RRR ಚಿತ್ರಕ್ಕೆ ಹೊಸ ಎಂಟ್ರಿ: ಅಜಯ್ ದೇವ್ಗನ್ ಗೆ ಶ್ರಿಯಾ ಸರಣ್ ಜೋಡಿ.?
ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ತೆಲುಗು ಚಿತ್ರ 'ಆರ್.ಆರ್.ಆರ್'. 'ಬಾಹುಬಲಿ' ಬಳಿಕ ರಾಜಮೌಳಿ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಈ 'ಆರ್.ಆರ್.ಆರ್'. ಹೀಗಾಗಿ 'ಆರ್.ಆರ್.ಆರ್' ಬಗ್ಗೆ ಭಾರಿ ನಿರೀಕ್ಷೆ ಹುಟ್ಟುಕೊಂಡಿದೆ.
ಜೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಆರ್.ಆರ್.ಆರ್' ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವ್ಗನ್, ಸಮುದ್ರಖಣಿ, ರಾಹುಲ್ ರಾಮಕೃಷ್ಣ, ರೇ ಸ್ಟೀವೆನ್ಸನ್ ಮುಂತಾದವರ ತಾರಾಬಳಗವಿದೆ. ಈಗ ಇದೇ ಲಿಸ್ಟ್ ಗೆ ಲೇಟೆಸ್ಟ್ ಆಗಿ ಎಂಟ್ರಿಕೊಡುತ್ತಿದ್ದಾರೆ ನಟಿ ಶ್ರಿಯಾ ಸರಣ್. ಹಾಗಂತ ಟಾಲಿವುಡ್ ತುಂಬಾ ಗುಲ್ಲೋ ಗುಲ್ಲು.
'ಆರ್.ಆರ್.ಆರ್' ಚಿತ್ರದಲ್ಲಿ ಅಜಯ್ ದೇವ್ಗನ್ ಗೆ ಜೋಡಿಯಾಗಿ ಶ್ರಿಯಾ ಸರಣ್ ಕಾಣಿಸಿಕೊಳ್ಳುತ್ತಾರಂತೆ ಎಂಬ ಅಂತೆ-ಕಂತೆ ತೆಲುಗು ಸಿನಿ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.

ಈ ಹಿಂದೆ ರಾಜಮೌಳಿ ನಿರ್ದೇಶನದ 'ಛತ್ರಪತಿ' ಚಿತ್ರದಲ್ಲಿ ಶ್ರಿಯಾ ಸರಣ್ ಅಭಿನಯಿಸಿದ್ದರು. ಈಗ 'ಆರ್.ಆರ್.ಆರ್' ಚಿತ್ರಕ್ಕೂ ಶ್ರಿಯಾಗೆ ರಾಜಮೌಳಿ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಶ್ರಿಯಾ ಸರಣ್ ಆಗಲಿ, ರಾಜಮೌಳಿ ಆಗಲಿ ಕನ್ಫರ್ಮ್ ಮಾಡಿಲ್ಲ.
ಅಂದ್ಹಾಗೆ, 'ಆರ್.ಆರ್.ಆರ್' ಚಿತ್ರದಲ್ಲಿ ಬ್ರಿಟೀಷರ ವಿರುದ್ಧ ಸಮರ ಸಾರಿದ್ದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಥೆ ಇದೆ. ಕೋಮರಾಮ್ ಭೀಮ್ ಆಗಿ ಜೂ.ಎನ್.ಟಿ.ಆರ್ ಕಾಣಿಸಿಕೊಂಡರೆ, ಅಲ್ಲುರಿ ಸೀತಾರಾಮರಾಜು ಪಾತ್ರಕ್ಕೆ ರಾಮ್ ಚರಣ್ ತೇಜಾ ಬಣ್ಣ ಹಚ್ಚಿದ್ದಾರೆ. ಡಿ.ವಿ.ವಿ ದಾನಯ್ಯ ನಿರ್ಮಾಣ ಮಾಡುತ್ತಿರುವ 'ಆರ್.ಆರ್.ಆರ್' 400 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿದ್ಧವಾಗುತ್ತಿದೆ. ಎಂ.ಎಂ.ಕೀರವಾಣಿ ಸಂಗೀತ ನೀಡಲಿರುವ ಈ ಚಿತ್ರ ಇದೇ ವರ್ಷದ ಜುಲೈ ತಿಂಗಳಲ್ಲಿ ತೆರೆಗೆ ಬರಲಿದೆ.


Click it and Unblock the Notifications











