Kantara-2 Budget: ಬಹುನಿರೀಕ್ಷಿತ ಕಾಂತಾರ-2 ಬಜೆಟ್ ₹125 ಕೋಟಿ? ನವೆಂಬರ್‌ನಲ್ಲಿ ಚಿತ್ರೀಕರಣ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ' ಸಿನಿಮಾ ಕಳೆದ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 10ರಿಂದ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಅಂದಾಜು 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಲೊಕೇಶನ್ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ 'ಕಾಂತಾರ' ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ನಮ್ಮ ಮಣ್ಣಿನ ಕಥೆಯನ್ನು ನಮ್ಮ ಭಾಷೆಯಲ್ಲೇ ಪ್ರಪಂಚಕ್ಕೆ ಹೇಳಬೇಕು ಎಂದು ರಿಷಬ್ ಆಸೆಪಟ್ಟಿದ್ದರು. ಆದರೆ ಸಿನಿಮಾ ರಿಲೀಸ್ ಬೆನ್ನಲ್ಲೇ ಪರಭಾಷೆಗಳಿಂದ ಡಬ್ಬಿಂಗ್‌ಗೆ ಬೇಡಿಕೆ ಬಂದಿತ್ತು. ಹಾಗಾಗಿ ಎರಡೇ ವಾರಗಳಲ್ಲಿ ಚಿತ್ರವನ್ನು ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಎಲ್ಲಾ ಭಾಷೆಗಳಲ್ಲೂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಭರ್ಜರಿ ಕಲೆಕ್ಷನ್ ಮಾಡಿತ್ತು. ವಿದೇಶಗಳಲ್ಲೂ ಪ್ರೇಕ್ಷಕರು ಟಿಕೆಟ್‌ಗಾಗಿ ಸಾಲುಗಟ್ಟಿದ್ದರು.

'ಕಾಂತಾರ' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಅಂಡ್ ಟೀಂ ಚಿತ್ರದ ಹಿಂದಿನ ಕಥೆಯನ್ನು ಹೇಳಲು ಮುಂದಾಗಿದೆ. ಶಿವನ ತಂದೆ ಯಾರು? ಆತನ ಹಿನ್ನಲೆ ಏನು? ಎನ್ನುವ ಕಥೆ ಮುಂದಿನ ಸಿನಿಮಾದಲ್ಲಿ ತೆರೆಗೆ ಬರಲಿದೆ. ಈಗಾಗಲೇ ಸ್ಟ್ರಿಪ್ಟ್ ಕೆಲಸ ಮುಗಿದಿದ್ದು ಚಿತ್ರೀಕರಣ ಶುರುವಾಗಬೇಕಿದೆ. ಹೊಂಬಾಳೆ ಸಂಸ್ಥೆಯೇ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದೆ. ಮೊದಲ ಭಾಗವನ್ನು ಕಡಿಮೆ ಬಜೆಟ್‌ನಲ್ಲಿ ಕನ್ನಡದಲ್ಲಿ ಮಾತ್ರ ಕಟ್ಟಿಕೊಡಲಾಗಿತ್ತು. ಆದರೆ ನಂತರ ಅದು ತಾನಾಗಿಯೇ ಪ್ಯಾನ್ ಇಂಡಿಯಾ ಸಿನಿಮಾ ಸ್ವರೂಪ ಪಡೆಯಿತು.
ಇಂಗ್ಲೀಷ್ ಸೇರಿದಂತೆ ಭಾರತದ ಭಾಷೆಗಳಿಗೆ ಮಾತ್ರವಲ್ಲ ವಿದೇಶದ ಭಾಷೆಗಳಿಗೂ 'ಕಾಂತಾರ' ಡಬ್ ಆಗಿತ್ತು. ಆದರೆ ಪ್ರೀಕ್ವೆಲ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲೇ ನಿರ್ಮಾಣ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ಸಹಜವಾಗಿಯೇ ಬಜೆಟ್ ಹೆಚ್ಚಾಗಲಿದೆ. 125 ಕೋಟಿ ರೂ. ಬಜೆಟ್‌ನಲ್ಲಿ 'ಕಾಂತಾರ- 2' ಸಿನಿಮಾ ಸಿದ್ಧವಾಗಲಿದೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಆದರೆ ಯಾರು ಸುದ್ದಿ ತೇಲಿಬಿಟ್ಟರು ಎನ್ನುವುದು ಮಾತ್ರ ಗೊತ್ತಿಲ್ಲ.
125 ಕೋಟಿ ರೂ. ಬಜೆಟ್, ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭ, 2024ರ ದ್ವಿತಿಯಾರ್ಧದಲ್ಲಿ ಸಿನಿಮಾ ರಿಲೀಸ್ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಆದರೆ ಈ ಬಗ್ಗೆ ಚಿತ್ರತಂಡ ಮಾತ್ರ ಯಾವುದೇ ಮಾಹಿತಿ ನೀಡಿಲ್ಲ. 'ಕಾಂತಾರ- 2' ಶಿವನ ತಂದೆಯ ಕಥೆ ಆಗಿರುವುದರಿಂದ ಅದು ಕೂಡ ಕಾಡುಬೆಟ್ಟದ ಸುತ್ತಾ ಮುತ್ತ ಅಂದರೆ ಕಾಡಿನಲ್ಲೇ ನಡೆಯಲಿದೆ. ಸಣ್ಣ ಪುಟ್ಟ ಸೆಟ್ ಬಿಟ್ಟರೆ ಹೆಚ್ಚಿನ ಖರ್ಚು ಇರುವುದಿಲ್ಲ. ಇನ್ನು ಬಹುತೇಕ ನಮ್ಮ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ.

'ಕಾಂತಾರ' ಸಿನಿಮಾ ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿತ್ತು. ಹಾಗಿರುವಾಗ ಪ್ರೀಕ್ವೆಲ್ ಬಜೆಟ್ 125 ಕೋಟಿ ರೂ. ಅನ್ನುವುದೆಲ್ಲಾ ಸುಳ್ಳು, ಇದು ಬರೀ ವದಂತಿ ಎನ್ನುವುದು ಕೆಲವರ ವಾದ. ಹೊಂಬಾಳೆ ಸಂಸ್ಥೆ 125 ಕೋಟಿ ರೂ. ಅಲ್ಲ, 200 ಕೋಟಿ ರೂ. ಬಂಡವಾಳ ಹೂಡುವುದಕ್ಕೂ ಸಿದ್ಧವಿದೆ. ಆದರೆ ಕಥೆಯಲ್ಲಿ ಧಮ್ ಇರಬೇಕು. ಕಥೆಗೆ ಏನು ಬೇಕೋ ಅದನ್ನು ಮಾತ್ರ ಮಾಡಬೇಕು. ಬರೀ ಹಣ ಸುರಿದ ಮಾತ್ರಕ್ಕೆ ಒಳ್ಳೆ ಸಿನಿಮಾ ಆಗಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
ರಿಷಬ್ ಶೆಟ್ಟಿ ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನೆಲ್ಲಾ ಪಕ್ಕಕ್ಕಿಟ್ಟು 'ಕಾಂತಾರ- 2'ಗಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ ದೈವಗಳ ಕಥೆ ಹೇಳಿದ್ದ ರಿಷಬ್ ಈ ಬಾರಿ ಯಾವ ಕಥೆ ಹೇಳುತ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಇನ್ನು ಈ ಚಿತ್ರಕ್ಕಾಗಿ ರಿಷಬ್ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.


Click it and Unblock the Notifications











