»   » ಉಪೇಂದ್ರನಿಗೆ ವಜ್ರದ ಕಿರೀಟತೊಡಿಸುವವರು ರವಿ ಬೆಳಗೆರೆ !

ಉಪೇಂದ್ರನಿಗೆ ವಜ್ರದ ಕಿರೀಟತೊಡಿಸುವವರು ರವಿ ಬೆಳಗೆರೆ !

Subscribe to Filmibeat Kannada

ಹಾಲಿವುಡ್‌ ಸಿನಿಮಾಕ್ಕಾಗಿ ಅಮೇರಿಕಾಕ್ಕೆ ಹಾರುವ ಮುನ್ನ ಉಪ್ಪಿಗೆ ಕಿರೀಟ ತೊಡಿಸಲು ಮೈಸೂರಿನ ಅಭಿಮಾನಿಗಳು ನಿಶ್ಚಯಿಸಿದ್ದಾರೆ. ಈ ಮುನ್ನ ಚಿನ್ನದ ಕಿರೀಟ ತೊಡಿಸಿ ಸುದ್ದಿ ಮಾಡಿದ್ದ ಮೈಸೂರು ಫ್ರೆಂಡ್ಸ್‌ ಅಸೋಸಿಯೇಷನ್‌ ಈ ಬಾರಿ ವಜ್ರದ ಕಿರೀಟ ತೊಡಿಸಲು ಮುಂದಾಗಿದೆ. ಉಪೇಂದ್ರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಮೇ 12 ರ ಶನಿವಾರ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪ್ಪಿಗೆ ವಜ್ರ ಕಿರೀಟ ತೊಡುವ ಅವಕಾಶ . ಅಂದಹಾಗೆ, ಅದೇ ಸಂದರ್ಭದಲ್ಲಿ ಮೈಸೂರು ಫ್ರೆಂಡ್ಸ್‌ ಅಸೋಸಿಯೇಷನ್‌ ಅರ್ಪಿಸುವ ಸಿನಿಮಾವೊಂದರ ಮುಹೂರ್ತವೂ(ಮಹೇಶ್‌ ತಲಕಾಡ್‌ ಹಾಗೂ ಮೈಸೂರು ಗುರು ನಿರ್ದೇಶನ) ನಡೆಯುವುದರಿಂದ ಇಡೀ ಸಮಾರಂಭ ಶೂಟಿಂಗ್‌ನಂತೆ ಕಂಡರೆ ಅಚ್ಚರಿಯಿಲ್ಲ.

ಧನರಾಜ್‌ ಅವರ H2O ಸಿನಿಮಾದಲ್ಲಿ ಉಪೇಂದ್ರ ಅವರೊಂದಿಗೆ ಅಭಿನಯಿಸುತ್ತಿರುವ ಮೂಳೆರಹಿತ ಮನುಷ್ಯ ಪ್ರಭುದೇವ್‌ ಶನಿವಾರದ ಕಾರ್ಯಕ್ರಮದ ಮುಖ್ಯ ಆಕರ್ಷಣೆ. ನೆರೆದವರನ್ನು ರಂಜಿಸಲು ಸಂಗೀತ ನಿರ್ದೇಶಕ ಸಾಧು ಕೋಕಿಲಾ ಮತ್ತು ಮೈಸೂರು ಮಂಜು ತಂಡ ಮನರಂಜನೆ ಕಾರ್ಯಕ್ರಮ ನೀಡಲಿದೆ. ಇವೆಲ್ಲವುಗಳನ್ನೂ ಹೊರತುಪಡಿಸಿಯೂ, ಉಪೇಂದ್ರ ಅವರಿಗೆ ವಜ್ರದ ಕಿರೀಟ ತೊಡಿಸುವ ಕಾರ್ಯಕ್ರಮ ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದೆ. ಅವುಗಳನ್ನು ಪಟ್ಟಿ ಮಾಡುವುದಾದರೆ -

  • ಉಪೇಂದ್ರ ಅವರಿಗೆ ವಜ್ರದ ಕಿರೀಟವನ್ನು ಹಾಯ್‌ ಬೆಂಗಳೂರ್‌ನ ರವಿ ಬೆಳಗೆರೆ ತೊಡಿಸಲಿದ್ದಾರಂತೆ. ಅಂದರೆ, ಇದು ಉಪ್ಪಿ ಹಾಗೂ ರವಿ ಬೆಳಗೆರೆ ಅವರನ್ನು ರಾಜಿ ಮಾಡುವ ಕಾರ್ಯಕ್ರಮವಾ ? ರವಿ ಬೆಳಗೆರೆ ಹಾಯ್‌ ಬೆಂಗಳೂರಿನಲ್ಲಿ ಉಪೇಂದ್ರ ಅವರನ್ನು ಜಾಡಿಸುತ್ತಿದ್ದುದು, ಉಪೇಂದ್ರ ಮತ್ತೊಂದು ಟ್ಯಾಬ್ಲಾಯಿಡ್‌ ಮೂಲಕ ಅದಕ್ಕೆ ಉತ್ತರ ಕೊಡುತ್ತಿದ್ದ ತಮಾಷೆ, ಕಿತ್ತಾಟವನ್ನು ರವಿ- ಉಪ್ಪಿ ಇಬ್ಬರ ಅಭಿಮಾನಿಗಳೂ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಹತ್ತಿರ ತರಲಿಕ್ಕಾಗಿ ಈ ಕಾರ್ಯಕ್ರಮವೇ ಅನ್ನುವ ಅನುಮಾನ ಹುಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ .
  • ಈ ಮೊದಲು ಉಪ್ಪಿ ಅವರಿಗೆ ಚಿನ್ನದ ಕಿರೀಟ ತೊಡಿಸಿದ್ದರ ಬಗೆಗೆ ಹಲವು ಟೀಕೆಗಳಿವೆ. ದುಡ್ಡು ಕೊಟ್ಟರೆ ಯಾರು ಬೇಕಾದರೂ ಕಿರೀಟ ತೊಡಿಸುತ್ತಾರೆ ಎನ್ನುವ ಮಾತುಗಳನ್ನು ಜಿತೇಂದ್ರದ ಜಗ್ಗೇಶ್‌ ಆಡಿದ್ದುಂಟು. ಮೈಸೂರಿನಲ್ಲಿರುವ ಉಪೇಂದ್ರ ಅಭಿಮಾನಿಗಳು ‘ಮೂಲತಃ ತಮ್ಮ ಅಭಿಮಾನಿಗಳು, ಉಪೇಂದ್ರ ಅವರಿಗೆಲ್ಲ ದುಡ್ಡು ಕೊಟ್ಟು ಹೈಜಾಕ್‌ ಮಾಡಿದ್ದಾರೆ’ ಎನ್ನುವುದು ಜಗ್ಗೇಶ್‌ ಆಪಾದನೆ. ಅದೇ ಅಭಿಮಾನಿಗಳೀಗ ಉಪ್ಪಿಗೆ ವಜ್ರದ ಕಿರೀಟ ತೊಡಿಸುತ್ತಿರುವ ಬಗೆಗೆ ಜಗ್ಗೇಶ್‌ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ .
  • ಉಪೇಂದ್ರ ಅವರಿಗೆ ಸನ್ಮಾನದ ಜೊತೆಗೇನೆ, ಅಖಿಲ ಭಾರತ ಉಪೇಂದ್ರ ಅಭಿಮಾನಿಗಳ ಸಂಘವೂ ಉದ್ಘಾಟನೆಯಾಗುತ್ತದಂತೆ. ಈವರೆಗೆ ಅಖಿಲ ಕರ್ನಾಟಕ ಅಭಿಮಾನಿ ಸಂಘಟನೆಗಳನ್ನು ಮಾತ್ರ ಕಂಡ ಸ್ಯಾಂಡಲ್‌ವುಡ್‌ಗೆ ಕನ್ನಡಿಗ ನಟನೊಬ್ಬನ ಹೆಸರಿನಲ್ಲಿ ಅಖಿಲ ಭಾರತ ಸಂಘಟನೆ ಪ್ರಾರಂಭವಾಗುತ್ತಿರುವ ವಿಷಯ ಹೊಸದು. ಉಪೇಂದ್ರ ಯಾವಾಗ ಅಖಿಲ ಭಾರತ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದರೆನ್ನುವ ಪ್ರಶ್ನೆಗೆ ಉತ್ತರ ಚಿತ್ರೋದ್ಯಮದ ಮಂದಿಗೆ ಸಿಕ್ಕಿಲ್ಲ .
  • ಉಪ್ಪಿಗೆ ಕಿರೀಟ ತೊಡಿಸುವ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಸಿನಿಮಾ ಮಂದಿ ಮಾತ್ರವಲ್ಲದೆ, ಮೈಸೂರು ಜಿಲ್ಲೆಯ ಚಾಲ್ತಿಯಲ್ಲಿರುವ ಬಹುತೇಕ ರಾಜಕಾರಣಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುತ್ತಿದ್ದಾರೆ. ಶಿಕ್ಷಣ ಸಚಿವ ವಿಶ್ವನಾಥ್‌ರಿಂದ ಮೂಡಾದ ಮಾಜಿ ಅಧ್ಯಕ್ಷರವರೆಗೆ ಅತಿಥಿಗಳ ಪಟ್ಟಿ ದೊಡ್ಡದಿದೆ. ಅವರಲ್ಲಿ ಬಹಳಷ್ಟು ಮಂದಿ ಕಾಂಗ್ರೆಸ್ಸಿಗರೆನ್ನುವುದು ಎದ್ದು ಕಾಣುವ ಅಂಶ.
    ರಾಜಕಾರಣಿಗಳು ಮಾತ್ರವಲ್ಲದೆ ಆಂದೋಲನದ ರಾಜಶೇಖರ್‌ ಕೋಟಿ, ವಿಜಯ ದಿನ ಪತ್ರಿಕೆಯ ಕೆ.ಜೆ. ಕುಮಾರ್‌, ವಕೀಲ ವೇಣುಗೋಪಾಲ್‌, ಮೈಸೂರು ವಿವಿ ಕುಲಸಚಿವ ಎಸ್‌. ಶಾಂತರಾಜ್‌ ಹಾಗೂ ಸಿನಿಮಾ ನಿರ್ಮಾಪಕರಾದ ಸಂದೇಶ್‌ ನಾಗರಾಜ್‌ ಹಾಗೂ ಪಿ. ಧನರಾಜ್‌ ಅಂತವರ ಹೆಸರುಗಳೂ ಅತಿಥಿಗಳ ಪಟ್ಟಿಯಲ್ಲಿವೆ (ಇವರೆಲ್ಲ ಉಪೇಂದ್ರರ ಅಭಿಮಾನಿಗಳಾ ಅನ್ನುವುದು ಸ್ಪಷ್ಟವಾಗಿಲ್ಲ). ಈ ಪಟ್ಟಿಯನ್ನು ಗಮನಿಸಿದಾಗ, ಉಪ್ಪಿಗೆ ಕಿರೀಟ ತೊಡಿಸುವುದು ಮಾತ್ರ ಕಾರ್ಯಕ್ರಮದ ಉದ್ದೇಶವೇ ಹಾಗೂ, ಉಪ್ಪಿಯ ಅಭಿಮಾನಿಗಳಿಂದಲೇ ಕಾರ್ಯಕ್ರಮ ನಡೆಯುತ್ತಿದೆಯೇ ಅನ್ನುವ ಬಗೆಗೆ ಸಾಕಷ್ಟು ಪ್ರಶ್ನೆಗಳು ಉಂಟಾಗುತ್ತವೆ.
ನಮ್ಮ ನಡುವಿನ ಪ್ರತಿಭಾವಂತರಲ್ಲಿ ಉಪೇಂದ್ರ ಒಬ್ಬರೆನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ . ಆದರೆ, ಇಂಥಾ ಪ್ರತಿಭಾವಂತನಿಗೆ ನಡೆಯುವ ಸನ್ಮಾನದ ಕಾರ್ಯಕ್ರಮ ಅನುಮಾನಗಳ ನಡುವೆ ನಡೆಯುವುದು ಅಷ್ಟೇನೂ ಒಳ್ಳೆಯ ಬೆಳವಣಿಗೆಯಲ್ಲ .

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada