'ಪುಷ್ಪ'-2 ಕಾಲ್ತುಳಿತ ಘಟನೆ ಬಳಿಕ ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾದ್ರಾ ಅಲ್ಲು ಅರ್ಜುನ್?
ತೆಲುಗು ನಟ ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದ ಉತ್ತುಂಗಕ್ಕೇರಿದ್ದಾರೆ. 'ಪುಷ್ಪ'-2 ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. ಇನ್ನು ಸಿನಿಮಾ ರಿಲೀಸ್ ಬೆನ್ನಲ್ಲೇ ವಿವಾದ ಉಂಟಾಗಿ ಜೈಲಿಗೂ ಹೋಗಿ ಬರುವಂತಾಯಿತು. ಇದೆಲ್ಲದರ ನಡುವೆ ಬನ್ನಿ ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದಾರಂತೆ.
ಚಿತ್ರರಂಗದಲ್ಲಿ ನಟ- ನಟಿಯರು, ತಂತ್ರಜ್ಞರು ಹೆಸರು ಬದಲಿಸಿಕೊಂಡು ಅದೃಷ್ಟಪರೀಕ್ಷೆ ಮಾಡಿಕೊಳ್ಳುವುದು ಹೊಸದೇನು ಅಲ್ಲ. ಕೆಲವರು ಹೆಸರು ಬದಲಿಸಿಕೊಂಡು ಭರ್ಜರಿ ಸಕ್ಸಸ್ ಕಂಡಿದ್ದಾರೆ. ಇವತ್ತು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ಸಾಕಷ್ಟು ನಟ, ನಟಿಯರು ತಮ್ಮ ಹೆಸರು ಬದಲಿಸಿಕೊಂಡವರೇ. ರಜನಿಕಾಂತ್, ಯಶ್, ಚಿರಂಜೀವಿ, ದರ್ಶನ್, ರಮ್ಯಾ ಹೀಗೆ ಸಾಕಷ್ಟು ಹೆಸರುಗಳು ಸಿಗುತ್ತವೆ.

ಹೇಳಿಕೇಳಿ ಚಿತ್ರರಂಗದಲ್ಲಿ ಕೋಟಿ ಕೋಟಿ ಹಣದ ವ್ಯವಹಾರ ನಡೆಯುತ್ತದೆ. ಎಷ್ಟೇ ಪರಿಶ್ರಮ ಇದ್ದರೂ ಅದೃಷ್ಟ ಕೂಡ ಇರಬೇಕು ಎಂದು ಬಹುತೇಕರು ಭಾವಿಸುತ್ತಾರೆ. ಹಾಗಾಗಿ ಜಾತಕ, ಜೋತಿಷ್ಯ, ಸಂಖ್ಯಾಶಾಸ್ತ್ರವನ್ನು ನಂಬುವವರು ಇದ್ದಾರೆ. ಒಳ್ಳೆ ಸಮಯ, ದಿನಾಂಕ ನೋಡಿ ಸಿನಿಮಾ ಮುಹೂರ್ತ, ರಿಲೀಸ್ ಮಾಡುವ ರೂಢಿ ಇದೆ. ಇದೀಗ ನಟ ಅಲ್ಲು ಅರ್ಜುನ್ ಕೂಡ ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಏಪ್ರಿಲ್ 8ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬ. 'ಪುಷ್ಪ'-2 ಬಳಿಕ ಸ್ಟೈಲಿಶ್ ಸ್ಟಾರ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ಗುಟ್ಟಾಗಿಯೇ ಇದೆ. ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಬನ್ನಿ ನಟಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಹುಟ್ಟುಹಬ್ಬದ ದಿನವೇ ಆ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ. ಆ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಹೆಸರು ಬದಲಾಗಬಹುದು ಎಂದು ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ.

'ಗಂಗೋತ್ರಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅಲ್ಲು ಅರ್ಜುನ್ ಬಳಿಕ 'ಆರ್ಯ' ಚಿತ್ರದಿಂದ ಕ್ರೇಜ್ ಹೆಚ್ಚಿಸಿಕೊಂಡರು. ಸೋದರ ಮಾವ ಚಿರಂಜೀವಿ ಪ್ರಭಾವಳಿಯಿಂದ ಹೊರಬಂದು ತಮ್ಮದೇ ಪರಿಶ್ರಮದಿಂದ ಗೆದ್ದರು. ಮುಖ್ಯವಾಗಿ ಡ್ಯಾನ್ಸ್ ಮೂಲಕ ಮೋಡಿದರು. ಅಲ್ಲು ಅರ್ಜುನ್ ಹೆಸರು ಚೆನ್ನಾಗಿಯೇ ಇದೆ. ಒಳ್ಳೆ ನೇಮು ಫೇಮು ತಂದುಕೊಟ್ಟಿದೆ. ಅದನ್ನು ಯಾಕೆ ಬದಲಿಸುತ್ತಾರೆ ಎಂದು ಕೆಲವರು ಗೊಂದಲಕ್ಕೀಡಾಗಿದ್ದಾರೆ.
'ಪುಷ್ಪ' ಸರಣಿ ಸಿನಿಮಾಗಳಿಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರ ಪಟ್ಟಿಗೆ ಸೇರಿದ್ದಾರೆ. ಅಲ್ಲು ಅರ್ಜುನ್ ಎಂಬ ಹೆಸರು ಇಷ್ಟೆಲ್ಲಾ ತಂದು ಕೊಟ್ಟಿದೆ. ಆದರೂ ಯಾಕೆ ಆ ಹೆಸರನ್ನು ಬದಲಿಸುತ್ತಾರೆ? ಎಂದು ಅನುಮಾನ ಮೂಡುವುದು ಸಹಜ. 'ಪುಷ್ಪ'-2 ಚಿತ್ರ ಗೆದ್ದರೂ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತ ಪ್ರಕರಣ ಅಲ್ಲು ಕುಟುಂಬಕ್ಕೆ ಸಂಕಷ್ಟ ತಂದೊಡ್ಡಿತ್ತು.
ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿ ಅಲ್ಲು ಅರ್ಜುನ್ ಬಂಧನವಾಯಿತು. ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿದರು. ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಯಿತು. 'ಪುಷ್ಪ'-2 ಯಶಸ್ಸನ್ನು ಸೆಲೆಬ್ರೇಟ್ ಮಾಡೋಕೆ ಸಾಧ್ಯವಾಗಲಿಲ್ಲ. ಇನ್ನು ಮೃತ ಮಹಿಳೆಯ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಟ್ಟರು.
ಈ ಪ್ರಕರಣದಿಂದ ಅಲ್ಲು ಅರ್ಜುನ್ ಬೇಸರಗೊಂಡಿದ್ದಾರೆ. ಅದೇ ಕಾರಣಕ್ಕೆ ಜಾತಕ, ಜೋತಿಷ್ಯ, ಸಂಖ್ಯಾಶಾಸ್ತ್ರ ಎಲ್ಲಾ ನೋಡಿ ಇದೀಗ ಹೆಸರು ಬದಲಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹಾಗಂತ ಅಲ್ಲು ಅರ್ಜುನ್ ತಮ್ಮ ಹೆಸರನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುತ್ತಿಲ್ಲ. ಹೆಸರಿನಲ್ಲಿರುವ ಇಂಗ್ಲೀಷ್ ಸ್ಪೆಲ್ಲಿಂಗ್‌ನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗ್ತಿದೆ.
Allu Arjun ಎಂಬ ಹೆಸರಿನ ಪದಗಳಲ್ಲಿ ಒಂದು 'U' ಹಾಗೂ ಒಂದು 'N' ಅಕ್ಷರವನ್ನು ಹೆಚ್ಚಾಗಿ ಸೇರಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರಂತೆ. ಅಥವಾ ಯಾವುದಾದರೂ ಒಂದು ಅಕ್ಷರವನ್ನು ಸೇರಿಸಲು ತೀರ್ಮಾನಿಸಿದ್ದಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕನ್ನಡದಲ್ಲಿ ನಟ ಅಜಯ್ ರಾವ್ ಹೀಗೆ ಪದೇ ಪದೆ ತಮ್ಮ ಹೆಸರಿನಲ್ಲಿರುವ ಅಕ್ಷರಗಳನ್ನು ಬದಲಿಸಿಕೊಂಡು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದರು.


Click it and Unblock the Notifications











