ಶ್ರೀಲೀಲಾ ಡಬಲ್ ಧಮಾಕಾ; ಎರಡೆರಡು ಬಾಲಿವುಡ್ ಚಿತ್ರಗಳಲ್ಲಿ 'ಕಿಸ್' ಬೆಡಗಿ?
ಬೆಂಗಳೂರು ಬೆಡಗಿ ಶ್ರೀಲೀಲಾ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ಶೀಘ್ರದಲ್ಲೇ 'ಕಿಸ್' ಬೆಡಗಿ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ದಿಢೀರ್ ಕ್ರೇಜ್ ಸೃಷ್ಟಿಸಿಕೊಂಡಿದ್ದ ಶ್ರೀ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಈ ನಡುವೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಗುಲ್ಲಾಗಿತ್ತು.
ತಮಿಳು ಕಥೆಗಳನ್ನು ಕೇಳುತ್ತಿದ್ದೇನೆ ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ ಎಂದು ಶ್ರೀಲೀಲಾ ಹೇಳಿದ್ದರು. ಆದರೆ ದಿಢೀರನೆ ಬಾಲಿವುಡ್ ಎಂಟ್ರಿ ನ್ಯೂಸ್ ಬಂದಿದೆ. ಅಮೆರಿಕಾದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಓದಿ ಬೆಳೆದವರು ಶ್ರೀಲೀಲಾ. ಎ. ಪಿ ಅರ್ಜುನ್ ನಿರ್ದೇಶನದ 'ಕಿಸ್' ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು.

'ಭರಾಟೆ' ಹಾಗೂ 'ಬೈಟು ಲವ್' ಸಿನಿಮಾಗಳಲ್ಲಿ ನಟಿಸಿದ ಬಳಿಕ ಟಾಲಿವುಡ್ ಕಡೆ ಮುಖ ಮಾಡಿದ್ದರು. 'ಪೆಳ್ಳಿ ಸಂದಡಿ' ಚಿತ್ರದಲ್ಲಿ ಮೊದಲಿಗೆ ನಟಿಸಿದರು. ಆದರೆ ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ರವಿತೇಜಾ ಜೊತೆ 'ಧಮಾಕ' ಚಿತ್ರದಲ್ಲಿ ಮಿಂಚಿ ಸಕ್ಸಸ್ ಕಂಡರು. ಡ್ಯಾನ್ಸ್‌ನಲ್ಲಿ ಸ್ಟಾರ್ ನಟರಿಗೆ ಪೈಪೋಟಿ ಕೊಟ್ಟು ಗೆದ್ದರು. ಬಳಿಕ ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ ಜೊತೆಗೆ ನಟಿಸೋ ಅವಕಾಶ ಸಿಕ್ಕಿತ್ತು.
'ಭಗವಂತ್ ಕೇಸರಿ' ಚಿತ್ರದಲ್ಲಿ ಬಾಲಯ್ಯ ಮಗಳಾಗಿ ನಟಿಸಿದ್ದರು. 'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಾಯಕಿಯಾಗಿ ಮಿಂಚಿದರು. ಬಳಿಕ 'ಉಸ್ತಾದ್ ಭಗತ್‌ಸಿಂಗ್' ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಯಾದರು. ಕಾರಣಾಂತರಗಳಿಂದ ಈ ಸಿನಿಮಾ ತಡವಾಗುತ್ತಿದೆ. ಇತ್ತೀಚೆಗೆ ಯಾವುದೇ ಹೊಸ ತೆಲುಗು ಸಿನಿಮಾ ಶ್ರೀಲೀಲಾ ಒಪ್ಪಿಕೊಂಡಿಲ್ಲ. ಇಂತಹ ಹೊತ್ತಲ್ಲೇ ಬಾಲಿವುಡ್‌ಗೆ ಹೋಗಲು ಸಜ್ಜಾಗಿದ್ದಾರೆ.
ರಶ್ಮಿಕಾ ಮಂದಣ್ಣ ಕೂಡ ತೆಲುಗು, ತಮಿಳು ಬಳಿಕ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಎರಡೆರಡು ಹಿಂದಿ ಸಿನಿಮಾಗಳಲ್ಲಿ 'ಕಿಸ್' ಬೆಡಗಿ ನಟಿಸೋ ಬಗ್ಗೆ ಚರ್ಚೆ ಶುರುವಾಗಿದೆ. ವರುಣ್ ಧವನ್, ಮೃಣಾಲ್ ಠಾಕೂರ್ ನಟನೆಯ ಹೊಸ ಚಿತ್ರದಲ್ಲಿ ಶ್ರೀ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಡೇವಿಡ್ ಧವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಸೈಫ್ ಅಲಿಖಾನ್ ಪುತ್ರ ಇಬ್ರಾಹಿಂ ಅಲಿಖಾನ್ ನಟನೆಯ ಚೊಚ್ಚಲ ಚಿತ್ರಕ್ಕೂ ಶ್ರೀಲೀಲಾ ನಾಯಕಿ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ 'ಸರ್ಜಮಿನ್' ಎನ್ನುವ ಟೈಟಲ್ ಫಿಕ್ಸ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಧಿಕೃತವಾಗಿ ಎರಡೂ ಸಿನಿಮಾಗಳು ಘೋಷಣೆ ಆಗಿಲ್ಲ. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಚಿಕ್ಕಂದಿನಿಂದಲೂ ಭರತನಾಟ್ಯ ಕಲಿಯುತ್ತಾ ಬಂದ ಶ್ರೀಲೀಲಾ ಬಳಿಕ ಚಿತ್ರರಂಗಕ್ಕೆ ಬಂದಿದ್ದರು.
'ಧಮಾಕ' ಬಳಿಕ ರವಿತೇಜಾ ನಟನೆಯ ಮತ್ತೊಂದು ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಬಾಲಿವುಡ್‌ನಲ್ಲಿ ಇದೀಗ ಶ್ರೀಲೀಲಾ ಕ್ರೇಜ್ ಶುರುವಾಗುವಂತೆ ಕಾಣುತ್ತಿದೆ. 'ಮಿಷನ್ ಮಜ್ನು' ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್ ಪ್ರವೇಶಿಸಿದ್ದರು. 'ಗುಡ್‌ಬೈ' ಚಿತ್ರದಲ್ಲಿ ಅಮಿತಾಬ್ ಮಗಳಾಗಿ ನಟಿಸಿದ್ದರು. ಬಳಿಕ 'ಅನಿಮಲ್' ಚಿತ್ರದಲ್ಲಿ ನಟಿಸಿ ಕಮಾಲ್ ಮಾಡಿದ್ದರು. ರಶ್ಮಿಕಾಗೆ ಸಿಕ್ಕಂತೆ ಶ್ರೀಲೀಲಾಗೂ ಅಲ್ಲಿ ಸಕ್ಸಸ್ ಸಿಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











