'ಐರನ್‌ಮ್ಯಾನ್' ಎದುರು 'ರಾಯನ್'; ಹಾಲಿವುಡ್ 'ಅವೆಂಜರ್ಸ್'-5 ಚಿತ್ರದಲ್ಲಿ ಧನುಷ್?
ಭಾರತೀಯ ಕಲಾವಿದರಿಗೆ ಹಾಲಿವುಡ್ ಸಿನಿಮಾಗಳಲ್ಲಿ ನಟಿಸೋ ಕನಸ್ಸು ಇದ್ದೇ ಇರುತ್ತದೆ. ಆದರೆ ಆಗೊಮ್ಮೆ ಈಗೊಮ್ಮೆ ಕೆಲ ನಟ- ನಟಿಯರು ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸಿರುವುದು ಇದೆ. ತೆಲುಗು, ಕನ್ನಡ, ತಮಿಳು ಕಲಾವಿದರು ಹಾಲಿವುಡ್ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.
ಈಗಾಗಲೇ ತಮಿಳು ನಟ ಧನುಷ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಬಾರಿ 'ಅವೆಂಜರ್ಸ್' ಸರಣಿಯ ಮುಂದಿನ ಚಿತ್ರದಲ್ಲಿ ಧನುಷ್ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ರಾಬರ್ಟ್ ಡೌನಿ ಜೂ. ಎದುರು ನಟಿಸೋದು ಅಂದ್ರೆ ಸುಮ್ನೇನಾ? ಎಂದು ಹುಬ್ಬೇರಿಸುತ್ತಿದ್ದಾರೆ.

ಹಾಲಿವುಡ್ ಸೂಪರ್ ಹಿಟ್ 'ಅವೆಂಜರ್ಸ್' ಸರಣಿ ಸಿನಿಮಾಗಳಿಗೆ ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಹಿಂದಿನ ಸಿನಿಮಾಗಳು ನೂರಾರು ಕೋಟಿ ಕೊಳ್ಳೆ ಹೊಡೆದಿವೆ. 'ಅವೆಂಜರ್ಸ್: ಡೂಮ್ಸ್ಡೇ' ಹೆಸರಿನಲ್ಲಿ ಸರಣಿಯ ಮುಂದಿನ ಚಿತ್ರ ಮೂಡಿ ಬರಲಿದೆ. ಮುಂದಿನ ವರ್ಷ ಮೇ 1ಕ್ಕೆ ಸಿನಿಮಾ ರಿಲೀಸ್ ಪ್ರಯತ್ನ ನಡೆಯುತ್ತಿದೆ.
ರುಸ್ಸೋ ಬ್ರದರ್ಸ್ 'ಅವೆಂಜರ್ಸ್: ಡೂಮ್ಸ್ಡೇ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ರುಸ್ಸೋ ಸಹೋದರರು ಇದಕ್ಕೂ ಮುನ್ನ 'ದಿ ಗ್ರೇ ಮ್ಯಾನ್' ಎನ್ನುವ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಆ ಚಿತ್ರದಲ್ಲಿ ನಟ ಧನುಷ್ ಕೂಡ ನಟಿಸಿದ್ದರು. ಅದೇ ಪರಿಚಯದಿಂದ ಅವೆಂಜರ್ಸ್ ಸರಣಿಯ ಹೊಸ ಚಿತ್ರಕ್ಕೂ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಈಗಾಗಲೇ 'ಅವೆಂಜರ್ಸ್: ಡೂಮ್ಸ್ಡೇ' ಚಿತ್ರದಲ್ಲಿ ಧನುಷ್ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಒಂದ್ಕಡೆ ಧನುಷ್ 50ನೇ ಸಿನಿಮಾ 'ರಾಯನ್' ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಅದರ ಬೆನ್ನಲ್ಲೇ ಈ ಹಾಲಿವುಡ್ ನ್ಯೂಸ್ ಭಾರೀ ಸದ್ದು ಮಾಡ್ತಿದೆ.

ಧನುಷ್ 6 ವರ್ಷಗಳ ಹಿಂದೆ 'ದಿ ಎಕ್ಸ್‌ಸ್ಟ್ರಾಡಿನರಿ ಜರ್ನಿ ಆಫ್ ದಿ ಫಕೀರ್' ಎನ್ನುವ ಇಂಗ್ಲೀಷ್ ಚಿತ್ರದಲ್ಲಿ ನಟಿಸಿದ್ದರು. ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ದಿ ಗ್ರೇ ಮ್ಯಾನ್' ಸಿನಿಮಾ ಅವಕಾಶ ಸಿಕ್ಕಿದೆ. ತಮಿಳು ನಟ ಧನುಷ್ ತಮ್ಮದೇ ಸ್ವಂತ ಪರಿಶ್ರಮದಿಂದ ಕಾಲಿವುಡ್‌ನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ಒಂದು ಕಾಲದಲ್ಲಿ ತಮ್ಮ ಲುಕ್ಸ್ ಕಾರಣಕ್ಕೆ ಟ್ರೋಲ್ ಆಗಿದ್ದ ನಟ ಈಗ ಹಾಲಿವುಡ್ ಸಿನಿಮಾಗಳಲ್ಲಿ ನಟಿಸೋ ಮಟ್ಟಕ್ಕೆ ಬೆಳೆದಿದ್ದಾರೆ.
'ಅವೆಂಜರ್ಸ್' ಸರಣಿಯಲ್ಲಿ ಐರೆನ್‌ಮ್ಯಾನ್ ಆಗಿ ನಟಿಸಿದ ರಾಬರ್ಟ್ ಡೌನಿ ಜ್ಯೂ. ಹೊಸ ಚಿತ್ರದಲ್ಲಿ ಡಾಕ್ಟರ್ ಡೂಮ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರೊಟ್ಟಿಗೆ ಧನುಷ್ ಕೂಡ ಬಣ್ಣ ಹಚ್ಚುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು 'ಅವೆಂಜರ್ಸ್' ಸಿನಿಮ್ಯಾಟಿಕ್ ಯೂನಿವರ್ಸ್‌ನ 6ನೇ ಚಿತ್ರ 'ಅವೆಂಜರ್ಸ್: ಸೀಕ್ರೆಟ್ ವಾರ್ಸ್' 2027ರಲ್ಲಿ ತೆರೆಗೆ ಬರಲಿದೆ.
ಧನುಷ್ ನಿರ್ದೇಶಿಸಿ ನಟಿಸಿರುವ 'ರಾಯನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. 10 ದಿನಕ್ಕೆ ವಿಶ್ವದಾದ್ಯಂತ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ತಮ್ಮ ವೃತ್ತಿ ಜೀವನದ ಮೈಲಿಗಲ್ಲು ಚಿತ್ರವನ್ನು ಸ್ವತಃ ಧನುಷ್ ತಿದ್ದಿ ತೀಡಿ ಗೆದ್ದಿದ್ದಾರೆ. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಲಿವುಡ್‌ಗೆ ಗೆಲುವಿನ ಟಾನಿಕ್ ನೀಡಿದೆ.


Click it and Unblock the Notifications











