ಒಂದೇ ಒಂದು ಹಿಟ್.. ನಿರ್ದೇಶಕನಿಗೆ ಸಿಕ್ತು ತಲೈವಾಗೆ ಆಕ್ಷನ್ ಕಟ್ ಹೇಳುವ ಲಕ್ಕಿ ಛಾನ್ಸ್?
ರಜನಿಕಾಂತ್ ತೆರೆಮೇಲೆ ಮಾತ್ರ ಸೂಪರ್ ಸ್ಟಾರ್ ಅಲ್ಲ. ನಿಜ ಜೀವನದಲ್ಲೂ ಸೂಪರ್ ಸ್ಟಾರ್. ಒಳ್ಳೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ತಲೈವಾ ಸದಾ ಮುಂದೆ ನಿಲ್ಲುತ್ತಾರೆ. ಇತ್ತೀಚೆಗೆ 'ಕಾಂತಾರ' ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದರು. ಸಿನಿಮಾ ಬಗ್ಗೆ ಒಂದೂವರೆ ಗಂಟೆ ಚರ್ಚಿಸಿದ್ದರು.

ರಾಜಕೀಯರಂಗಕ್ಕೆ ಎಂಟ್ರಿ ಕೊಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ರಜನಿಕಾಂತ್ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ತಲೈವಾ ನಟಿಸುತ್ತಿದ್ದಾರೆ. 'ಅಣ್ಣಾತ್ತೆ' ನಂತರ ಜೈಲರ್ ಸಿನಿಮಾ ಚಿತ್ರೀಕರಣದಲ್ಲಿ ರಜನಿಕಾಂತ್ ಬ್ಯುಸಿ ಆಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ ನಿರ್ದೇಶನದ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕೂಡ ನಟಿಸುತ್ತಿದ್ದಾರೆ. ರಮ್ಯಾಕೃಷ್ಣನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪುತ್ರಿ ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದಲ್ಲೂ ರಜನಿಕಾಂತ್ ಮುಖ್ಯವಾದ ಪಾತ್ರದಲ್ಲಿ ನಟಿಸ್ತಿದ್ದಾರೆ.
'ಜೈಲರ್', 'ಲಾಲ್ ಸಲಾಂ' ನಂತರ ರಜನಿಕಾಂತ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ನಡೀತಿದೆ. ಈಗಾಗಲೇ ಲೈಕಾ ಸಂಸ್ಥೆಯ 2 ಸಿನಿಮಾಗಳಿಗೆ ಸೂಪರ್ ಸ್ಟಾರ್ ಕಾಲ್‌ಶೀಟ್ ಕೊಟ್ಟಿದ್ದಾರೆ. 2ನೇ ಚಿತ್ರಕ್ಕೆ ಯುವ ನಿರ್ದೇಶಕ ಪ್ರದೀಪ್ ರಂಗನಾಥನ್ ಆಕ್ಷನ್ ಕಟ್ ಹೇಳುವ ಬಗ್ಗೆ ಗುಸು ಗುಸು ಶುರುವಾಗಿದೆ. ಇತ್ತೀಚೆಗೆ ಬಂದು 'ಲವ್ ಟುಡೇ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ತೆಲುಗಿಗೂ ಡಬ್ ಆಗಿ ಪ್ರೇಕ್ಷಕರ ಮನಗೆದ್ದಿತ್ತು. ಈ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದ ಪ್ರದೀಪ್‌ಗೆ ತಲೈವಾ171 ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಗುತ್ತೆ ಎನ್ನಲಾಗುತ್ತಿದೆ.

ಸದ್ಯ ಕಾಲಿವುಡ್‌ನಲ್ಲಿ ಕೇಳಿಬರುತ್ತಿರುವ ಗುಸುಗುಸು ಪ್ರಕಾರ ರಜನಿಕಾಂತ್‌ಗೆ ನಿರ್ದೇಶ ಸಿಬಿ ಚಕ್ರವರ್ತಿ ಒಂದು ಕಥೆ ಹೇಳಿದ್ದರಂತೆ. ಅದು ಅಷ್ಟಾಗಿ ಇಷ್ಟ ಆಗಿಲ್ಲ ಎನ್ನಲಾಗ್ತಿದೆ. ಇದೇ ವೇಳೆ 'ಲವ್ ಟುಡೇ' ಪ್ರದೀಪ್ ರಂಗನಾಥನ್ ಕೂಡ ತಲೈವಾಗೆ ಒಂದು ಸ್ಟೋರಿ ನರೇಟ್ ಮಾಡಿದ್ದಾರಂತೆ. ಈ ಕಥೆಯನ್ನು ಸೂಪರ್ ಸ್ಟಾರ್ ಓಕೆ ಮಾಡುವ ಸಾಧ್ಯೆತೆ ಇದೆಯಂತೆ. ಅದೇ ನಿಜವಾದರೇ 3ನೇ ಚಿತ್ರದಲ್ಲಿ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳುವ ಅವಕಾಶ ಪ್ರದೀಪ್‌ಗೆ ಸಿಗಲಿದೆ.
29 ವರ್ಷ ವಯಸ್ಸಿನ ಪ್ರದೀಪ್ ರಂಗನಾಥನ್ ಕೆಲ ಶಾರ್ಟ್ ಫಿಲ್ಮ್‌ಗಳನ್ನು ಕಟ್ಟಿಕೊಟ್ಟಿದ್ದರು. 3 ವರ್ಷಗಳ ಹಿಂದೆ 'ಕೋಮಲಿ' ಎನ್ನುವ ವಿಭಿನ್ನ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದರು. ಜೊತೆಗೆ ಪುಟ್ಟ ಪಾತ್ರದಲ್ಲಿ ಮಿಂಚಿದ್ದರು. ಕಳೆದ ತಿಂಗಳು ರಿಲೀಸ್ ಆದ 'ಲವ್ ಟುಡೇ' ಯುವ ನಿರ್ದೇಶಕನಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಓಟಿಟಿಯಲ್ಲೂ ಸಿನಿಮಾ ಸದ್ದು ಮಾಡುತ್ತಿದೆ.


Click it and Unblock the Notifications











