D56 Title : ಫೆ.16ಕ್ಕೆ ಸಿನಿಮಾ ಟೈಟಲ್ ಅನೌನ್ಸ್? ಇವೆರಡರಲ್ಲಿ ಒಂದು ಪಕ್ಕಾ ಆಗುತ್ತಾ?
ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ 2ನೇ ಸಿನಿಮಾ ನಿರ್ಮಾಣ ಆಗುತ್ತಿದೆ. ಸದ್ಯ 'D56' ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಮುಹೂರ್ತ ನೆರವೇರಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆ ಇದೆ.
ಈಗಾಗಲೇ 2 ಟೈಟಲ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿವೆ. ಇವೆರಡರಲ್ಲಿ ಒಂದು ಸಿನಿಮಾ ಟೈಟಲ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ 'D56' ಟೀಂ ಇಂದ ಯಾವ ರೀತಿಯ ಅಪ್‌ಡೇಟ್ ಸಿಗುತ್ತಾ? ಎನ್ನುವ ಚರ್ಚೆ ಕೂಡ ಜೋರಾಗಿದೆ. ಬರೀ ಟೈಟಲ್ ಜೊತೆ ಪೋಸ್ಟರ್ ರಿಲೀಸ್ ಆಗುತ್ತಾ? ಇಲ್ಲ ಸಣ್ಣ ಟೀಸರ್ ಝಲಕ್ ಬರುತ್ತಾ? ಎನ್ನುವ ಊಹಾಪೋಹ ಶುರುವಾಗಿದೆ.
ಒಟ್ನಲ್ಲಿ ಫೆಬ್ರವರಿ 16ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನೋತ್ಸವದ ಸಂಭ್ರಮದಲ್ಲಿ ತರುಣ್ ಸುಧೀರ್ ಭರ್ಜರಿ ಗಿಫ್ಟ್ ಅಂತೂ ಕೊಡಲಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'D56' ಸಿನಿಮಾ ನಿರ್ಮಾಣ ಆಗುತ್ತಿದೆ. ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ.

ಈ 2 ಟೈಟಲ್‌ಗಳು ವೈರಲ್
ಹೌದು 'D56' ಚಿತ್ರಕ್ಕೆ ಚಿತ್ರತಂಡ 'ಚೌಡಯ್ಯ' ಅಥವಾ 'ಕಾಟೇರಾ' ಎನ್ನುವ ಟೈಟಲ್‌ಗಳ ಪರಿಶೀಲನೆಯಲ್ಲಿದೆ ಎನ್ನಲಾಗ್ತಿದೆ. 'ರಾಬರ್ಟ್' ಸಿನಿಮಾ ಸಮಯದಲ್ಲೂ 'ಕಾಟೇರಾ' ಟೈಟಲ್ ಸದ್ದು ಮಾಡಿತ್ತು. ಆದರೆ ತರುಣ್ ಸುಧೀರ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ರಾಬರ್ಟ್ ಆಗಿ ಸ್ಪೆಷಲ್ ರೋಲ್‌ನಲ್ಲಿ ದರ್ಶನ್ ಮಿಂಚಿದ್ದರು. ಹಾಗಾಗಿ ಅದೇ ಟೈಟಲ್ ಫೈನಲ್ ಆಗಿತ್ತು. ಅದು ಚಿತ್ರದ ಕಥೆಗೂ ಸೂಕ್ತ ಎನಿಸಿತ್ತು. ಸದ್ಯ 'D56' ಫ್ಯಾನ್‌ಮೇಡ್ ಪೋಸ್ಟರ್‌ಗಳು ಸಖತ್ ಸದ್ದು ಮಾಡ್ತಿವೆ.

'ಕಾಟೇರಾ' ಬಗ್ಗೆ ಅಭಿಮಾನಿಗಳ ಒಲವು
ದಶಕಗಳ ಹಿಂದೆ ಹಂಪಿಯಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಆಧರಿಸಿ 'D56' ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಗಾಗಿ ಚಿತ್ರಕ್ಕೆ 'ಕಾಟೇರಾ' ಟೈಟಲ್ ಸೌಂಡಿಂಗ್ ಚೆನ್ನಾಗಿದೆ. ಇದು ಚೆನ್ನಾಗಿರುತ್ತದೆ. ಮೊದಲ ಅಕ್ಷರ K ಆಗಿರುವುದು ಪ್ಲಸ್ ಆಗುತ್ತದೆ ಎನ್ನುವುದು ಕೆಲ ಅಭಿಮಾನಿಗಳ ವಾದ. ಆದರೆ ಸಿನಿಮಾ ಟೈಟಲ್ ಬಗ್ಗೆ ಈವರೆಗೆ ಚಿತ್ರತಂಡ ಸುಳಿವು ನೀಡಿಲ್ಲ. 'ಕ್ರಾಂತಿ' ಸಿನಿಮಾ ರಿಲೀಸ್ ನಂತರ 'D56' ಪ್ರಮೋಷನ್ ಶುರುವಾಗುತ್ತದೆ ಎಂದು ದರ್ಶನ್ ಹೇಳಿದ್ದರು. ಇದೀಗ 'ಕ್ರಾಂತಿ' ಸಿನಿಮಾ ಬಂದು ಹಿಟ್ ಆಗಿದೆ.

ದರ್ಶನ್ ಅಭಿಮಾನೋತ್ಸವ
ಕೋರೊನಾ ಹಾವಳಿಯಿಂದ ಒಂದು ವರ್ಷ ದರ್ಶನ್ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದರು. ಅಪ್ಪು ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಕೂಡ ಸಂಭ್ರಮಾಚರಣೆ ಬೇಡ ಎಂದಿದ್ದರು. ಆದರೆ ಈ ವರ್ಷ 'ಕ್ರಾಂತಿ' ಸಕ್ಸಸ್ ಸಂಭ್ರಮದಲ್ಲದೇ ದರ್ಶನ್ ಹುಟ್ಟುಹಬ್ಬ ಕೂಡ ಬರ್ತಿದೆ. ಈ ಬಾರಿ ಹುಟ್ಟುಹಬ್ಬಕ್ಕೆ ದರ್ಶನ್ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಅಭಿಮಾನಿಗಳಿಗೆ ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಶುಭಾಶಯ ತಿಳಿಸುವ ಅವಕಾಶವ ಸಿಗುವ ಸಾಧ್ಯತೆಯಿದೆ.

ದುಂದು ವೆಚ್ಚ ಬೇಡ ಎಂದ ದರ್ಶನ್
ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಹಾರ, ಕೇಕ್, ಬ್ಯಾನರ್‌ಗಳನ್ನು ತರಬೇಡಿ. ಅದೇ ಹಣದಲ್ಲಿ ದವಸ ಧಾನ್ಯಗಳನ್ನು ತಂದು ಕೊಡಿ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುತ್ತೇನೆ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ರವಾನೆ ಆಗಿದೆ. ದರ್ಶನ್ ಮನೆ ಮುಂದೆ ಕೂಡ ನಾಮ ಫಲಕ ಹಾಕಿ ಮನವಿ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ದರ್ಶನ್ ಇದನ್ನು ಮಾಡುತ್ತಾ ಬರ್ತಿದ್ದಾರೆ. ಅಭಿಮಾನಿಗಳು ಕೂಡ ಅರ್ಥ ಪೂರ್ಣವಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದಾರೆ.


Click it and Unblock the Notifications











