲುವು- ಬದಲಾದ ಕಾಲಧರ್ಮವೊ, ಸಿನಿಮಾ ರಂಗದಲ್ಲಿ ಹಳೆಯ ಜಮಾನದವರ ಸ್ಥಾನದಲ್ಲಿ ಹೊಸ ತಲೆಗಳ ಬದಲಾವಣೆಯ ಗಾಳಿಯಾ ಅಥವಾ ವಾಣಿಜ್ಯೀಕರಣ ಜಮಾನದಲ್ಲಿ ಸಂಸ್ಕೃತಿ- ಸೃಜನಶೀಲತೆಗಳು ಪಡೆದುಕೊಂಡಿರುವ ಹೊಸ ವ್ಯಾಖ್ಯೆಯ ಪರಿಣಾಮವೊ ಹೇಳುವುದು ಕಷ್ಟ . ಆದರೆ, ಆರೋಗ್ಯಕರ ಚರ್ಚೆಗಂತೂ ಅವರು ವೇದಿಕೆ ಸೃಷ್ಟಿಸಿದ್ದಾರೆ. ಒಳ್ಳೆಯ ನಿರ್ಧಾರದ ನಿರೀಕ್ಷೆಯಲ್ಲಿರೋಣ.

ಅಂದಹಾಗೆ, ಶಿವರಾಜ್‌ ಪತ್ರಕರ್ತರಿಗೆ ಮಾತಿಗೆ ಸಿಕ್ಕಿದ್ದು ಅಸುರ ಸಿನಿಮಾದ ಬಿಡುಗಡೆ ಪೂರ್ವದ ಕಾರ್ಯಕ್ರಮದಲ್ಲಿ . ಏಟ್ರಿಯಾ ಹೊಟೇಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ - ರಿಮೇಕ್‌, ಕನ್ನಡ ಸಿನಿಮಾದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಶಿವರಾಜ್‌ ಹುರುಪಿನಿಂದ ಮಾತಾನಾಡಿದರು. ಮಾರ್ಚ್‌ 23 ರಂದು ಅಸುರ ತೆರೆಯ ಮೇಲೆ ಬರಲಿದ್ದಾನೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada