»   » ನಿರ್ದೇಶಕರ ಸಂಘದ ಕಟಕಟೆಯಲ್ಲಿ ಸುದೀಪ್‌!

ನಿರ್ದೇಶಕರ ಸಂಘದ ಕಟಕಟೆಯಲ್ಲಿ ಸುದೀಪ್‌!

Posted By:
Subscribe to Filmibeat Kannada

ಬೆದರುಗೊಂಬೆಯಂತೆ ಅಸ್ತಿತ್ವದಲ್ಲಿದ್ದ ನಿರ್ಮಾಪಕರ ಸಂಘ ಇದ್ದಕ್ಕಿದ್ದಂತೆ ಜೀವಗೊಂಡಂತೆ ವರ್ತಿಸುತ್ತಿರುವ ಬೆನ್ನಿನಲ್ಲಿಯೇ ನಿರ್ದೇಶಕರ ಸಂಘ ಚುರುಕಾಗಿದೆ. ನಿರ್ಮಾಪಕರ ಸಂಘದ ಉರಿಗಣ್ಣಿಗೆ ದಿನೇಶ್‌ಬಾಬು ಬಲಿಯಾದರೆ, ನಿರ್ದೇಶಕರ ಸಂಘದ ಕೆಂಗಣ್ಣು ಬಿದ್ದಿರುವುದು ನವನಟ ಸುದೀಪ್‌ ಮೇಲೆ.

‘ಸ್ಪರ್ಶ ’ ಸಿನಿಮಾ ಯಶಸ್ವಿಯಾದರೂ ಅದರ ಕ್ರೆಡಿಟ್ಟೆಲ್ಲ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಪಾಲಾದಾಗ, ಸುದೀಪ್‌ ಕಥೆ ಮುಗಿಯಿತು ಎಂದು ಭಾವಿಸಿದ್ದವರೇ ಹೆಚ್ಚು . ಆ ವೇಳೆಗಾಗಲೇ ಅಪ್ಪ ಸಂಜೀವ್‌ ಸಾಕಷ್ಟು ಹಣ ಕಳೆದುಕೊಂಡಿದ್ದರು. ಮಗನ ಬಗೆಗೆ ವಿಶ್ವಾಸವನ್ನೂ ಕಳೆದುಕೊಂಡಿದ್ದರು. ಇಂಥ ಹೊತ್ತಿನಲ್ಲಿ ಕೈ ಹಿಡಿದದ್ದು ‘ಹುಚ್ಚ !’

‘ಹುಚ್ಚ’ ಸಿನಿಮಾದ ಮೂಲಕ ರಾತ್ರೋರಾತ್ರಿ ಸ್ಯಾಂಡಲ್‌ವುಡ್‌ನಲ್ಲಿ ಕಲಾವಿದನೊಬ್ಬ ಜನಿಸಿದ್ದೀಗ ಇತಿಹಾಸ. ‘ಒಂದು ಸಿನಿಮಾ ಹಿಟ್‌ ಆದಾಗ ಸ್ಟಾರ್‌ ಹುಟ್ಟುತ್ತಾನೆ. ಅದರೆ ಹುಚ್ಚನ ಯಶಸ್ಸಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಲಾವಿದನೊಬ್ಬ ಹುಟ್ಟಿದ್ದಾನೆ’ ಎಂದು ಹಂಸಲೇಖಾ ಸುದೀಪ್‌ ಬೆನ್ನು ತಟ್ಟಿದರೆ, ‘ಸುದೀಪ್‌ಗೆ ಆಸ್ಕರ್‌ ಕೊಡಬೇಕು’ ಎಂದು ವಿಷ್ಣುವರ್ಧನ್‌ ಅಟ್ಟಕ್ಕೇರಿಸಿದ್ದರು.

‘ಹುಚ್ಚ ’ ಸಾಕಷ್ಟು ಹೆಸರು ತಂದರೂ ಸುದೀಪ್‌ ತಲೆ ತಿರುಗಿರಲಿಲ್ಲ . ಹೊಸ ಅವಕಾಶಗಳಿಂದಾಗಿ ಹಣ ಝಣಝಣ ಎಂದಾಗಲೂ ಪಿತ್ತ ಚಿತ್ತಕ್ಕೇರಿರಲಿಲ್ಲ . ಸುದೀಪ್‌ರ ನಟನೆಯಷ್ಟೇ ಅವರ ವಿನಯವೂ ಹೆಸರಾಗಿತ್ತು . ಆದರೆ, ಇತ್ತೀಚೆಗೆ ದಿನಪತ್ರಿಕೆಯಾಂದರ ಜೊತೆ ‘ಹುಚ್ಚ’ನ ಯಶಸ್ಸಿನ ಬಗ್ಗೆ ಮಾತನಾಡುವಾಗ ನಿರ್ದೇಶಕ ಓಂ ಪ್ರಕಾಶ್‌ ಬಗೆಗೆ ಸುದೀಪ್‌ ಲಘುವಾಗಿ ಮಾತನಾಡಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಅಲೆಯಾಗಿತ್ತು . ನಿರ್ದೇಶಕರ ಸಂಘದ ಮಧ್ಯ ಪ್ರವೇಶವಾದದ್ದೇ ಆಗ.

ಓಂ ಪ್ರಕಾಶ್‌ ನೀಡಿದ ದೂರಿನ ಮೇರೆಗೆ ನಿರ್ದೇಶಕರ ಸಂಘ ಸುದೀಪ್‌ ಅವರಿಂದ ಸ್ಪಷ್ಟೀಕರಣ ಕೋರಿತ್ತು . ಸುದೀಪ್‌ ಕ್ಷಮೆ ಕೋರಿದ್ದಾರೆ. ಇದನ್ನೊಂದು ಪ್ರಕರಣವಾಗಿ ಪರಿವರ್ತಿಸದಂತೆ ಮನವಿ ಮಾಡಿದ್ದಾರೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada