ಶ್ರೀಲೀಲಾ ಅವಕಾಶ ಕಿತ್ತುಕೊಂಡ ಮುಗಿಲ್‌ಪೇಟೆ ಚೆಲುವೆ ? ಸೂಪರ್ ಸ್ಟಾರ್ ಚಿತ್ರದಿಂದ ಹೊರ ಬಂದ ಕಿಸ್ ಬೆಡಗಿ ?
ಈ ಬಣ್ಣದ ಲೋಕವೇ ಹಾಗೇ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆದರೆ ಹೀಗೆ ಉದ್ಭವಿಸುವ ಸುದ್ದಿಗಳಲ್ಲಿ ಅಲ್ಲೊಂದು.. ಇಲ್ಲೊಂದು ಸುದ್ದಿಗಳು ಸತ್ಯ ಆಗಿರುತ್ತಾವೆ. ಮಿಕ್ಕಂತೆ ತೊಂಬತ್ತೊಂಬತ್ತು ಸುದ್ದಿಗಳು ಸುಳ್ಳಾಗಿರುತ್ತಾವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಶ್ರೀಲೀಲಾ ಕುರಿತು ಮತ್ತೊಂದು ವಿಚಾರ ಸದ್ಯ ಸದ್ದು ಮಾಡುತ್ತಿದೆ.
ಹೌದು,ಅಸಲಿಗೆ.. ರಶ್ಮಿಕಾ ಅವರಂತೆಯೇ ಸ್ಯಾಂಡಲ್‌ವುಡ್‌ನಿಂದ ಕಾಣೆಯಾದ ಶ್ರೀಲೀಲಾ, ಸದ್ಯ ಪಕ್ಕದ ಆಂಧ್ರದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಕೇವಲ ತೆಲುಗಿನಲ್ಲಿ ಮಾತ್ರ ಅಲ್ಲ. ಶ್ರೀಲೀಲಾ ಇವತ್ತು ಬಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಆದರೆ, ಅವಕಾಶಗಳೇನೋ ಸಿಗುತ್ತಿವೆ ಆದರೂ ಶ್ರೀಲೀಲಾಗೆ ಗೆಲುವು ಮಾತ್ರ ಎಲ್ಲಿಯೂ ಸಿಕ್ತಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಮೂರು ವರ್ಷಗಳಲ್ಲಿ ಶ್ರೀಲೀಲಾ 8 ಸಿನಿಮಾಗಳನ್ನು ಮಾಡಿದ್ದಾರೆ. ಆ ಪೈಕಿ ಗೆದ್ದಿದ್ದ ''ಭಗವಂತ್ ಕೇಸರಿ'' ಮಾತ್ರ.
ಹಾಗಂಥ, ಅವಕಾಶದ ಬರ ಖಂಡಿತ ಶ್ರೀಲೀಲಾಗೆ ಇಲ್ಲ. ಗೆಲುವು ದಕ್ಕದಿದ್ದರೂ ವಿಪುಲವಾದ ಅವಕಾಶಗಳು ಇವರಿಗೆ ಸಿಗುತ್ತಲೇ ಇವೆ. ಅಷ್ಟರ ಮಟ್ಟಿಗೆ ಶ್ರೀಲೀಲಾಗೆ ಅದೃಷ್ಟ ಕೈ ಹಿಡಿದಿದೆ. ಆದರೆ, ಆದಾಗ್ಯೂ ಶ್ರೀಲೀಲಾ ಎಲ್ಲೋ ಒಂದು ಕಡೆ ಎಡವುತ್ತಿದ್ದಾರೆ ಎನ್ನುವ ಚರ್ಚೆ ಸದ್ಯ ಚಿತ್ರರಂಗದಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣಗಳು ಕೂಡ ಇವೆ.
ಒಂದು ಕಡೆ ಫ್ಲಾಪ್ ಮತ್ತೊಂದು ಕಡೆ..?
ಆಗಲೇ ಹೇಳಿದಂತೆ ಶ್ರೀಲೀಲಾ ಅಭಿನಯದ ಸಿನಿಮಾಗಳು ಸಾಲು ಸಾಲಾಗಿ ಮಕಾಡೆ ಮಲಗುತ್ತಿವೆ. ಮತ್ತೊಂದು ಕಡೆ ಕೆಲ ಚಿತ್ರಗಳಿಂದ ಶ್ರೀಲೀಲಾ ಅವರೇ ಹೊರ ಬರುತ್ತಿದ್ದಾರೆ. ಇನ್ನು ಕೆಲ ಸಂದರ್ಭಗಳಲ್ಲಿ ಚಿತ್ರತಂಡದವರೇ ಶ್ರೀಲೀಲಾ ಅವರನ್ನು ಹೊರ ಹಾಕುತ್ತಿದ್ದಾರೆ.
ಇದಕ್ಕೆ ಪುರಾವೆ ಎನ್ನುವಂತೆ ಸೀನಿಯರ್ ಸ್ಟಾರ್ ಇರಲಿ, ಹೊಸ ಹುಡುಗ ಇರಲಿ, ಎಲ್ಲರ ಮೊದಲ ಚಾಯ್ಸ್ ಆಗಿರುವ ಶ್ರೀಲೀಲಾ, ನಾಗಾರ್ಜುನ ಮಗ ಅಖಿಲ್ ಜೊತೆ ''ಲೆನಿನ್'' ಚಿತ್ರದಲ್ಲಿ ತೆರೆ ಹಂಚಿಕೊಳ್ಳಬೇಕಿತ್ತು. ಘೋಷಣೆ ಆಗಿತ್ತು ಕೂಡ. ಆದರೆ. ಏಕಾಏಕಿ ಚಿತ್ರತಂಡ ಇವರ ಜಾಗಕ್ಕೆ ಭಾಗ್ಯಶ್ರೀ ಬೋರ್ಸೆ ಅವರನ್ನು ಕರೆತಂದಿತು.

ಇದರಿಂದ ಶ್ರೀಲೀಲಾ ಅವರ ತಾಯಿಯ ಅತಿಯಾದ ಹಸ್ತಕ್ಷೇಪವೇ, ಶ್ರೀಲೀಲಾ ವೃತ್ತಿ ಬದುಕಿಗೆ ಮುಳ್ಳಾಗುತ್ತಿದೆ ಎಂಬ ಮಾತು ಕೇಳಿ ಬಂತು. ''ಲೆನಿನ್'' ನಿರ್ಮಾಪಕ ಸೂರ್ಯದೇವರ ನಾಗವಂಶಿ ಹಾಗೇನು ಇಲ್ಲ ಎಂದು ತೇಪೆ ಹಚ್ಚುವ ಪ್ರಯತ್ನ ಇತ್ತೀಚೆಗೆ ಮಾಡಿದರಾದರೂ ಈ ಮಾತು ಪಕ್ಕದ ಆಂಧ್ರ ಮತ್ತು ಚೆನ್ನೈನಲ್ಲಿ ಕೇಳಿ ಬರುತ್ತಲೇ ಇದೆ.
ಅಜಿತ್ ಚಿತ್ರದಿಂದಲೂ ಹೊರಕ್ಕೆ ..?
ತೆಲುಗು ಚಿತ್ರರಂಗದಲ್ಲಿ ಸತತ ಸೋಲುಗಳಿಂದ ಹೈರಾಣಾದಂತೆ ಇರುವ ಶ್ರೀಲೀಲಾ ಸದ್ಯ ಟಾಲಿವುಡ್‌ನಿಂದ ಕಾಲಿವುಡ್‌ನತ್ತ ಬಂದಿದ್ದಾರೆ. ಆದರೆ ಇಲ್ಲಿಯೂ ಕೂಡ ಪ್ರಥಮ ಚುಂಬನಂ ದಂತ ಭಗ್ನಂ. ''ಪರಾಶಕ್ತಿ'' ಗೆಲ್ಲಿಲಿಲ್ಲ. ಈ ನಿರಾಶಾದಾಯಕ ಆರಂಭದ ನಡುವೆ ಶ್ರೀಲೀಲಾ ಸದ್ಯ ಧನುಷ್ ಅಭಿನಯದ 55ನೇ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ಇನ್ನು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ತಮಿಳಿನ ತಲಾ ಅಜಿತ್ ಅಭಿನಯದ 64ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಬೇಕಿತ್ತು. ಈ ಸುದ್ದಿಯನ್ನು ಕೇಳಿ ಶ್ರೀಲೀಲಾ ಭಕ್ತಗಣ ಖುಷಿ ಕೂಡ ಪಟ್ಟಿತ್ತು. ಆದರೆ ಈಗ ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದಿಂದ ಕೂಡ ಶ್ರೀಲೀಲಾ ಅವರನ್ನು ಕೈಬಿಡಲಾಗಿದೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ.
ಶ್ರೀಲೀಲಾ ಜಾಗಕ್ಕೆ ಬಂದ ಕಯಾದು ಲೋಹರ್ ?
ಹಬ್ಬಿರುವ ಈ ಸುದ್ದಿಗೆ ಪೂರಕವಾಗಿ ಅಜಿತ್ ಕುಮಾರ್ ಅಭಿನಯದ ಮುಂದಿನ ಚಿತ್ರಕ್ಕೆ ಕಯಾದು ಲೋಹರ್ ಪ್ರವೇಶ ಆಗಿದೆ. ಶ್ರೀಲೀಲಾ ಅವರಿಂದ ತೆರವು ಆದ ಜಾಗಕ್ಕೆ ಕಯಾದು ಬಂದಿದ್ದಾರಾ..? ಅಥವಾ ಕಯಾದು ಅವರದ್ದೇ ಬೇರೆ ಪಾತ್ರವಾ..? ಗೊತ್ತಿಲ್ಲ. ಆದರೆ ''ವಲೈ ಪೆಚ್ಚು'' ವರದಿಯ ಪ್ರಕಾರ ಈ ಚಿತ್ರಕ್ಕೆ ಕಯಾದು ಲೋಹರ್ ಆಯ್ಕೆಯಂತೂ ಆಗಿದ್ದಾರೆ.
ವಿಶೇಷ ಅಂದರೆ ಶ್ರೀಲೀಲಾ ಅವರಂತೆಯೇ ಕಯಾದು ಲೋಹರ್ ವೃತ್ತಿ ಬದುಕಿಗೆ ಅಡಿಪಾಯ ಹಾಕಿದ್ದು ಕೂಡ ಕನ್ನಡ ಚಿತ್ರರಂಗ. ಮನೋರಂಜನ್ ರವಿಚಂದ್ರನ್ ಅಭಿನಯದ ''ಮುಗಿಲ್‌ಪೇಟೆ'' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಕಯಾದು.
ಒಟ್ನಲ್ಲಿ ಸದ್ಯ ಅಜಿತ್ ಕುಮಾರ್ ಚಿತ್ರದಿಂದ ಶ್ರೀಲೀಲಾ ಹೊರ ಬಿದ್ದಿರುವ ಸುದ್ದಿ ಹಬ್ಬಿದೆ. ಶ್ರೀಲೀಲಾ ಅವರನ್ನು ತಂಡದವರೇ ಕೈ ಬಿಟ್ಟರಾ..? ಅಥವಾ ಶ್ರೀಲೀಲಾನೇ ಈ ಆಫರ್ ರಿಜೆಕ್ಟ್ ಮಾಡಿದರಾ..? ಸತ್ಯಾಂಶವೇನು..? ಶೀಘ್ರದಲ್ಲಿಯೇ ಈ ವಿಚಾರದ ಕುರಿತು ಉತ್ತರ ಸಿಗುವ ಸಾಧ್ಯತೆ ಇದೆ.


Click it and Unblock the Notifications