SSMB29: ಮೌಳಿ-ಮಹೇಶ್ ಚಿತ್ರಕ್ಕೆ ಮುಹೂರ್ತ ಫಿಕ್ಸ್; ವಿಲನ್ ಆಗಿ ಮಲಯಾಳಂ ನಟ ಆಯ್ಕೆ?
ಪ್ಯಾನ್ ಇಂಡಿಯಾ, ಮಲ್ಟಿಸ್ಟಾರರ್ ಸಿನಿಮಾಗಳ ಆರ್ಭಟ ಹೆಚ್ಚಾಗುತ್ತಿದೆ. ನೂರಾರು ಕೋಟಿ ಬಜೆಟ್, ದೊಡ್ಡ ಕ್ಯಾನ್ವಾಸ್, ಸೂಪರ್ ಸ್ಟಾರ್ಸ್ ಒಟ್ಟಿಗೆ ಸೇರಿಸಿ ಮಾಡುವ ಟ್ರೆಂಡ್ ನಡೀತಿದೆ. ಇದಕ್ಕೆಲ್ಲಾ ದೊಡ್ಡಮಟ್ಟದಲ್ಲಿ ಬುನಾದಿ ಹಾಕಿದ ರಾಜಮೌಳಿ ಮುಂದಿನ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಜಕ್ಕಣ್ಣ ಕ್ರೇಜಿ ಪ್ರಾಜೆಕ್ಟ್ ಪ್ಲ್ಯಾನ್ ಮಾಡ್ತಿದ್ದಾರೆ. ಈ ಬಾರಿ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಕಟ್ಟಿಕೊಡುವ ಕಸರತ್ತು ಶುರುವಾಗಿದೆ. ಬಜೆಟ್ 500 ಕೋಟಿ ರೂ. ದಾಟಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಸದ್ಯಕ್ಕೆ 'SSMB29' ಟೈಟಲ್‌ನಲ್ಲಿ ಸಿನಿಮಾ ಕೆಲಸಗಳನ್ನು ನಡೆಯುತ್ತಿದೆ. ಶೀಘ್ರದಲ್ಲೇ ಸಿನಿಮಾ ಶುರುವಾಗುತ್ತದೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ.

'ಬಾಹುಬಲಿ' ಸರಣಿ ಬಳಿಕ ರಾಜಮೌಳಿ 'RRR' ಸಿನಿಮಾ ಕಟ್ಟಿಕೊಟ್ಟಿದ್ದರು. ಮೆಗಾ ಫ್ಯಾಮಿಲಿ ಹಾಗೂ ನಂದಮೂರಿ ಫ್ಯಾಮಿಲಿ ಹೀರೊಗಳನ್ನು ಒಟ್ಟಿಗೆ ಸೇರಿಸಿ ಗೆದ್ದಿದ್ದರು. ಆ ಬಳಿಕ 2 ವರ್ಷವಾದ್ರು ಹೊಸ ಸಿನಿಮಾ ಶುರುವಾಗಿಲ್ಲ. ಅಭಿಮಾನಿಗಳು ಮಾತ್ರ ಕಾದು ಕಾದು ಸುಮ್ಮನಾಗಿದ್ದಾರೆ. ಆದರೆ ಚಿತ್ರದ ಬಗ್ಗೆ ಆಗ್ಗಿಂಗಾಗ್ಗೆ ಅಂತೆಕಂತೆ ಸುದ್ದಿಗಳು ಹರಿದಾಡುತ್ತಲೇ ಇದೆ. ಆಗಸ್ಟ್‌ನಲ್ಲಿ ಸಿನಿಮಾ ಶುರು ಎಂದು ಮಹೇಶ್ ಬಾಬು ಚಿಕ್ಕಪ್ಪ ಆದಿಶೇಷಗಿರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
'SSMB29' ಚಿತ್ರದಲ್ಲಿ ಯಾರೆಲ್ಲಾ ನಟಿಸಬಹುದು ಎನ್ನುವ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ಕಳೆದ ವಾರವಷ್ಟೇ ಸ್ಕ್ರಿಪ್ಟ್ ಫೈನಲ್ ಮಾಡಿದೆಯಂತೆ ಚಿತ್ರತಂಡ. ಇನ್ನು ಈಗಾಗಲೇ ಚಿತ್ರಕ್ಕಾಗಿ ಬಾಲಿವುಡ್, ಹಾಲಿವುಡ್ ಕಲಾವಿದರ ಹೆಸರುಗಳು ಕೇಳಿಬಂದಿತ್ತು. ಇದೀಗ ಮಲಯಾಳಂ ನಟನ ಹೆಸರು ಚಾಲ್ತಿಗೆ ಬಂದಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅಕ್ಕಪಕ್ಕದ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರನ್ನು ಒಟ್ಟಿಗೆ ಸೇರಿಸುವ ಪ್ರಯತ್ ನಡೀತಿದೆ. ಇದರ ಹಿಂದೆ ಬಾಕ್ಸಾಫೀಸ್ ಲೆಕ್ಕಾಚಾರವೂ ಇದೆ.

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ 'SSMB29' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲಿ ಪೃಥ್ವಿರಾಜ್ ಅಬ್ಬರಿಸಿದ್ದರು. ಬಳಿಕ 'ಗೋಟ್ ಲೈಫ್' ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಮಹೇಶ್ ಬಾಬು ಎದುರು ಪೃಥ್ವಿರಾಜ್ ನಟಿಸೋ ಬಗ್ಗೆ ಮಾತುಕತೆ ನಡೆಯುತ್ತಿದೆಯಂತೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ಪೃಥ್ವಿರಾಜ್ ಮಾತ್ರವಲ್ಲ ತಮಿಳು, ಹಿಂದಿ, ಕನ್ನಡದ ಸ್ಟಾರ್ ನಟರು ಕೂಡ ಮೌಳಿ ನಿರ್ದೇಶನದ ಈ ಚಿತ್ರದಲ್ಲಿ ನಟಿಸೋ ಸಾಧ್ಯತೆಯಿದೆ. ಕಥೆಗೆ ತಕ್ಕ ಕಲಾವಿದರನ್ನು ಜಕ್ಕಣ್ಣ ಬೇರೆ ಬೇರೆ ಇಂಡಸ್ಟ್ರಿಗಳಿಂದ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಮೊದಲಿನಿಂದಲೂ ಮೌಳಿ ಕಲಾವಿದರ ಆಯ್ಕೆಯಲ್ಲಿ ರಾಜಿ ಮಾಡಿಕೊಂಡವರಲ್ಲ. ತಮ್ಮ ಕಥೆಗೆ ಯಾರು ಬೇಕೋ ಅವರನ್ನೇ ಆರಿಸಿಕೊಳ್ಳುತ್ತಾ ಬರ್ತಿದ್ದಾರೆ. 'ಈಗ' ಚಿತ್ರಕ್ಕೆ ಸುದೀಪ್ ಅವರನ್ನು ಆಯ್ಕೆ ಮಾಡಿಕೊಂಡಾಗ ಕೆಲ ತೆಲುಗು ಕಲಾವಿದರು ಅಸೂಯೆಪಟ್ಟಿದ್ದು ಉಂಟು.
ಸುದೀಪ್ ಬಿಟ್ಟರೆ ಆ ಪಾತ್ರವನ್ನು ಮತ್ಯಾರಿಂದಲೂ ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಖುದ್ದು ಮೌಳಿ ಬಹಿರಂಗವಾಗಿ ಹೇಳಿದ್ದರು. 'RRR' ಚಿತ್ರದಲ್ಲಿ ಸೀತಾರಾಮರಾಜು ಪಾತ್ರಕ್ಕೆ ಮಹೇಶ್ ಬಾಬು ಸೂಕ್ತ ಎಂದು ಕೆಲವರು ಹೇಳಿದ್ದರು. ಆದರೆ ಸಿನಿಮಾ ಬಿಡುಗಡೆ ಬಳಿಕ ತಮ್ಮ ಆಯ್ಕೆ ಎಷ್ಟು ಸರಿಯಾಗಿದೆ ಎನ್ನುವುದನ್ನು ಮೌಳಿ ತೆರೆಮೇಲೆ ತೋರಿಸಿದ್ದರು.
'SSMB29' ಚಿತ್ರಕ್ಕೆ 'ಚಕ್ರವರ್ತಿ' ಅಥವಾ 'ಮಹಾರಾಜ' ಟೈಟಲ್ ಪರಿಶೀಲನೆಯಲ್ಲಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆಗಸ್ಟ್‌ನಲ್ಲಿ ಮೌಳಿ ಸುದ್ದಿಗೋಷ್ಠಿ ನಡೆಸಿ 'SSMB29' ಬಗ್ಗೆ ಮಾಹಿತಿ ಕೊಟ್ಟು ಸಿನಿಮಾ ಆರಂಭಿಸಲುವ ಸಾಧ್ಯತೆಯಿದೆ.


Click it and Unblock the Notifications











