ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಕೊಡ್ತೀವಿ ಅಂದ್ರು ಚಿರು ಮೀನಾಮೇಷ ಯಾಕೆ?
ಟಾಲಿವುಡ್‌ನಲ್ಲಿ ಡಜನ್‌ಗಟ್ಟಲೆ ಸ್ಟಾರ್ ನಟರಿದ್ದಾರೆ. ಪ್ರಭಾಸ್, ಪವನ್ ಕಲ್ಯಾಣ್, ಮಹೇಶ್ ಬಾಬು ಅಲ್ಲು ಅರ್ಜುನ್, ರಾಮ್ ಚರಣ್, ತಾರಕ್ ಸಿನಿಮಾಗಳು 200, 300 ಕೋಟಿ ರೂ. ಬ್ಯುಸಿನೆಸ್ ಮಾಡ್ತಿವೆ. ಅದಕ್ಕೆ ತಕ್ಕಂತೆ ಹೀರೊಗಳ ಸಂಭಾವನೆ ಹೆಚ್ಚಾಗುತ್ತಿದೆ. ಪ್ಯಾನ್ ಇಂಡಿಯಾ ಕ್ರೇಜ್ ಹೆಚ್ಚಾಗಿ ನಟರ ಡಿಮ್ಯಾಂಡ್ ಜಾಸ್ತಿ ಆಗುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ ಈಗಾಗಲೇ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದ ನಂಬರ್ ವನ್ ಸ್ಟಾರ್ ಆಗಿ ಮೆರೆದವರು ಚಿರು. ಬಳಿಕ ರಾಜಕೀಯ ರಂಗ ಪ್ರವೇಶಿಸಿ 10 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 'ಖೈದಿ ನಂ 150' ಸಿನಿಮಾ ಮೂಲಕ ಮೆಗಾಸ್ಟಾರ್ ಕಂಬ್ಯಾಕ್ ಮಾಡಿದ್ದರು.

ದಶಕದ ಬಳಿಕ ಚಿತ್ರರಂಗಕ್ಕೆ ಬಂದರೂ ಚಿರು ಕ್ರೇಜ್ ಕಮ್ಮಿ ಆಗಲಿಲ್ಲ. ಅದೇ ಡ್ಯಾನ್ಸ್, ಸ್ಟೈಲ್, ಆಕ್ಷನ್‌ನಿಂದ ಯುವ ನಟಿರಿಗೂ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ವಯಸ್ಸು 60 ದಾಟಿದ್ರು ಮೆಗಾಸ್ಟಾರ್ ಚಾರ್ಮ್ ಮಾತ್ರ ಕಮ್ಮಿ ಆಗಿಲ್ಲ. ಇತ್ತೀಚೆಗೆ ಚಿರು ನಟಿಸಿದ ಕೆಲ ಸಿನಿಮಾಗಳು ಸೋತಿವೆ. ಆದರೂ ಡಿಮ್ಯಾಂಡ್ ಮಾತ್ರ ತಗ್ಗಿಲ್ಲ. ಸದ್ಯ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಚಿರುಗೆ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಆಫರ್ ಮಾಡಿದೆ ಎನ್ನುವ ಗುಸುಗುಸು ಶುರುವಾಗಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಈಗಾಗಲೇ ಪ್ರಭಾಸ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತಿದೆ. ಇನ್ನುಳಿದಂತೆ ತೆಲುಗಿನ ಯಾವುದೇ ನಟ 100 ಕೋಟಿ ರೂ. ಸಂಭಾವನೆ ಪಡೆದ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವಯಸ್ಸಲ್ಲಿ ಚಿರುಗೆ ಇಷ್ಟು ದೊಡ್ಡಮಟ್ಟದ ಸಂಭಾವನೆ ಕೊಡುವುದಕ್ಕೆ ಮುಂದಾಗಿರುವುದು ಕೆಲವರ ಅಚ್ಚರಿಗೆ ಕಾರಣವಾಗಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಸಿನಿಮಾ ಮಾಡುತ್ತಿದೆ. ಈಗಾಗಲೇ ಪವನ್ ಕಲ್ಯಾಣ್ ನಟನೆಯ ಬ್ರೋ, ರವಿತೇಜ 'ಧಮಾಕಾ', 'ಈಗಲ್' ಹಾಗೂ 'ಕಾರ್ತಿಕೇಯ'-2 ಸಿನಿಮಾಗಳನ್ನು ಸಂಸ್ಥೆ ನಿರ್ಮಿಸಿ ಗೆದ್ದಿದೆ. ಇದೀಗ ಚಿರಂಜೀವಿ ಜೊತೆ ಕೈ ಜೋಡಿಸಲು ನಿರ್ಮಾಪಕರು ಮುಂದಾಗಿದ್ದು ಈ ಬಗ್ಗೆ ಚರ್ಚೆ ನಡೀತಿದೆ ಎನ್ನಲಾಗ್ತಿದೆ.
ಭಾರತೀಯ ಚಿತ್ರರಂಗದಲ್ಲೇ ಮೊದಲು 1 ಕೋಟಿ ರೂ. ಸಂಭಾವನೆ ಪಡೆದಿದ್ದು ಚಿರಂಜೀವಿ. 1992ರಲ್ಲಿ 'ಆಪತ್ಬಾಂದವುಡು' ಚಿತ್ರಕ್ಕೆ 1.25 ಕೋಟಿ ರೂ. ಚಾರ್ಜ್ ಮಾಡಿದ್ದರು ಎಂದು ಸುದ್ದಿಯಾಗಿತ್ತು. ಆ ಕಾಲಕ್ಕೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಇಷ್ಟು ಸಂಭಾವನೆ ಪಡೆಯುತ್ತಿರಲಿಲ್ಲ ಎನ್ನಲಾಗಿತ್ತು. ಹೀಗೆ 90ರ ದಶಕದಲ್ಲೇ ಮೆಗಾಸ್ಟಾರ್ ಬಲು ದುಬಾರಿ ನಟ ಎನಿಸಿಕೊಂಡಿದ್ದರು. 30 ವರ್ಷಗಳ ಬಳಿಕ ಕೂಡ ಅದೇ ಕ್ರೇಜ್ ಉಳಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.
'ಬ್ರೋ' ಚಿತ್ರಕ್ಕಾಗಿ ಪವನ್ ಕಲ್ಯಾಣ್‌ಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಭಾರೀ ಮೊತ್ತದ ಸಂಭಾವನೆ ನೀಡಿತ್ತು. ಆ ಚಿತ್ರದಲ್ಲಿ ಪವರ್ ಸ್ಟಾರ್ ಅತಿಥಿ ಪಾತ್ರದಲ್ಲಿ ಮಾತ್ರ ನಟಿಸಿದ್ದರು. 22 ದಿನಗಳ ಕಾಲ್ ಶೀಟ್ ಕೊಟ್ಟಿದ್ದರು. ದಿನಕ್ಕೆ 2 ಕೋಟಿ ರೂ. ರೀತಿ ಬರೋಬ್ಬರಿ 45 ಕೋಟಿ ಸಂಭಾವನೆಯನ್ನು ಪವನ್ ತೆಗೆದುಕೊಂಡಿದ್ದರು. ಈ ವಿಚಾರವನ್ನು ಖುದ್ದು ಪವರ್ ಸ್ಟಾರ್ ಹೇಳಿದ್ದರು.
ಸದ್ಯ ಚಿರಂಜೀವಿ ಜೊತೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಸಿನಿಮಾ ಮಾಡಲು ಉತ್ಸುಕವಾಗಿದ್ದು 100 ಕೋಟಿ ರೂ. ಸಂಭಾವನೆ ಆಫರ್ ನೀಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ಇದಕ್ಕೆ ಚಿರು ಇನ್ನು ಒಪ್ಪಿಗೆ ನೀಡಿಲ್ಲ. ಕಾರಣ ಇಷ್ಟು ದೊಡ್ಡ ಸಂಭಾವನೆ ಪಡೆದು ಸಿನಿಮಾ ಮಾಡುವುದು ಸುಲಭ. ಆದರೆ ಆ ಹಣ ವಾಪಸ್ ನಿರ್ಮಾಪಕರಿಗೆ ಬರಬೇಕು. ಅಂದರೆ ಸಿನಿಮಾ ಚೆನ್ನಾಗಿ ಮೂಡಿ ಬರಬೇಕು. ಅದಕ್ಕೆ ಒಳ್ಳೆಯ ಕಥೆ, ನಿರ್ದೇಶಕರು ಬೇಕು. ಕಥೆ, ನಿರ್ದೇಶಕರು ಒಪ್ಪಿಗೆ ಆಗದ ಹೊರತು ಸಿನಿಮಾ ಮಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications










