»   » ಕಟಕಟೆಯಲ್ಲಿ ಸಿನಿಮಾ ಸಬ್ಸಿಡಿ !

ಕಟಕಟೆಯಲ್ಲಿ ಸಿನಿಮಾ ಸಬ್ಸಿಡಿ !

Subscribe to Filmibeat Kannada

ಬೆಂಗಳೂರು : 1997-98 ನೇ ಸಾಲಿನ ಆಯ್ದ 20 ಕನ್ನಡ ಸಿನಿಮಾಗಳಿಗೆ ಸಹಾಯಧನ(10 ಲಕ್ಷ ರು.) ಮಂಜೂರು ಮಾಡಲು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಈ ಸಂಬಂಧ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿ, ವಾರ್ತಾ ಇಲಾಖೆಯ ನಿರ್ದೇಶಕರು ಹಾಗೂ ಸಹಾಯಧನಕ್ಕೆ ಚಲನಚಿತ್ರಗಳನ್ನು ಆಯ್ಕೆ ಮಾಡಿದ ಮಂಡಳಿಯ ಅಧ್ಯಕ್ಷ ಬಿ.ವಿ. ಕಾರಂತ ಅವರಿಗೆ ನೋಟೀಸು ಜಾರಿ ಮಾಡಲು ನ್ಯಾಯಮೂರ್ತಿ ಆದೇಶ ನೀಡಿದರು. ಕನ್ನಡ ಸಿನಿಮಾಗಳಿಗೆ ಸಹಾಯಧನ ನೀಡಲು ಸರ್ಕಾರ ಅನುಸರಿಸುತ್ತಿರುವ ಮಾನದಂಡವನ್ನು ಪ್ರಶ್ನಿಸಿ ನಿರ್ಮಾಪಕರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಚ್‌.ಎನ್‌.ತಿಲಹರಿ ಅವರು ಶುಕ್ರವಾರ(ಡಿ.8) ಈ ಆದೇಶ ಹೊರಡಿಸಿದರು.

ಸಬ್ಸಿಡಿಗೆ ತಮ್ಮ ಸಿನಿಮಾವನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗಿದೆ ಎಂದು ಶಂಕರಿ ಪ್ರೊಡಕ್ಷನ್ಸ್‌ನ ಎಸ್‌. ಶಂಕರ್‌ ಅವರು ನ್ಯಾಯಾಲಯದ ಕಟ್ಟೆ ಹತ್ತಿದ್ದರು. ತಮ್ಮ ಚಿತ್ರ ಜನನಿ ಜನ್ಮಭೂಮಿ ಸದಭಿರುಚಿಯ ಚಿತ್ರವಾಗಿದ್ದು, ಕುಟುಂಬದ ಎಲ್ಲರೂ ನೋಡಬಹುದಾದ ಚಿತ್ರವಾಗಿದೆ, ಸಬ್ಸಿಡಿಯನ್ನು ಪಡೆಯಲು ಎಲ್ಲಾ ರೀತಿಯಿಂದಲೂ ಅರ್ಹವಾಗಿದೆ ಎಂದು ಶಂಕರ್‌ ಅರ್ಜಿಯಲ್ಲಿ ವಾದಿಸಿದ್ದರು. ಪ್ರಸ್ತುತ ಸಬ್ಸಿಡಿಗಾಗಿ ಸರ್ಕಾರ ಆಯ್ಕೆ ಮಾಡಿರುವ ಸಿನಿಮಾಗಳ ಪಟ್ಟಿಯನ್ನು ರದ್ದುಗೊಳಿಸುವಂತೆ ಹಾಗೂ ಸಬ್ಸಿಡಿ ನೀಡಲು ನಿರ್ದಿಷ್ಟ ಮಾನದಂಡ ರೂಪಿಸುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದೂ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

1997-98 ನೇ ಸಾಲಿನ ಸಬ್ಸಿಡಿಗಾಗಿ ಸರ್ಕಾರ ಆಯ್ಕೆ ಮಾಡಿದ ಚಲನಚಿತ್ರಗಳ ಪಟ್ಟಿ : ತಾಯಿ ಸಾಹೇಬ, ಅಮೆರಿಕ ಅಮೆರಿಕ, ಓ ಮಲ್ಲಿಗೆ, ಇನ್ನೊಂದು ಮುಖ, ಲಾಲಿ, ಪ್ರೇಮರಾಗ ಹಾಡು ಗೆಳತಿ, ಮಿನುಗು ತಾರೆ, ಎಲ್ಲರಂತಲ್ಲ ನನ್ನ ಗಂಡ, ಹಳ್ಳಿಯಾದರೇನು ಶಿವಾ, ಬಾಳಿನ ದಾರಿ, ಮದುವೆ, ಮುಂಗಾರಿನ ಮಿಂಚು, ಉಲ್ಟಾ ಪಲ್ಟಾ, ತುತ್ತಾ ಮುತ್ತಾ , ಕಲಾವಿದ, ನಾಗಮಂಡಲ, ಕಲ್ಯಾಣಿ, ಕೊಡಗಿನ ಕಾವೇರಿ, ಬೊಲ್ಪಲಂದಾತ್‌(ಕೊಡವ) ಹಾಗೂ ಮರಿಬಾಲೆ (ತುಳು).

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada