»   » ಸಿಡಿದೆದ್ದ H2O

ಸಿಡಿದೆದ್ದ H2O

Subscribe to Filmibeat Kannada

(ಇನ್ಫೋ ಇನ್‌ಸೈಟ್‌)

ಸೂಪರ್‌ಸ್ಟಾರ್‌ ಉಪೇಂದ್ರ ವಿರುದ್ಧ H2O ಧನರಾಜ್‌ ಕೊನೆಗೂ ತಿರುಗಿಬಿದ್ದಿದ್ದಾರೆ. ತಮ್ಮ H2O ಸಿನಿಮಾದ ಡಬ್ಬಿಂಗ್‌ ಕಾರ್ಯ ಮುಗಿಸಿಕೊಡದೆ ಮತ್ತಷ್ಟು ಸಂಭಾವನೆಗಾಗಿ ಉಪೇಂದ್ರ ಸತಾಯಿಸುತ್ತಿದ್ದಾರೆ ಎನ್ನುವುದು ಧನರಾಜ್‌ ದೂರು. ವಿವಾದವೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಂಗಳದಲ್ಲಿದೆ. ಇದರೊಂದಿಗೆ ವಾರಕಾಲದಲ್ಲಿಯೇ ಕಲಾವಿದರ ಕಾಡಿಸುವಿಕೆಯ ವಿರುದ್ಧ ಇಬ್ಬರು ನಿರ್ಮಾಪಕರು ಧ್ವನಿ ಎತ್ತಿದಂತಾಯಿತು.

ಇತ್ತೀಚೆಗಷ್ಟೇ ಪರ್ವ ಚಿತ್ರದ ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ನಟಿ ಪ್ರೇಮಾ ಮನೆಗೆ ನುಗ್ಗಿ ಗೊಂದಲ ಉಂಟು ಮಾಡಿದ್ದ ವಿವಾದ ಪೊಲೀಸ್‌ ಠಾಣೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಕಟ್ಟೆ ಹತ್ತಿತ್ತು . ಈ ವಿವಾದ ತಣ್ಣಗಾಗುವ ಮುನ್ನವೇ ಧನರಾಜ್‌- ಉಪೇಂದ್ರ ವಿವಾದ ಭುಗಿಲೆದ್ದಿದೆ.

ಉಪೇಂದ್ರ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ!


ಉಪೇಂದ್ರ ಹಾಗೂ ಪ್ರಭುದೇವ ನಟಿಸುತ್ತಿರುವ H2O ಚಿತ್ರಕ್ಕೆ ನಾಲ್ಕು ಅದ್ದೂರಿ ಸಿನಿಮಾಗಳಿಗೆ ಸಾಕಾಗುವಷ್ಟು ದುಡ್ಡು ಖರ್ಚಾಗಿದ್ದರೂ ಸಿನಿಮಾ ಪೂರ್ತಿಯಾಗಿಲ್ಲ . ಆರಂಭದಲ್ಲಿ 63 ಲಕ್ಷ ರುಪಾಯಿ ಸಂಭಾವನೆಗೆ ಉಪೇಂದ್ರ ಒಪ್ಪಿಕೊಂಡಿದ್ದರು. ಈಗ ಇನ್ನೂ 42 ಲಕ್ಷ ಹೆಚ್ಚುವರಿಯಾಗಿ ಕೇಳುತ್ತಿದ್ದಾರೆ. ಹೆಚ್ಚುವರಿ ಹಣ ಕೊಡದಿದ್ದರೆ ಡಬ್ಬಿಂಗ್‌ಗೆ ಬರುವುದಿಲ್ಲ ಎಂದು ಉಪೇಂದ್ರ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಧನರಾಜ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

H2O ನಿರ್ದೇಶಕರಾದ ರಾಜಾರಾಮ್‌ ಹಾಗೂ ಲೋಕನಾಥ್‌ ಅವರ ಬೇಜವಾಬ್ದಾರಿಯಿಂದ ಕೂಡ ತಮಗೆ ಒಂದೂವರೆ ಕೋಟಿ ರುಪಾಯಿ ಪೋಲಾಗಿದೆ. ಇವರಿಂದ ತಮಗೆ ಮುಕ್ತಿ ದೊರಕಿಸಿಕೊಡಬೇಕು ಎಂದು ಧನರಾಜ್‌ ವಾಣಿಜ್ಯ ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ.

ಉಪೇಂದ್ರ ಮೇಲೆ ಧನರಾಜ್‌ರ ಮೂರು ದೂರು

  1. ಮೂರು ತಿಂಗಳಿಂದ ಚಿತ್ರದ ನೆಗೆಟಿವ್‌ ಉಪೇಂದ್ರರ ಮನೆಯಲ್ಲೇ ಬಿದ್ದಿದೆ. ಆದರೆ ಉಪೇಂದ್ರ ಸಂಕಲನ ಕಾರ್ಯದಲ್ಲಿ ವಿಳಂಬ ಮಾಡಿದ್ದಾರೆ.
  2. ಟೀವಿ ಚಾನಲ್‌ಗಳಿಗೆ ಕ್ಲಿಪಿಂಗ್ಸ್‌ ಕೊಡಲು ಉಪೇಂದ್ರ ನಿರಾಕರಿಸಿದ್ದಾರೆ. ಚಿತ್ರೀಕರಣಕ್ಕೆ ಸಕಲ ಸವಲತ್ತುಗಳನ್ನು ಒದಗಿಸಿದ್ದರೂ ಬಳಸಿಕೊಂಡಿಲ್ಲ . ದುಡ್ಡು ನೀರಿನಂತೆ ಖರ್ಚಾಗಿದೆ, ಉಪಯೋಗವಾಗಿಲ್ಲ .
  3. ಉಪೇಂದ್ರ ಅವರಿಗೆ ಸ್ವಂತ ಖರ್ಚಿನಲ್ಲಿ ಮೊಬೈಲ್‌ ಫೋನು, ಕಾರು, ಕಂಪ್ಯೂಟರ್‌ ಕೊಡಿಸಿದ್ದೇನೆ. ಸಂಕಲನ ಕೇಂದ್ರದ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಆದಾಗ್ಯೂ ಚಿತ್ರ ಮುಗಿಸಿಕೊಡಲು ಉಪೇಂದ್ರ ಹೆಚ್ಚಿನ ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ.
ಎಚ್‌ಟೂಓ ಡಬ್ಬಿಂಗ್‌ ಮುಗಿಸಿಕೊಡುವಂತೆ ಉಪೇಂದ್ರ ಅವರಿಗೆ ಆದೇಶಿಸಲು ಹಾಗೂ ಎಚ್‌ಟೂಓ ಬಿಡುಗಡೆಯಾದ ನೂರು ದಿನಗಳವರೆಗೆ ಉಪೇಂದ್ರ ಅಭಿನಯದ ಇತರ ಚಿತ್ರ ಬಿಡುಗಡೆಯಾಗಲು ಅವಕಾಶ ಮಾಡಿಕೊಡಬಾರದೆಂದು ಧನರಾಜ್‌ ವಾಣಿಜ್ಯ ಮಂಡಳಿಯನ್ನು ಕೋರಿದ್ದಾರೆ.

ಅಪರಾಧಿ ನಾನಲ್ಲ - ಉಪೇಂದ್ರ

ಧನರಾಜ್‌ ತಮ್ಮ ಮೇಲೆ ಮಾಡಿರುವ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಉಪೇಂದ್ರ, ಎಚ್‌ಟುಓ ನಿಧಾನವಾಗಲು ಧನರಾಜ್‌ರ ಸ್ವಯಂಕೃತಾಪರಾಧವೇ ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಸಂಭಾವನೆ ಕೊಡಲು ಫಿಲಂ ಚೇಂಬರ್‌ ಅಧ್ಯಕ್ಷರ ಸಮ್ಮುಖದಲ್ಲೇ ಒಪ್ಪಿಕೊಂಡಿದ್ದ ಧನರಾಜ್‌ ಈಗ ಪ್ಲೇಟ್‌ ಬದಲಾಯಿಸುತ್ತಿದ್ದಾರೆ. ಸಿನಿಮಾಕ್ಕಾಗಿ 260 ದಿನ ಡೇಟ್ಸ್‌ ನೀಡಿದ್ದರೂ, ಅದರಲ್ಲಿ ಕೆಲಸ ನಡೆದದ್ದು 90 ದಿನ ಮಾತ್ರ. ಉಳಿದ 160 ದಿನ ಸುಮ್ಮನೆ ಕುಳಿತುಕೊಳ್ಳುವಂತಾಯಿತು ಎಂದು ಉಪೇಂದ್ರ ತಿಳಿಸಿದ್ದಾರೆ.

ನಿರ್ದೇಶಕರ ವಿರುದ್ಧ ಧನರಾಜ್‌ ಅವರ ಆಪಾದನೆಗಳನ್ನೂ ನಿರಾಕರಿಸಿರುವ ಉಪೇಂದ್ರ- ನಾಗಾಭರಣ ಅಥವಾ ದಿನೇಶ್‌ಬಾಬು ಅವರಿಂದ ಚಿತ್ರದ ನಿರ್ದೇಶನ ಮಾಡಿಸುವಂತೆ ನಾನು ಧನರಾಜ್‌ ಅವರಿಗೆ ಸೂಚಿಸಿದ್ದೆ . ಆದರೆ, ಅವರು ತಮಗಿಷ್ಟ ಬಂದವರನ್ನೇ ಆಯ್ದುಕೊಂಡರು ಎಂದು ಹೇಳಿದ್ದಾರೆ. ಹಲವಾರು ತಂತ್ರಜ್ಞರು ಹಾಗೂ ಕಲಾವಿದರಿಗೆ ಧನರಾಜ್‌ ಸಂಭಾವನೆ ಬಾಕಿ ಇಟ್ಟಿದ್ದಾರೆ. ಈ ಹಂತದಲ್ಲಿ ತಾವು ಡಬ್ಬಿಂಗ್‌ ಮುಗಿಸಿಕೊಟ್ಟರೆ ಆ ಸಂಭಾವನೆಯ ಗತಿಯೇನು ಎಂದೂ ಉಪೇಂದ್ರ ಪ್ರಶ್ನಿಸಿದ್ದಾರೆ.

ಧನರಾಜ್‌- ಉಪೇಂದ್ರ ಜಗಳವೀಗ ವಾಣಿಜ್ಯ ಮಂಡಳಿಯ ಅಂಗಳದಲ್ಲಿದೆ.

ಬಾಲಂಗೋಚಿ : ಎಚ್‌ಟೂಓ ಚಿತ್ರಕಥೆಗೆ ತಮಿಳುನಾಡು ಹಾಗೂ ಕರ್ನಾಟಕ ನಡುವಣ ಕಾವೇರಿ ವಿವಾದವೇ ಸ್ಫೂರ್ತಿ ಎನ್ನುವ ವಿಷಯ ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ಪ್ರಚಾರವಾಗಿತ್ತು . ಸಿನಿಮಾ ಯಾವ ರೀತಿ ಬಂದಿದೆಯೋ ಗೊತ್ತಿಲ್ಲ ; ಧನರಾಜ್‌- ಉಪೇಂದ್ರ ಜಗಳವಂತೂ ಕಾವೇರಿ ಕಾವಿನಂತೆಯೇ ಇದೆ. ನ್ಯಾಯಮಂಡಳಿ ತೀರ್ಪು ಯಾರ ಪರ?

what do you say ?

ಪೂರಕ ಓದಿಗೆ..
‘ನೀರಿ’ಗಾಗಿ ಮಣ್ಣಾದ ಹಣ ಕೇವಲ 2 ಕೋಟಿ ರುಪಾಯಿ !
ಕನ್ನಂಬಾಡಿಯ ವಿಶ್ವೇಶ್ವರಯ್ಯ ಬೆಳ್ಳಿತೆರೆಗೆ? ಹೌದೆನ್ನುತ್ತಾರೆ H2O ಧನರಾಜ್‌

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada