'ಭೋಳಾ ಶಂಕರ್' ಹೀನಾಯ ಸೋಲು: ನಿರ್ಮಾಪಕರ ಮನೆ ಅಡವಿಟ್ಟು ಚಿರುಗೆ ಸಂಭಾವನೆ?
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಮೆಹರ್ ರಮೇಶ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಹೇಳ ಹೆಸರಿಲ್ಲದಂತೆ ನೆಲ ಕಚ್ಚಿದೆ. ಇದರ ಬೆನ್ನಲ್ಲೇ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇನ್ನು ಚಿರಂಜೀವಿ ಸಂಭಾವನೆ ವಿಚಾರದ ಬಗ್ಗೆಯೂ ಭಾರೀ ಚರ್ಚೆ ನಡೀತಿದೆ.
ಎಕೆ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಕ್ರಿಯೇಟಿವ್ ಕಮರ್ಷಿಯಲ್ಸ್ ಬ್ಯಾನರ್‌ನಲ್ಲಿ 'ಭೋಳಾ ಶಂಕರ್' ಸಿನಿಮಾ ನಿರ್ಮಾಣವಾಗಿತ್ತು. ಈ ಹಿಂದೆ ಏಜೆಂಟ್ ಸಿನಿಮಾ ನಿರ್ಮಿಸಿ ಕೈಸುಟ್ಟುಕೊಂಡಿದ್ದ ಅನಿಲ್ ಸುಂಕರ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಆದರೆ ಸಿನಿಮಾ ಸೋಲು ನಿರ್ಮಾಪಕರನ್ನು ಕಂಗೆಡಿಸಿದೆ. ಇದರ ನಡುವೆ ಸಿನಿಮಾ ಸುತ್ತಾ ಇದೀಗ ವಿಚಿತ್ರ ವದಂತಿ ಹರಿದಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಭಾರೀ ಚರ್ಚೆಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆಯಷ್ಟೆ 'ಭೋಳಾ ಶಂಕರ್' ಚಿತ್ರಕ್ಕಾಗಿ ಚಿರಂಜೀವಿ ಸಂಭಾವನೆ ರೂಪದಲ್ಲಿ ಒಂದು ಪೈಸೆ ಕೂಡ ಪಡೆದಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈಗ 65 ಕೋಟಿ ರೂ. ಸಂಭಾವನೆ ಕೊಡಲೇಬೇಕು ಎಂದು ಚಿರು ಪಟ್ಟು ಹಿಡಿದಿದ್ದರು, ನಿರ್ಮಾಪಕರು ಮನೆ, ಆಸ್ತಿ ಅಡವಿಟ್ಟು ಹಣ ಕೊಟ್ಟರು ಎನ್ನುವ ಗುಸುಗುಸು ಕೇಳಿಬರ್ತಿದೆ. ಮೊದಲೇ ಸಿನಿಮಾ ಬ್ಯುಸಿನೆಸ್ ಇಲ್ಲದೇ ಕಂಗೆಟ್ಟಿದ್ದ ಅನಿಲ್ ಸುಂಕರಗೆ ಚಿರು ಸಿಕ್ಕಾಪಟ್ಟೆ ಕಾಟ ಕೊಟ್ಟರು, ಅವರಿಗೆ ಸಂಭಾವನೆ ಕೊಟ್ಟ ಬಳಿಕವೇ ಸಿನಿಮಾ ರಿಲೀಸ್ ಆಯಿತು ಎನ್ನಲಾಗ್ತಿದೆ.
ಸಿನಿಮಾ ರಿಲೀಸ್‌ಗೂ ಮೊದ್ಲೆ ನಿರ್ಮಾಪಕರು ತಾವು ಸಂಕಷ್ಟದಲ್ಲಿದ್ದು ಚಿತ್ರದ ಸ್ಯಾಟಿಲೈಟ್ ರೈಟ್ಸ್‌ನ ಸಂಭಾವನೆಯ ಒಂದು ಭಾಗವಾಗಿ ಇಟ್ಟುಕೊಳ್ಳಲು ನಿರ್ಮಾಪಕರು ಹೇಳಿದ್ದರಂತೆ. ಆದರೆ ಅದಕ್ಕೆ ಚಿರು ಒಪ್ಪಲಿಲ್ಲ. ಫುಲ್ ಸೆಟ್ಲ್‌ಮೆಂಟ್ ಮಾಡಿ ಸಿನಿಮಾ ರಿಲೀಸ್ ಮಾಡಿ ಎಂದು ಪಟ್ಟು ಹಿಡಿದರು, 'ವಾಲ್ತೇರು ವೀರಯ್ಯ'ಗಿಂತ ಕಡಿಮೆ ಮೊತ್ತಕ್ಕೆ ಯಾವುದೇ ಏರಿಯಾ ರೈಟ್ಸ್ ಕೊಡಬೇಡ ಎಂದರು. ಪರಿಣಾಮ ಕೊನೆಯ ಸಿನಿಮಾ ರೈಟ್ಸ್ ಮಾರಾಟವಾಗದೇ ನಿರ್ಮಾಪರೇ ರಿಲೀಸ್ ಮಾಡಿ ನಷ್ಟ ಅನುಭವಿಸಿದರು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಒಂದೇ ಒಂದು ಸಿನಿಮಾ ಸೋಲಿಗೆ ನಿರ್ಮಾಪಕ ಅನಿಲ್ ಸುಂಕರ ಮನೆ ಮಾರಿಕೊಳ್ಳುವಷ್ಟು ನಷ್ಟ ಏನು ಆಗಿಲ್ಲ. ಇದೆಲ್ಲ ಬರೀ ಊಹಾಪೋಹ ಅಷ್ಟೆ ಎನ್ನುವುದ ಕೆಲವರ ಲೆಕ್ಕಾಚಾರ. ಒಟ್ನಲ್ಲಿ ಒಂದು ಸಿನಿಮಾ ಗೆದ್ದರೆ ಎಲ್ಲಾ ತಪ್ಪುಗಳು ಮುಚ್ಚಿ ಹೋಗುತ್ತವೆ. ಆದರೆ ಸೋಲು ಈ ರೀತಿ ನಾನಾ ವದಂತಿಗಳಿಗೆ ದಾರಿ ಮಾಡಿಕೊಡುತ್ತದೆ. 40 ವರ್ಷಗಳಿಂದ ಚಿತ್ರರಂಗದಲ್ಲಿರುವ ಚಿರಂಜೀವಿ ನಿರ್ಮಾಪಕರಿಗೆ ಮೋಸ ಮಾಡಲ್ಲ ಎನ್ನುವುದು ಕೆಲವರ ವಾದ. ಇದೆಲ್ಲಾ ಸುಖಾಸುಮ್ಮಗೆ ಆಂಟಿ ಫ್ಯಾನ್ಸ್ ಹಬ್ಬಿಸುತ್ತಿರುವ ಸುಳ್ಳು ಸುದ್ದಿ ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

'ಭೋಳಾ ಶಂಕರ್' ವಿಚಾರಕ್ಕೆ ಬಂದರೆ ಇದು ತಮಿಳಿನ 'ವೇದಾಳಂ' ಸಿನಿಮಾ ರೀಮೆಕ್. ಅಲ್ಲಿ ಅಜಿತ್ ಮಾಡಿದ್ದ ಪಾತ್ರವನ್ನು ಇಲ್ಲಿ ಚಿರು ಮಾಡಿದ್ದಾರೆ. ಆಕ್ಷನ್, ಕಾಮಿಡಿ ಜೊತೆಗೆ ಎಮೋಷನ್ ಮಿಕ್ಸ್ ಮಾಡಿ ಮೆಹರ್ ರಮೇಶ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಆದರೆ 10 ವರ್ಷಗಳ ಹಿಂದಿನ ಸಿನಿಮಾವನ್ನು ಈಗ ರೀಮೆಕ್ ಚಿತ್ರತಂಡ ಕೈಸುಟ್ಟುಕೊಂಡಿದೆ.
ಇದೆಲ್ಲದರ ನಡುವೆ ಚಿರಂಜೀವಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಾರಿ ರೀಮೆಕ್ ಬಿಟ್ಟು ಹೊಸ ನಿರ್ದೇಶಕನಿಗೆ ಅವಕಾಶ ಕೊಟ್ಟಿದ್ದಾರೆ. ನವೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. 'ಬಿಂಬಸಾರ' ಸಿನಿಮಾ ನಿರ್ದೇಶಕ ವಶಿಷ್ಠ ನಿರ್ದೇಶನದ ಚಿತ್ರದಲ್ಲಿ ಮೆಗಾಸ್ಟಾರ್ ನಟಿಸಲು ಮುಂದಾಗಿದ್ದಾರೆ. ಯುವಿ ಕ್ರಿಯೇಷನ್ಸ್ ಸಂಸ್ಥೆಯ ಈ ಚಿತ್ರಕ್ಕೆ ಎಂ ಎಂ ಕೀರವಾಣಿ ಸಂಗೀತ ಇರಲಿದೆ.


Click it and Unblock the Notifications











