»   » ಪತ್ರಿಕೆಗಳ ಮೇಲೆ ಕಿಡಿಕಾರಿದ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌

ಪತ್ರಿಕೆಗಳ ಮೇಲೆ ಕಿಡಿಕಾರಿದ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌

Posted By: Staff
Subscribe to Filmibeat Kannada

ಮೈಸೂರು : ನಾನು ಯಾವ ಪತ್ರಿಕೆಗೂ ಹೆದರೋಲ್ಲ. ನನಗೆ ಯಾರೂ ಏನೂ ಮಾಡಕ್ಕೆ ಆಗಲ್ಲ. ನನ್ನನ್ನು ಯಾವ ಪತ್ರಿಕೆಯೂ ಬೆಳಸಿಲ್ಲ, ಅಷ್ಟಕ್ಕೂ ಎಷ್ಟು ಜನ ಪತ್ರಿಕೆ ಓದ್ತಾರೆ? - ಶಿವರಾಜ್‌ಕುಮಾರ್‌ ವೀರಾವೇಶದ ನುಡಿಗಳಿವು.

ಶುಕ್ರದೆಶೆ ನೆಲಕಚ್ಚಿದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ನೀವು ಬೆಳಬೆಳಗ್ಗೆ ಕುಡಿದಿದ್ದಿರಾ? ಕನ್ನಡಕ ಹಾಕಿಕೊಳ್ಳದೇ ಚಿತ್ರ ನೋಡಿದಿರಾ? ಎಂಬಿತ್ಯಾದಿ ತರ್ಲೆ ಪ್ರಶ್ನೆಗಳನ್ನು ಕೇಳಿ ಪತ್ರಿಕೆಗಳ ವಿರುದ್ಧ ನಟ ಜಗ್ಗೇಶ್‌ ಕಿಡಿಕಾರಿ ತಿಂಗಳು ಕಳೆಯುವ ಮೊದಲೇ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕೂಡ ಪತ್ರಿಕೆಗಳ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಮದುವೆ ಆಗೋಣ ಬಾ ಚಿತ್ರದ ಬಿಡುಗಡೆ ಕಾರ್ಯಕ್ರಮಕ್ಕಾಗಿ ಭಾನುವಾರ ಮೈಸೂರಿಗೆ ಆಗಮಿಸಿದ್ದ ಶಿವರಾಜ್‌ ಪತ್ರಿಕೆಗಳ ವಿರುದ್ಧ ಭಾರಿ ಸಿಟ್ಟಾಗಿದ್ದರು. ಸುದ್ದಿ ಗೋಷ್ಠಿಯಲ್ಲಿ ಪತ್ರಕರ್ತರೆದುರು ಪತ್ರಕರ್ತರನ್ನು ಹಾಗೂ ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡರು.

ಶಿವರಾಜ್‌ ಹೀಗೆ ಸಿಟ್ಟಾಗಲು ಕಾರಣ ಏನು? ಕಾಡಿನಿಂದ ಓಡಿಬಂದ ನಾಗಪ್ಪ ಮಾರಡಗಿಗೆ ಶಿವರಾಜ್‌ಕುಮಾರ್‌ ಹಾಗೂ ಅವರ ಸೋದರರು ಥಳಿಸಿದರು ಎಂದು ಪತ್ರಿಕೆಯಾಂದು ಬರೆದಿತ್ತು. ನೇರವಾಗಿ ಆ ಪತ್ರಿಕೆಯ ಹೆಸರು ಹೇಳಿಯೇ ತಮ್ಮ ಕೋಪವನ್ನು ಬಹಿರಂಗಪಡಿಸಿದ ಶಿವರಾಜ್‌ ನಮ್ಮ ಮನೆಯಾಳಗೆ ಅವರನ್ನು ಬಿಡಲಿಲ್ಲ ಎಂದು ಬಾಯಿಗೆ ಬಂದಂತೆ ಬರೆದಿದ್ದಾರೆ. ನಾನು ಯಾವ ಪತ್ರಿಕೆಗೂ ಹೆದರೋಲ್ಲ. ನನಗೆ ಯಾರೂ ಏನೂ ಮಾಡಕ್ಕೆ ಆಗಲ್ಲ ಎಂದು ಕೂಗಾಡಿದರು.

ಪತ್ರಿಕೆಯವರಿಗೆ ನಮ್ಮ ನೋವು ಅರ್ಥ ಆಗಲ್ಲ. ಅವರಿಗೆ ಸುದ್ದಿಯೇ ಮುಖ್ಯ. ಹೀಗೆಲ್ಲಾ ಬರೆದು ನನಗೇನೂ ಅವರು ಮಾಡಕ್ಕಾಗಲ್ಲ. ಅದೇನು ಮಾಡ್ತಾರೋ ನಾನು ನೋಡ್ತೀನಿ ಎಂದು ಸವಾಲು ಹಾಕಿದರು. ನಾನಾಗಲೀ, ನನ್ನ ಸೋದರರಾಗಲೀ ಅಥವಾ ನಮ್ಮ ಕುಟುಂಬದ ಮತ್ಯಾರೇ ಆಗಲೀ ನಾಗಪ್ಪ ಮಾರಡಗಿ ಮೇಲೆ ಕೈ ಮಾಡಿಲ್ಲ. ಹೊಡೆದಿಲ್ಲ, ಬಡಿದಿಲ್ಲ ಎಂದು ವೃತ್ತಿಯ ಮೇಲೆ ಆಣೆ - ಪ್ರಮಾಣ ಮಾಡಿ ಸ್ಪಷ್ಟೀಕರಣವನ್ನೂ ಕೊಟ್ಟರು.

ನಾನು ಹೆದರೋದು ಆ ದೇವರಿಗೆ, ನನ್ನ ತಂದೆ - ತಾಯಿಗಳಿಗೆ. ನಾನು ಯಾವ ಪತ್ರಿಕೆಗೂ ಹೆದರೋಲ್ಲ ಎಂದು ವೀರಾವೇಶದಿಂದ ನುಡಿದರು. ತಾವು ಹಲವು ರೀತಿಯಲ್ಲಿ ಸಮಾಜಸೇವೆ, ಜನಸೇವೆ ಮಾಡುತ್ತಿರುವುದಾಗಿಯೂ ತಿಳಿಸಿದರು. ಡಾ. ರಾಜ್‌ಕುಮಾರ್‌ ಬಿಡುಗಡೆಗೆ 20 ಕೋಟಿ ರುಪಾಯಿ ಹಣ ನೀಡಲಾಗಿದೆ ಎಂಬ ಮಾರನ್‌ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಶಿವರಾಜ್‌ ನಿರಾಕರಿಸಿದರು.

Read more about: ಮೈಸೂರು, mysore
English summary
The in and out of Shivarajkumar the kannada film hero!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada