ಟಿ ಆರ್ ಪಿ ಗೋಲ್ ಮಾಲ್‌ನಿಂದ ಕನ್ನಡದ ಮತ್ತೊಂದು ಧಾರಾವಾಹಿಗೆ ಆಪತ್ತು?
ಕನ್ನಡ ಕಿರುತೆರೆಯಲ್ಲಿ ನಿರ್ಮಾಪಕರು ಮತ್ತು ಇನ್ವೆಸ್ಟರ್ ನಡುವೆ ನಡೆದ ಗಲಾಟೆಯಿಂದ ಪ್ರಮುಖ ಧಾರಾವಾಹಿಯೊಂದು ಪ್ರಸಾರ ನಿಲ್ಲಿಸುವ ಮಟ್ಟಕ್ಕೆ ಹೋಗಿ ಬಳಿಕ ಈ ವಿವಾದ ಕೆ ಟಿ ವಿ ಯವರ ಅಂಗಳಕ್ಕೆ ತಲುಪಿದೆ ಎನ್ನಲಾಗಿದೆ.
ಈ ಬಗ್ಗೆ ಧಾರಾವಾಹಿಯ ನಿರ್ಮಾಪಕರು ಕೆ ಟಿ ವಿ ಗೆ ಕೊಟ್ಟ ದೂರಿನ ಪ್ರತಿ ಲಭ್ಯವಾಗಿದ್ದು ತಮ್ಮ ಧಾರಾವಾಹಿಯ ನಾಳೆಯ ಸಂಚಿಕೆಯನ್ನು ಹೋಲ್ಡ್ ಮಾಡಲಾಗಿದ್ದು ನಮಗೆ ಫೂಟೇಜ್ ಪಡೆಯಲು ಸಹಾಯ ಮಾಡಿ ಎಂದು ಅವರು ಕೆ ಟಿ ವಿ (ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್)ಗೆ ಮನವಿ ಸಲ್ಲಿಸಿದ್ದಾರೆ. ಇದರ ಹಿಂದೆ-ಮುಂದೆ ಏನಾಗಿದೆ? ಯಾಕೆ ಇನ್ವೆಸ್ಟರ್ ಧಾರಾವಾಹಿಯ ಚಿತ್ರೀಕರಣವಾದ ಫೂಟೇಜ್ ಎತ್ತಿಕೊಂಡು ಹೋಗಿದ್ದಾರೆ? ಯಾರು ಈ ಇನ್ವೆಸ್ಟರ್? ಎಂಬ ವಿವರಗಳನ್ನು ತಡಕಾಡಿದಾಗ ಒಂದಷ್ಟು ಸಂಗತಿಗಳು ಬಯಲಾಗುತ್ತಿವೆ.

ಕೋರಮಂಗಲದಲ್ಲಿ ಕುಳಿತು ರಾಜಾ ವಿಸ್ಕಿ ಆರ್ಡರ್
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಒಳ್ಳೆಯ ಹೆಸರು ಗಳಿಸಿದ್ದ ನಿರ್ದೇಶಕರೊಬ್ಬರು ಈ ವಾಹಿನಿಯ ಮೂಲಕ ನಿರ್ಮಾಪಕರಾಗಿ ಭಡ್ತಿ ಪಡೆದಿದ್ದರು. ಅವರು ಇತ್ತೀಚೆಗೆ ಆ ವಾಹಿನಿಯಲ್ಲಿ ನಿರ್ಮಾಣ ಮಾಡಿರುವ ಧಾರಾವಾಹಿಯೊಂದನ್ನು ನೋಡುಗರು ಕುಟುಂಬದೊಂದಿಗೆ ಕುಳಿತು ವೀಕ್ಷಣೆ ಮಾಡಿಲ್ಲವಾದ್ದರಿಂದ ಅದಕ್ಕೆ ಕಡಿಮೆ ಟಿಆರ್‌ಪಿ ಬರುತ್ತಿತ್ತು. ಆಗ ವಾಹಿನಿಯ ಧಾರಾವಾಹಿ ವಿಭಾಗದ ಸುಳ್ಳಿಯೊಬ್ಬರು ಟಿ ಆರ್ ಪಿ ಇಲ್ಲ ಅಂದ್ರೆ ಕುಟುಂಬ ಸಮೇತ ಮನೆಗೆ ಕಳಿಸುವೆ ಎಂದು ಅವಾಜ್ ಹಾಕಿದ್ದಾರೆ. ಹಾಗೇ ನೋಡಿದರೆ ತಮ್ಮ ನಿರ್ದೇಶನ ಮತ್ತು ನಿರ್ಮಾಣದ ಇದುವರೆಗಿನ ವೃತ್ತಿ ಜೀವನದಲ್ಲಿ ಈ ನಿರ್ಮಾಪಕರು ಎಲ್ಲೂ ಕೂಡಾ ಹೆಸರು ಹಾಳು ಮಾಡಿಕೊಂಡಿರಲಿಲ್ಲ. ಆದರೆ, ವಾಹಿನಿಯ ಸುಳ್ಳಿ ಸಹವಾಸವೋ, ಅಥವಾ ಪರಿಸ್ಥಿತಿಯ ಒತ್ತಡವೋ, ಈ ನಿರ್ಮಾಪಕರು ಕೂಡಾ ಕೋರಮಂಗಲದಲ್ಲಿ ಕುಳಿತೇ ರಾಜಾ ವಿಸ್ಕಿ ಆರ್ಡರು ಮಾಡಿಬಿಟ್ಟಿದ್ದಾರೆ.
ಕಳ್ಳ-ಮಳ್ಳ ಮತ್ತು ಸುಳ್ಳಿ
ಅಲ್ಲಿಗೆ ಟಿ ಆರ್ ಪಿ ಕಳ್ಳ ಕಾಟಪಾಡಿ ರಾಜ, ಧಾರಾವಾಹಿ ವಿಭಾಗದ ಸುಳ್ಳಿ ಮತ್ತು ಪರಿಸ್ಥಿತಿಯ ಒತ್ತಡಕ್ಕೆ ಮಣಿದ ಮಳ್ಳ ನಿರ್ಮಾಪಕ ಒಟ್ಟಿಗೇ ಕುಳಿತು ಒಂದು ಗೇಮ್ ಪ್ಲ್ಯಾನ್ ಮಾಡಿದ್ದಾರೆ. ಅದರ ಪ್ರಕಾರ ಟಿ ಆರ್ ಪಿ ರಾಜ ನಿರ್ಮಾಪಕರಿಂದ ಇಡೀ ಪ್ರಾಜೆಕ್ಟ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದು ಮತ್ತು ವಾಹಿನಿಯ ಅಗ್ರಿಮೆಂಟ್‌ನಲ್ಲಿ ಮಾತ್ರ ಹಳೆಯ ನಿರ್ಮಾಪಕರ ಹೆಸರೇ ಇರುವುದು ಎಂಬ ರಹಸ್ಯ ಒಪ್ಪಂದ ಇವರ ನಡುವೆ ಏರ್ಪಟ್ಟಿದೆ. ವಾಹಿನಿಯ ಅಗ್ರಿಮೆಂಟ್‌ನಲ್ಲಿ ಹಳೆಯ ನಿರ್ಮಾಪಕರ ಹೆಸರನ್ನೇ ಯಾಕೆ ಮುಂದುವರೆಸಿದರು ಎಂದರೆ ಒಂದು ಆಸಕ್ತಿಕರ ವಿಚಾರ ಕೇಳಿಬರುತ್ತಿದೆ. ವಾಹಿನಿಯ ಮುಖ್ಯಸ್ಥರು ಮತ್ತು ದೊಡ್ಡ ಹುದ್ದೆಯಲ್ಲಿ ಇರುವವರಿಗೆ ಈ ಟಿ ಆರ್ ಪಿ ಕಳ್ಳಾಟದ ರಾಡಾರ್‌ನಲ್ಲಿ ಬಟ್ಟೆ ಬಿಚ್ಚಿಕೊಂಡು ನಿಂತಿರುವವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದು ಬೇಕಿಲ್ಲ. ಅದರಲ್ಲೂ ಕಾಟಪಾಡಿ ಟಿ ಆರ್ ಪಿ ರಾಜ ದೂರದ ಮುಂಬಯಿ ಬಾರ್ಕ್ ಆಫೀಸಿನ ತನಕ ಬ್ಯಾನ್ ಆಗಿರುವ ಗಿರಾಕಿ. ಹಾಗಾಗಿ ಅವನನ್ನು ವಾಹಿನಿಯ ರೆಸೆಪ್ಶನ್‌ಗೂ ಕೂಡಾ ಬಿಟ್ಟು ಕೊಳ್ಳಬಾರದು ಎಂಬ ನಿಲುವು ವಾಹಿನಿಯದ್ದಾಗಿತ್ತು. ಇದೆಲ್ಲ ಗೊತ್ತಿದ್ದರಿಂದಲೇ ಈ ಗ್ಯಾಂಗ್ ರಾಜನನ್ನು ಹಿಂದೆ ನಿಲ್ಲಿಸಿ, ಕೋರಮಂಗಲದಲ್ಲಿ ವಾಕ್ ಮಾಡಿಕೊಂಡು ಬಂದಿದೆ. ಇದೆಲ್ಲದರ ನಡುವೆ ವಾಹಿನಿಯ ಸುಳ್ಳಿ ಮಾತ್ರ ನಂಗೆ ಏನೂ ಗೊತ್ತಿಲ್ಲಪ್ಪ ಎಂಬಂತೆ ಇದ್ದುಬಿಟ್ಟಿದ್ದಾರೆ.
ಅಡ್ಡದಾರಿ ರಾಜನಿಗೆ ಅಡ್ಡ ಬಂದ ಗುಡ್ಡ
ಕಳ್ಳ-ಮಳ್ಳ ಮತ್ತು ಸುಳ್ಳಿಯ ಈ ಗೇಮ್ ಪ್ಲ್ಯಾನ್ ಒಂದು ಹಂತಕ್ಕೆ ವರ್ಕ್ ಆಗಿ ಇವರ ಧಾರಾವಾಹಿಗೆ ರಾಜನ ಕಳ್ಳಾಟದಿಂದ ಒಳ್ಳೆಯ ಟಿ ಆರ್ ಪಿ ಕೂಡಾ ಬಂದಿದೆ. ಧಾರಾವಾಹಿಯ ನಿಜವಾದ ನಿರ್ಮಾಪಕರು ಕೂಡಾ ಈ ಕಳ್ಳಾಟದ ದುನಿಯಾದಲ್ಲಿ ನಮಗೆ ದಕ್ಕುತ್ತಿರುವುದೇ ಜಾಸ್ತಿ ಅಂದುಕೊಂಡು ತಮ್ಮ ಪಾಡಿಗೆ ತಾವು ನಿರ್ದೇಶನದಲ್ಲಿ ತೊಡಗಿಸಿಕೊಂಡು ಸುಮ್ಮನಾಗಿದ್ದಾರೆ. ಧಾರಾವಾಹಿಯ ರಹಸ್ಯ ಇನ್ವೆಸ್ಟ್‌ಮೆಂಟ್ ಟಿ ಆರ್ ಪಿ ರಾಜನದ್ದಾಗಿದ್ದರಿಂದ ಆತ ನಿಧಾನವಾಗಿ ಶೂಟಿಂಗ್ ಸೆಟ್‌ಗೆ ಬರಲು ಪ್ರಾರಂಭ ಮಾಡಿದ್ದಾನೆ. ಆತ ಇಷ್ಟೇ ಮಾಡಿದ್ದರೆ ಅದು ಇಲ್ಲಿಯ ತನಕ ಬರುತ್ತಿರಲಿಲ್ಲವೇನೋ. ಆತ ಶೂಟಿಂಗ್ ಸೆಟ್‌ನಲ್ಲಿ ಕೆಲವು ನಟಿಯರ ಜೊತೆ ತುಂಬ ಹೊತ್ತು ಕುಳಿತು ಮಾತನಾಡುತ್ತಾನೆ ಎಂಬ ವಿಚಾರ ಚಿಕ್ಕ ಸುದ್ದಿಯಾಗಿ ನಂತರ ಅದು ವಾಹಿನಿಯ ಅಂಗಳಕ್ಕೆ ಬಂದು ತಲುಪಿದೆ. ಕೋರಮಂಗಲದವರು ಹಾಗೆಲ್ಲ ನಟಿಯರ ವಿಚಾರದಲ್ಲಿ ಯಾವತ್ತೂ ಹೆಸರು ಕೆಡಿಸಿಕೊಂಡಿರಲಿಲ್ಲ. ಆದರೆ ಇನ್ವೆಸ್ಟರ್ ರಾಜ ಟಿ ಆರ್ ಪಿ ಕಳ್ಳಾಟದ ಜೊತೆ ಕಣ್ಣಾ ಮುಚ್ಚಾಲೆ ಕೂಡಾ ಆಡುತ್ತಾನೆ ಎಂಬ ವಿಚಾರ ವಾಹಿನಿಯ ದೊಡ್ಡ ಹುದ್ದೆಯ ತನಕ ಹೋಗಿ ತಲುಪಿದೆ. ಅವರು ಏನಿದು ಎಂದು ಮೊದಲು ಧಾರಾವಾಹಿ ವಿಭಾಗದ ಮುಖ್ಯಸ್ಥೆಯನ್ನು ವಿಚಾರಿಸಿದ್ದಾರೆ. ಆಗ ಧಾರಾವಾಹಿ ವಿಭಾಗದ ಮುಖ್ಯಸ್ಥೆ ಮಾತ್ರ ʼಹೌದಾ ನಂಗೇನೂ ಗೊತ್ತಿಲ್ಲಪ್ಪ ..ʼಎಂದು ಧಾರಾವಾಹಿಯ ಹೀರೋಯಿನ್‌ಗಿಂತ ಚೆನ್ನಾಗಿ ನಟಿಸಿ ನಂತರ ರಜೆಯ ಮೇಲೆ ಅಮೆರಿಕಾಗೆ ಹೊರಟು ಬಿಟ್ಟಿದ್ದಾರೆ.
ರಾಜಾ ನನ್ನ ರಾಜ
ಅಂತಿಮವಾಗಿ ವಾಹಿನಿಯ ಮುಖ್ಯಸ್ಥರು ಅಸಲಿ ನಿರ್ಮಾಪಕರನ್ನು ಕರೆದು ಮೀಟಿಂಗ್ ಮಾಡಿ "ಏನಿದೆಲ್ಲ.." ಎಂದು ಗರಂ ಆಗಿ ವಿಚಾರಿಸಿದ್ದಾರೆ. "ನಿಮಗೆ ಕೊಟ್ಟ ಧಾರಾವಾಹಿ ನಿರ್ಮಾಣದ ಅವಕಾಶವನ್ನು ಅದು ಹೇಗೆ ನೀವು ರಹಸ್ಯವಾಗಿ ಇನ್ನೊಬ್ಬರಿಗೆ ಮಾರಾಟ ಮಾಡುತ್ತೀರಿ.." ಎಂದು ನಿರ್ಮಾಪಕರನ್ನು ಕೋರಮಂಗಲದಿಂದ ಮಡಿವಾಳದ ತನಕ ಓಡಿಸಿಕೊಂಡು ಹೋಗಿ "ನಾಳೆಯಿಂದ ರಾಜ-ರಾಣಿ ಯಾರೂ ನಿಮ್ಮ ಸೆಟ್‌ಗೆ ಬರಬಾರದು.." ಎಂದು ಗರಂ ಆಗಿ ತಿಳಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ರಾಜಾ ನನ್ನ ರಾಜ ಎನ್ನುತ್ತಾ ನಿರ್ಮಾಪಕರು ನೇರವಾಗಿ ಚೆನ್ನಮ್ಮನಕೆರೆ ಹತ್ತಿರಕ್ಕೆ ಬಂದು ರಾಜನ ಬಳಿ "ನಾಳೆಯಿಂದ ನೀವು ಶೂಟಿಂಗ್ ಸೆಟ್‌ಗೆ ಬರಬಾರದು ಅಂತ ವಾಹಿನಿಯವರು ಹೇಳಿದ್ದಾರೆ.." ಎನ್ನುತ್ತಿದ್ದಂತೆ ಬಾರ್ಕ್ ಮೀಟರ್ ಕಿತ್ತುಕೊಂಡು ಅದರ ಕೇಬಲ್‌ನಿಂದಲೇ ನಿರ್ಮಾಪಕರ ಕುತ್ತಿಗೆಗೆ ಬಿಗಿದಿದ್ದಾರೆ ಟಿ ಆರ್ ಪಿ ರಾಜ. ನಂತರ "ನಾನು ಇದೂವರೆಗೆ ಧಾರಾವಾಹಿಗೆ ಒಂದೂವರೆ ಕೋಟಿ ಹಣ ಇನ್ವೆಸ್ಟ್ ಮಾಡಿದ್ದೇನೆ. ಅದನ್ನು ಕೊಟ್ಟು ನಂತರ ನನ್ನನ್ನು ಸೆಟ್‌ಗೆ ಬರಬೇಡ ಅಂತ ಹೇಳು.." ಎಂದು ಧಾರಾವಾಹಿಯ ಎಡಿಟಿಂಗ್ ಸ್ಟೂಡಿಯೋಗೆ ಬೀಗ ಜಡಿದಿದ್ದಾರೆ.
ಕೆ ಟಿ ವಿ ಅಂಗಳಕ್ಕೆ
ಯಾವಾಗ ಧಾರಾವಾಹಿಯ ಎಡಿಟಿಂಗ್ ಸ್ಟೂಡಿಯೋಗೆ ಬೀಗ ಬಿತ್ತೋ ನಿರ್ಮಾಪಕರು ಮತ್ತು ಇನ್ವೆಸ್ಟರ್ ನಡುವಿನ ಗಲಾಟೆ ಅಂತೆ ಎಂಬ ಸುದ್ದಿ ಕಿರುತೆರೆಯಲ್ಲಿ ದೊಡ್ಡ ಸುದ್ದಿಯಾಗಿದೆ. ಈ ನಡುವೆ ಕೆ ಟಿ ವಿ (ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್) ಗೆ ಪತ್ರ ಬರೆದ ಅಸಲಿ ನಿರ್ಮಾಪಕರು ದಯಮಾಡಿ ಪಂಚಾಯತಿ ಮಾಡಿ ಧಾರಾವಾಹಿ ಪ್ರಸಾರಕ್ಕೆ ಅಡ್ಡಿಯಾಗದಂತೆ ಬಗೆಹರಿಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ. ಅಲ್ಲಿ ಒಂದು ಕೋಟಿ ಹಣಕ್ಕೆ ಇನ್ವೆಸ್ಟರ್ ಮತ್ತು ನಿರ್ಮಾಪಕರ ನಡುವೆ ವಿವಾದ ಮುಗಿದಿದೆ ಎಂಬ ಸುದ್ದಿಯ ಜೊತೆಗೆ ಅದ್ಯಾರೋ ಡಿ ಐ ತಂತ್ರಜ್ಞರು ಈ ಧಾರಾವಾಹಿಗೆ ಹೊಸದಾಗಿ ಸೇರ್ಪಡೆಯಾಗಿರುವ ಇನ್ವೆಸ್ಟರ್ ಎಂಬ ಸುದ್ದಿ ಕೂಡಾ ದೊಡ್ಡದಾಗಿ ಕೇಳಿಬರುತ್ತಿದೆ. ಇದೆಲ್ಲದರ ನಡುವೆ ಟಿ ಆರ್ ಪಿ ರಾಜ ಮುಂದಿನ ದಿನಗಳಲ್ಲಿ ನಿನ್ನ ಧಾರಾವಾಹಿಗೆ ಅದು ಹೇಗೆ ಟಿ ಆರ್ ಪಿ ಬರುತ್ತೆ ನೋಡ್ತಿನಿ ಎಂದು ನಿರ್ಮಾಪಕರಿಗೆ ಅವಾಜ್ ಹಾಕಿದ್ದಾರಂತೆ ಮತ್ತು ಈ ಡೈಲಾಗ್ ಕೇಳಿ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥರು ದೂರದ ಅಮೆರಿಕಾದಲ್ಲಿದ್ದುಕೊಂಡೇ ಮಣ್ಣಲ್ಲಿ ಮುಖ ಹುದುಗಿಸಿಕೊಂಡು ಅತ್ತರಂತೆ. ಅಂತಿಮವಾಗಿ ಟಿ ಆರ್ ಪಿ ರಾಜ ಕಿರುತೆರೆಯಲ್ಲಿ ಮತ್ತೆ ಯಾವ ಧಾರಾವಾಹಿಗೆ ರೇಟಿಂಗ್ ಕಡಿಮೆ ಇದೆ. ಅದಕ್ಕೆ ಹೇಗೆ ವಕ್ಕರಿಸಿಕೊಳ್ಳಲಿ ಎಂದು ಲಿಸ್ಟ್ ನೋಡುತ್ತಿರುವ ಸುದ್ದಿ ಬರುತ್ತಿದೆ.


Click it and Unblock the Notifications











