»   » 'ಸೂಪರ್ ಕಿಕ್' ಕೊಡಲಿದ್ದಾರೆ ಉಪೇಂದ್ರ, ರಮೇಶ್!

'ಸೂಪರ್ ಕಿಕ್' ಕೊಡಲಿದ್ದಾರೆ ಉಪೇಂದ್ರ, ರಮೇಶ್!

Posted By:
Subscribe to Filmibeat Kannada

ಸೂಪರ್ ಸ್ಟಾರ್ ಉಪೇಂದ್ರ ಹಾಗೂ ರಮೇಶ್ ಅರವಿಂದ್ ಸಂಗಮದ ಚಿತ್ರವೊಂದು ಬರುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿರುವುದು ಗೊತ್ತೇ ಇದೆ. ಆ ಚಿತ್ರಕ್ಕೆ 'ಸೂಪರ್ ಕಿಕ್' ಎಂದು ಹೆಸರು ಎನ್ನಲಾಗಿದ್ದು ಚಿತ್ರದ ಕಥೆ ಏನಿರಬಹುದೆಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು. ಆದರೆ ಆ ಕುತೂಹಲಕ್ಕೆ ಈಗ ತಣ್ಣೀರು ಬಿದ್ದಿದೆ. ಕಾರಣ ಬರಲಿರುವ ಆ ಚಿತ್ರ, ತೆಲುಗಿನ 'ಕಿಕ್' ಚಿತ್ರದ ರೀಮೇಕ್ ಎನ್ನುವ ಸತ್ಯ ಗೊತ್ತಾಗಿದೆ.

ತೆಲುಗಿನ ಈ 'ಕಿಕ್' ಕನ್ನಡಕ್ಕೆ ಬರಲಿದೆ ಎಂಬ ಸುದ್ದಿ ನಿನ್ನೆಮೊನ್ನೆಯದಲ್ಲ. ಈ ಹಿಂದೆ ಹಲವು ನಿರ್ದೇಶಕರು, ನಿರ್ಮಾಪಕರುಗಳ ಕೈಸೇರಿ ಮತ್ತೆ ಮತ್ತೆ ತಪ್ಪಿಸಿಕೊಂಡು ಇದೀಗ ಕೆ ಮಂಜು ನಿರ್ಮಾಣ, ರಮೇಶ್ ಅರವಿಂದ್ ನಿರ್ದೇಶನ ಹಾಗೂ ಉಪೇಂದ್ರ ನಾಯಕತ್ವದಲ್ಲಿ ಬರಲು ಸಿದ್ಧವಾಗಿದೆ ಈ 'ಕಿಕ್'. ಹೆಸರು ಸ್ವಲ್ಪ ಬದಲಾಗಿ 'ಸೂಪರ್ ಕಿಕ್' ಆಗಿದೆ ಎಂಬುದು ಗಮನದಲ್ಲಿರಲಿ. ಉಪ್ಪಿ ನಾಯಕತ್ವ ಎಂದಮೇಲೆ 'ಸೂಪರ್' ಪದ ಸೇರದಿದ್ದರೆ ಹೇಗೆ?

ಮೊಟ್ಟಮೊದಲು ತೆಲುಗಿನ ಈ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಲು ಮನಸ್ಸು ಮಾಡಿದ್ದು ಎನ್. ಕುಮಾರ್. ತೆಲುಗಿನಿಂದ 'ಕಿಕ್' ರಿಮೇಕ್ ಹಕ್ಕುಗಳನ್ನು ಖರೀದಿಸಿ ಪಿ.ಎನ್. ಸತ್ಯ ನಿರ್ದೇಶನದಲ್ಲಿ ಅದನ್ನು ಕನ್ನಡಕ್ಕೆ ತರಲು ಪ್ರಯತ್ನಿಸಿದ್ದರು. ಆದರೆ ಅವರಿಬ್ಬರ ನಡುವಿದ್ದ ಗೊಂದಲದಿಂದಾಗಿ ಚಿತ್ರ ಬರಲೇ ಇಲ್ಲ. ನಂತರ ಅದನ್ನು ಮಾಡಲು ನಿರ್ಮಾಪಕ ಆರ್. ಶಂಕರ್ ಮುಂದಾಗಿದ್ದರು.

ಎ ಹರ್ಷ ನಿರ್ದೇಶನದಲ್ಲಿ 'ಕಿಕ್' ರೀಮೇಕ್ ಮಾಡಲು ಆರ್ ಶಂಕರ್ ಮುಂದಾದರೂ ಅದ್ಯಾಕೋ ಹರ್ಷ ನಂಬಿ ದುಡ್ಡು ಹಾಕಲು ಹಿಂದೇಟು ಹಾಕಿ ಚಿತ್ರ ನಿರ್ಮಾಣವನ್ನು ಬದಿಗೊತ್ತಿಬಿಟ್ಟರು. ಮತ್ತೆ ಅದು 'ಹಳೆ ಗಂಡನ ಪಾದವೇ ಗತಿ' ಎಂಬಂತೆ ಎನ್ ಕುಮಾರ್ ಕೈ ಸೇರಿತು. ಆದರೆ ನಾಯಕರಾಗಬೇಕಾಗಿದ್ದ ಸುದೀಪ್ ರಿಮೇಕ್ ಬೇಡ ಎಂದು ಆ ವೇಳೆ ಕೈ ಎತ್ತಿಬಿಟ್ಟರು. ಅವರೆಲ್ಲರ ಕೈತಪ್ಪಿಸಿಕೊಂಡ ಬಂದ ಚಿತ್ರವೀಗ ಕೆ ಮಂಜು ನಿರ್ಮಾಣದಲ್ಲಿ ಬರಲು ಸಿದ್ಧವಾಗಿದೆ.

ಇಷ್ಟೆಲ್ಲಾ ಜನರ ಬೇಕು-ಬೇಡಗಳನ್ನು ದಾಟಿ ಮುಂದಕ್ಕೆ ಬಂದ ಈ ಪ್ರಾಜೆಕ್ಟ್ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರಲಿದೆ ಎಂಬ ಸುದ್ದಿ ಬಂದಿತ್ತಾದರೂ ಅದನ್ನು ಇಂದ್ರಜಿತ್ ನಿರಾಕರಿಸಿಬಿಟ್ಟರು. ನಂತರ ಈ ಚಿತ್ರಕ್ಕೆ ನಿರ್ದೇಶನ ಮಾಡಲು ಮುಂದೆ ಬಂದವರೇ ಕನ್ನಡದ ಸಂಭಾವಿತ ನಟ, ನಿರ್ದೇಶಕ ರಮೇಶ್ ಅರವಿಂದ್. ಇವಿಷ್ಟು 'ಕಿಕ್' ಎಂಬ ತೆಲುಗು ಚಿತ್ರ ಕನ್ನಡದಲ್ಲಿ 'ಸೂಪರ್ ಕಿಕ್' ಆಗಲಿರುವ ಹಿಂದಿರುವ ಕಥೆ, ಸಾಕಷ್ಟು ಕೈ ಬದಲಾಗಿ ಉಪೇಂದ್ರ ಹಾಗೂ ರಮೇಶ್ ಕೈಸೇರಿರುವ ಸುದ್ದಿ.

"ಬರಲಿರುವ 'ಸೂಪರ್ ಕಿಕ್', ತೆಲುಗು ಕಿಕ್ ಚಿತ್ರದ ಸ್ಪೂರ್ತಿ ಪಡೆದು ನಿರ್ಮಸಲಿರುವ ಚಿತ್ರ. ಸಂಪೂರ್ಣ ರಿಮೇಕ್ ಅಲ್ಲ. ಸದ್ಯದಲ್ಲೇ ಉಪೇಂದ್ರ ಜೊತೆ ಕುಳಿತು ಚರ್ಚಿಸಿ ಚಿತ್ರಕಥೆ ಹಾಗೂ ನಿರೂಪಣೆ ಬಗ್ಗೆ ಪಕ್ಕಾ ಪ್ಲಾನ್ ಮಾಡಲಿದ್ದೇನೆ. ಒಟ್ಟಿನಲ್ಲಿ ಉಪೇಂದ್ರ ನಾಯಕತ್ವ ಹಾಗೂ ಕೆ ಮಂಜು ನಿರ್ಮಾಣದಲ್ಲಿ ನಾನು ಚಿತ್ರ ನಿರ್ದೆಶಿಸಲಿರುವುದಂತೂ ಖಂಡಿತ" ಎಂದಿದ್ದಾರೆ ನಟ ಹಾಗೂ ನಿರ್ದೇಶಕ ರಮೇಶ್. ರಮೇಶ್, ಉಪೇಂದ್ರ ಜೋಡಿಯ 'ಸೂಪರ್ ಕಿಕ್' ಚಿತ್ರಕ್ಕೆ ನಿರೀಕ್ಷೆಯಂತೂ ಖಂಡಿತ. (ಒನ್ ಇಂಡಿಯಾ ಕನ್ನಡ)

English summary
Kannada Super Star Upendra upcoming project 'Super Kick' is the Remake of Telugu movie 'Kick'. Actor, Director Ramesh Aravind to direct this project under K Manju Production. This is not a new project and so many directors and producers tried to Remake it in Kannada. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada