'ಸಲಾರ್' ಅಖಾಡಕ್ಕೆ ರಾಜಮೌಳಿ ಎಂಟ್ರಿ? ಹೊಂಬಾಳೆ ಐಡಿಯಾ ಸೂಪರ್
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಡಿಸೆಂಬರ್ 22ಕ್ಕೆ ತೆರೆಗೆ ಬರ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೇಲಿನ ನಿರೀಕ್ಷೆ ಎವರೆಸ್ಟ್ ಎತ್ತರಕ್ಕಿದೆ. ಸದ್ಯ ಚಿತ್ರದ ಹಾಡೊಂದು ರಿಲೀಸ್ ಆಗಿ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸಿನಿಮಾ ರಿಲೀಸ್ ಆಗಲಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಸಲಾರ್' ಸಿನಿಮಾ ನಿರ್ಮಿಸಿದೆ. ದೇವ- ವರದರಾಜ್ ಮನ್ನಾರ್ ಸ್ನೇಹದ ಕಥೆಯನ್ನು ಚಿತ್ರದಲ್ಲಿ ನೀಲ್ ಕಟ್ಟಿ ಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಿಟ್ ಆಗಿದ್ದು ಇನ್ನೆರಡು ದಿನಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ. ಕನ್ನಡದ 'ಉಗ್ರಂ' ರೀಮೆಕ್ 'ಸಲಾರ್' ಎನ್ನುವ ಚರ್ಚೆ ಕೂಡ ನಡೀತಿದೆ. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಪ್ರಭಾಸ್- ನೀಲ್ ಕಾಂಬಿನೇಷನ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ರಿಲೀಸ್ ಡೇಟ್ ಹತ್ತಿರವಾದರೂ ಚಿತ್ರದ ಪ್ರಚಾರ ಸರಿಯಾಗಿ ಮಾಡುತ್ತಿಲ್ಲ ಎಂದು ಪ್ರಭಾಸ್ ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹೊಂಬಾಳೆ ಸಂಸ್ಥೆ ದೊಡ್ಟಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡಿ ರಿಲೀಸ್ ಮಾಡುತ್ತದೆ. ಹೊಂಬಾಳೆ ಸಂಸ್ಥೆಯ ಪ್ರಚಾರ ತಂತ್ರಗಳ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲ. ಇದೀಗ 'ಸಲಾರ್' ಚಿತ್ರಕ್ಕೆ ಭರ್ಜರಿ ತಯಾರಿ ನಡೀತಿದೆ. ರಾಜಮೌಳಿಯನ್ನು ಅಖಾಡಕ್ಕೆ ಇಳಿಸಲಾಗುತ್ತಿದೆ.
ನಿರ್ದೇಶಕ ರಾಜಮೌಳಿ ಜೊತೆ ಹೊಂಬಾಳೆ ಸಂಸ್ಥೆಗೆ ಉತ್ತಮ ಒಡನಾಟವಿದೆ. ಈ ಹಿಂದೆ 'KGF' ಚಾಪ್ಟರ್-1 ತೆಲುಗು ಈವೆಂಟ್‌ಗೆ ಜಕ್ಕಣ್ಣ ಮುಖ್ಯ ಅತಿಥಿಯಾಗಿ ಬಂದಿದ್ದರು. ಇದೀಗ 'ಸಲಾರ್' ಚಿತ್ರತಂಡವನ್ನು ಸಂದರ್ಶನ ಮಾಡಲು ಮೌಳಿ ಮುಂದಾಗಿದ್ದಾರೆ. ಹೌದು ನಿರ್ದೇಶಕ ರಾಜಮೌಳಿ 'ಸಲಾರ್' ಪ್ರಭಾಸ್ ಸೇರಿದಂತೆ ಪ್ರಶಾಂತ್ ನೀಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರನ್ನು ಸಂದರ್ಶನ ಮಾಡುತ್ತಾರೆ ಎನ್ನಲಾಗ್ತಿದೆ.

ಪ್ರಭಾಸ್‌ಗೆ ರಾಜಮೌಳಿ ಬಹಳ ಆಪ್ತರು. ಈ ಹಿಂದೆ 'ರಾಧೆಶ್ಯಾಮ್' ಸಿನಿಮಾ ರಿಲೀಸ್ ವೇಳೆ ಮೌಳಿ ಸಂದರ್ಶನ ಮಾಡಿದ್ದರು. ಪ್ರಭಾಸ್ ಭಾಗಿ ಆಗಿ ಸಿನಿಮಾ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದರು. ಇದೀಗ 'ಸಲಾರ್' ಪ್ರಚಾರಕ್ಕಾಗಿ ಇದೇ ತಂತ್ರ ಅನುಸರಿಸಲಾಗುತ್ತಿದೆ. ಸುದ್ದಿವಾಹಿನಿಗಳಿಗೆ ಪ್ರತ್ಯೇಕವಾಗಿ ಸಂದರ್ಶನ ನೀಡುವ ಬದಲು ರಾಜಮೌಳಿ ನಡೆಸುವ ಸಂದರ್ಶನವನ್ನು ಎಲ್ಲಾ ತೆಲುಗು ವಾಹಿನಿಗಳಲ್ಲಿ ಪ್ರಸಾರ ಮಾಡಲು ಚಿತ್ರತಂಡ ತೀರ್ಮಾನಿಸಿದಂತೆ ಕಾಣುತ್ತಿದೆ.
ಸತತ ಸೋಲುಗಳಿಂದ ಪ್ರಭಾಸ್ ಕಂಗೆಟ್ಟಿದ್ದಾರೆ. ಬಾಹುಬಲಿ ಸರಣಿ ಬಳಿಕ 'ಸಾಹೋ', 'ರಾಧೆಶ್ಯಾಮ್', 'ಆದಿಪುರುಷ್' ಸಿನಿಮಾಗಳು ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದವು. ಆದರೆ ಬಳಿಕ ಬಾಕ್ಸಾಫೀಸ್‌ನಲ್ಲಿ ಸಿನಿಮಾಗಳು ಮುಗ್ಗರಿಸಿವೆ. 'ಸಲಾರ್' ಸಿನಿಮಾ ಮೇಲೆ ಯಂಗ್ ರೆಬಲ್ ಸ್ಟಾರ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದಹಾಗೆ ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಗರುಡ ರಾಮ್, ಈಶ್ವರಿ ರಾವ್, ಪ್ರಮೋದ್, ನವೀನ್ ಶಂಕರ್, ದೇವರಾಜ್ ಸೇರಿದಂತೆ ಘಟನಾನುಘಟಿ ಕಲಾವಿದರು ನಟಿಸಿದ್ದಾರೆ. 'KGF' ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
5 ಭಾಷೆಗಳಲ್ಲಿ ವಿಶ್ವದಾದ್ಯಂತ 'ಸಲಾರ್' ಸಿನಿಮಾ ತೆರೆಗಪ್ಪಳಿಸಲಿದೆ. ಅದೇ ದಿನ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗಲಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸುಳಿವು ಸಿಗುತ್ತಿದೆ. 'KGF' ಚಿತ್ರದ ನರಾಚಿ ಲೋಕದಂತೆ 'ಸಲಾರ್' ಚಿತ್ರದಲ್ಲೂ ಖಾನ್ಸರ್ ಎನ್ನುವ ವಿಚಿತ್ರ ಪ್ರಪಂಚವನ್ನು ನೀಲ್ ಸೃಷ್ಟಿಸಿದ್ದಾರೆ. ಅಲ್ಲಿ ದೇವ- ವರದರಾಜ್ ಸ್ನೇಹ ಹಾಗೂ ಶತ್ರುತ್ವದ ಕಥೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











