ಮದುವೆ ಆಗುವ ಉದ್ಯಮಿಯನ್ನು ಪರಿಚಯಿಸಿದ ತಮನ್ನಾ: ಈತ ಯಾರು ಗೊತ್ತಾ ?
ಕಳೆದೊಂದು ವಾರದಿಂದ ಮಿಲ್ಕಿ ಬ್ಯೂಟಿ ತಮನ್ನಾ ಮದುವೆ ಬಗ್ಗೆ ಬಾಲಿವುಡ್‌ನಲ್ಲಿ ಗುಸು ಗುಸು ಕೇಳಿ ಬರುತ್ತಿತ್ತು. ಮುಂಬೈ ಮೂಲದ ಉದ್ಯಮಿಯನ್ನು ಹಾಲುಗಲ್ಲದ ಹುಡುಗಿ ಕೈ ಹಿಡಿಯುತ್ತಾರೆ ಎನ್ನಲಾಗುತಿತ್ತು. ಇದೀಗ ತಮನ್ನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಇವರೇ ನೋಡಿ ನನ್ನ ಉದ್ಯಮಿ ಪತಿ ಎಂದು ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ತಮನ್ನಾ ತೆಲುಗು, ತಮಿಳು ಸಿನಿಮಾಗಳಲ್ಲಿ ಸಕ್ಸಸ್ ಕಂಡಿದ್ದರು. ನಂತರ ಬಾಲಿವುಡ್ ಮಂದಿ ಕೂಡ ಅವಕಾಶ ಕೊಟ್ಟರು. ಇತ್ತೀಚೆಗೆ ಮಿಲ್ಕಿ ಬ್ಯೂಟಿ ಯಾವುದೇ ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿಲ್ಲ. ಹೊಸಬರ ಹಾವಳಿ ನಡುವೆ ತಮನ್ನಾ ಕಳೆದು ಹೋಗಿ ಬಿಟ್ಟಿದ್ದಾರೆ. ಆಗಾಗ ಬಿಂದಾಸ್ ಫೋಟೊಶೂಟ್‌ನಿಂದ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೆಲ್ಲರ ನಡುವೆ ತಮನ್ನಾ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಈ ಬಗ್ಗೆ ಪರೋಕ್ಷವಾಗಿ ತಮನ್ನಾ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾ ನಟಿಯರ ಮದುವೆ ಗಾಸಿಪ್ ಹೊಸದೇನು ಅಲ್ಲ. ಪ್ರತಿ ದಿನ ಇಂತಹ ಸುದ್ದಿಗಳು ಕೇಳಿಬರ್ತಾನೇ ಇರುತ್ತದೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾರೆ. ಸ್ಪಷ್ಟನೆ ನೀಡುತ್ತಾರೆ. ತಮನ್ನಾ ತಮಾಷೆಯಾಗಿ ಈ ಬಗ್ಗೆ ಮೌನ ಮುರಿದಿದ್ದಾರೆ.

ತಮನ್ನಾ ಮದುವೆ ಬಗ್ಗೆ ಚಿತ್ರ ವಿಚಿತ್ರ ಗಾಸಿಪ್
ಮಿಲ್ಕಿ ಬ್ಯೂಟಿ ಮದುವೆ ಬಗ್ಗೆ ಗಾಸಿಪ್ ಬಳಹ ಗಂಭೀರವಾಗಿಯೇ ಕೇಳಿಬಂದಿತ್ತು. ಅದಕ್ಕೆ ಏನೇನೋ ರೆಕ್ಕೆ ಪುಕ್ಕ ಕಟ್ಟಿ ತೇಲಿ ಬಿಡಲಾಗಿತ್ತು. ತಮನ್ನಾ ಮದುವೆ ಆಗುವ ಹುಡುಗ ಬಹಳ ಶ್ರೀಮಂತ. ಕೋಟ್ಯಾಂತರ ರೂಪಾಯಿ ಸಂಪತ್ತು ಇದೆ. ಆದರೆ ಆತನಿಗೆ ಸಮಂತಾಗೆ ಇರುವಂತೆ ಅಪರೂಪದ ಆರೋಗ್ಯ ಸಮಸ್ಯೆ ಇದೆ. ಅಂತಹ ಹುಡುಗನನ್ನು ತಮನ್ನಾ ಕೈ ಹಿಡಿಯುತ್ತಿದ್ದಾರೆ ಅಂತೆಲ್ಲಾ ಹೇಳಲಾಗಿತ್ತು. ಕೊನೆಗೂ ಇದಕ್ಕೆಲ್ಲಾ ಸ್ವತಃ ಬಳ್ಳಿಯ ಮಿಂಚಿನಂತ ಚೆಲುವೆ ತೆರೆ ಎಳೆದಿದ್ದಾರೆ.

ತಮನ್ನಾ ಪರಿಚಯಿಸಿದ ಹುಡುಗ ಯಾರು?
ಮದುವೆ ಗಾಸಿಪ್ ಬಗ್ಗೆ ತಮನ್ನಾ ಒಂದು ಫನ್ನಿ ವಿಡಿಯೋ ಮೂಲಕ ತೆರೆಗೆ ಎಳೆದಿದ್ದಾರೆ. "ಇವರೇ ನೋಡಿ ನನ್ನ ಉದ್ಯಮಿ ಪತಿ" ಬರೆದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದು ಯಾರಪ್ಪಾ ಅಂತ ನೋಡಿದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದರು. ಯಾಕಂದರೆ ಆ ವಿಡಿಯೋದಲ್ಲಿ ಇರೋದು ತಮನ್ನಾನೇ. ಹೌದು ತಮನ್ನಾ ಈ ಹಿಂದೆ 'F3' ಸಿನಿಮಾ ಶೂಟಿಂಗ್ ವೇಳೆ ಹುಡುಗನ ವೇಷದಲ್ಲಿ ಒಂದು ವಿಡಿಯೋ ಮಾಡಿದ್ದರು. ಅದನ್ನು ಶೇರ್ ಮಾಡಿ ಮದುವೆ ಗಾಸಿಪ್ ಬಗ್ಗೆ ತೆರೆ ಎಳೆದಿದ್ದಾರೆ. ಆ ಮೂಲಕ ಇದೆಲ್ಲಾ ಬರೀ ಗಾಸಿಪ್ ಅಷ್ಟೇ ಎಂದು ಹೇಳಿದ್ದಾರೆ.

ಕನ್ನಡದ 2 ಐಟಂ ಸಾಂಗ್ಸ್‌ಗೆ ಡ್ಯಾನ್ಸ್
ಟಾಪ್ ಹೀರೊಯಿನ್ ಆಗಿದ್ದರೂ ತಮನ್ನಾ ಕನ್ನಡ ಎರಡು ಐಟಂ ಸಾಂಗ್ಸ್‌ಗೆ ಹೆಜ್ಜೆ ಹಾಕಿದ್ದರು. ಯಶ್ ನಟನೆಯ 'KGF' ಫಸ್ಟ್ ಚಾಪ್ಟರ್‌ನಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು' ಎಂದು ತಮನ್ನಾ ಕುಣಿದಿದ್ದರು. ಇನ್ನು ನಿಖಿಲ್ ಕುಮಾರಸ್ವಾಮಿ ನಟಟನೆಯ 'ಜಾಗ್ವಾರ್' ಚಿತ್ರದಲ್ಲಿ 'ಸಂಪಿಗೆ ಎಣ್ಣೆಲಿ ಮಾಲೀಸು ಮಾಡ್ತೀನಿ' ಎಂದು ವೈಯ್ಯಾರದಿಂದ ಹಾಡಿ ಕುಣಿದಿದ್ದರು. ಮಿಲ್ಕಿ ಬ್ಯೂಟಿಯನ್ನು ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸೋಕೆ ಕರೆತರಲು ಸಾಕಷ್ಟು ಜನ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ.

ಪಂಚಭಾಷೆ ತಾರೆಯಾದ ಮಿಲ್ಕಿಬ್ಯೂಟಿ
ಸದ್ಯ ತಮನ್ನಾ ಕೈಯಲ್ಲಿ 4 ಸಿನಿಮಾಗಳಿವೆ. ಚಿರಂಜೀವಿ ಜೋಡಿಯಾಗಿ 'ಭೋಳಾ ಶಂಕರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ 'ಲವ್ ಮಾಕ್ಟೇಲ್' ತೆಲುಗು ರೀಮೆಕ್‌ನಲ್ಲೂ ನಟಿಸಿದ್ದು, ಈ ಸಿನಿಮಾ ತೆರೆಗೆ ಬರಬೇಕಿದೆ. ಇನ್ನು ಮಲಯಾಳಂ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಆ ಮೂಲಕ ಪಂಚಭಾಷಾ ತಾರೆ ಆಗುತ್ತಿದ್ದಾರೆ. 'ಬೊಲೆ ಚುಡಿಯಾನ್' ಹಿಂದಿ ಸಿನಿಮಾ ಶೂಟಿಂಗ್ ಮುಗಿದಿದೆ.


Click it and Unblock the Notifications











