ಫ್ಯಾನ್ಸ್‌ಗೆ ಹಬ್ಬದೂಟ, ಧ್ರುವ ಸರ್ಜಾ 'ಕೆಡಿ'ಯಲ್ಲಿ ಕಿಚ್ಚ ಸುದೀಪ್..?
ಚಿತ್ರವೊಂದು ಬಿಡುಗಡೆಯಾಗುವ ಮುನ್ನವೇ ನಿರೀಕ್ಷೆಗೂ ಮೀರಿ ಮಾರ್ಕೆಟ್ ಮಾಡುವ ಬುದ್ದಿವಂತ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಮೊದಲಿಗರು. ಚಿತ್ರ ಹೇಗಾದರೂ ಇರಲಿ ಆದರೆ ಬಂಡವಾಳ ಹೂಡಿದ ನಿರ್ಮಾಪಕರಿಗಂತೂ ಪ್ರೇಮ್ ಮೋಸವಾಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದು ಪ್ರೇಮ್ ಮೇಲೆ ಸಾಕಷ್ಟು ನಿರ್ಮಾಪಕರಿಗೆ ಇರುವ ನಂಬಿಕೆ ಮತ್ತು ವಿಶ್ವಾಸ. ಇಂಥಾ ಪ್ರೇಮ್ ಸದ್ಯ ಧ್ರುವಾ ಸರ್ಜಾ ಜೊತೆ ಕೆಡಿ ಚಿತ್ರವನ್ನು ಮಾಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆಯನ್ನು ಮಾಡಿಕೊಳ್ತಿದ್ದಾರೆ. ಈಗಾಗಲೇ ಎರಡು ಹಾಡಿನ ಮೂಲಕ ಕನ್ನಡದ ಜೊತೆ ಜೊತೆಯಲ್ಲಿ ಬೇರೆ ಭಾಷೆಯ ಚಿತ್ರ ಪ್ರೇಮಿಗಳ ಗಮನವನ್ನು ಕೂಡ ಸೆಳೆಯುವಲ್ಲಿ ಪ್ರೇಮ್ ಯಶಸ್ವಿಯಾಗಿದ್ದಾರೆ.

ಹೀಗಿರುವಾಗ ಇದೀಗ ಕೆಡಿಯಲ್ಲಿ ಕಿಚ್ಚ ಸುದೀಪ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸದ್ಯ ಬೆಂಗಳೂರಿನ ಚಂದ್ರಾಲೇಔಟ್ ಸುತ್ತ ಮುತ್ತ ಕೇಳಿ ಬರುತ್ತಿದೆ. ಹೌದು, ಬೇರೆ ಭಾಷೆಗಳಿಗೆ ಹೋಲಿಸಿಕೊಂಡರೆ ಕನ್ನಡದಲ್ಲಿ ಒಂದೇ ಚಿತ್ರದಲ್ಲಿ ಸ್ಟಾರ್‌ಗಳು ಕಾಣಿಸುವುದು ಅಪರೂಪ.
ಅಲ್ಲೊಮ್ಮೆ.. ಇಲ್ಲೊಮ್ಮೆ.. ನಮ್ಮ ಸ್ಟಾರ್‌ಗಳು ಜೊತೆಯಾಗಿ ತೆರೆ ಹಂಚಿಕೊಳ್ಳುವ ದೊಡ್ಡ ಮನಸ್ಸು ಮಾಡುತ್ತಾರೆ. ಹಾಗೇ ನೋಡಿದರೆ ಈ ಸಾಲಿಗೆ ಸುದೀಪ್ ಮತ್ತು ಶಿವಣ್ಣ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಶಿವಣ್ಣ ಇಲ್ಲಿಯವರೆಗೆ ಕನ್ನಡದಲ್ಲಿ ಬೇರೆ ಬೇರೆ ಸ್ಟಾರ್‌ಗಳ ಜೊತೆ ಕೆಲಸ ಮಾಡಿದ್ದಾರೆ. ಪ್ರೀತಿಯಿಂದ ಬೇರೆಯವರು ಕರೆದಾಗ ಹೋಗಿ ಅತಿಥಿ ಪಾತ್ರವನ್ನು ಕೂಡ ಮಾಡಿದ್ದಾರೆ.
ಸುದೀಪ್ ಕೂಡ ಇದರಿಂದ ಹೊರತಾಗಿಲ್ಲ. ಆ ಕಾಲದಲ್ಲಿಯೇ ಸಾಹಸಸಿಂಹ ಡಾ. ವಿಷ್ಣವರ್ಧನ್ ಜೊತೆ ತೆರೆ ಹಂಚಿಕೊಂಡಿದ್ದ ಸುದೀಪ್, ಕ್ರೇಜಿ ಸ್ಟಾರ್ ಅವರ ಮೇಲಿನ ಪ್ರೀತಿಗೆ ಅವರ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ಧಾರೆ. ಹಲವು ಹೊಸಬರ ಚಿತ್ರಗಳಲ್ಲಿ ಕೂಡ ಗೆಸ್ಟ್ ರೋಲ್ ಮಾಡಿದ್ದಾರೆ.
ಇನ್ನು, ಶಿವಣ್ಣ ಮತ್ತು ಸುದೀಪ್ ಜೊತೆಯಾಗಿ ಮಾಡಿದ ದಿ ವಿಲನ್ ಹೇಗೆ ಮರೆಯಲು ಸಾಧ್ಯ ? ಹೀಗೆ ಕಾಲ ಕಾಲಕ್ಕೆ ಅನೇಕರ ಜೊತೆ ತೆರೆ ಹಂಚಿಕೊಳ್ಳುತ್ತಾ, ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಾ ಬಂದ ಸುದೀಪ್ ಇದೀಗ ಧ್ರುವಾ ಸರ್ಜಾ ಜೊತೆ ಇದೇ ಮೊದಲ ಬಾರಿ ಕೈ ಜೋಡಿಸಿದ್ದಾರೆ. ಧ್ರುವಾ ಮತ್ತು ಪ್ರೇಮ್ ಮೇಲೀನ ಪ್ರೀತಿಯಿಂದ ಕೆಡಿ ಚಿತ್ರದಲ್ಲಿ ಪ್ರಮುಖ ಮತ್ತು ಮಹತ್ವದ ಪಾತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವುದು ಸದ್ಯದ ಲೇಟೆಸ್ಟ್ ನ್ಯೂಸ್.
ಆ ಪ್ರಕಾರ ನೋಡುವುದಾದರೆ ಸದ್ಯ ಕಿಚ್ಚ ಸುದೀಪ್ ಅವರ ಭಾಗದ ಚಿತ್ರೀಕರಣದ ತಯಾರಿಗಳು ಹೈದರಾಬಾದ್‌ನಲ್ಲಿ ನಡೆಯುತ್ತಿವೆ. ಪ್ರೇಮ್ ಮತ್ತು ತಂಡ ಇತ್ತೀಚೆಗಷ್ಟೇ ಸ್ವಿಜರ್‌ಲ್ಯಾಂಡ್‌ನಲ್ಲಿ ಹಾಡಿನ ಚಿತ್ರೀಕರಣವನ್ನು ಮುಗಿಸಿದ್ದು ಶೀಘ್ರದಲ್ಲಿಯೇ ಸುದೀಪ್ ಅವರ ಭಾಗದ ಚಿತ್ರೀಕರಣವನ್ನು ಪ್ರೇಮ್ ಮಾಡಲಿದ್ದಾರೆ.
ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎನ್ನುವ ಮಾತುಗಳನ್ನು ಸುಳ್ಳಾಗಿಸುತ್ತಾ ಬಂದಿರುವ ಸುದೀಪ್, ಈ ಬಾರಿ ಧ್ರುವ ಸರ್ಜಾ ಜೊತೆ ಮನರಂಜನೆಯ ರಸದೌತಣ ಬಡಿಸಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಚಾಲ್ತಿಯಲ್ಲಿದೆ. ಹಾಗೊಂದು ವೇಳೆ ಸುದೀಪ್ ಮತ್ತು ಧ್ರುವಾ ಒಟ್ಟಿಗೆ ಕಾಣಿಸಿಕೊಂಡಿದ್ದೇ ಆದಲ್ಲಿ ಅಭಿಮಾನಿಗಳಿಗೆ ಅದು ಹಬ್ಬದೂಟವೇ ಸರಿ.


Click it and Unblock the Notifications











