ನಿರ್ಮಾಪಕಿಗೆ ಆರ್ಥಿಕ ಸಂಕಷ್ಟ : ಮರು ಪ್ರಸಾರವಾಯ್ತು ಪ್ರಮುಖ ಧಾರಾವಾಹಿ!
ಕನ್ನಡದ ನಂಬರ್ ಒನ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದು ನಿನ್ನೆ ಮರು ಪ್ರಸಾರವಾಗಿದೆ. ಧಾರಾವಾಹಿಯ ನೋಡುಗರು ತಮ್ಮ ತಮ್ಮ ನಿವಾಸದಲ್ಲಿ ಕುಳಿತು ಲಕ್ಷ್ಮಿಯನ್ನು ನೋಡಲು ಕಾಯುತ್ತಿದ್ದವರು ನಿರಾಸೆಯಿಂದ ಗೊಣಗಿಕೊಂಡಿದ್ದಾರೆ.
ಹೀಗೆ ನಿರ್ಮಾಪಕರಿಂದ ತೊಂದರೆಯಾಗಿ ಧಾರಾವಾಹಿಯೊಂದು ಮರು ಪ್ರಸಾರವಾಗಿರುವುದು ಕನ್ನಡ ಕಿರುತೆರೆ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ. ಸದ್ಯ ಕಿರುತೆರೆ ಕ್ಷೇತ್ರದಲ್ಲಿ ಈ ಧಾರಾವಾಹಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಸತ್ಯದ ತಲೆ ಮೇಲೆ ಹೊಡೆತ
ಇದರ ಹಿನ್ನೆಲೆ ಏನು ಅಂತ ಕೆಣಕುತ್ತಾ ಹೋದಾಗ ಒಂದಷ್ಟು ಆಂತಕಕಾರಿ ವಿಚಾರಗಳು ಬಯಲಾಗುತ್ತಿವೆ. ಧಾರಾವಾಹಿ ಪ್ರಾರಂಭವಾದಾಗಿನಿಂದ ಈ ಧಾರಾವಾಹಿಯ ನಿರ್ಮಾಪಕಿ ಆರ್ಥಿಕ ಸಂಕಷ್ಟದಲ್ಲಿದ್ದು, ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ತಂತ್ರಜ್ಞರು, ಕಲಾವಿದರು ಹಾಗೂ ಬರಹಗಾರರಿಗೆ ಹಣ ಕೊಡದೇ ಸಾಕಷ್ಟು ಗಲಾಟೆ ಮಾಡಿಕೊಂಡಿರುವ ವಿಚಾರ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ನಿರ್ಮಾಪಕಿ ಹಣದ ವಿಚಾರಕ್ಕೆ ಸತ್ಯದ ತಲೆ ಮೇಲೆ ಹೊಡೆದಷ್ಟು ದೊಡ್ಡ ಸುಳ್ಳುಗಳನ್ನು ಹೇಳುತ್ತಿದ್ದು ಈ ವಿಚಾರ ಈಗ ವಾಹಿನಿಯವರಿಗೆ ಕೂಡಾ ದೊಡ್ಡ ತಲೆ ನೋವಾಗಿದೆಯಂತೆ.
ನಿರ್ಮಲ ವಾತಾವರಣ
ಎರಡು ತಿಂಗಳ ಹಿಂದೆ ಕೂಡಾ ಒಂದು ದಿನ ಈ ಧಾರಾವಾಹಿ ಪ್ರಸಾರವಾಗಬೇಕಾದ ಸಮಯದಲ್ಲಿ ಇದ್ದಕ್ಕಿದ್ದಂತೆ ಇನ್ನೊಂದು ಧಾರಾವಾಹಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸುವ ತಂದೆಯ ಪಾತ್ರಧಾರಿಯೊಬ್ಬರು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಶೂಟಿಂಗ್‌ಗೆ ಬರಲ್ಲ ಎಂದಿದ್ದರಂತೆ. ಕೊನೆ ಕ್ಷಣದವರೆಗೂ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಂದು ಇನ್ನೊಂದು ಧಾರಾವಾಹಿಯ ಮಹಾಸಂಚಿಕೆ ಪ್ರಸಾರವಾಗಿತ್ತು. ಕೆಲ ದಿನಗಳ ಹಿಂದೆ ಈ ಧಾರಾವಾಹಿಯ ನಿರ್ಮಾಪಕಿಗೆ ನಟಿಯೊಬ್ಬರು ರಸ್ತೆಯಲ್ಲಿ ನಿಂತು ಹಣದ ವಿಚಾರಕ್ಕೆ ಕೂಗಾಡಿದ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿತ್ತು. ನಂತರ ವಾಹಿನಿಯವರು ನಿರ್ಮಲ ವಾತಾವರಣದಲ್ಲಿ ಇದನ್ನು ಬಗೆ ಹರಸಿದ್ದರು ಎನ್ನಲಾಗುತ್ತಿದೆ.

ನಿನ್ನೆ ಏನಾಯ್ತು?
ನಿನ್ನೆ ಇದ್ದಕ್ಕಿದ್ದ ಹಾಗೇ ಧಾರಾವಾಹಿ ಮರು ಪ್ರಸಾರವಾಗಿರುವುದು ಯಾಕೆ? ಮತ್ತೆ ಯಾರು ಏನು ಮಾಡಿದರು? ಎಂದು ವಿಚಾರಿಸುತ್ತಾ ಹೋದಾಗ ಗೊತ್ತಾಗಿದ್ದೇನೆಂದರೆ, ಈ ಧಾರಾವಾಹಿಗೆ ಡಿ ಐ ಮಾಡುವವರು ಅಂದರೆ ಶೂಟಿಂಗ್ ಆಗಿರುವ ವಿಡಿಯೋಗೆ ಕಲರಿಂಗ್ ಮಾಡುವ ತಂತ್ರಜ್ಞರೊಬ್ಬರು ತಮಗೆ ಹತ್ತು ಲಕ್ಷ ಹಣ ಬರಬೇಕು ಎಂಬ ಕಾರಣಕ್ಕೆ ಧಾರಾವಾಹಿಯ ಎಡಿಟಿಂಗ್ ಸಿಸ್ಟಮ್ ಎತ್ತಿಕೊಂಡು ಹೋಗಿದ್ದಾರಂತೆ. ತುಂಬಾ ದಿನಗಳಿಂದ ಹಣದ ವಿಚಾರವಾಗಿ ನಿರ್ಮಾಪಕಿ ಮತ್ತು ಡಿ ಐ ತಂತ್ರಜ್ಞರ ನಡುವೆ ಜೋರು ಜೋರಾದ ಮಾತು ಕಥೆ ನಡೆದಿದ್ದು ಈ ಸಮಸ್ಯೆ ಚಾನಲ್‌ನವರಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ. ನಾವು ಕೆಲಸ ಮಾಡಿದ ಹಣ ನಮಗೆ ಕೊಡಿ ಇಲ್ಲ ಸುಮ್ಮನಿರಿ ಎಂದು ಡಿ ಐ ತಂತ್ರಜ್ಞರು ಹಠ ಮಾಡಿದ್ದಾರೆ. ಹೀಗಾಗಿ ನಿನ್ನೆ ಪ್ರಸಾರವಾಗಬೇಕಾದ ಧಾರಾವಾಹಿಯ ಸಂಚಿಕೆ ಎಡಿಟ್ ಸಿಸ್ಟ್‌ಮ್‌ನಲ್ಲೇ ಉಳಿದುಕೊಂಡಿದೆ. ಕೊನೆ ಕ್ಷಣದಲ್ಲಿ ನಡೆದ ವಾಹಿನಿಯವರ ಸಂಧಾನ ಕೂಡಾ ಕೆಲಸ ಮಾಡಿಲ್ಲ. ಅಂತಿಮವಾಗಿ ಚಾನಲ್‌ನವರು ಗುರುವಾರದ ಸಂಚಿಕೆಯನ್ನೇ ಶುಕ್ರವಾರ ಕೂಡಾ ಮರು ಪ್ರಸಾರ ಮಾಡಿದ್ದಾರೆ.
ಮುಂದೇನು ?
ಧಾರಾವಾಹಿಯ ನಿರ್ಮಾಪಕಿ ಮತ್ತು ಅವರ ಪತಿ ನಟನೆಯ ಹಿನ್ನಲೆಯಿಂದ ಬಂದವರಾಗಿದ್ದು ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಕೂಡಾ. ಆದರೆ ಇವರಿಗೆ ಧಾರಾವಾಹಿ ನಿರ್ಮಾಣದ ಪಟ್ಟುಗಳು ಸರಿಯಾಗಿ ಕರಗತವಾಗಿಲ್ಲ. ಇದು ಅನೇಕ ಸಮಸ್ಯೆಗೇ ಕಾರಣವಾಗಿದ್ದು, ಇವರಿಂದ ಕನ್ನಡ ಕಿರುತೆರೆಯ ಮರ್ಯಾದೆ ಬೀದಿಗೆ ಬರುತ್ತಿದೆ ಎಂದು ಕನ್ನಡ ಕಿರುತೆರೆ ಜನ ಮಾತಾಡಿಕೊಳ್ಳುತ್ತಿದ್ದಾರೆ. ಅನೇಕ ಸಲ ಇವರ ವಿಚಾರ ಟೆಲಿವಿಷನ್ ಅಸೋಸಿಯೇಶನ್ (ಕೆಟಿವಿ ) ಗಮನಕ್ಕೆ ಕೂಡಾ ಬಂದಿದ್ದು ಅಲ್ಲೂ ಕೂಡಾ ಹಣಕಾಸಿನ ವಿಚಾರದ ಅನೇಕ ಗಲಾಟೆಗಳನ್ನು ಬಗೆಹರಿಸಲಾಗಿದೆಯಂತೆ. ಸದ್ಯಕ್ಕೆ ವಾಹಿನಿಯರು ನಿರ್ಮಾಪಕಿಗೆ ಗೇಟ್ ಪಾಸ್ ಕೊಟ್ಟು ಸೋಮವಾರದ ಸಂಚಿಕೆಯನ್ನು ಅವರೇ ಚಿತ್ರೀಕರಣ ಮಾಡಿ ಪ್ರಸಾರ ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆಯಾದರೂ, ಇನ್ನೂ ಅಧಿಕೃತ ಮಾಹಿತಿ ಬರಬೇಕಿದೆ. ಒಟ್ಟಾರೆ ಕನ್ನಡ ಕಿರುತೆರೆ ನೋಡುಗರಿಗೆ ಧಾರಾವಾಹಿ ಕತೆಗಳಿಗಿಂತ ಈ ತರಹದ ಸಂಗತಿಗಳೇ ಸಾಕಷ್ಟು ಮನರಂಜನೆ ನೀಡುತ್ತಿವೆ.


Click it and Unblock the Notifications











