'ರಾಬಿನ್ ಹುಡ್' ಚಿತ್ರಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪಡೆದ ಸಂಭಾವನೆ ಎಷ್ಟು?
ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಕೂಡ ಕ್ರಿಕೆಟಿಗ ಡೇವಿಡ್ ವಾರ್ನರ್ ಸದ್ದು ಮಾಡುತ್ತಿರುತ್ತಾರೆ. ಸನ್‌ರೈಸಸ್ ಹೈದರಾಬಾದ್ ತಣಡದ ಪರ ಆಡಿ ವಾರ್ನರ್ ತೆಲುಗು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದರು. ಇದೀಗ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.
ನಿತಿನ್ ಹಾಗೂ ಶ್ರೀಲೀಲಾ ನಟನೆಯ 'ರಾಬಿನ್ ಹುಡ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಸಣ್ಣ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಚಿತ್ರದ ಪ್ರಚಾರದಲ್ಲಿ ಕೂಡ ತೊಡಗಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಈ ವೇಳೆ ಹಿರಿಯ ನಟ ರಾಜೇಂದ್ರ ಪ್ರಸಾದ್ ಕುಡಿದು ವಾರ್ನರ್ ಬಗ್ಗೆ ಕೆಟ್ಟ ಪದ ಬಳಸಿ ಮಾತನಾಡಿದ್ದು ವೈರಲ್ ಆಗಿತ್ತು.

'ಪುಷ್ಪ'-2 ಚಿತ್ರದ ಅತಿಥಿ ಪಾತ್ರದಲ್ಲಿ ಡೇವಿಡ್ ವಾರ್ನರ್ ನಟಿಸಿದ್ದಾರೆ ಎಂದು ಗುಲ್ಲಾಗಿತ್ತು. ಆದರೆ ಅದು ನಿಜವಾಗಲಿಲ್ಲ. ವಾರ್ನರ್ ಕ್ರೇಜ್ ನೋಡಿ 'ಪುಷ್ಪ'-2 ಚಿತ್ರ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಇದೀಗ ತಮ್ಮ 'ರಾಬಿನ್ ಹುಡ್' ಚಿತ್ರದಲ್ಲಿ ಅವರಿಗೆ ಅವಕಾಶ ಕೊಟ್ಟಿದೆ. ವಾರ್ನರ್ ನಟಿಸಿರುವುದು ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಚಿತ್ರದಲ್ಲಿ 2 ನಿಮಿಷ 50 ಸೆಕೆಂಡ್‌ಗಳ ಕಾಲ ತೆರೆಮೇಲೆ ಡೆವಿಡ್ ವಾರ್ನರ್ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಈ ಟಾಲಿವುಡ್ ಅಂಗಳದಲ್ಲಿ ಚರ್ಚೆ ಆಗುತ್ತಿದೆ. 'ರಾಬಿನ್ ಹುಡ್' ಚಿತ್ರದಲ್ಲಿ ನಟಿಸೋಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಯಾವುದೇ ಸಂಭಾವನೆಗೆ ಬೇಡಿಕೆ ಇಟ್ಟಿಲ್ಲ, ಆದರೆ ನಿರ್ಮಾಪಕರು 50 ಲಕ್ಷ ರೂ. ಕೊಟ್ಟಿದ್ದಾರೆ ಎನ್ನುವುದು ಒಂದು ವಾದ. ಮತ್ತೊಂದು ವದಂತಿ ಪ್ರಕಾರ ಬರೋಬ್ಬರಿ 2.50 ಕೋಟಿ ರೂ. ಸಂಭಾವನೆಯಾಗಿ ಸಿಕ್ಕಿದೆ ಎನ್ನಲಾಗ್ತಿದೆ.

2 ದಿನಗಳ ಕಾಲ ಡೇವಿಡ್ ವಾರ್ನರ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. 2 ನಿಮಿಷ 50 ಸೆಕೆಂಡ್‌ಗಳ ಸನ್ನಿವೇಶಕ್ಕಾಗಿ 2.50 ಕೋಟಿ ರೂ. ಚಾರ್ಜ್ ಮಾಡಿದ್ದಾರೆ, ಅಂದರೆ ದಿನವೊಂದಕ್ಕೆ 1.25 ಕೋಟಿ ರೂ. ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ದಿನವೊಂದಕ್ಕೆ 1.25 ಕೋಟಿ ರೂ. ಎಂದು ಕೇಳಿ ಕೆಲವರು ಹುಬ್ಬೇರಿಸಿದ್ದಾರೆ.
ಪತ್ನಿ ಹಾಗೂ ಮಕ್ಕಳ ಜೊತೆ ಡೇವಿಡ್ ವಾರ್ನರ್ ಟಿಕ್‌ಟಾಕ್, ಡಬ್‌ಸ್ಮ್ಯಾಶ್ ವೀಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದರು. ತೆಲುಗು ಸಿನಿಮಾಗಳ ಡೈಲಾಗ್‌ಗಳನ್ನು ಕೂಡ ಡಬ್ಮ್ಯಾಶ್ ಮಾಡಿ ಸಿನಿರಸಿಕರ ಮನಗೆದ್ದಿದ್ದರು. ಹಾಗಾಗಿ ಕೆಲ ಅಭಿಮಾನಿಗಳು ನೀವು ಸಿನಿಮಾಗಳಲ್ಲಿ ನಟಿಸಬೇಕು ಎಂದು ಮನವಿ ಮಾಡುತ್ತಿದ್ದರು. ರಾಜಮೌಳಿ ಜೊತೆ ಒಂದು ಜಾಹೀರಾತಿನಲ್ಲಿ ಕೂಡ ವಾರ್ನರ್ ಕಾಣಿಸಿಕೊಂಡಿದ್ದರು.
ವೆಂಕಿ ಕುಡಮುಲ 'ರಾಬಿನ್ ಹುಡ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದಕ್ಕೂ ಮುನ್ನ ನಿತಿಮ್ ಹಾಗೂ ರಶ್ಮಿಕಾ ಕಾಂಬಿನೇಷನ್‌ನಲ್ಲಿ ಅವರು 'ಭೀಷ್ಮ' ಎಂಬ ಸಿನಿಮಾ ಮಾಡಿ ಗೆದ್ದಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಘೋಷಣೆ ಆಗಿತ್ತು. ಆದರೆ ಬಳಿಕ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದರು. ಆ ಅವಕಾಶ ಶ್ರೀಲೀಲಾ ಪಾಲಾಗಿತ್ತು. ಇದೇ ಶುಕ್ರವಾರ(ಮಾರ್ಚ್ 28) ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
ಟೈಟಲ್ ಹೇಳುವಂತೆ ಇದೊಂದು ದರೋಡೆಗೆ ಸಂಬಂಧಿಸಿದ ಸಿನಿಮಾ. ಶ್ರೀಮಂತರಿಂದ ದೋಚಿ ಬಡವರಿಗೆ ಸಹಾಯ ಮಾಡುವ ನಾಯಕನ ಕಥೆ. ಜಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಸ್ಪೆಷಲ್ ಸಾಂಗ್ ಸಖತ್ ವೈರಲ್ ಆಗುತ್ತಿದೆ.
ವೆನ್ನೆಲ ಕಿಶೋರ್, ರಾಜೇಂದ್ರ ಪ್ರಸಾದ್, ದೇವದತ್ತ ನಾಗೆ ಸೇರಿ ದೊಡ್ಡ ತಾರಾಗಣ 'ರಾಬಿನ್ ಹುಡ್' ಚಿತ್ರದಲ್ಲಿದೆ. ಇನ್ನು ತಮ್ಮನ್ನು ನಟ ರಾಜೇಂದ್ರ ಪ್ರಸಾದ್ ಕೆಟ್ಟದಾಗಿ ಗೇಲಿ ಮಾಡಿದ ಬಗ್ಗೆ ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲ ಸಹಜ ಬಿಡಿ, ನಾವು ಕ್ರಿಕೆಟ್ ಆಡುವಾಗ ಸ್ಲೆಡ್ಜಿಂಗ್ ವೇಳೆ ಇದಕ್ಕಿಂತ ಕೆಟ್ಟದಾಗಿ ಮಾತನಾಡುತ್ತೇವೆ, ಇದು ಓಕೆ ಎಂದು ಹೇಳಿದ್ದಾಗಿ ನಿರ್ದೇಶಕರು ವಿವರಿಸಿದ್ದಾರೆ. ಇನ್ನು ತಮ್ಮ ತಪ್ಪಿಗೆ ನಟ ರಾಜೇಂದ್ರ ಪ್ರಸಾದ್ ಕೂಡ ಕ್ಷಮೆ ಕೇಳಿದ್ದಾರೆ.


Click it and Unblock the Notifications











