ಕೆವಿಎನ್ ಬಂಡವಾಳ, ತಮಿಳಿನ ಸ್ಟಾರ್ ನಟನಿಗೆ ನರ್ತನ್ ಆಕ್ಷನ್ ಕಟ್?
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ನಮ್ಮ ಕಲಾವಿದರು, ತಂತ್ರಜ್ಞರು ಪರಭಾಷೆಗೆ ಹೋಗೋದು, ಪರಭಾಷಾ ಕಲಾವಿದರು, ತಂತ್ರಜ್ಞರು ಕನ್ನಡಕ್ಕೆ ಬರೋದು ಹೆಚ್ಚಾಗುತ್ತಿದೆ. ಇಲ್ಲಿ ಹಿಟ್ ಸಿಗುತ್ತಿದ್ದಂತೆ ಕೆಲವರು ಪರಭಾಷೆಗೆ ಹೋಗುತ್ತಿದ್ದಾರೆ ಎನ್ನುವ ಆರೋಪವೂ ಇದೆ.
ಪ್ರಶಾಂತ್ ನೀಲ್, ಎ. ಹರ್ಷ, ನಂದ ಕಿಶೋರ್ ಸೇರಿದಂತೆ ಕೆಲ ನಿರ್ದೇಶಕರು ಬೇರೆ ಭಾಷೆಗಳಲ್ಲಿ ಸಿನಿಮಾ ನಿರ್ದೇಶನ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಂಕಷ್ಟಕ್ಕೆ ಸಿಲುಕಿದೆ. ನಮ್ಮಲ್ಲಿ ಒಳ್ಳೆ ಸಬ್ಜೆಕ್ಟ್ ಇರುವ ದೊಡ್ಡ ದೊಡ್ಡ ಸಿನಿಮಾಗಳು ಬರ್ತಿಲ್ಲ, ಇಂತಹ ಸಮಯದಲ್ಲಿ ನಮ್ಮ ಪ್ರತಿಭೆಗಳು ಬೇರೆ ಕಡೆ ಹೋಗಿ ಯಾಕೆ ಕೆಲಸ ಮಾಡಬೇಕು ಎನ್ನುವ ಪ್ರಶ್ನೆಯನ್ನು ಕೆಲವರು ಮುಂದಿಡುತ್ತಾರೆ.

ನಿರ್ದೇಶಕ ನರ್ತನ್ ತಮಿಳು ನಟ ಸೂರ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈಗಾಗಲೇ ಕನ್ನಡದ ಪ್ರೊಡಕ್ಷನ್ಸ್ ಸಂಸ್ಥೆ ಪರಭಾಷಾ ನಟರನ್ನು ಬಳಸಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಲು ಮುಂದಾಗುದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸೂಪರ್ ಹಿಟ್ ಆಗಿದೆ. ಸರಣಿಯ ಮತ್ತೊಂದು ಸಿನಿಮಾ ಬರಬೇಕಿದೆ. ಪ್ರಶಾಂತ್ ನೀಲ್ ಸೇರಿ ಹಲವು ಕನ್ನಡ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡಿದ್ದರು.
ಜ್ಯೂ. ಎನ್‌ಟಿಆರ್ ಹೀರೊ ಆಗಿ ಪ್ರಶಾಂತ್ ನೀಲ್ ಸಿನಿಮಾ ಘೋಷಿಸಿದ್ದಾರೆ. 'ಸಲಾರ್'-2 ಕೂಡ ಬರಬೇಕಿದೆ. ಎ. ಹರ್ಷ ತೆಲುಗಿನ 'ಭೀಮ' ಚಿತ್ರ ಕಟ್ಟಿಕೊಟ್ಟಿದ್ದರು. ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ. ನಂದ ಕಿಶೋರ್ ಮಲಯಾಳಂ 'ವೃಷಭ' ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಕನ್ನಡದಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕಟ್ಟಿಕೊಟ್ಟಿದ್ದ ಸಚಿನ್ ರವಿ ಬಾಲಿವುಡ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ನರ್ತನ್ 'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಟೀಸರ್ ಬಿಡುಗಡೆ ಆಗಿ ಹಿಟ್ ಆಗಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ರಾಮ್‌ಚರಣ್ ಚಿತ್ರಕ್ಕೂ ನರ್ತನ್ ಆಕ್ಷನ್ ಕಟ್ ಹೇಳಬೇಕಿದೆ. ಕೆವಿಎನ್ ಸಂಸ್ಥೆ ಬಂಡವಾಳ ಹೂಡಲು ಮುಂದಾಗಿದೆ. ಈ ಬಗ್ಗೆ ಮಾತುಕತೆ ಸಹ ನಡೆಯುತ್ತಿದೆ. ಆದರೆ ರಾಮ್‌ಚರಣ್ ಈಗಾಗಲೇ 2 ಸಿನಿಮಾ ಒಪ್ಪಿಕೊಂಡಿದ್ದಾರೆ. ಬುಚ್ಚಿಬಾಬು ಹಾಗೂ ಸುಕುಮಾರ್ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಬೇಕಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳು ಬಹಳ ಸಮಯ ಬೇಡುತ್ತಿವೆ. ರಾಮ್‌ಚರಣ್ 2 ಸಿನಿಮಾ ಮಾಡಿ ಮುಗಿಸಲು ಕಮ್ಮಿ ಅಂದ್ರು 4 ವರ್ಷ ಬೇಕು. ಅಷ್ಟರಲ್ಲಿ ಸೂರ್ಯ ನಟನೆಯ ಚಿತ್ರವನ್ನು ನರ್ತನ್ ಕಟ್ಟಿಕೊಡುತ್ತಾರೆ ಎನ್ನಲಾಗ್ತಿದೆ. ಈ ಹಿಂದೆ ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಧ್ರುವ ಅಥವಾ ಯುವ ನಟಿಸುತ್ತಾರೆ. ನರ್ತನ್ ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಆ ಬಗ್ಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ.
ಇದೀಗ ತಮಿಳು ನಟ ಸೂರ್ಯ ಚಿತ್ರಕ್ಕೆ ನರ್ತನ್ ಸಾರಥ್ಯ ವಹಿಸುತ್ತಾರೆ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮತ್ತೊಮ್ಮೆ ಶಿವಣ್ಣನನ್ನು ಈ ಖಡಕ್ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ರುಕ್ಮಿಣಿ ವಸಂತ್, ಛಾಯಾ ಸಿಂಗ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











